ಇಂತದ್ದು ಒಂದು ಗಂಭೀರ ಅಪಾದನೆಯನ್ನುನಿನ್ನೆಮಾಜಿ ಹಣಕಾಸು ಸಚಿವ, ಸ್ವತ: ವಕೀಲರೂ ಆಗಿರುವ ಪಿ. ಚಿದಂಬಂರಂ ,ಮಾಡಿದ್ದಾರೆ. ಶುಕ್ರವಾರ ನ್ಯಾಯಾಧೀಶರ ನೇಮಕದ ವಿಳಂಬ ಕುರಿತಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಂತರ ಚಿದಂಬರಂ ಮೇಲಿನ ಅಭಿಪ್ರಾಯವನ್ನು ಟ್ವೀಟ್ನಲ್ಲಿ ವ್ಯಕ್ತ ಮಾಡಿದ್ದಾರೆ. ಇದನ್ನು ವರದಿ ಮಾಡಿದ ‘ದಿ ಟೆಲೆಗ್ರಾಫ್ ಇಂಡಿಯಾ’, ಇನ್ನಷ್ಟು ವಿವರಗಳನ್ನು ನಮ್ಮ ಮುಂದೆ ಇಟ್ಟಿದೆ.
ಇಲ್ಲಿ ‘ ಪ್ರತಿಧ್ವನಿ ’ ಕೂಡ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಮತ್ತು ಹಲವು ಹೈಕೋರ್ಟ್ ಹಾಗೂ ಜಿಲ್ಲಾ ವಕೀಲರೊಂದಿಗೆ ಮಾತನಾಡಿದೆ.
ಅದಕ್ಕೂ ಮೊದಲು ಆ ವಿಷಯ ಏನೆಂದು ನೋಡೋಣ.
ಹೈಕೋರ್ಟ್ ನ್ಯಾಯಾಧೀಶರ 1,080 ಮಂಜೂರಾದ ಹುದ್ದೆಗಳಲ್ಲಿ 416 ಹುದ್ದೆಗಳಮ್ಮು ಬೇಕೆಂತಲೇ ತುಂಬಿಲ್ಲ ಎನ್ನುವುದು ಚಿದಂಬರಂ ಅವರ ಮೊದಲ ಆರೋಪ.
ಶುಕ್ರವಾರ ನಡೆದ ವಿಚಾರಣೆಯಲ್ಲಿ ನ್ಯಾಯಪೀಠಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಕಿಡಿ ಕಾರಿತ್ತು.

ಇದೇ ವಿಷಯ ಇಟ್ಟುಕೊಂಡು ಟ್ವೀಟ್ ಮಾಡಿದ ಪಿ.ಚಿದಂಬರಂ ನ್ಯಾಯಾಂಗ ಹುದ್ದೆಗಳನ್ನು ಭರ್ತಿ ಮಾಡಲು ವಿಳಂಬವಾಗುತ್ತಿರುವುದಕ್ಕೆ ನರೇಂದ್ರ ಮೋದಿ ಸರ್ಕಾರ “’ಹಿಂದೂತ್ವ ಸಿದ್ಧಾಂತದ” ಸಹಾನುಭೂತಿ ಹೊಂದಿರುವವರನ್ನು ಮಾತ್ರ ಆಯ್ಕೆ ಮಾಡಲು ಬಯಸಿದ್ದೇ ಕಾರಣ ಎಂದು ಹೇಳಿದ್ದಾರೆ.
ಹಿರಿಯ ವಕೀಲರಾದ ಚಿದಂಬರಂ ಶನಿವಾರ ಮಾಡಿದ ಟ್ವೀಟ್ ಹೀಗಿದೆ: “ಹೈಕೋರ್ಟ್ ನ್ಯಾಯಾಧೀಶರ 1,080 ಮಂಜೂರಾದ ಹುದ್ದೆಗಳಲ್ಲಿ 416 ಖಾಲಿ ಇವೆ. ನ್ಯಾಯಮಂಡಳಿಗಳಲ್ಲಿ ಅಪಾರ ಸಂಖ್ಯೆಯ ಖಾಲಿ ಹುದ್ದೆಗಳಿವೆ. ಹಲವಾರು ನ್ಯಾಯಮಂಡಳಿಗಳ ಅಧ್ಯಕ್ಷರ ಹುದ್ದೆಗಳು ಖಾಲಿ ಇವೆ ‘ ಎಂದು ಬರೆದಿದ್ದಾರೆ.

ಅವರು ಡಿಆರ್ಟಿ, ಎನ್ಸಿಎಲ್ಎಟಿ, ಟಿಡಿಎಸ್ಎಟಿ ಮುಂತಾದ ನ್ಯಾಯಮಂಡಳಿಗಳ ಉಲ್ಲೇಖ ಮಾಡಿದ್ದು, ಏಳು ವರ್ಷಗಳ ಕಾಲ ಅಧಿಕಾರದಲ್ಲಿರುವ ಮೋದಿ ಸರ್ಕಾರಕ್ಕೆ ಈ ಹುದ್ದೆಗಳನ್ನು ಭರ್ತಿ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಾದ ವಕೀಲರು ಮತ್ತು ನ್ಯಾಯಾಧೀಶರ ಕೊರತೆಯಿಲ್ಲ. ನಿಜವಾದ ಕಾರಣವೆಂದರೆ ಸರ್ಕಾರವು ತನ್ನ ಹಿಂದೂತ್ವ ಸಿದ್ಧಾಂತದ ಬಗ್ಗೆ ಸಹಾನುಭೂತಿ ಹೊಂದಿರುವ ವ್ಯಕ್ತಿಗಳನ್ನು ಹುಡುಕುತ್ತಿದೆ’ ಎಂದು ಆರೋಪಿಸಿದ್ದಾರೆ.
ಕೊಲಿಜಿಯಂ ಶಿಫಾರಸುಗಳ ಮೇಲೆ ಕೇಂದ್ರವು ಕುಳಿತಿದೆ ಎಂದು ಆರೋಪಿಸಿ, ನ್ಯಾಯಾಂಗದಲ್ಲಿ ಖಾಲಿ ಇರುವ ಹೆಚ್ಚಿನ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡಲು ಸುಪ್ರೀಂ ಕೋರ್ಟ್ ಪದೇ ಪದೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಗಳು ನಿಯತಕಾಲಿಕವಾಗಿ ಈ ವಿಷಯವನ್ನು ಫ್ಲ್ಯಾಗ್ ಮಾಡಿದ್ದಾರೆ. ಆದರೆ ಈ ಏಳು ವರ್ಷದಲ್ಲಿ ಇದಕ್ಕೆ ಸಾಕಷ್ಟು ಹಿನ್ನಡೆಯಾಗಿದೆ ಎಂಬುದು ಚಿದಂಬರಂ ಅವರ ಆರೋಪ.
ಆರ್ಎಸ್ಎಸ್-ಬಿಜೆಪಿಗಳು ವಿವಿಧ ಸಂಸ್ಥೆಗಳು ಮತ್ತು ಅಕಾಡೆಮಿಗಳನ್ನು ಸೈದ್ಧಾಂತಿಕವಾಗಿ ತಮಗೆ ಹತ್ತಿರವಿರುವ ಜನರೊಂದಿಗೆ ಪ್ಯಾಕಿಂಗ್ ಮಾಡುತ್ತಿದೆ ಎಂದು ಕಾಂಗ್ರೆಸ್ ಆಗಾಗ್ಗೆ ಆರೋಪಿಸಿದೆ. ಮೊದಲ ಸಲ ಸರ್ಕಾರದ ಸೈದ್ಧಾಂತಿಕ ಒಲವುಗಳಿಗೆ ಯಾರೋ ಒಬ್ಬರು ನ್ಯಾಯಾಂಗ ನೇಮಕಾತಿಗಳನ್ನು ಜೋಡಿಸುವುದು ಇದೇ ಮೊದಲು. ಇದನ್ನು ಈಗ ಚಿದಂಬರಂ ಬಹಿರಂಗವಾಗಿಯೇ ಮಾಡಿದ್ದಾರೆ.
2020ರಿಂದ ಸುಪ್ರೀಂ ಕೋರ್ಟ್ ಮತ್ತು ಹಲವಾರು ಹೈಕೋರ್ಟ್ಗಳಿಗೆ ಯಾವುದೇ ನ್ಯಾಯಾಂಗ ನೇಮಕಾತಿಗಳಿಲ್ಲ. ದೇಶಾದ್ಯಂತ ಹೈಕೋರ್ಟ್ಗಳು ಖಾಲಿ ಹುದ್ದೆಗಳಿಂದಾಗಿ “ಬಿಕ್ಕಟ್ಟಿನ ಸ್ಥಿತಿಯಲ್ಲಿವೆ” ಎಂದು ಅಂದಿನ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಈ ವರ್ಷದ ಆರಂಭದಲ್ಲಿ ಹೇಳಿತ್ತು.
ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮದನ್ ವಿ. ಲೋಕುರ್ ಇತ್ತೀಚೆಗೆ ಒಂದು ಲೇಖನವನ್ನು ಬರೆದಿದ್ದು, ತಕ್ಷಣವೇ ನೇಮಕಾತಿಗಳನ್ನು ಮಾಡದಿದ್ದರೆ ನ್ಯಾಯಾಂಗದಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ತಡವಾಗಬಹುದು ಎಂಬ ಭಯವನ್ನು ವ್ಯಕ್ತಪಡಿಸಿದ್ದಾರೆ.
ಕೇಂದ್ರ ಕಾನೂನು ಸಚಿವಾಲಯದ ವೆಬ್ಸೈಟ್ ಪ್ರಕಾರ, ಸುಪ್ರೀಂ ಕೋರ್ಟಿನಲ್ಲಿ ಸದ್ಯಕ್ಕೆ ಎಂಟು ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ. ಇಬ್ಬರು ನ್ಯಾಯಾಧೀಶರು ಶೀಘ್ರದಲ್ಲೇ ನಿವೃತ್ತರಾಗಲಿದ್ದಾರೆ. ಸುಪ್ರೀಂ ನ್ಯಾಯಾಲಯದ ಮಂಜೂರಾದ ನ್ಯಾಯಾಧೀಶರ ಸಂಖ್ಯೆ 34 ಆಗಿದ್ದರೆ ಈಗ ಅಲ್ಲಿರುವುದು 26 ಜನ ಮಾತ್ರ!
ಪ್ರತಿಧ್ವನಿ ಪರೀಕ್ಷೆ
ಈ ಕುರಿತಂತೆ ‘ಪ್ರತಿಧ್ವನಿ’ ಹಲವು ಜನರನ್ನು ಸಂಪರ್ಕಿಸಿತು.
ಸುಪ್ರೀಂಕೋರ್ಟಿನ ನಿವೃತ್ತ ಜಸ್ಟೀಸ್ ಕನ್ನಡಿಗ ಗೋಪಾಲಗೌಡರು ನಮ್ಮೊಂದಿಗೆ ಮಾತನಾಡುತ್ತ, ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತ ಮಾಡಿರುವುದು ಸರಿಯಾಗಿಯೇ ಇದೆ. ಆದರೆ, ಚಿಬಂಬರಂ ಅವರ ರಾಜಕೀಯ ಅಭಿಪ್ರಾಯವನ್ನು (ಆರ್ಎಸ್ಎಸ್ ಒಲವಿನ ಸಿದ್ಧಾಂತಿಗಳನ್ನು ನೇಮಿಸುವ ವಿಚಾರ|) ನಾನು ಸಂಪೂರ್ಣ ಸಮರ್ಥಿಸಲಾರೆ. ಅದು ಸರಿ ಕೂಡ ಇರಬಹುದು. ಆದರೆ ಕಳೆದ 25 ವರಷ್ಗೇಳಲ್ಲಿ ಈ ನೇಮಕದಲ್ಲಿ ಹಿನ್ನಡೆಯಾಗಿದೆ. ಆದರೆ ಕಳೆದ ಏಳು ವರ್ಷಗಳಿಂದ ಉದ್ದೇಶಪೂರ್ವಕ ಹಿನ್ನಡೆಯಂತೂ ಸಂಭವಿಸಿದೆ. ಇದು ಜಿಲ್ಲಾ ಮತ್ತು ತಾಲೂಕು ಮಟ್ಟದ ಕೋರ್ಟುಗಳಲ್ಲೂ ಸಮಸ್ಯೆ ಸೃಷ್ಟಿ ಮಾಡಿದೆ’ ಎಂದರು.
ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿದ ಹೈಕೋರ್ಟ್ು ವಕೀಲೆ ರಾಜಲಕ್ಷ್ಮಿ ಅಂಕಲಗಿ, ‘ಚಿದಂಬರಂ ಮಾಡಿದ ಟ್ವೀಟ್ನಲ್ಲಿ ಸತ್ಯ ಇದೆ. ಯಾವುದೇ ಪಕ್ಷದ ಆಡಳಿತ ಇದ್ದರೂ ನ್ಯಾಯಾಂಗ ಸಿಬ್ಬಂದಿ ನೇಮಕ ವಿಳಂಭವಾಗುತ್ತಲೇ ಇದೆ. ಆದರೆ ಈ ಏಳು ವರ್ಷಗಳಲ್ಲಿ ತಮ್ಮ ಸಿದ್ಧಾಂತಕ್ಕೆ ಒಗ್ಗಿ ಕೊಳ್ಳುವವರನ್ನು ನೇಮಿಸಲು ಕೇಂದ್ರ ಸರ್ಕಾರ ಹಾತೊರೆಯುತ್ತಿದೆ’ ಎಂದರು.

ಜಿಲ್ಲಾಮಟ್ಟದಲ್ಲಿ ವಕೀಲಿಕೆ ಮಾಡುವ ಸಾಮಾಜಿಕ ಕಾರ್ಯಕರ್ತ ರವಿಕಾಂತ್ ಅಂಗಡಿ ಕೂಡ ಸುಪ್ರೀಂಕೋರ್ಟ್ ಅಭಿಮತವನ್ನು ಬೆಂಬಲಿಸಿದರು. ‘ಬರೀ ಜಡ್ಜ್ಗಳು ಅಷ್ಟೇ ಅಲ್ಲ, ಇಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ನ್ಯಾಯಾಂಗ ಸಿಬ್ಬಂದಿಯ ಕೊರತೆಯೇ ಇದೆ. ಸುಪ್ರೀಂಕೋರ್ಟಿನಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆಯೇ ನಡೆಯುತ್ತಿಲ್ಲ. ಇನ್ನು ಜಿಲ್ಲಾಮಟ್ಟದಲ್ಲಿ ಅದರ ಸಂಖ್ಯೆ ತುಲನಾತ್ಮಕವಾಗಿ ಜಾಸ್ತಿಯೇ ಇದೆ’ ಎನ್ನುತ್ತಾರೆ ವಕೀಲ ರವಿಕಾಂತ ಅಂಗಡಿ.
ಇಲ್ಲಿ ಒಟ್ಟೂ ಪ್ರಶ್ನೆ ಎಂದರೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿರುಯವ ಕನ್ನಡದ ಪ್ರಹ್ಲಾದ್ ಜೋಶಿ ಇನ್ನೂ ಈ ಬಗ್ಗೆ ಪ್ರತಿಕ್ರಿಯೆಯನ್ನೇ ನೀಡಿಲ್ಲವೇಕೆ? ಇಲ್ಲಿ ಸಿಎಂ ಆಗಲು ಸಿಕ್ಕಾಪಟ್ಟೆ ಕಷ್ಟಪಡುವ ಅವರು ಮಹಾದಾಯಿ ನ್ಯಾಯಮಂಡಳಿ ಮತ್ತು ಅಲ್ಲಿನ ಸಿಬ್ಬಂದಿ ಬಗ್ಗೆ ಒಮ್ಮೆಯೂ ತಲೆ ಕೆಡಿಸಿ ಜೊಳ್ಳಲೇ ಇಲ್ಲವೇಕೆ?
ನ್ಯಾಯ ಎಂಬುದು ಈಗ ಮರೀಚಿಕೆ ಅಲ್ಲವೇ……