ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನು ರಾಜ್ಯದ ಜನರ ಮುಂದಿಟ್ಟು ಮತ ಕೇಳಿತ್ತು. ಜನರು ಪಕ್ಷಾತೀತವಾಗಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಮಾರು ಹೋಗಿ ಮತ ಹಾಕಿದ ಪರಿಣಾಮವೇ ಇಂದಿನ ಅಭೂತಪೂರ್ವ ಗೆಲುವು. ಬರೋಬ್ಬರಿ 135 ಸ್ಥಾನಗಳಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದೆ. ಕ್ಯಾಬಿನೆಟ್ ಕಸರತ್ತು ಕೂಡ ನಡೆದಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಇನ್ನು ಜೇಡರ ಬಲೆ ಬಿಡಿಸುವ ಕೆಲಸ ಮಾಡುತ್ತಿರುವಾಗಲೇ ಸಮಯ ಓಡುತ್ತಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಮೊದಲ ಕ್ಯಾಬಿನೆಟ್‌ನಲ್ಲೇ ಜಾರಿ ಮಾಡ್ತೇವೆ ಎಂದಿತ್ತು. ಹೇಳಿದಂತೆ ಸಂಪುಟ ಒಪ್ಪಿಗೆ ಕೊಟ್ಟಾಗಿದೆ. ಆದರೆ ಆದೇಶ ಆಗುವುದು ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅನ್ನೋದನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಜೂನ್ ಒಂದರಿಂದ ಜಾರಿಯಾಗುವ ನಿರೀಕ್ಷೆ ಕಾಂಗ್ರೆಸ್‌ಗೆ ಸಂಕಷ್ಟ ತರುವ ಮುನ್ಸೂಚನೆ ನೀಡುತ್ತಿದೆ.
ಜೂನ್ 1 ರಿಂದ ಜಾರಿ ಆಗುತ್ತಾ ಕಾಂಗ್ರೆಸ್ ಗ್ಯಾರಂಟಿ..?


ಮೊದಲ ಕ್ಯಾಬಿನೆಟ್‌ನಲ್ಲಿ ಘೋಷಣೆ ಅಂದಿದ್ದ ಸರ್ಕಾರ ಒಪ್ಪಿಗೆ ಕೊಟ್ಟಿದ್ದೇವೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಆದೇಶ ಮಾಡುತ್ತೇವೆ ಎಂದಿದ್ದಾರೆ. ಸ್ವತಃ ಸಿಎಂ ಹೇಳಿದಾಗ ಮಾಧ್ಯಮದವರು ಪ್ರಶ್ನೆಗೆ ಗರಂ ಆಗಿ ಉತ್ತರಿಸಿದ್ದ ಸಿಎಂ ಸಿದ್ದರಾಮಯ್ಯ, ಮುಂದಿನ ಕ್ಯಾಬಿನೆಟ್ ಮುಂದಿನ ತಿಂಗಳು ಆಗೋದಿಲ್ಲ, ಮುಂದಿನ ವಾರವೇ ಆಗುತ್ತೆ ಅಂದಿದ್ದರು. ಶನಿವಾರ ಮತ್ತೆ ಬಂದಿದೆ. ಕ್ಯಾಬಿನೆಟ್ ವಿಸ್ತರಣೆ ಕಸರತ್ತು ನಡೀತಾ ಇದೆ. ವಿಸ್ತರಣೆ ಆದ ಬಳಿಕ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಎಲ್ಲಾ 5 ಗ್ಯಾರಂಟಿಗಳನ್ನು ಜಾರಿಗೆ ಆದೇಶ ಮಾಡಿ ಕೊಟ್ಟ ಮಾತಿನಂತೆ ನಡೆದುಕೊಳ್ತಾರಾ..? ಅನ್ನೋ ಕುತೂಹಲ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ. ಆದರೆ ಕಾಂಗ್ರೆಸ್ ಕೊಟ್ಟ ಮಾತು ತಪ್ಪಿದ ಕೂಡಲೇ ಬೀದಿಗಿಳಿದು ಪ್ರತಿಭಟನೆ ಮಾಡೋದಕ್ಕೆ ವಿರೋಧ ಪಕ್ಷಗಳು ಸಜ್ಜಾಗಿವೆ. ಅಷ್ಟೇ ಅಲ್ಲ, ಹೊಸದಾಗಿ ರಚನೆ ಆಗಿರುವ ಸರ್ಕಾರಕ್ಕೆ ಸಮಯವನ್ನೂ ಕೊಡದ ವಿಪಕ್ಷಗಳು, ಮೊದಲ ಕ್ಯಾಬಿನೆಟ್‌ನಲ್ಲೇ ಜಾರಿ ಅಂದಿದ್ದು ನಾವಲ್ಲ, ಅವರೇ ಹೇಳಿದ್ದರು. ಜನರಿಗೆ ಈಗ ಕೊಡಿ ಎಂದು ಮೊಕ್ಕಾಂ ಕುಳಿತಿದ್ದಾರೆ.
ಷರತ್ತುಗಳನ್ನು ಹಾಕಿದರೂ ವಿರೋಧಕ್ಕೆ ತಯಾರಿ..!

ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆದರೆ ಯಾವುದೇ ಷರತ್ತುಗಳ ಬಗ್ಗೆ ಏನನ್ನೂ ಹೇಳಿರಲಿಲ್ಲ. ಆದರೆ ಇದೀಗ ಕಾಂಗ್ರೆಸ್ ಪಕ್ಷ ಎಲ್ಲಾ 5 ಗ್ಯಾರಂಟಿಗಳನ್ನೂ ಜಾರಿ ಮಾಡಲು ಕೆಲವೊಂದು ನಿಯಮಗಳನ್ನು ಹಾಕುವುದು ಅನಿವಾರ್ಯ ಎನ್ನಲಾಗ್ತಿದೆ. ಪದವೀಧರರಿಗೆ 3 ಸಾವಿರ ರೂಪಾಯಿ ಮಾಸಿಕ ಭತ್ಯೆ ಎಂದು ಮಾತ್ರ ಹೇಳಿದ್ದರು. ಆದರೆ ಕಳೆದ ಸಾಲಿನಲ್ಲಿ ಪಾಸ್ ಆಗಿರುವ ಯುವಕ, ಯುವತಿಯರಿಗೆ ಮಾತ್ರ ಎನ್ನುವುದು ಕಣ್ಣು ಕೆಂಪಾಗುವಂತೆ ಮಾಡಿದೆ. ಯಾವುದೇ ಷರತ್ತು ಹಾಕದೆ ಎಲ್ಲರಿಗೂ ಯೋಜನೆಯ ಲಾಭ ಸಿಗಬೇಕು ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ಜೇಡರ ಬಲೆಯಲ್ಲಿ ಸಿಲುಕಿಸುವ ಕೆಲಸ ಮಾಡಲಾಗ್ತಿದೆ. ಒಂದು ವೇಳೆ ಕಾಂಗ್ರೆಸ್ ಎಲ್ಲಾ ಯೋಜನೆಗಳಿಗೂ ಕೆಲವೊಂದು ಷರತ್ತುಗಳನ್ನು ವಿಧಿಸಿದರೆ ವಿರೋಧ ಪಕ್ಷಗಳು ಯೋಜನೆಯ ಲಾಭ ವಂಚಿತ ಜನರನ್ನು ಸೆಳೆಯುವ ಸಾಧ್ಯತೆ ಹೆಚ್ಚಾಗಿದೆ. ಈಗ ಲಾಭ ಆಗುವ ರೀತಿಯಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಮಾಡ್ತಿದೆ.
ಕಾಂಗ್ರೆಸ್ ಕಣ್ಣ ಮುಂದಿರುವುದು ಲೋಕಸಭಾ ಚುನಾವಣೆ..!

ಎಲ್ಲಾ 5 ಯೋಜನೆಗಳನ್ನು ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಕೆಲವೊಂದು ಷರತ್ತು ವಿಧಿಸುವುದು ಖಂಡಿತ. ಆದರೆ ಷರತ್ತುಗಳು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರದಂತೆ ಲೆಕ್ಕಾಚಾರ ಹಾಕಲಾಗ್ತಿದೆ. ಎಷ್ಟು ಷರತ್ತುಗಳನ್ನು ಹಾಕಿದರೆ ಎಷ್ಟು ಮಂದಿ ಹೊರಗೆ ಉಳಿಯುತ್ತಾರೆ ಅನ್ನೋ ಲೆಕ್ಕಾಚಾರದ ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯೋಜನೆ ವಂಚಿತರು ಬೇರೆ ಪಕ್ಷಗಳಿಗೆ ಮತ ಹಾಕಿದರೆ ಆಗುವ ಪರಿಣಾಮ ಏನು ಅನ್ನೋ ಬಗ್ಗೆಯೂ ನೋಡಲಾಗ್ತಿದೆ. ಬಲ್ಲ ಮೂಲಗಳ ಮಾಹಿತಿ ಪ್ರಕಾರ ಮೊದಲು ಜಾರಿ ಮಾಡುವಾಗ ಎಲ್ಲರಿಗೂ ಯೋಜನೆಯ ಲಾಭ ಸಿಗುವಂತೆ ಮಾಡಿ, ಕಾಲಕ್ರಮೇಣ ಲೋಕಸಭಾ ಚುನಾವಣೆ ಬಳಿಕ ಕೆಲವೊಂದು ಜನರಿಗೆ ಲಾಭ ಸಿಗದಂತೆ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟವನ್ನು ತಡೆಯುವುದಕ್ಕೆ ಯೋಜನೆ ಸಿದ್ಧವಾಗ್ತಿದೆ ಎನ್ನಲಾಗಿದೆ. ಅದೇನೇ ಇರಲಿ, ಜೂನ್ 1 ರಿಂದ ಗ್ಯಾರಂಟಿ ಯೋಜನೆಗಳ ಜಾರಿಗೆ ಜನ ಕಾಯುತ್ತಿದ್ದಾರೆ. ಒಂದು ವೇಳೆ ತಡವಾದರೆ ಸಂಕಷ್ಟ ಗ್ಯಾರಂಟಿ..
ಕೃಷ್ಣಮಣಿ