ಬೆಂಗಳೂರು: ಕನ್ನಡದ ವಿಚಾರದಲ್ಲಿ ಸದಾ ಧ್ವನಿ ಎತ್ತುತ್ತಾ ಬಂದಿರುವ ಬಿಗ್‌ಬಾಸ್ ಕನ್ನಡ ಸ್ಪರ್ಧಿ ಅಶ್ವಿನಿ ಗೌಡ ಇದೀಗ ಫಿನಾಲೆ ವೀಕ್ ಟಾಸ್ಕ್‌ನಲ್ಲಿ ಮಾಡಿದ ತಪ್ಪಿನಿಂದ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ. ಸೋಮವಾರ ಪ್ರಸಾರವಾದ ಬಿಗ್‌ಬಾಸ್ ಎಪಿಸೋಡ್‌ನಲ್ಲಿ ನೀಡಲಾಗಿದ್ದ ವಿಶೇಷ ಟಾಸ್ಕ್ ವೇಳೆ, ತಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಸೋಶಿಯಲ್ ಮೀಡಿಯಾ ಹ್ಯಾಶ್‌ಟ್ಯಾಗ್ ಬರೆಯುವಾಗ ಅಶ್ವಿನಿ ಕನ್ನಡದ ಕೆಲ ಪದಗಳನ್ನು ತಪ್ಪಾಗಿ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಫಿನಾಲೆ ವೀಕ್‌ಗೆ ಕಾಲಿಟ್ಟಿರುವ ಸ್ಪರ್ಧಿಗಳಿಗೆ ಬಿಗ್‌ಬಾಸ್ ಒಂದು ವಿಭಿನ್ನ ಟಾಸ್ಕ್ ನೀಡಿದ್ದರು. ಅದರಂತೆ, ಪ್ರತಿ ಸ್ಪರ್ಧಿಯೂ ತಮ್ಮ ಆಟ, ವ್ಯಕ್ತಿತ್ವ ಹಾಗೂ ಜನಪ್ರಿಯತೆಯನ್ನು ಪ್ರತಿಬಿಂಬಿಸುವ ಹ್ಯಾಶ್‌ಟ್ಯಾಗ್‌ನ್ನು ಬೋರ್ಡ್ ಮೇಲೆ ಸ್ವತಃ ಬರೆಯಬೇಕಿತ್ತು. ಈ ವೇಳೆ ರಕ್ಷಿತಾ ಅವರು ತಮ್ಮನ್ನು #ಪಟಾಕಿರಕ್ಷಿತಾ, ಕಾವ್ಯ ಖದರ್ ಕಾವ್ಯ ಎಂದು ಗುರುತಿಸಿಕೊಳ್ಳಲು ಬಯಸಿದರೆ, ಅಶ್ವಿನಿ ಗೌಡ ತಮ್ಮ ಗೇಮ್‌ನ್ನು ಗಮನಿಸಿ ಜನರು ತಮ್ಮನ್ನು ಛಲಗಾರ್ತಿ ಅಶ್ವಿನಿ ಎಂದು ಕರೆಯಬೇಕು ಎಂದು ಅಭಿಪ್ರಾಯಪಟ್ಟರು.

ಆದರೆ, ಬೋರ್ಡ್ ಮೇಲೆ ಬರೆಯುವ ವೇಳೆ ‘ಛಲಗಾರ್ತಿ’ ಪದವನ್ನು ತಪ್ಪಾಗಿ ಬರೆಯಲಾಗಿದ್ದು, ಮೊದಲಿಗೆ ‘ಚಲಗಾರ್ಥಿ’ ಎಂದು ಬರೆದು ನಂತರ ಅದನ್ನು ತಿದ್ದಿ ‘ಚಲಗಾರ್ತಿ’ ಎಂದು ಬರೆಯಲಾಗಿದೆ. ಕನ್ನಡ ಭಾಷೆಯ ಸರಿಯಾದ ಪದ ‘ಛಲಗಾರ್ತಿ’ ಆಗಿದ್ದು, ‘ಚ’ ಬದಲು ‘ಛ’ ಬಳಕೆ ಅಗತ್ಯವಾಗಿತ್ತು. ಈ ತಪ್ಪು ತಿದ್ದಲಾಗದೇ ಉಳಿದಿರುವುದು ವೀಕ್ಷಕರ ಗಮನ ಸೆಳೆದಿದೆ.

ಇಷ್ಟೇ ಅಲ್ಲದೆ, ಹ್ಯಾಶ್‌ಟ್ಯಾಗ್‌ನಲ್ಲಿ ಮತ್ತೊಂದು ತಪ್ಪು ಕಂಡುಬಂದಿದೆ. #ಹಠವಾದಿ_ಅಶ್ವಿನಿ ಎಂದು ಬರೆಯಬೇಕಿದ್ದಲ್ಲಿ, #ಹಠವಾಧಿಅಶ್ವಿನಿ ಎಂದು ಬರೆಯಲಾಗಿದೆ. ‘ಧ’ ಬಳಕೆಯೂ ತಪ್ಪಾಗಿದ್ದು, ಇದರಿಂದ ಕನ್ನಡ ಭಾಷೆಯ ಮೇಲಿನ ಅಶ್ವಿನಿಯ ಹಿಡಿತದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಕನ್ನಡ ಪರ ಹೋರಾಟಗಾರ್ತಿ ಎಂದು ತಮನ್ನು ಪರಿಚಯಿಸಿಕೊಳ್ಳುವ ಅಶ್ವಿನಿ ಗೌಡ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಗೌರವಾಧ್ಯಕ್ಷೆಯಾಗಿರುವ ಹಿನ್ನೆಲೆಯಲ್ಲಿ, ಈ ತಪ್ಪುಗಳು ಮತ್ತಷ್ಟು ಟೀಕೆಗೆ ಕಾರಣವಾಗಿವೆ. ಕನ್ನಡದ ಹೋರಾಟದ ಮಾತು ಹೇಳುವವರಿಗೆ ಕನ್ನಡವೇ ಸರಿಯಾಗಿ ಬರೆಯಲು ಬರೋದಿಲ್ಲವೇ? ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಬಿಗ್‌ಬಾಸ್ ಫಿನಾಲೆ ವಾರದಲ್ಲಿ ಈ ಸಣ್ಣ ಟಾಸ್ಕ್ ಅಶ್ವಿನಿ ಗೌಡ ಅವರ ಕನ್ನಡ ಭಾಷೆಯ ಜ್ಞಾನ ಹಾಗೂ ಕನ್ನಡ ಪರ ಹೋರಾಟದ ನಿಜಾಸತ್ಯದ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಅಶ್ವಿನಿ ಈ ಟೀಕೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.









