~ಡಾ. ಜೆ ಎಸ್ ಪಾಟೀಲ.
ಇತ್ತೀಚಿಗೆ ಪ್ರಧಾನಿ ಮೋದಿಯವರು ಆತ್ಮನಿರ್ಭರ್ ಎನ್ನುವ ಪದ ಹೆಚ್ಚು ಪ್ರಯೋಗಿಸುತ್ತಿದ್ದಾರೆ. ೧೯೯೦ ರ ನಂತರ ಹುಟ್ಟಿದ ಪೀಳಿಗೆ ಮತ್ತು ೧೯೧೪ ರ ನಂತರ ರಾಜಕೀಯ ಬೆಳವಣಿಗೆ ನೋಡುತ್ತಿರುವ ಜನರಿಗೆ ಈ ಆತ್ಮನಿರ್ಭರ್ ಎಂಬ ಪ್ರಜ್ಞೆ ಭಾರತೀಯರಲ್ಲಿ ಹುಟ್ಟಿ ಅರ್ಧ ಶತಮಾನವೆ ಗತಿಸಿದ ಸಂಗತಿ ತಿಳಿದಿಲ್ಲ. ಅಸಲಿಗೆ ಆತ್ಮನಿರ್ಭರ್ ಅನ್ನುವ ಪ್ರಜ್ಞೆ ಭಾರತೀಯರ ರಕ್ತಗತ ಗುಣ. ಭಾರತೀಯ ಬಹುಜನ ಸಮಾಜ ಸದಾ ಸ್ವಾವಲಂಬಿ ಸಮಾಜವೆ. ಅದು ಪರಕೀಯ ಪರಾವಂಬಿ ಆರ್ಯ ಸಂಸ್ಕೃತಿಯ ಪ್ರಭಾವಕ್ಕೆ ಸಿಲುಕಿ ಎಂದಿಗೂ ತನ್ನ ಸ್ವಾವಲಂಬಿತನ ಬಿಡಲಿಲ್ಲ.
ಆತ್ಮನಿರ್ಭರ್ ಎಂದು ಗಂಟೆಗಟ್ಟಲೆ ಭಾಷಣ ಮಾಡುವ ಮೋದಿಯವರು ಎಂದೂ ಸ್ವಾವಲಂಬಿಗಳಾಗಿ ಬದುಕಿದ ದೃಷ್ಟಾಂತವಿಲ್ಲ. ಅವರು ತಮ್ಮ ಬಾಲ್ಯವನ್ನು ತಂದೆಯ ಆಶ್ರಯದಲ್ಲಿ ಕಳೆದರೆ ಅವರೆ ಹೇಳಿದಂತೆ ತಮ್ಮ ಬದುಕಿನ ಗರಿಷ್ಟ ಮೂರು ದಶಕಗಳ ಅವಧಿ ಮೋದಿಯವರು ಭಿಕ್ಷೆ ಬೇಡಿ ಬದುಕಿದವರು. ಇನ್ನು ಶಾಖೆ ಸೇರಿ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗುವ ಮೋದಿಯವರು ಸಾಮಾನ್ಯವಾಗಿ ಸಂಘದ ಪೂರ್ಣಾವಧಿ ಕಾರ್ಯಕರ್ತರು ಫೋರ್ಸ್ಡ್ ಬ್ಯಾಚ್ಯುಲರ್ ಗಳಾಗಿ ವಿದ್ಯಾರ್ಥಿ ಪರಿಷತ್ತು ಮತ್ತು ಸಂಘದ ಸ್ವಯಂಸೇವಕರ ಮನೆಯಲ್ಲಿ ಉಂಡು ಬದುಕಿದವರು. ಹಾಗಾಗಿ ಆತ್ಮನಿರ್ಭರ್ ಅಂದರೇನು ಎನ್ನುವ ಸ್ಪಷ್ಟ ಕಲ್ಪನೆ ಬಹುಶಃ ಮೋದಿಯವರಿಗೆ ತಿಳಿದಿರಲಿಕ್ಕಿಲ್ಲ.

ಸಾವಿರಾರು ವರ್ಷಗಳ ದೀರ್ಘಾವಧಿ ಭಾರತ ದೇಶವು ಪರಕೀಯರ ಆಳ್ವಿಕೆಗೆ ಒಳಪಟ್ಟ ದೇಶ. ದೇಶದ ಮೂಲ ನಿವಾಸಿ ಶ್ರಮಜೀವಿಗಳ ಬೆವರಿನ ಸಂಪತ್ತು ಪುರೋಹಿತಶಾಹಿಗಳ ಕುಟಿಲ ಹುನ್ನಾರದಿಂದ ದೇಶದ ದೇವಸ್ಥಾನಗಳಲ್ಲಿ ಅಕ್ರಮವಾಗಿ ಸಂಗ್ರಹವಾಯಿತು. ಇನ್ನೂ ಪುರೋಹಿತರ ಸಹಾಯದಿಂದ ಮುಸ್ಲಿಮ್ ಲೂಟಿಕೋರರು ಮತ್ತು ಸುಲ್ತಾನರು ಈ ದೇಶವನ್ನು ಕೊಳ್ಳೆ ನಿರಂತರ ಕೊಳ್ಳೆ ಹೊಡೆದರು. ಆಳರಸರಿಗೆ ಬಹುಫರಾಕ್ ಹೇಳುತ್ತ ಧನˌ ಕನಕˌ ಜನೀಮುˌ ಜಹಗೀರುಗಳನ್ನು ಇನಾಮು ಹಾಗು ದಾನದ ರೂಪದಲ್ಲಿ ಕೊಳ್ಳೆ ಹೊಡೆದವರು ಪುರೋಹಿತಶಾಹಿಗಳು. ಇನ್ನು ಬ್ರಿಟೀಷರು ಕೊಳ್ಳಿ ಹೊಡೆದು ಬರಿದಾಗಿಸಿದ ದೇಶವನ್ನು ನಮ್ಮ ಹಿರಿಯ ರಾಷ್ಟ್ರನಾಯಕರು ತಮ್ಮ ದೂರದೃಷ್ಟಿಯಿಂದ ಈ ದೇಶವನ್ನು ಆತ್ಮನಿರ್ಭರ್ ದೇಶವನ್ನಾಗಿ ರೂಪಿಸಿದ್ದಾರೆ. ಅಂತಹ ಸ್ವಾವಲಂಬಿ ದೇಶ ಇಂದು ಕಾರ್ಪೋರೇಟ್ ಉದ್ಯಮಿಗಳಿಗೆ ಮಾರಾಟ ಮಾಡುವ ಸ್ಥಿತಿಗೆ ತರಲಾಗುತ್ತಿದೆ.
ಈ ದೇಶದ ಆತ್ಮನಿರ್ಭರ್ ಅಭಿಯಾನದ ಇತಿಹಾಸವನ್ನು ನಾನು ಇಲ್ಲಿ ವಿವರಿಸಿದ್ದೇನೆ:

೧. ಸ್ಟೀಲ್ ಉತ್ಪಾದನೆಯಲ್ಲಿ ದೇಶವು ಸ್ವಾವಂಬಿಯಾಗಲು ೧೯೫೪ ರಲ್ಲಿ ಸ್ಟೀಲ್ ಆಥಾರಿಟಿ ಆಫ್ ಇಂಡಿಯ ಲಿಮಿಟೆಡ್ (SAIL) ಸ್ಥಾಪಿಸಲಾಯಿತು.
೨. ತಾಂತ್ರಿಕ ಮತ್ತು ಅಭಿಯಾಂತ್ರಿಕ ಶಿಕ್ಷಣ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶವು ಸ್ವಾವಲಂಬಿಯಾಗಲು ೧೯೫೬ ರಿಂದ ಐಐಟಿಗಳನ್ನು ಸ್ಥಾಪಿಸುವ ಕಾರ್ಯ ಆರಂಭಗೊಂಡಿತು.
೩. ವೈದ್ಯಕೀಯ ವಿಜ್ಞಾನ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ದೇಶ ಸ್ವಾವಲಂಬಿಯಾಗಲು ೧೯೫೬ ರಲ್ಲೇ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS) ಯನ್ನು ಸ್ಥಾಪಿಸಲಾಯಿತು.
೪. ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಸ್ವಾವಲಂಬಿಯಾಗಲು ೧೯೫೮ ರಲ್ಲೇ ರಕ್ಷಣಾ ಸಂಶೋಧನೆ ಮತ್ತು ಅಭಿವ್ರದ್ಧಿ ಸಂಸ್ಥೆ (DRDO) ಸ್ಥಾಪಿಸಲಾಯಿತು.
೫. ಏರಕ್ರಾಫ್ಟ್ ಉತ್ಪಾದನಾ ಕ್ಷೇತ್ರದಲ್ಲಿ ದೇಶ ಸ್ವಾವಲಂಬಿಯಾಗಲು೧೯೬೪ ರಲ್ಲೇ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆ ಸ್ಥಾಪಿಸಲಾಯಿತು.
೬. ಆಹಾರ ಉತ್ಪಾದನಾ ಕ್ಷೇತ್ರದಲ್ಲಿ ದೇಶ ಸ್ವಾವಲಂಬಿಯಾಗಲು ೧೯೬೫ ರಲ್ಲೇ ಹಸಿರು ಕ್ರಾಂತಿ ಆರಂಭಿಸಲಾಯಿತು.
೭. ಬ್ರಹತ್ ವಿದ್ಯುತ್ ಉಪಕರಣಗಳ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ೧೯೬೫ ರಲ್ಲೆ ಭಾರತ್ ಹೆವ್ವಿ ಎಲೆಟ್ರಿಕಲ್ ಲಿಮಿಟೆಡ್ (BHEL) ಸಂಸ್ಥೆ ಸ್ಥಾಪಿಸಲಾಯಿತು.

೮. ಅಂತರಿಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಸ್ವಾವಲಂಬಿಯಾಗಲು ೧೯೬೯ ರಲ್ಲೇ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO) ಸ್ಥಾಪಿಸಲಾಯಿತು.
೯. ಕಲ್ಲಿದ್ದಲು ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ೧೯೭೫ ರಲ್ಲೇ ಸಿಸಿಎಲ್ (CCL) ಸಂಸ್ಥೆ ಸ್ಥಾಪಿಸಲಾಯಿತು.
೧೦. ಉಷ್ಣ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ೧೯೭೫ ರಲ್ಲೆ ರಾಷ್ಟ್ರೀಯ ಉಷ್ಣ ವಿದ್ಯುತ್ ಇಂಧನ ಸಂಸ್ಥೆ (NTPC)ಯನ್ನು ಸ್ಥಾಪಿಸಲಾಯಿತು.
೧೧. ಗ್ಯಾಸ್ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ೧೯೮೪ ರಲ್ಲೇ ಗ್ಯಾಸ್ ಆಥಾರಿಟಿ ಆಫ್ ಇಂಡಿಯ ಲಿಮಿಟೆಡ್ (GAIL) ಸ್ಥಾಪಿಸಲಾಯಿತು.
೧೨. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ೧೯೯೦ ರಲ್ಲೆ ಸಾಫ್ಟವೇರ್ ಪಾರ್ಕ್ ಗಳನ್ನು ಸ್ಥಾಪಿಸಲಾಯಿತು.
ಪಟ್ಟಿ ಮಾಡುತ್ತಾ ಹೋದರೆ ಅದು ಕಾಲ್ಪನಿಕ ರಾಮಾಯಣ ಕತೆಯಲ್ಲಿನ ಹಣುಮಂತನ ಬಾಲದಂತೆ ಬೆಳೆಯುತ್ತಲೆ ಹೋಗುತ್ತದೆ.
ಈಗ ಮಾಸ್ಟರ್ ಸ್ಟ್ರೋಕ್ ಸುದ್ದಿ ಏನೆಂದರೆ…
“ನಮ್ಮ ಹಿರಿಯರು ಅಪಾರ ದೂರದೃಷ್ಟಿ ಮತ್ತು ಶ್ರಮವಹಿಸಿ ಸ್ಥಾಪಿಸಿದ ಈ ಎಲ್ಲ ಸಂಸ್ಥೆಗಳನ್ನು ೨೦೨೦ ರಲ್ಲಿ ಖಾಸಗಿ ಉದ್ಯಮಿಗಳಿಗೆ ಮಾರುತ್ತ ತಾವು ಮಾತ್ರ ಸ್ವಾವಲಂಬಿಗಳಾಗುತ್ತಿರುವವರಿಂದ ಸ್ವಾವಲಂಬನೆಯ ಬಗ್ಗೆ ಭಾಷಣಗಳು ಪುಷ್ಕಳವಾಗಿ ಖರ್ಚಾಗುತ್ತಿರುವುದು ದುರಂತದ ಸಂಗತಿ.
~ ಡಾ. ಜೆ ಎಸ್ ಪಾಟೀಲ.