ಆಗಸ್ಟ್ ಅಂತ್ಯದ ವೇಳೆಗೆ ಯುಎಸ್ ತನ್ನ ಭದ್ರತಾ ಪಡೆಗಳನ್ನು ಅಫ್ಘಾನಿಸ್ತಾನದಿಂದ ಪೂರ್ಣವಾಗಿ ಹಿಂತೆಗೆದುಕೊಳ್ಳಲಿದೆ, ಆ ಮೂಲಕ ಸುಮಾರು ಎರಡು ದಶಕಗಳಿಂದ ದೇಶದಲ್ಲಿದ್ದ ತನ್ನ ಮಿಲಿಟರಿ ಉಪಸ್ಥಿತಿಯನ್ನು ಕೊನೆಗೊಳಿಸಲಿದೆ ಎಂದು ಘೋಷಿಸಿದ ನಂತರ ಅಫ್ಘಾನಿಸ್ತಾನವು ಸರಣಿ ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಕಂದಹಾರ್ನ ಭಾರತೀಯ ದೂತವಾಸದಲ್ಲಿನ ಸುಮಾರು 50 ರಾಜತಾಂತ್ರಿಕರು ಮತ್ತು ಇತರ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದ್ದು “ಕಂದಹಾರ್ ನಗರದ ಸಮೀಪ ತೀವ್ರ ಹೋರಾಟ” ನಡೆಯುತ್ತಿದೆ ಎಂದು ಭಾರತ ಹೇಳಿದೆ. ದೂತಾವಾಸದಲ್ಲಿದ್ದ ಸಿಬ್ಬಂದಿಯನ್ನು ವಾಯುಪಡೆಯ ವಿಮಾನಗಳ ಮೂಲಕ ದೆಹಲಿಗೆ ಕರೆತರಲಾಗಿದೆ.
“ಅಫ್ಘಾನಿಸ್ತಾನದಲ್ಲಿ ಉದ್ಭವವಾಗುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ. ನಮ್ಮ ಸಿಬ್ಬಂದಿಗಳ ಸುರಕ್ಷತೆಯು ಅತ್ಯುನ್ನತವಾಗಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
“ಕಂದಹಾರ್ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅನ್ನು ಮುಚ್ಚಲಾಗಿಲ್ಲ. ಆದರೆ, ಕಂದಹಾರ್ ನಗರದ ಸಮೀಪ ತೀವ್ರ ಹೋರಾಟದಿಂದಾಗಿ, ಭಾರತ ಮೂಲದ ಸಿಬ್ಬಂದಿಯನ್ನು ಸದ್ಯಕ್ಕೆ ಮರಳಿ ಕರೆತರಲಾಗಿದೆ. ಇದು ಸಂಪೂರ್ಣ ತಾತ್ಕಾಲಿಕ ಕ್ರಮ ಎಂದು ನಾನು ಒತ್ತಿ ಹೇಳಲು ಬಯಸುತ್ತೇನೆ . ಪರಿಸ್ಥಿತಿ ಸ್ಥಿರಗೊಳ್ಳುತ್ತಿದ್ದಂತೆ ದೂತವಾಸವನ್ನು ಮತ್ತೆ ತೆರೆಯಲಾಗುತ್ತದೆ. ಸದ್ಯಕ್ಕೆ ಕಾನ್ಸುಲೇಟ್ ನಮ್ಮ ಸ್ಥಳೀಯ ಸಿಬ್ಬಂದಿ ಸದಸ್ಯರ ಮೂಲಕ ಕಾರ್ಯನಿರ್ವಹಿಸುತ್ತಿದೆ “ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಕಾಬೂಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮುಚ್ಚುವ ಯಾವುದೇ ಯೋಜನೆ ಇಲ್ಲ ಎಂದು ಭಾರತ ಮಂಗಳವಾರ ಹೇಳಿತ್ತು. ಕಂದಹಾರ್ ಅಥವಾ ಮಜಾರ್-ಎ-ಷರೀಫ್ನಲ್ಲಿನ ದೂತಾವಾಸಗಳು ಸಹ ಮುಕ್ತವಾಗಿರುತ್ತವೆ ಎಂದು ಅದು ಹೇಳಿತ್ತು. ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷದ ಏಪ್ರಿಲ್ನಲ್ಲಿ ಹೆರಾತ್ ಮತ್ತು ಜಲಾಲಾಬಾದ್ನ ದೂತಾವಾಸಗಳನ್ನು ಮುಚ್ಚಲಾಗಿತ್ತು.
ವಿದೇಶಾಂಗ ಸಚಿವಾಲಯವು ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಸುರಕ್ಷತೆಯ ಮೇಲೆ ಗಲಭೆಗಳ ಪರಿಣಾಮಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ಭಾರತವು ಹೇಳಿತ್ತು.
ಅಫ್ಘಾನಿಸ್ತಾನದ ಬಗ್ಗೆ ಭಾರತದಲ್ಲಿ ಹೆಚ್ಚುತ್ತಿರುವ ಕಳವಳಗಳ ಮಧ್ಯೆ ಶಾಂತಿ ಮತ್ತು ಪುನರ್ನಿರ್ಮಾಣದ ಪ್ರಯತ್ನಗಳನ್ನು ಬೆಂಬಲಿಸುತ್ತಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರಿಗೆ ಅಫಘಾನ್ ರಾಯಭಾರಿ ಫರೀದ್ ಮಾಮುಂಡ್ಜೆ ಅವರು ಮಂಗಳವಾರ ಅಫ್ಘಾನಿನ ಸದ್ಯದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಭದ್ರತಾ ಪರಿಸ್ಥಿತಿ “ಅಪಾಯಕಾರಿ” ಯಾಗಿದೆ ಮತ್ತು ಭಯೋತ್ಪಾದಕ ಗುಂಪುಗಳು ನಾಗರಿಕರನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳನ್ನು ನಡೆಸುತ್ತಿದೆ ಎಂದು ರಾಯಭಾರ ಕಛೇರಿ ತನ್ನ ಸಲಹೆಯಲ್ಲಿ ತಿಳಿಸಿದೆ. ಭಾರತೀಯ ಪ್ರಜೆಗಳು ಹೆಚ್ಚುವರಿಯಾಗಿ ಅಪಹರಣದ ಗಂಭೀರ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಸಚಿವಾಲಯ ಎಚ್ಚರಿಸಿದೆ. ಹಾಗಾಗಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡುವ, ಉಳಿದುಕೊಳ್ಳುವ ಮತ್ತು ಕೆಲಸ ಮಾಡುವ ಎಲ್ಲ ಭಾರತೀಯರನ್ನು ಅತ್ಯಂತ ಎಚ್ಚರಿಕೆಯಿಂದ ಮತ್ತು ದೇಶದೊಳಗೆ ಅನಿವಾರ್ಯವಲ್ಲದ ಎಲ್ಲಾ ಪ್ರಯಾಣವನ್ನು ತಪ್ಪಿಸಲು ಭಾರತೀಯ ರಾಯಭಾರ ಕಛೇರಿ ಕೇಳಿಕೊಂಡಿದೆ.