ಹೊಸದಿಲ್ಲಿ:ದೆಹಲಿಯ ಮುಂದಿನ (Next CM)ಮುಖ್ಯಮಂತ್ರಿಯಾಗಿ ಎಎಪಿ ಶಾಸಕಿ, ಸಚಿವೆ ಅತಿಶಿ ಮರ್ಲೆನಾ (Atishi Marlena)ಅವರನ್ನು ಆಯ್ಕೆ ಮಾಡಲಾಗಿದೆ.ಇಂದು ಮಧ್ಯಾಹ್ನ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿಯಾಗಿ ಅರವಿಂದ್ ಕೇಜ್ರಿವಾಲ್ (Arvind Kejriwal)ಅವರು ದಿಲ್ಲಿ ಸಿಎಂ( CM)ಸ್ಥಾನಕ್ಕೆ ರಾಜೀನಾಮೆ (resignation)ನೀಡಲಿದ್ದಾರೆ.ಆ ಬಳಿಕ ಅತಿಶಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇಂದು ಮುಂಜಾನೆ ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ನಿವಾಸದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಯಾರು ಈ ಅತಿಶಿ? ಕೇವಲ 5 ವರ್ಷಗಳ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿಯಾಗಿ ಅಚ್ಚರಿ ಮೂಡಿಸಿರುವ 43ರ ನಾಯಕಿ. 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಅತಿಶಿ ಅವರನ್ನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಪೂರ್ವ ದೆಹಲಿಯ ಉಸ್ತುವಾರಿಯಾಗಿ ನೇಮಿಸಲಾಯಿತು.ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) BJP)ಗೌತಮ್ ಗಂಭೀರ್ ವಿರುದ್ಧ 4.77 ಲಕ್ಷ ಮತಗಳ ಅಂತರದಿಂದ ಸೋತರು. 2020 ರ ದೆಹಲಿ ವಿಧಾನಸಭೆ ಚುನಾವಣೆಯ ಸಮಯದಲ್ಲಿ, ಅತಿಶಿ ದಕ್ಷಿಣ ದೆಹಲಿಯ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು.ಅವರು ಬಿಜೆಪಿ ಅಭ್ಯರ್ಥಿ ಧರಂಬೀರ್ ಸಿಂಗ್ ಅವರನ್ನು 11,422 ಮತಗಳಿಂದ ಸೋಲಿಸಿ, ಶಾಸಕಿಯಾದರು.
ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರ ರಾಜೀನಾಮೆಯ ನಂತರ ಸೌರಭ್ ಭಾರದ್ವಾಜ್ ಅವರೊಂದಿಗೆ ಕ್ಯಾಬಿನೆಟ್ ಸಚಿವರಾಗಿ ದೆಹಲಿ ಸರ್ಕಾರಕ್ಕೆ ಅತಿಶಿ ಸೇರ್ಪಡೆಗೊಂಡರು. ಈಗ ಮುಖ್ಯಮಂತ್ರಿಯಾಗಿದ್ದಾರೆ.
ಸೆಪ್ಟೆಂಬರ್ 13 ರಂದು, ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜಾಮೀನು ಪಡೆದು ತಿಹಾರ್ ಜೈಲಿನಿಂದ ಬಿಡುಗಡೆಯಾದರು. ಬಿಡುಗಡೆಯಾದ ಎರಡು ದಿನಗಳ ನಂತರ, ಭಾನುವಾರ, ಕೇಜ್ರಿವಾಲ್ ಅವರು 48 ಗಂಟೆಗಳ ಒಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದರು.
ದೆಹಲಿ ವಿಧಾನಸಭಾ ಚುನಾವಣೆ 2025ರ ಫೆಬ್ರವರಿಯಲ್ಲಿ ನಡೆಯಲಿದೆ. ಆದರೆ ಕೇಜ್ರಿವಾಲ್ ಅವರು ಮೂರು ತಿಂಗಳಿಗೆ ಮುನ್ನವೇ ಚುನಾವಣೆಗೆ ಹೋಗುವ ಕುರಿತಾಗಿ ಮಾತನಾಡುತ್ತಿದ್ಧಾರೆ. 2024ರ ನವೆಂಬರ್‌ನಲ್ಲೇ ಚುನಾವಣೆ ನಡೆಯಬೇಕು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯೊಂದಿಗೆ ಚುನಾವಣೆ ನಡೆಸಲು ಆಗ್ರಹಿಸುತ್ತಿದ್ದಾರೆ.