ದೆಹಲಿಯಿಂದ ಅಯೋಧ್ಯೆಗೆ ಮೊದಲ ಬ್ಯಾಚ್ ತೀರ್ಥಯಾತ್ರಿಗಳು ಡಿಸೆಂಬರ್ 3ರಂದು ಹೊರಡುತ್ತಿದ್ದರು. ಅವರ ಆಧ್ಯಾತ್ಮಿಕ ಯಾತ್ರೆಗೆ ದೆಹಲಿ ಸರ್ಕಾರ ಪ್ರಾಯೋಜಕತ್ವ ನೀಡಿದ್ದು ವಿಶೇಷವಾಗಿತ್ತು.
ಮೊದಲಿನಿಂದಲೂ ಆಮ್ ಆದ್ಮಿ ಬಿಜೆಪಿಯ ಬಿ ಟೀಂ ಎಂದು ಕೆಲವು ಪ್ರಗತಿಪರರು ಟೀಕಿಸಿದ್ದರು. ಆದರೆ, ಆಪ್ ಸರ್ಕಾರ ಶಿಕ್ಷಣ, ಆರೋಗ್ಯ, ನೀರು ಮತ್ತು ವಿದ್ಯುತ್ ಪೂರೈಕೆಯಲ್ಲಿ ಗುಣಮಟ್ಟದ ಸೇವೆಗಳನ್ನು ಒದಗಿಸುವ ಮೂಲಕ ಜನಮನ ಗೆದ್ದಿತು.
ಆದರೆ, ಕಳೆದ ವಿಧಾನಸಭೆ ಚುನಾವಣೆ ಹೊತ್ತಿಗೆ ಅರವಿಂದ್ ಕೇಜ್ರಿವಾಲ್ ಅವರು, ಮೃದು ಹಿಂದೂತ್ವದ ಪ್ರತಿಪಾದಕರಾದರು. ಈಗ ಅವರು ಅಯೋಧ್ಯೆ ಮತ್ತು ರಾಮಲಲ್ಲಾನ ಕುರಿತು ತುಂಬ ಭಾವುಕವಾಗಿ ಮಾತನಾಡುತ್ತಿದ್ದಾರೆ. ಅವರ ಭಾಷೆ ಹಿಂದೂ ಸನ್ಯಾಸಿಗಳ ಭಾಷೆಯ ತರಹವಿದೆ. ದೆಹಲಿ ಮುಖ್ಯಮಂತ್ರಿಗಳು ಅಯೋಧ್ಯೆಗೆ ಭೇಟಿ ನೀಡಿ ರಾಮ್ ಲಲ್ಲಾನ ದರ್ಶನ ಪಡೆದ ನಂತರ ಈ ಕಾರ್ಯಕ್ರಮಕ್ಕೆ ಸ್ಫೂರ್ತಿ ಸಿಕ್ಕಿತು.
ದರ್ಶನ ಪಡೆದಾಗ ಅನುಭವಿಸುವ ಆನಂದ ತನಗೆ ಮಾತ್ರ ಆಗಬಾರದು ಎಂದು ಹೇಳಿದ ಅವರು, “ಇತ್ತೀಚೆಗೆ ನಾನು ರಾಮ್ ಲಲ್ಲಾನನ್ನು ಭೇಟಿ ಮಾಡಲು ಅಯೋಧ್ಯೆಗೆ ಹೋಗಿದ್ದೆ. ಹೊರಗೆ ಬರುತ್ತಿರುವಾಗ, ದೇಶದ ಪ್ರತಿಯೊಬ್ಬ ವ್ಯಕ್ತಿಯೂ ರಾಮ್ ಲಲ್ಲಾನನ್ನು ಭೇಟಿಯಾಗುವಂತೆ ಮಾಡಲು ನನಗೆ ಸಾಧ್ಯವಾಗುವಂತೆ ನಾನು ದೇವರನ್ನು ಪ್ರಾರ್ಥಿಸಿದೆ. ದೆಹಲಿಯಲ್ಲಿ ನಾವು ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆ ನಡೆಸುತ್ತಿದ್ದೇವೆ. ಇದರ ಅಡಿಯಲ್ಲಿ ದೆಹಲಿಯಲ್ಲಿರುವ ಹಿರಿಯರಿಗೆ ತೀರ್ಥಯಾತ್ರೆಯ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತದೆ. 12 ಯಾತ್ರಾ ಸ್ಥಳಗಳ ಪಟ್ಟಿ ಇದ್ದು, ಇದುವರೆಗೆ 36,000 ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಅವರಿಗೆ ಎಸಿ ರೈಲುಗಳು, ಎಸಿ ಹೋಟೆಲ್ಗಳು ಮತ್ತು ಆಹಾರವನ್ನು ಉಚಿತವಾಗಿ ನೀಡಲಾಗುತ್ತಿದೆʼ ಎಂದಿದ್ದಾರೆ. ಆದರೆ, ರಾಮಲಲ್ಲಾ ಅಯೋಧ್ಯೆಯಲ್ಲಿ ಯಾವಾಗ ಕಾಣಿಸಿಕೊಂಡರು ಎಂಬುದು ನಮಗೆ ತಿಳಿದಿದೆ. ಡಿಸೆಂಬರ್ 22 ಮತ್ತು 23, 1949 ರ ರಾತ್ರಿಯಲ್ಲಿ ರಾಮ್ ಲಲ್ಲಾನ ದರ್ಶನ ಸಂಭವಿಸಿತು.
ದಶಕಗಳ ನಂತರ ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸ ಈ ವಿವಾದದ ಭಾಗವಾಗಿ ಸಂಭವಿಸಿತು. ಇದನ್ನು ಭಾರತದ ಸುಪ್ರೀಂ ಕೋರ್ಟ್ ಅಪರಾಧವೆಂದು ಪರಿಗಣಿಸಿತು. ನಮಗೆಲ್ಲ ತಿಳಿದಿರುವ ಕಾರಣಗಳಿಗಾಗಿ, ಸುಪ್ರೀಂ ಕೋರ್ಟ್ ಅಪರಾಧಕ್ಕೆ ಕಾರಣರಾದವರಿಗೆ 500 ವರ್ಷಗಳಿಗೂ ಹೆಚ್ಚು ಕಾಲ ಮಸೀದಿ ಇದ್ದ ಭೂಮಿಯನ್ನು ಬಹುಮಾನವಾಗಿ ನೀಡಿತು ಎಂಬುದು ಬೇರೆ ವಿಷಯ. ಮುಸ್ಲಿಮರು ಮತ್ತು ಜಾತ್ಯತೀತ ಭಾರತೀಯರಿಗೆ, ಈ ನಿವೇಶನ ಡಿಸೆಂಬರ್ 1992 ರ ಮೊದಲ ವಾರದ ಸ್ಮರಣೆಯನ್ನು ಮತ್ತು ಅದರ ಭೀಕರ ಮತ್ತು ಅನ್ಯಾಯದ ಪರಿಣಾಮಗಳನ್ನು ಪ್ರತಿನಿಧಿಸುತ್ತದೆ. ಮುಖ್ಯಮಂತ್ರಿಗಳು ಅಯೋಧ್ಯೆಯನ್ನು ಯಾತ್ರಾ ಸ್ಥಳಗಳಲ್ಲಿ ಒಂದಾಗಿ ಆರಿಸಿಕೊಂಡರು, ಅವರು ತಮ್ಮ ಮತದಾರರಿಗೆ ತೆರಿಗೆದಾರರ ಹಣದಿಂದ ಭೇಟಿ ನೀಡಲು ಸಹಾಯ ಮಾಡುತ್ತಿದ್ದಾರೆ. ಕೇಜ್ರಿವಾಲ್ ಅವರು ತಮ್ಮ ವೈಯಕ್ತಿಕ ಧಾರ್ಮಿಕ ಭಾವನೆಗಳನ್ನು ಸರ್ಕಾರದ ಕಾರ್ಯಕ್ರಮವಾಗಿ ರೂಪಿಸುತ್ತಿದ್ದಾರೆ.

ಕೇಜ್ರಿವಾಲ್ ಅವರು ತೀರ್ಥಯಾತ್ರೆಗೆ ಚಾಲನೆ ನೀಡುವ ಸಮಾರಂಭವನ್ನು ಘೋಷಿಸುವಾಗ, ಪೌರಾಣಿಕ ಶ್ರವಣ್ ಕುಮಾರ್ ಅವರ ಆಧುನಿಕ ಅವತಾರವಾಗಿ ತಮ್ಮನ್ನು ತಾವು ಪ್ರಸ್ತುತಪಡಿಸಿಕೊಂಡರು. ಇದೆಂತಹ ನಾಟಕೀಯತೆ? ಇದೆಂತಹ ಪರಿವರ್ತನೆ ಅಲ್ಲವೆ? ಏನಿಲ್ಲ, ಅವರೀಗ ಹಿಂದೂತ್ವದ ಹಿಂಬಾಲಕರಾಗುತ್ತಿದ್ದಾರೆ. ತಮ್ಮ ಮತದಾರ ವರ್ಗಗಳನ್ನು ಹಿಡಿದಿಟ್ಟು ಕೊಳ್ಳಲು ಅವರು ಈ ಸಾಹಸ (ಆದರೆ ಇದು ದುಸ್ಸಾಹಸ) ಮಾಡುತ್ತಿದ್ದಾರೆ. ಚುನಾಯಿತ ಪ್ರತಿನಿಧಿಯ ಹಿತಚಿಂತಕನಂತೆ ಮತ್ತು ವೃದ್ಧರು ಮತ್ತು ಅಂಗವಿಕಲರನ್ನು ‘ಮಗ’ನ ಆಶ್ರಯಕ್ಕೆ ಅರ್ಹರು ಎಂದು ತೋರಿಸುವ ಶ್ರವಣಕುಮಾರನ ಈ ರೂಪಕ ವಿಚಿತ್ರವಾಗಿದೆ.
ಎಎಪಿಯ ಹಿಂದುತ್ವ ರಾಜಕಾರಣ
ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರು ತಮ್ಮ ಸರ್ಕಾರವು ವಿವಿಧ ನಂಬಿಕೆಗಳ ಅನುಯಾಯಿಗಳಿಗಾಗಿ ಗುರುತಿಸಿರುವ 12 ಯಾತ್ರಾ ಸ್ಥಳಗಳ ಪಟ್ಟಿಯನ್ನು ಓದುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು. ಆದರೆ ಅವರ ನಡೆ ಮತ್ತು ಅಯೋಧ್ಯೆಯ ಕೇಂದ್ರ ವೇದಿಕೆಯ ಮಹತ್ವವನ್ನು ಯಾರೂ ಮರೆಯಬಾರದು. ಹಿಂದೂಗಳ ಪವಿತ್ರ ಭೂಗೋಳದಲ್ಲಿ ಅಯೋಧ್ಯೆಗೆ ಸ್ಥಾನವಿದೆ. ಇದನ್ನು ಭಕ್ತರು ಅಯೋಧ್ಯಾಜಿ ಎಂದು ಕರೆಯುತ್ತಾರೆ. ಆದರೆ ಪುರಿ, ರಾಮೇಶ್ವರಂ, ಶಿರಡಿ, ಮಥುರಾ, ಹರಿದ್ವಾರ, ಕರ್ತಾರ್ಪುರ, ಗೋಲ್ಡನ್ ಟೆಂಪಲ್ ಮತ್ತು ವೈಷ್ಣೋದೇವಿಯನ್ನು ಹೊಂದಿದ್ದ ದೆಹಲಿ ಸರ್ಕಾರದ ಮೂಲ ಪಟ್ಟಿಯಲ್ಲಿ ಅದು ಇರಲಿಲ್ಲ. ಕೇಜ್ರಿವಾಲ್ ಮತ್ತು ಅವರ ಸಹೋದ್ಯೋಗಿಗಳು 2022 ರಲ್ಲಿ ಆ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಮ್ಮ ಪ್ರಚಾರವನ್ನು ಪ್ರಾರಂಭಿಸಿದ ನಂತರ, ಉತ್ತರ ಪ್ರದೇಶದಿಂದ ಹಿಂದಿರುಗಿದಾಗ ಅಯೋಧ್ಯೆಯನ್ನು ಸೇರಿಸಲಾಯಿತು.
ಅಭಿಯಾನದ ಭಾಗವಾಗಿ, ಅವರು ಅಯೋಧ್ಯೆಯಲ್ಲಿ ರಾಮ್ ಲಲ್ಲಾಗೆ ಗೌರವ ಸಲ್ಲಿಸಲು ತಿರಂಗಾ ಯಾತ್ರೆಯನ್ನು ನಡೆಸಿದರು. ರಾಮ ಮಂದಿರದ ರೂಪಕದ ಮೂಲಕ ಕೆಲಸ ಮಾಡಿದ ಹಿಂದುತ್ವದ ಸಿದ್ಧಾಂತದೊಂದಿಗೆ ರಾಷ್ಟ್ರೀಯತೆಯನ್ನು ಜೋಡಿಸಲು AAP ಬಯಸಿದೆ ಎಂಬುದು ಈ ನಡೆಯಿಂದ ಬಹಳ ಸ್ಪಷ್ಟವಾಗಿದೆ. ಇದು ವಾಸ್ತವವಾಗಿ ಮುಸ್ಲಿಮರನ್ನು ಸೋಲಿಸಿದ ಕಾಲ್ಪನಿಕ ಯುದ್ಧದ ವಿಜಯದ ಸ್ಮಾರಕವಾಗಿದೆ. 2014 ರಲ್ಲಿ ಕೇಜ್ರಿವಾಲ್ ತಮ್ಮ ನಾನಿ (ಅಜ್ಜಿ) ಯನ್ನು ಉಲ್ಲೇಖಿಸಿ, ʼನನ್ನ ರಾಮನು ಮಸೀದಿಯನ್ನು ಒಡೆದು ನಿರ್ಮಿಸಿದ ದೇವಾಲಯದಲ್ಲಿ ವಾಸಿಸಲು ಸಾಧ್ಯವಿಲ್ಲʼ ಎಂದು ಹೇಳಿದ್ದನ್ನು ಜ್ಞಾಪಿಸಿದ್ದರು! ಈಗ ಅವರೇ ಸರ್ಕಾರಿ ವೆಚ್ಚದಲ್ಲಿ ಅಯೋಧ್ಯೆ ಯಾತ್ರೆ ನಡೆಸುತ್ತಿರುವುದು ವಿಪರ್ಯಾಸ. ಇದು ಅವಕಾಶವಾದಿತನ ಮತ್ತು ಅಪಾಯಕಾರಿ ನಡೆ. ಕಳೆದ ಎರಡು–ಮೂರು ವರ್ಷಗಳಲ್ಲಿ ಅವರು ಹಿಂದುತ್ವದ ರಾಜಕೀಯವನ್ನು ಆಕ್ರಮಣಕಾರಿಯಾಗಿ ಅನುಸರಿಸುತ್ತಿದ್ದಾರೆ. ಅದನ್ನು ‘ಮೃದು ಹಿಂದುತ್ವ’ ಎಂದು ಕರೆಯುವುದು ಕೂಡ ಮೂರ್ಖತನ. ಕಳೆದ ವರ್ಷ, ಅವರು ಲಕ್ಷ್ಮಿ ಪೂಜೆಯನ್ನು ಆಯೋಜಿಸಿದರು. ದೆಹಲಿಯ ಅಕ್ಷರಧಾಮ ದೇವಸ್ಥಾನದಲ್ಲಿ ಸೆಟ್ ಹಾಕಲಾಗಿತ್ತು. ಈ ವರ್ಷವೂ ಮನೆಯಲ್ಲಿ ದೀಪಾವಳಿ ಪೂಜೆ ಮಾಡುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಪ್ರಕಟವಾದ ಜಾಹೀರಾತಿನ ಕುರಿತು ದಿ ಹಿಂದೂ ವರದಿಯನ್ನು ಪ್ರಕಟಿಸಿತು: “ದೀಪಾವಳಿಯ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳು. ನಾವು ಒಟ್ಟಿಗೆ ಭಗವಾನ್ ರಾಮನನ್ನು ಸ್ವಾಗತಿಸುತ್ತೇವೆ – ಆದರೆ ನಾವು ಪಟಾಕಿಗಳನ್ನು ಸಿಡಿಸುವುದಿಲ್ಲ, ನಾವು ಮಾಲಿನ್ಯವನ್ನು ಉಂಟು ಮಾಡುವುದಿಲ್ಲ ”ಎಂದು ಕೇಜ್ರಿವಾಲ್ ‘ದಿಲ್ಲಿ ಕಿ ದೀಪಾವಳಿ’ ಜಾಹೀರಾತಿನಲ್ಲಿ ಹೇಳುತ್ತಾರೆ. “ಎಲ್ಲಾ 2 ಕೋಟಿ ದೆಹಲಿಯ ಜನರು ಒಟ್ಟಾಗಿ ಸಂಜೆ 7 ಗಂಟೆಗೆ ದೀಪಾವಳಿ ಪೂಜೆ ಮಾಡಬೇಕು. ದಯವಿಟ್ಟು ಪೂಜೆಯಲ್ಲಿ ನನ್ನೊಂದಿಗೆ ಸೇರಿಕೊಳ್ಳಿ… ನಮ್ಮ ದೆಹಲಿಯು ಭಗವಾನ್ ರಾಮನ ಉಪಕಾರವನ್ನು ಎಂದೆಂದಿಗೂ ಆನಂದಿಸಲಿ. ಜೈ ಶ್ರೀ ರಾಮ್” ಎಂದು ಮುಖ್ಯಮಂತ್ರಿಗಳು ಯೋಗಿ ಆದಿತ್ಯನಾಥರಂತೆ ಮಾತನಾಡಿದ್ದರು.
ಎಲ್ಲಾ ‘ದಿಲ್ಲಿವಾಲಾ’ಗಳು ಪೂಜೆ ಮಾಡಬೇಕೆಂದು ಮುಖ್ಯಮಂತ್ರಿ ಬಯಸುತ್ತಾರೆ. ಎಲ್ಲಾ ದೆಹಲಿಯ ಜನರು ಹಿಂದೂಗಳಲ್ಲ ಎಂದು ಅವರಿಗೆ ತಿಳಿದೂ ಬೇಕೆಂತಲೇ ಈ ಸ್ಟಂಟ್ ಮಾಡುತ್ತಾರೆ. ಅವರೆಲ್ಲರನ್ನೂ ದೀಪಾವಳಿಯಲ್ಲಿ ಭಾಗವಹಿಸಲು ಹೇಳಬಹುದಿತ್ತು ಆದರೆ ಪೂಜೆ ಮಾಡಲು ಹೇಳುವುದು ಖಂಡಿತವಾಗಿಯೂ ಬಾಯಿ ತಪ್ಪಿ ಆಡಿದ ಮಾತಲ್ಲ. ಇತರ ಧರ್ಮಗಳ ಅನುಯಾಯಿಗಳು ತಮ್ಮ ಭಾರತೀಯತೆಯನ್ನು ಸಾಬೀತುಪಡಿಸಲು ಅಳವಡಿಸಿಕೊಳ್ಳಬೇಕಾದ ಭಾರತೀಯ ಜೀವನ ವಿಧಾನವಾಗಿ ಹಿಂದೂ ಧಾರ್ಮಿಕ ಕಾರ್ಯಗಳು ಮತ್ತು ಪದ್ಧತಿಗಳನ್ನು ಪ್ರಸ್ತುತಪಡಿಸಲು ಆಮ್ ಆದ್ಮಿ ಯತ್ನಿಸುತ್ತಿದೆ. ಇದು ಆಕಸ್ಮಿಕವಲ್ಲ, ಪ್ರಜ್ಞಾಪೂರ್ವಕ ಮತ್ತು ಬುದ್ಧಿವಂತ ಮಾರ್ಗವಾಗಿದೆ. ಅದರ ಭಾಗವಾಗದೇ ಇರುವ ಯಾವುದೇ ಪ್ರಯತ್ನವು ನಿಮ್ಮನ್ನು ಸ್ವಯಂಚಾಲಿತವಾಗಿ ವಿಭಜಕಗಳ (ವಿಭಜನಾಕಾರಿ) ವರ್ಗಕ್ಕೆ ಸೇರಿಸುತ್ತದೆ.
ಆದರೆ ಒಂದು ನ್ಯಾಯಸಮ್ಮತವಾದ ಪ್ರಶ್ನೆ ಇಲ್ಲಿ ಹುಟ್ಟುತ್ತದೆ: ಒಬ್ಬ ಮುಖ್ಯಮಂತ್ರಿಯಾಗಿ ಅವರು ಎರಡು ಕೋಟಿ ದೆಹಲಿ ಜನರಿಗೆ ಈದ್ನಲ್ಲಿ ನಮಾಜ್ ಓದಲು ಹೇಳಬಹುದೇ? ನಮ್ಮಲ್ಲಿ ಅನೇಕರಿಗೆ, ಇದು ವಿಚಿತ್ರವಾಗಿ ತೋರುತ್ತದೆ. ಆದರೆ ಮೊದಲ ಉಪದೇಶವು (ಲಕ್ಷ್ಮಿ ಪೂಜೆ) ಸಂಪೂರ್ಣವಾಗಿ ಸಾಮಾನ್ಯ ಅನಿಸುತ್ತದೆ. ಎರಡನೆಯ ಉಪದೇಶ (ನಮಾಜ್) ದೇಶದ್ರೋಹ ಎನಿಸುತ್ತದೆ. ಏಕೆಂದರೆ ಹಿಂದೂತ್ವವಾದಿಗಳು ಅಂತಹ ಭಾವನೆಯನ್ನು ಮಧ್ಯಮ ವರ್ಗದವರ ತಲೆಗೆ ತುಂಬಿದ್ದಾರೆ. AAP ಮಾಡುತ್ತಿರುವುದು ಇದನ್ನೇ – ಹಿಂದುತ್ವವನ್ನು ಜೀವನ ವಿಧಾನವಾಗಿ ಪರಿಗಣಿಸುವ ಚಿಂತನೆಯನ್ನು ಸಾಮಾನ್ಯಗೊಳಿಸುವುದು.
ಅದೇ ಧಾಟಿಯಲ್ಲಿ, ಕೇವಲ ಏಳು ವರ್ಷಗಳ ಹಿಂದೆ ಅವರ ದೃಷ್ಟಿಯಲ್ಲಿ ಪಾಪವಾಗಿದ್ದ ಮಸೀದಿ ದ್ವಂಸ ಈಗ ಸಾಮಾನ್ಯ ಘಟನೆಯಾಗಿದೆ. ಧ್ವಂಸಗೊಂಡ ಮಸೀದಿಯ ಸ್ಥಳದಲ್ಲಿರುವ ರಾಮಲಲ್ಲಾನ ದರ್ಶನಕ್ಕಾಗಿ ಅಯೋಧ್ಯೆಗೆ ಹೋಗುವಂತೆ ಹಿಂದೂ ಹಿರಿಯರನ್ನು ಕೇಳುವ ಮೂಲಕ, ಅವರು ಹಿಂದುತ್ವದ ಅಜೆಂಡಾವನ್ನು ಮೌಲ್ಯೀಕರಿಸುತ್ತಿದ್ದಾರೆ. ಉತ್ತರಾಖಂಡದಲ್ಲಿ ಎಎಪಿ ಫೌಜಿಯನ್ನು (ಸೈನಿಕ) ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಘೋಷಿಸಿತು. ಜನರು ತಮ್ಮ ಮುಖ್ಯಮಂತ್ರಿಯಾಗಲು ದೇಶಭಕ್ತ ಫೌಜಿ (ದೇಶಭಕ್ತ ರಕ್ಷಣಾ ಅಧಿಕಾರಿ) ಬಯಸುತ್ತಾರೆಯೇ ಹೊರತು ನೇತಾ (ರಾಜಕಾರಣಿ) ಅಲ್ಲ ಎಂದು ಅವರು ಹೇಳಿದರು. ಉತ್ತರಾಖಂಡವನ್ನು ಹಿಂದೂಗಳಿಗೆ ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಮಾಡುವುದಾಗಿ ಭರವಸೆ ನೀಡಿದರು! ಮತ್ತೆ ಬಿಜೆಪಿಯಂತೆಯೇ, ಹಿಂದೂತ್ವ, ಸೇನೆ ಮಾತ್ತು ದೇಶಭಕ್ತಿಗಳ ಬೆರಕೆ ಮಿಶ್ರಣ ಮಾಡುವ ತಂತ್ರವಾಗಿದೆ.

ಮುಸ್ಲಿಮರನ್ನು ರಾಕ್ಷಸರನ್ನಾಗಿಸದೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಆಪ್ ಭಾವಿಸಿದೆ. ಇದು ಬಿಜೆಪಿಯ ಸಿದ್ದಾಂತವೇ ಅಲ್ಲವೇ?
ಶಾಹೀನ್ ಬಾಗ್ ಆಂದೋಲನವನ್ನು ಹಿಂದೂತ್ವವಾದವು ನಿಂದಿಸಿದಾಗ, ಮುಸ್ಲಿಮರನ್ನು ದೇಶದ್ರೋಹಿ ಎಂದು ಹಿಂದೂತ್ವವಾದಿಗಳು ಬಿಂಬಿಸಲು ನೋಡಿದಾಗ ಮತ್ತು COVID-19 ಪ್ರಕರಣಗಳ ಹೆಚ್ಚಳಕ್ಕೆ ತಬ್ಲಿಘಿಗಳನ್ನು ಹೊಣೆಗಾರರನ್ನಾಗಿ ಮಾಡಿದಾಗ ಮುಸ್ಲಿಮರನ್ನು ಖಳನಾಯಕರನ್ನಾಗಿ ಹಿಂದೂತ್ವವಾದ ಚಿತ್ರಿಸಿತು.
ಆಗೆಲ್ಲ ಆಮ್ ಆದ್ಮಿ ಮೌನವಿರುವ ಮೂಲಕ ಹಿಂದೂತ್ವವಾದದ ಮುಂದೆ ಮಂಡೆ ಊರಿತ್ತು. ನಂತರದಲ್ಲಿ ಅದು ಬಹಿರಂಗವಾಗಿಯೇ ಹಿಂದೂತ್ವವಾದದ ಪರ ಬಹಿರಂಗ ಹೇಳಿಕೆಗಳನ್ನು ನೀಡತೊಡಗಿದೆ.
‘ಜೈ ಶ್ರೀ ರಾಮ್’ ಘೋಷಣೆ ಕೂಗಿದ್ದಕ್ಕಾಗಿ ಬಜರಂಗದಳ ಕಾರ್ಯಕರ್ತ ರಿಂಕು ಶರ್ಮಾ ಅವರನ್ನು ಹತ್ಯೆ ಮಾಡಲಾಗಿದೆʼ ಎಂದು ಎಎಪಿ ಶಾಸಕ ರಾಘವ್ ಚಡ್ಡಾ ಜೇಳಿದ್ದನ್ನು ಗಮನಿಸಿ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ, “‘ಜೈ ಶ್ರೀ ರಾಮ್’ ಎಂದು ಹೇಳಿದ್ದಕ್ಕಾಗಿ ಕೊಲೆಗಳು ನಡೆಯುತ್ತಿವೆ ಮತ್ತು ಬಿಜೆಪಿ ಮೌನವಾಗಿರುವುದು ದುರದೃಷ್ಟಕರ. ಇಂದು ದೇಶದಲ್ಲಿ ‘ಜೈ ಶ್ರೀರಾಮ್’ ಎಂದು ಹೇಳುವುದು ಅಸುರಕ್ಷಿತವಾಗಿದೆ. ಭಾರತದಲ್ಲಿ ಈ ಘೋಷಣೆಯನ್ನು ಎತ್ತಲಾಗದಿದ್ದರೆ, ಅದನ್ನು ಎಲ್ಲಿ ಎತ್ತಬೇಕು? ಪಾಕಿಸ್ತಾನದಲ್ಲಿಯಾ?” ಎಂದು ಪ್ರಶ್ನೆ ಮಾಡಿದ್ದರು. ಇದು ಆರೆಸ್ಸೆಸ್ ವ್ಯಕ್ತಿಗೆ ತಕ್ಕ ಭಾಷೆ. ಅದೀಗ ಆಪ್ ಭಾಷಯೂ ಆಗುತ್ತಿದೆ!
2018 ರಲ್ಲಿ, ದೆಹಲಿಯ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಸಲ್ಲಿಸುತ್ತಿದ್ದ ಮುಸ್ಲಿಮರ ಮೇಲೆ ಹಿಂದೂತ್ವವಾದಿ ಸಂಘಟನೆಯ ಸದಸ್ಯರು ದಾಳಿ ಮಾಡಿದರು ಮತ್ತು “ಜೈ ಶ್ರೀ ರಾಮ್” ಎಂದು ಜಪಿಸುವಂತೆ ಒತ್ತಾಯಿಸಿದರು. ಇದೇ ರೀತಿಯ ದಾಳಿಗಳ ಸರಣಿಯನ್ನು ಅನುಸರಿಸಲಾಯಿತು ಮತ್ತು ಯತಿ ನರಸಿಂಹಾನಂದರಂತಹ ಉಗ್ರಗಾಮಿ ಹಿಂದುತ್ವದ ನಾಯಕರಿಂದ ಮುಸ್ಲಿಂ ಪುರುಷರ ವಿರುದ್ಧ “ಲ್ಯಾಂಡ್ ಜಿಹಾದ್“ (ಭೂಕಬಳಿಕೆಗಾಗಿ ನಮಾಜ್ ಪ್ರದೇಶ) ಆರೋಪಗಳನ್ನು ಹೊರಿಸಲಾಯಿತು.
ಈಗ ಆಪ್ ನಡೆಯಿಂದ ಇಂತಹ ಸಮಾಜ ವಿರೋಧಿ ಶಕ್ತಿಗಳು ಮತ್ತಷ್ಟು ದುಸ್ಸಾಹಸಗಳಿಗೆ ಕಳೆದ ಚುನಾವಣೆ ಸಮಯದಲ್ಲಿ ಕೇಜ್ರಿವಾಲ್ ಅವರು ಟಿವಿ ಸ್ಟುಡಿಯೋಗಳಲ್ಲಿ ಕುಳಿತು, ತಾನು ಹನುಮಾನ್ ಭಕ್ತ ಎಂದು ಹನುಮಾನ್ ಚಾಲೀಸಾ ಪಠಿಸಿ ನಾಟಕೀಯತೆ ಪ್ರದರ್ಶಿಸಿದ್ದರು. ಇದು ಹಿಂದೂತ್ವ ಅನುಸರಿಸುವ ತಂತ್ರವಾಗಿದೆ.
ಅಭಿವೃದ್ಧಿ ಕಾರ್ಯಗಳಿಂದ ಜನಪ್ರಿಯವಾದ ಆಪ್ ಸರ್ಕಾರ, ಈಗ ಹಿಂದೂತ್ವದ ಹಿಂಬಾಲಕನಾಗುತ್ತಿರುವುದು ಅದರ ಪ್ರಾಮಾಣಿಕ ಕಾರ್ಯಕರ್ತರಿಗೆ ಮುಜುಗರ ತರುತ್ತಿದೆ. ಆದರೆ, ಈ ತಂತ್ರ ಹುಲಿ ಮೇಲಿನ ಸವಾರಿ ಎಂಬುದು ಅರ್ಥವಾಗಲು ಬಹಳ ಸಮಯ ಹಿಡಿಯದು.