ಕೊರೋನಾ ನಂತರ ಇದೀಗ ಇಡೀ ದೇಶದಲ್ಲಿ ಬಹುತೇಕ ಶಾಲೆಗಳು ಪುನರಾರಂಭಗೊಳ್ಳಲ್ಲಿದೆ. ಆಗಸ್ಟ್ 25ರಂದು ಕೇಂದ್ರ ಆರೋಗ್ಯ ಸಚಿವ ಸೆಪ್ಟೆಂಬರ್ 5ರೊಳಗೆ ಎಂದರೆ ಶಿಕ್ಷಕರ ದಿನಾಚರಣೆಗೂ ಮುಂಚಿತವಾಗಿ ಎಲ್ಲಾ ಶಿಕ್ಷಕರಿಗೆ ಲಸಿಕೆ ಆಧ್ಯತೆ ಮೇರೆಗೆ ಕೊಟ್ಟು ದೇಶದಾದ್ಯಂತ ಇರುವ ಶಾಲೆಗಳನ್ನು ಸೂಕ್ತ ಕೋವಿಡ್19 ನಿಯಮಾವಳಿಗನುಸಾರ ಪುನರಾರಂಭಗೊಳ್ಳಲಿವೆ ಎಂದು ಹೇಳಿದ್ದರು.
ದೇಶದ ಬಹುತೇಕ ರಾಜ್ಯಗಳು ಸೆಪ್ಟೆಂಬರ್ 1ರ ಹೊತ್ತಿಗೆ ತರಗತಿ ಆರಂಭಿಸಲು ಚಿಂತಿಸಿದೆ. ಹೆಚ್ಚು ಕಮ್ಮಿ ಸೆಪ್ಟೆಂಬರ್ ಮಧ್ಯದೊಳಕ್ಕೆ ಶಾಲೆಗಳು ಮತ್ತೆ ಹಳೆಯ ಹಳಿಗೆ ತಲುಪುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ಶಾಲೆ ಆರಂಭಿಸಲು Standard Operating Procedure (SOP)ಯನ್ನು ಪ್ರತಿ ರಾಜ್ಯ ಸರ್ಕಾರಗಳಿಗೆ ಈಗಾಗಲೇ ರವಾನಿಸಿದೆ. ಮಾಸ್ಕ್, ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಳ್ಳುವಿಕೆ ಬಗ್ಗೆ ಕೇಂದ್ರ ಖಡಕ್ ನಿದರ್ಶನಗಳನ್ನು ಕೊಟ್ಟಿದೆ. ಅದರೆ ರಾಜ್ಯಗಳು ತಮಗೆ ಬೇಕಾದ ಹಾಗೆ ಕೇಂದ್ರ ಸರ್ಕಾರದ ಕೋವಿಡ್ ಸುರಕ್ಷಿತಾ ಕ್ರಮಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳನ್ನು ಮಾಡಿದೆ.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು (DDMA) ಈಗಾಗಲೇ ದೆಹಲಿಯಲ್ಲಿ 9 ರಿಂದ 12ನೇ ತರಗತಿಯವರೆಗೆ ಶಾಲೆಗಳನ್ನು ಹಾಗೂ ಕಾಲೇಜು ಮತ್ತು ಕೋಚಿಂಗ್ ಸೆಂಟರ್ಗಳನ್ನು ತೆರೆಯುವ ಬಗ್ಗೆ SOPಯನ್ನು ಈಗಾಗಲೇ ಬಿಡುಗಡೆಗೊಳಿಸಿದೆ. ಹೀಗಾಗಿ ದೆಹಲಿ ಸರ್ಕಾರವೂ ಶೀಘ್ರವೇ 9 ರಿಂದ 12ನೇ ತರಗತಿಯವರೆಗಿನ ಶಾಲೆಗಳು ಸೇರಿದಂತೆ ಕಾಲೇಜು ಹಾಗೂ ಈತರೆ ಶೈಕ್ಷಣಿಕ ತರಬೇತು ಸಂಸ್ಥೆಗಳನ್ನು ತೆರೆಯಲು ಹಸಿರು ನಿಶಾನೆ ಕೊಡುವ ಸಾಧ್ಯತೆ ಇದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಕರ್ನಾಟಕ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳ ಶಿಕ್ಷಣ ಇಲಾಖೆಯೂ, ಶಾಲೆಯ ಪ್ರವೇಶದ್ವಾರಗಳಲ್ಲಿ ಥರ್ಮಲ್ ಸ್ಕ್ಯಾನರ್ ಮತ್ತು ಹ್ಯಾಂಡ್ ಸ್ಯಾನಿಟೈಜರ್ ಇರಿಸಬೇಕು ಮತ್ತು ಅದು ಬಳಕೆಯಾಗುವಂತೆ ನೋಡಿಕೊಳ್ಳುವುದ ಕಡ್ಡಾಯ ಎಂದಿದೆ. ಹಾಗೂ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮಾಸ್ಕ್ ಅನ್ನು ಸರಿಯಾಗಿ ಧರಿಸಬೇಕು. ಪೋಷಕರು ತಮ್ಮ ಮಕ್ಕಳಲ್ಲಿ ಯಾವುದೇ ಕೊರೋನಾ ಸೋಂಕಿನ ರೋಗಲಕ್ಷಣಗಳನ್ನುಕಂಡು ಬಂದರೆ, ಮಕ್ಕಳಿಗೆ ತಕ್ಷಣವೇ ವೈದ್ಯಕೀಯ ಶುಶ್ರೂಶೆಯ ಜೊತೆಗೆ ಅವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ದೈಹಿಕ ಅಂತರವನ್ನು ಖಚಿತಪಡಿಸಿಕೊಳ್ಳುವುದು, ಮುಂದಿನ ಆದೇಶ ಬರುವವರೆಗೆ ಒಂದು ತರಗತಿಯಲ್ಲಿ 50% ರಷ್ಟು ವಿಧ್ಯಾರ್ಥಿ/ವಿಧ್ಯಾರ್ಥಿನಿಯರಿಗೆ ಮಾತ್ರ ಅವಕಾಶ ಕಲ್ಪಿಸುವುದು, ಪರ್ಯಾಯ ಸೆಷನ್ಗಳನ್ನು ನಡೆಸುವುದು ಮತ್ತು ಎರಡು ಸೆಷನ್ಗಳ ನಡುವೆ ಕಡ್ಡಾಯವಾಗಿ ಒಂದು ಗಂಟೆಯ ಅಂತರವಿರಬೇಕು ಎಂದು ಆದೇಶ ಹೊರಡಿಸಲಾಗಿದೆ.
ಶಾಲಾ ಸಾರಿಗೆ ವ್ಯವಸ್ಥೆ ಮೇಲೆಯೂ ನಿಗಾ ಇಡಲು ಆಯಾ ರಾಜ್ಯಗಳಿಗೆ ಸೂಚಿಸಲಾಗಿದೆ. ಶಾಲಾ ಬಸ್ಸುಗಳು ಮತ್ತು ಇತರ ವಾಹನಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸುವುದು, ಮತ್ತು ಬಸ್ ಚಾಲಕರು ಹಾಗೂ ಸಿಬ್ಬಂದಿಗಳಿಗೆ ಕನಿಷ್ಠ ಮೊದಲ ಡೋಸ್ ಲಸಿಕೆ ಪಡೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ. ಇಷ್ಟಾಗಿಯೂ ಯಾವುದೇ ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ಬೌತಿಕ ತರಗತಿಗೆ ಹಾಜರಾಗಲು ಒತ್ತಡ ಹೇರುವಂತಿಲ್ಲ. ಬೌತಿಕ ತರಗತಿಗೆ ಹಾಜರಾಗಲು ವಿಧ್ಯಾರ್ಥಿ/ವಿಧ್ಯಾರ್ಥಿನಿಯರಿಗೆ ಇಚ್ಛಿಸದವರಿಗೆ ಶಿಕ್ಷಣ ಸಂಸ್ಥೆಗಳು ಆನ್ಲೈನ್ ಮೂಲಕವೇ ಪಠ್ಯ ಮುಂದುವರೆಸಲು ಸೂಚಿಸಲಾಗಿದೆ. ಇದರ ಜೊತೆಗೆ ಬೌತಿಕ ತರಗತಿಗೆ ಹಾಜರಾಗುವ ಮಕ್ಕಳು ಕಡ್ಡಾಯವಾಗಿ ಪೋಷಕರ ಲಿಖಿತ ಅನುಮತಿ ಪತ್ರವನ್ನು ಆಯಾ ಸಂಸ್ಥೆಗಳಿಗೆ ಸಲ್ಲಿಕೆ ಮಾಡಲು ಆದೇಶದಲ್ಲಿ ಹೇಳಲಾಗಿದೆ.
ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ರಾಜ್ಯದ ಉನ್ನತ ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೆಪ್ಟೆಂಬರ್ 1ರಿಂದ ಶಾಲೆ ಕಾಲೇಜುಗಳನ್ನು ಹಂತಹಂತವಾಗಿ ಪುನರಾರಂಭಿಸುವುದಾಗಿ ಹೇಳಿದ್ದರು. ಆದರೆ ಪಕ್ಕದ ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಕೆಲವೊಂದು ನಿಯಮಾವಳಿಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಕೇರಳದಿಂದ ರಾಜ್ಯಕ್ಕೆ (ತಮಿಳುನಾಡು) ಬರುವ ಎಲ್ಲಾ ವಿಧ್ಯಾರ್ಥಿಗಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು ಮತ್ತು RTPCR ವರದಿ ಕಡ್ಡಾಯವಾಗಿ ಹೊಂದಿರಬೇಕು ಎಂದು ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಇದರ ಜೊತೆಗೆ ಶಾಲಾ (9-12 ತರಗತಿ) ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಇಲ್ಲದೆ ಉಚಿತವಾಗಿ ಸಾರಿಗೆ ನಿಗಮಗಳಲ್ಲಿ ತಮ್ಮ ಸಂಸ್ಥೆಗಳಿಗೆ ಪ್ರಯಾಣಿಸಲು ಅನುಮತಿಸಲಾಗುವುದು ಎಂದು ಘೋಷಿಸಿದ್ದಾರೆ. ಇದೇ ವೇಳೆ ಇತರೆ ರಾಜ್ಯಗಳು ಸಹ ಹಂತ ಹಂತವಾಗಿ ಪುನರಾರಂಭಗೊಳ್ಳುತ್ತಿವೆ. ಸದ್ಯಕ್ಕೆ 9-12 ತರಗತಿಗಳಿಗೆ ಮಾತ್ರ ತಮಿಳುನಾಡು ಸೇರಿದಂತೆ ರಾಜಸ್ಥಾನ ಮತ್ತು ಪುದುಚೇರಿಗಳಲ್ಲಿ ಅವಕಾಶ ನೀಡಲಾಗಿದೆ.

ರಾಜಸ್ಥಾನದಲ್ಲಿ ತರಗತಿಯ ಒಟ್ಟು ಸಾಮರ್ಥ್ಯದ 50% ಮಾತ್ರ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಅಸೆಂಬ್ಲಿ ಪ್ರಾರ್ಥನೆಗಳು, ಕ್ರೀಡಾ ಚಟುವಟಿಕೆಗಳು ಮತ್ತು ಮಧ್ಯಾಹ್ನದ ಊಟವನ್ನು ವಿತರಿಸಲು ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಪುದುಚೇರಿಯಲ್ಲಿ ಕೂಡ ತರಗತಿಯ ಕೊಠಡಿಯ 50% ಸಾಮರ್ಥ್ಯವನ್ನು ಮಾತ್ರ ಬಳಸಲು ಅವಕಾಶ ಕೊಟ್ಟು, ದೆಹಲಿಯಂತೆಯೇ ಪ್ರತ್ಯೇಕವಾಗಿ ಬೆಳಿಗ್ಗೆ ಮತ್ತು ಸಂಜೆ ಸೆಷನ್ಗಳನ್ನು ನಡೆಸಲು ಆದೇಶ ಹೊರಡಿಸಿದೆ.
ಮಧ್ಯಪ್ರದೇಶ ಸರ್ಕಾರ 6-12ನೇ ತರಗತಿಯವರೆಗೆ ಶಾಲೆಗಳನ್ನು ತೆರೆಯಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಕೊಟ್ಟ ಅಲ್ಲಿನ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್, ಸದ್ಯಕ್ಕೆ 6-12ನೇ ತರಗತಿಯವರೆಗೆ ಆರಂಭಗೊಳ್ಳಲಿದ್ದು ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಶಾಲೆಗಳು ಓಪನ್ ಆಗಲಿವೆ ಎಂದಿದ್ದಾರೆ. ಆದರೆ ತೆಲಂಗಾಣದಲ್ಲಿ, ಎಲ್ಲಾ ಶ್ರೇಣಿಯ ತರಗತಿಗಳಿಗೆ (ಶಿಶುವಿಹಾರದಿಂದ ಸ್ನಾತಕೋತ್ತರ ವಿದ್ಯಾರ್ಥಿಗಳವರೆಗೆ) ಹಾಜರಾಗಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಲಾಗಿದೆ. ಆದರೆ ಅಲ್ಲೂ 50% ಸಾಮರ್ಥ್ಯ ಮಾತ್ರ ಹೊಂದಿರ ಬೇಕು ಎಂದು ಹೇಳಲಾಗಿದೆ.
ಈ ಹಿಂದೆ ಸೆಪ್ಟೆಂಬರ್ 1 ರಂದು ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಯೋಚಿಸಿದ್ದ ಅಸ್ಸಾಂ, ಕೊರೋನಾ ಬಗೆಗಿನ ಆತಂಕವನ್ನು ಉಲ್ಲೇಖಿಸಿ ಈ ನಿರ್ಧಾರದಿಂದ ಕಳೆದ ಸೋಮಾವಾರ ಹಿಂದೆ ಸರಿದಿದೆ. ಅಸ್ಸಾಂನ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತಾಡುತ್ತಾ ” COVID-19 ಪರಿಸ್ಥಿತಿ ಹತೋಟಿಗೆ ಬಂದಂತೆ ಕಾಣುತ್ತಿಲ್ಲ ಹೀಗಾಗಿ ಶಾಲೆ ಕಾಲೇಜು ಆರಂಭಿಸಿ ವಿದ್ಯಾರ್ಥಿಗಳನ್ನು ಅಪಾಯಕ್ಕೆ ದೂಡಲು ಸರ್ಕಾರ ಸಿದ್ಧವಿಲ್ಲ ಎಂದು ಹೇಳಿದ್ದಾರೆ.

ಹೀಗೆ ಸರಿ ಸುಮಾರು ಕಳೆದರಡು ವರ್ಷಗಳಿಂದ ಕೊರೋನಾ ಕಾರಣದಿಂದ ಮುಚ್ಚಲ್ಟಪಟ್ಟಿದ್ದ ಶಾಲೆ-ಕಾಲೇಜುಗಳು ಇಂದಿನಿಂದ ಹಂತಹಂವಾಗಿ ದೇಶದ ಹಲವು ರಾಜ್ಯಗಳಲ್ಲಿ ಅರಂಭಗೊಳ್ಳುತ್ತಿದೆ. ಕೇಂದ್ರ ಸರ್ಕಾರ ಈ ಬಗ್ಗೆ Standard Operating Procedure (SOP) ಅನ್ನು ಜಾರಿ ಮಾಡಿದೆ ಆದರೂ, ಆಯಾ ರಾಜ್ಯಗಳು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಶಾಲೆ-ಕಾಲೇಜುಗಳನ್ನು ತೆರಯುತ್ತಿವೆ. ಸದ್ಯ ಕರ್ನಾಟಕದಲ್ಲಿ 9 ರಿಂದ 12ನೇ ವರೆಗಿನ ತರಗತಿಗಳು ಆರಂಭಗೊಂಡಿದೆ. 6 ರಿಂದ 8ರ ವರೆಗಿನ ತರಗತಿಗಳು ಇದೇ ಸೆಪ್ಟೆಂಬರ್ 6ರಿಂದ ಪುನರಾರಂಭಗೊಳ್ಳುತ್ತಿದೆ. 1 ರಿಂದ 5ರ ವರೆಗಿನ ತರಗತಿಗಳನ್ನು ಸದ್ಯಕ್ಕೆ ತೆರಯದೆ ಮುಂದಿನ ಪರಿಸ್ಥಿತಿಗನುಗುಣವಾಗಿ ತೆರಯಲು ರಾಜ್ಯ ಸಮಗ್ರ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.