ಮಂಗಳೂರು : ಕರಾವಳಿಯಲ್ಲಿ ಮತ್ತೊಮ್ಮೆ ತಲವಾರು ಸದ್ದು ಮಾಡಿದ್ದು ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮತ್ತು ಬಜರಂಗದಳ ಕಾರ್ಯಕರ್ತರ ಮೇಲೆ ತಲವಾರು ದಾಳಿ ನಡೆಸಿದ ಆರೋಪ ಕೇಳಿ ಬಂದಿದೆ.

ಪೆರಾಜೆ ಬಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಎಂಬವರ ಮೇಲೆ ಈ ದಾಳಿ ನಡೆದಿದೆ. ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳೂರು ನಿವಾಸಿ ರಾಕೇಶ್, ಮಾಣಿ ಮಂಜುನಾಥ್ ಯಾನೆ ಮಂಜು ಹಾಗೂ ಪ್ರವೀಣ್ ನಾಯ್ಕ್ ಯಾನೆ ಮಹಾಲಿಂಗ ಮತ್ತಿತರ ತಂಡ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಚುನಾವಣಾ ಫಲಿತಾಂಶದ ದಿನದಂದು ಸಂಭ್ರಮಾಚರಣೆ ವೇಳೆ ನಡೆದಿದ್ದ ಗಲಾಟೆಗೆ ಪ್ರತೀಕಾರವಾಗಿ ಈ ತಲವಾರು ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಹಲ್ಲೆಗೊಳಗಾದ ಇಬ್ಬರು ಯುವಕರು ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಒಮ್ನಿಯಲ್ಲಿ ಬಂದ ದುಷ್ಕರ್ಮಿಗಳು ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ . ಬಳಿಕ ತಲವಾರಿನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು ಪ್ರಶಾಂತ್ ಹಾಗೂ ಮಹೇಂದ್ರ ತಲೆ ಮತ್ತು ಕಾಲಿಗೆ ಪೆಟ್ಟಾಗಿದೆ, ಈ ಸಂಬಂಧ ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಶಂಕಿತರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.