ಭಾರತ ತನ್ನ 75ನೆಯ ಸ್ವಾತಂತ್ರ್ಯೋತ್ಸವವವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವ ಹೊತ್ತಿನಲ್ಲೇ ಈ ದೇಶದ ಇತಿಹಾಸ ಗರ್ಭದಲ್ಲಿ ಅಡಗಿರುವ ಎಲ್ಲ ರೀತಿಯ ಸಾಮಾಜಿಕ ಅನಿಷ್ಟಗಳೂ ಒಂದೊಂದಾಗಿ ಪ್ರಕಟವಾಗುತ್ತಿವೆ. ಸಾಂವಿಧಾನಿಕವಾಗಿ ನಿಷೇಧಿಸಲ್ಪಟ್ಟ, ಸಾಮುದಾಯಿಕವಾಗಿ ತಿರಸ್ಕರಿಸಲ್ಪಟ್ಟ , ಸಾಂಸ್ಕೃತಿಕವಾಗಿ ನಿರಾಕರಿಸಲ್ಪಟ್ಟ ಮಾನವ ಸಮಾಜದ ಎಲ್ಲ ಅಪಸವ್ಯಗಳೂ, ಅನಿಷ್ಟ ಪದ್ಧತಿಗಳೂ, ಮನುಷ್ಯನ ವರ್ತನೆಗಳೂ ನಮ್ಮ ಸುತ್ತ ಯಾವುದೋ ಒಂದು ರೀತಿಯಲ್ಲಿ ಪ್ರಕಟವಾಗುತ್ತಲೇ ಇವೆ. ಆಧುನಿಕತೆಯನ್ನು ಮೈಗೂಡಿಸಿಕೊಂಡು ನಾಗರಿಕತೆಯ ಉತ್ತುಂಗಕ್ಕೆ ಏರಬೇಕಾಗಿದ್ದ ಭಾರತೀಯ ಸಮಾಜದಲ್ಲಿ ಅನಾಗರಿಕ ವರ್ತನೆ, ಅಸಭ್ಯ ನಡವಳಿಕೆ, ಅಸಹ್ಯಕರವಾದ ಮಾತುಗಳು ಮತ್ತು ಇವೆಲ್ಲವನ್ನೂ ನೈತಿಕ ನೆಲೆಯಲ್ಲಿ ಪೋಷಿಸುವಂತಹ ಹಿಂಸಾತ್ಮಕ ಮನಸ್ಥಿತಿ ಢಾಳಾಗಿ ಗೋಚರಿಸುತ್ತಿದೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸಾರ್ವಜನಿಕ ಬದುಕಿನಲ್ಲಿ ನಾಗರಿಕ ವರ್ತನೆಯ ಒಂದು ಸಮಕಾಲೀನ ಆದರ್ಶ ಮಾದರಿಯೇ ಇಲ್ಲವಾಗಿರುವ ಸನ್ನಿವೇಶದಲ್ಲಿ ಭಾರತದ ಯುವ ಸಮೂಹ ಪ್ರಾಚೀನತೆಗೆ ಅಥವಾ ಸಾಂಪ್ರದಾಯಿಕತೆಗೆ ಬಲಿಯಾಗುತ್ತಿದ್ದು, ಭವಿಷ್ಯದ ಭಾರತಕ್ಕೆ ಅಗತ್ಯವಾದ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಲು ವಿಫಲವಾಗುತ್ತಿದೆ.
ಈ ನಡುವೆಯೇ ನಮ್ಮ ನಡುವೆ ನಿರ್ಭಯಾಳಿಂದ ಶ್ರದ್ಧಾ ವಾಲ್ಕರ್ವರೆಗೆ ನೂರಾರು ಹೆಣಗಳು ಸಾಗಿಹೋಗಿವೆ. ಸಮಾಜ ನಿರುಮ್ಮಳವಾಗಿದೆ. ದಿನದಿಂದ ದಿನಕ್ಕೆ ಆರ್ಥಿಕವಾಗಿ ಸಬಲವಾಗಿ, ಸಾಮಾಜಿಕ ಮೇಲ್ ಚಲನೆ ಪಡೆಯುತ್ತಿರುವಂತೆಲ್ಲಾ ಮತ್ತೊಂದು ಬದಿಯಲ್ಲಿ ಭಾರತದ ಮಹಿಳೆ ದೌರ್ಜನ್ಯ, ಕಿರುಕುಳ, ಚಿತ್ರಹಿಂಸೆ, ಅತ್ಯಾಚಾರ, ಅಸ್ಪೃಶ್ಯತೆ ಮತ್ತು ಹತ್ಯೆಗೊಳಗಾಗುತ್ತಿದ್ದಾಳೆ. ಅಪ್ರಾಪ್ತ ಬಾಲಕಿಯರ ಮೇಲೆ ಸಾಂಸ್ಥಿಕ ಅಂಗಳಗಳಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯಗಳೂ ನಮ್ಮ ಸಾರ್ವಜನಿಕ ಜೀವನದಲ್ಲಿ ಮುಜುಗರ ಉಂಟುಮಾಡುತ್ತಿಲ್ಲ ಎನ್ನುವುದನ್ನು ಮುರುಘಾಮಠದ ಪ್ರಕರಣದಲ್ಲಿ ಕಾಣುತ್ತಿದ್ದೇವೆ. ಹಾಗೆಯೇ ದಿನನಿತ್ಯ ದೇಶಾದ್ಯಂತ ನಡೆಯುತ್ತಲೇ ಇರುವ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣಗಳು ಕಾನೂನು-ಅಪರಾಧ-ಶಿಕ್ಷೆಯ ಸಮೀಕರಣದಲ್ಲೇ ಪರ್ಯವಸಾನ ಹೊಂದುತ್ತಿವೆ. ಕಾರಣ ನಾವು ಅಪರಾಧಗಳನ್ನು ವ್ಯಕ್ತಿನಿಷ್ಠತೆಯಿಂದ ನೋಡುವುದರ ಮೂಲಕ, ಅಪರಾಧಿಗಳನ್ನು ವ್ಯಕ್ತಿಗತ ನೆಲೆಯಲ್ಲಿ ಗುರುತಿಸುತ್ತಿದ್ದೇವೆ.
ಈ ಅಪರಾಧಗಳನ್ನು ವಸ್ತುನಿಷ್ಠವಾಗಿ ನೋಡಿದಾಗ ನಮಗೆ ನಮ್ಮ ನಡುವಿನ ಸಾಮಾಜಿಕ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಮನಸ್ಥಿತಿಯಲ್ಲಿ ಆಳವಾಗಿ ಬೇರೂರಿರುವ ಅಸೂಕ್ಷ್ಮತೆಗಳು ಗೋಚರಿಸಲು ಸಾಧ್ಯ. ದೆಹಲಿಯಲ್ಲಿ ಸೈಕೋಪಾತ್ ಒಬ್ಬನಿಂದ ಹತ್ಯೆಗೊಳಗಾದ ಶ್ರದ್ಧಾ ವಾಲ್ಕರ್ಗೂ, ಹಾಥ್ರಸ್ನಲ್ಲಿ ಅತ್ಯಾಚಾರ-ಹತ್ಯೆಗೊಳಗಾದ ಮಹಿಳೆಗೂ, ರಾಜಧಾನಿಯ ನಡುಬೀದಿಯಲ್ಲೇ ಹತ್ಯೆಗೀಡಾದ ನಿರ್ಭಯಾಳಿಗೂ ವ್ಯತ್ಯಾಸವಾದರೂ ಏನಿದೆ ? ಕಾನೂನು ಚೌಕಟ್ಟಿನಲ್ಲಿ ಈ ಅಪರಾಧಗಳನ್ನು ವಿಭಿನ್ನ ಆಯಾಮಗಳಲ್ಲಿ ವ್ಯಾಖ್ಯಾನಿಸಬಹುದಾದರೂ, ಸಾಮಾಜಿಕ ನೆಲೆಯಲ್ಲಿ ಎಲ್ಲವೂ ಸಹ “ ಅಸಹಾಯಕ ಮಹಿಳೆಯ ಮೇಲೆ ನಡೆದ ಕ್ರೂರ ದೌರ್ಜನ್ಯ ” ಎಂದಷ್ಟೇ ಕಾಣುತ್ತದೆ. ತನ್ನ ಪ್ರೇಯಸಿಯನ್ನು ಕೊಂದು, ದೇಹವನ್ನು ತುಂಡುತುಂಡಾಗಿ ಕತ್ತರಿಸಿ, ಹತ್ತಾರು ದಿನಗಳ ಕಾಲ ಮನೆಯ ರೆಫ್ರಿಜರೇಟರ್ನಲ್ಲಿಡುವ ಆಫ್ತಾಬ್ನ ಹೇಯ ಕೃತ್ಯ ನಮಗೆ ಅಮಾನುಷ ಎನಿಸುವುದು ಸಹಜ. ಅತ್ಯಾಚಾರಕ್ಕೊಳಗಾಗಿ ರಾತ್ರೋರಾತ್ರಿ ಸುಟ್ಟುಹೋದ ಹಾಥ್ರಸ್ನ ಸಂತ್ರಸ್ತೆಯ ನೆಲೆಯಲ್ಲಿ ನಿಂತು ನೋಡಿದಾಗ ಅಥವಾ ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಮೂರು ವರ್ಷದ ಕೂಸನ್ನು ಗೋಡೆಗೆ ಅಪ್ಪಳಿಸಿದ ಸನ್ನಿವೇಶದಲ್ಲಿ, ಅಲ್ಲಿಯೂ ಸಹ ನಮಗೆ ಆಫ್ತಾಬ್ನಂತಹ ಸೈಕೋಪಾತ್ಗಳೇ ಕಾಣಬೇಕಲ್ಲವೇ ?

ಹಿಂದಿರುಗಿ ನೋಡಿದಾಗ ಸಮಕಾಲೀನ ಚರಿತ್ರೆಯಲ್ಲೇ ನಮಗೆ ಇಂತಹ ಪೈಶಾಚಿಕ ದಾಳಿಗಳ ಬೃಹತ್ ಚಿತ್ರಣವೇ ಕಂಡುಬರುತ್ತದೆ. ಮಹಿಳೆಯರ ಮೇಲೆ ನಡೆಯುವ ಆಸಿಡ್ ದಾಳಿಗಳು, ಸಾಮೂಹಿಕ ಅತ್ಯಾಚಾರಗಳು, ಸಂಬಂಧಿಕರಿಂದಲೇ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳು, ವರದಕ್ಷಿಣೆ ಸಾವುಗಳು, ಗೌರವ ಹತ್ಯೆಗಳು, ಕಾಮುಕರ ದೃಷ್ಟಿಗೆ ಬಲಿಯಾಗುವ ಅಪ್ರಾಪ್ತ ಬಾಲಕಿಯರ ಒಂದು ಬೃಹತ್ ಸಮೂಹ ನಮ್ಮೆದುರು ತೆರೆದುಕೊಳ್ಳುತ್ತದೆ. ರಾಜಧಾನಿಗಳಲ್ಲಿ, ಮುಖ್ಯ ನಗರಗಳಲ್ಲಿ ನಡೆಯುವ ದೌರ್ಜನ್ಯ ಪ್ರಕರಣಗಳು ಮಾಧ್ಯಮಗಳಲ್ಲಿ ಹೆಚ್ಚು ಪ್ರಸಾರ ಪಡೆಯುವುದರಿಂದ ದೇಶವ್ಯಾಪಿ ಚರ್ಚೆಗೂ ಗ್ರಾಸವಾಗುತ್ತದೆ. ಆದರೆ ನಿತ್ಯ ಜೀವನದಲ್ಲಿ ಅಸಂಖ್ಯಾತ ಮಹಿಳೆಯರು ಇಂತಹ ದೌರ್ಜನ್ಯಗಳನ್ನು ಎದುರಿಸುತ್ತಲೇ ಇರುತ್ತಾರೆ. ಹಾಗೆ ನೋಡಿದರೆ, ವೈಜ್ಞಾನಿಕವಾಗಿ ʼ ಸೈಕೋಪಾತ್ ʼ ಎಂಬ ನಿಷ್ಕರ್ಷೆಗೊಳಗಾಗದಿದ್ದರೂ, ಮಹಿಳೆಯನ್ನು ಸದಾ ಹದ್ದುಬಸ್ತಿನಲ್ಲಿಡಲು , ಕಣ್ಗಾವಲಿನಲ್ಲಿಡಲು, ನಿಯಂತ್ರಣದಲ್ಲಿಡುವ ಪುರುಷ ಸಮಾಜ, ಯಾವುದೇ ಕಾನೂನು ಕ್ರಮದ ಭೀತಿ ಇಲ್ಲದೆಯೇ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿರುವುದನ್ನೂ ಸಾರ್ವಜನಿಕ ಬದುಕಿನಲ್ಲಿ ನಾವು ಕಾಣಬಹುದು.
ಶ್ರದ್ಧಾ ವಾಲ್ಕರ್ ಒಬ್ಬ ಆಫ್ತಾಬ್ ಎಂಬ ಸೈಕೋಪಾತ್ನ ಕ್ರೌರ್ಯಕ್ಕೆ ಬಲಿಯಾಗಿದ್ದರೂ, ಈ ಕ್ರೌರ್ಯದ ಹಿಂದೆ ಇರುವ ಸಾಮಾಜಿಕ ಚಿಂತನಾ ಕ್ರಮವನ್ನೂ ನಾವು ಗಮನಿಸಬೇಕಿದೆ. ತನ್ನೊಡನೆ ಬಾಳುತ್ತಿದ್ದ ಜೀವವೊಂದನ್ನು ಗರಗಸದಿಂದ ತುಂಡು ತುಂಡಾಗಿ ಕತ್ತರಿಸಿ , ದೇಹದ ಭಾಗಗಳನ್ನು ಮನೆಯಲ್ಲೇ ರೆಫ್ರಿಜರೇಟರ್ನಲ್ಲಿರಿಸಿ, ತುಣುಕುಗಳನ್ನು ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎಸೆಯುವ ಒಂದು ಭೀಕರ ಕೃತ್ಯ ಸಹಜವಾಗಿಯೇ ಸಮಾಜವನ್ನು ನಿಬ್ಬೆರಗಾಗಿಸುತ್ತದೆ. ಇಲ್ಲಿ ಸಂತ್ರಸ್ತೆ ಶ್ರದ್ಧಾ ವಾಲ್ಕರ್ ಮಾಡಿದ್ದ ಅಪರಾಧವಾದರೂ ಏನು ? ಅಪರಾಧ ಎಸಗದೆ ಹೋದರೆ ಶಿಕ್ಷೆಗೊಳಗಾಗಬಾರದು ಎಂಬ ಆಧುನಿಕ ನ್ಯಾಯಶಾಸ್ತ್ರವನ್ನು ಶಿರಸಾವಹಿಸಿ ಪರಿಪಾಲಿಸುವ ನಮಗೆ, ಯಾವುದೇ ಅಪರಾಧ ಎಸಗದೆ ಇದ್ದರೂ ಈ ರೀತಿ ಕ್ರೂರ ಶಿಕ್ಷೆಗೊಳಗಾಗುವ ಅಸಂಖ್ಯಾತ ಅಸಹಾಯಕ ಮಹಿಳೆಯರು ಏನನ್ನು ಸಂಕೇತಿಸುತ್ತಾರೆ ? ಹಾಗೆ ನೋಡಿದರೆ ನಿರ್ಭಯಾಳ ಅಪರಾಧವಾದರೂ ಏನಾಗಿತ್ತು ? ಹಾಥ್ರಸ್ ಸಂತ್ರಸ್ತೆ, ಫೂಲನ್ ದೇವಿ, ಭಾವರಿ ದೇವಿ ಬಿಲ್ಕಿಸ್ ಬಾನೊ ಇಂತಹ ಅನೇಕರ ಮಹಿಳೆಯರ ಅಪರಾಧ ಏನಾಗಿತ್ತು ? ಅತ್ಯಾಚಾರ, ದೌರ್ಜನ್ಯಕ್ಕೊಳಗಾಗುತ್ತಿರುವ, ತನ್ನ ಸುತ್ತಲಿನ ಜಗತ್ತನ್ನೇ ಅರಿಯದ ಎಳೆಯ ಕಂದಮ್ಮಗಳು, ಅಪ್ರಾಪ್ತ ಬಾಲಕಿಯರು ಮಾಡಿರುವ ಅಪರಾಧ ಏನಾಗಿದೆ ? ಪಿತೃಪ್ರಧಾನ ವ್ಯವಸ್ಥೆಯ ಸಾಂಪ್ರದಾಯಿಕ ಸಮಾಜದಲ್ಲಿ ಮಹಿಳೆಯಾಗಿರುವುದೇ ಅಪರಾಧವೇ ? ಅಥವಾ ಮಹಿಳೆ ಆರ್ಥಿಕವಾಗಿ ಸಶಕ್ತಳಾಗದೆ, ಸಾಮಾಜಿಕವಾಗಿ ಸಬಲೆಯಾಗದೆ, ಸಾಂಸ್ಕೃತಿಕವಾಗಿ ಸದೃಢವಾಗದೆ ಇರುವುದೇ ಅಪರಾಧವೇ ? ಪುರುಷ ಸಮಾಜ ಹೇಗೆ ಉತ್ತರಿಸುತ್ತದೆ ?
ಈ ಗಂಭೀರ ಪ್ರಶ್ನೆಗಳಿಗೆ ಭಾರತದ ಪುರುಷ ಸಮಾಜ ಮತ್ತು ನಾಗರಿಕ ವಲಯ ಉತ್ತರ ಕಂಡುಕೊಳ್ಳಬೇಕಿದೆ. “ ನನ್ನ ದೇಹ ನನ್ನದು ” ಎಂದು ಮಹಿಳೆ ಘಂಟಾಘೋಷವಾಗಿ ಹೇಳಬೇಕಾದ ಸನ್ನಿವೇಶದಲ್ಲಿ ನಾವಿದ್ದೇವೆ. ಏಕೆಂದರೆ ಮಹಿಳೆಯ ದೇಹದ ಮೇಲೆ ಧಾರ್ಮಿಕ ನೆಲೆಯಲ್ಲಿ, ಜಾತಿ ನೆಲೆಯಲ್ಲಿ, ಸಂಪ್ರದಾಯದ ಚೌಕಟ್ಟಿನಲ್ಲಿ, ಪರಂಪರೆಯ ಸೋಗಿನಲ್ಲಿ ನಿಯಂತ್ರಣ ಸಾಧಿಸಲು ಪುರುಷ ಸಮಾಜ ಸದಾ ಸನ್ನದ್ಧವಾಗಿಯೇ ಇರುತ್ತದೆ. ಆಕೆ ಧರಿಸುವ ಉಡುಪು, ಆಕೆಯ ಸಾರ್ವಜನಿಕ ನಡವಳಿಕೆ, ಆಕೆಯ ಚಹರೆ ಮತ್ತು ಆಕೆಯ ಮೂಲಭೂತ ಅವಶ್ಯಕತೆಗಳೂ ಸಹ ಸಾಂಪ್ರದಾಯಿಕ ಪುರುಷ ಸಮಾಜದ ಕಣ್ಗಾವಲಿನಲ್ಲೇ ನಿಷ್ಕರ್ಷೆಗೊಳಗಾಗುತ್ತಿರುತ್ತದೆ. ಈ ನಿಯಂತ್ರಣಾಧಿಕಾರದ ಕೇಂದ್ರ ಬಿಂದುವನ್ನು ಪ್ರತಿಯೊಂದು ಕುಟುಂಬದಲ್ಲೂ ನಾವು ಕಾಣಬಹುದಾಗಿದೆ. ತನ್ನ ಬದುಕಿನ ಮಾರ್ಗವನ್ನು ಸ್ವತಃ ತಾನೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ಇಲ್ಲದೆ ಹೋದಾಗ, ಮಹಿಳೆ ತಾನು ಕೌಟುಂಬಿಕ ಜೀವನದಲ್ಲಿ ಎದುರಿಸುವ ಎಲ್ಲ ಸಂಕಷ್ಟ, ಸವಾಲುಗಳಿಗೂ ಸ್ವತಃ ತಾನೇ ಹೊಣೆಯಾಗುತ್ತಾಳೆ. ಶ್ರದ್ಧಾ ವಾಲ್ಕರ್ ಪ್ರಕರಣದಲ್ಲೂ ಸಹ ಆಕೆ ಆಫ್ತಾಬ್ನ ದೌರ್ಜನ್ಯವನ್ನು ಏಕೆ ಸಹಿಸಿಕೊಂಡಿರಬೇಕಿತ್ತು ಎಂಬ ಪ್ರಶ್ನೆ ಈಗಲೂ ಸಾರ್ವಜನಿಕ ಚರ್ಚೆಗೊಳಗಾಗಿದೆ.
ಕನಿಷ್ಠ ತಾನು ಧರಿಸುವ ಉಡುಪಿನ ಮೇಲೆ ಅಧಿಕಾರ ಸ್ಥಾಪಿಸಲು ಸಾಧ್ಯವಾಗದ ಮಹಿಳೆ ತನ್ನ ಬದುಕಿನ ಹಾದಿಯನ್ನು ಹೇಗೆ ನಿರ್ಧರಿಸಲು ಸಾಧ್ಯ ? ನಮ್ಮ ಸಾಂಪ್ರದಾಯಿಕ ಪುರುಷ ಸಮಾಜ ಇದಕ್ಕೆ ಅವಕಾಶ ನೀಡುತ್ತಿದೆಯೇ ? ಆರ್ಥಿಕ ಸಬಲೀಕರಣದ ಹಾದಿಯಲ್ಲಿ ಭಾರತ ಬಹಳ ದೂರ ಕ್ರಮಿಸಿದ್ದರೂ, ಸಬಲೀಕರಣಗೊಂಡ ಮಹಿಳಾ ಸಮೂಹವೂ, ಕೌಟುಂಬಿಕ ನೆಲೆಯಲ್ಲಿ ಹಾಗೂ ಸಾಂಪ್ರದಾಯಿಕ ಸಮಾಜದ ನೆಲೆಯಲ್ಲಿ ಇನ್ನೂ ಹಲವು ಸಂಕೋಲೆಗಳಲ್ಲಿ ಬಂಧಿತವಾಗಿರುವುದು ನಮ್ಮೆದುರಿನ ವಾಸ್ತವ ಅಲ್ಲವೇ ? ಈ ಸಂಕೋಲೆಗಳನ್ನು ನಿಯಂತ್ರಿಸುವ ಸಾಂಸ್ಕೃತಿಕ ಶಕ್ತಿಗಳೂ ನಮ್ಮ ನಡುವೆ ಜೀವಂತವಾಗಿವೆ. ಹಾಗಾಗಿಯೇ ಎಂತಹುದೇ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಸಾವು, ಮರ್ಯಾದಾ/ಗೌರವ ಹತ್ಯೆಗಳು ನಡೆಯುತ್ತಲೇ ಇವೆ. ಅಪರಾಧಿಗಳು ಶಿಕ್ಷೆಗೊಳಗಾಗದೆ ನಮ್ಮ ನಡುವೆಯೇ ತಿರುಗಾಡುತ್ತಿರುತ್ತಾರೆ. ಅತ್ಯಾಚಾರ ಎಸಗಿದವರ ಸನ್ಮಾನವೂ ನಡೆಯುತ್ತದೆ. ಹಂತಕರಿಗೆ ಗೌರವ ಸಮ್ಮಾನಗಳೂ ದೊರೆಯುತ್ತವೆ. ಈ ಹಿನ್ನೆಲೆಯಲ್ಲೇ ಶ್ರದ್ಧಾವಾಲ್ಕರ್ನಂತಹ ಘಟನೆಗಳು ಏಕೆ ಸಂಭವಿಸುತ್ತಿವೆ, ಸೈಕೋಪಾತ್ ಎನ್ನಲಾಗುವ ವಿಕೃತ ಕಾಮಿಗಳು ಮಹಿಳೆಯರನ್ನೇ ಏಕೆ ಗುರಿಯಾಗಿಸುತ್ತಾರೆ ಎನ್ನುವುದರ ಬಗ್ಗೆ ಸಮಾಜಶಾಸ್ತ್ರೀಯ ಅಧ್ಯಯನಗಳು ನಡೆಯಬೇಕಿದೆ.

ಶ್ರದ್ಧಾ ವಾಲ್ಕರ್ ಪ್ರಕರಣದಲ್ಲಿ ನಾವು ಗಮನಿಸಬೇಕಾಗಿರುವುದು ಈ ಸಾಮಾಜಿಕ ಕ್ಷೋಭೆ ಮತ್ತು ಒಳಬೇನೆಗಳನ್ನು. ವ್ಯಾಪಕ ಸಮಾಜ ತನ್ನ ಬಹಿರಂಗ ವಾತಾವರಣದಲ್ಲಿ ಮಹಿಳೆಯನ್ನು ಯಾವ ದೃಷ್ಟಿಯಿಂದ ನೋಡುತ್ತದೆ ಎನ್ನುವ ಪ್ರಶ್ನೆಯೊಂದಿಗೇ, ಬಾಹ್ಯ ಸಮಾಜದ ಗರ್ಭದಲ್ಲಿ ಇಲ್ಲದ ಕ್ರೌರ್ಯ ಅಥವಾ ಅಮಾನುಷತೆ ವ್ಯಕ್ತಿಗತ ನೆಲೆಯಲ್ಲಿ ಪ್ರಕಟವಾಗುವುದಿಲ್ಲ ಎನ್ನುವ ವಾಸ್ತವವನ್ನೂ ನಾವು ಅರ್ಥಮಾಡಿಕೊಳ್ಳಬೇಕಿದೆ. ಆಫ್ತಾಬ್ಗಳು ನಮ್ಮ ನಡುವೆಯೇ ಅಪಾರ ಸಂಖ್ಯೆಯಲ್ಲಿರುತ್ತಾರೆ. ಬೆಳಕಿಗೆ ಬಾರದ ನಿರ್ಭಯಾಗಳೂ ಹೇರಳವಾಗಿರುತ್ತಾರೆ. ಆದರೂ ನಮ್ಮ ಸಾರ್ವಜನಿಕ ಸಂಕಥನದಲ್ಲಿ “ ಏನ್ಮಾಡೋಕಾಗುತ್ತೆ ಅವಳೂ ಎಚ್ಚರವಹಿಸಬೇಕಲ್ವೇ ? ”ಎಂದೋ “ ಹೆಣ್ಣು ಹೇಗಿರಬೇಕೋ ಹಾಗಿದ್ದರೇನೇ ಚೆನ್ನ ” ಎಂದೋ, “ ಅವಳೇಕೆ ಅವನೊಡನೆ ಹೋಗಬೇಕಿತ್ತು ? ” ಎಂದೋ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವ ಮೂಲಕ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ಸಾಪೇಕ್ಷಗೊಳಿಸಿ, ಕಡೆಗಾಣಿಸುತ್ತಿದ್ದೇವೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಶರ್ಮ ಶ್ರದ್ಧಾ ವಾಲ್ಕರ್ ಘಟನೆಯನ್ನು ಲವ್ ಜಿಹಾದ್ ಎಂದು ಪರಿಗಣಿಸುವಂತೆ ಹೇಳಿರುವುದು ಇಂತಹ ಮನಸ್ಥಿತಿಯ ಸಂಕೇತವೇ ಆಗಿದೆ. ಈ ಬೀಸು ಹೇಳಿಕೆಗಳಿಗೆ ಧರ್ಮ, ಸಂಪ್ರದಾಯ ಮತ್ತು ಕೌಟುಂಬಿಕ ʼ ಗೌರವ ʼದ ಶಾಲು ಹೊದಿಸಿಬಿಡುತ್ತೇವೆ. ಸಾಮೂಹಿಕ ಅತ್ಯಾಚಾರದಂತಹ ಕ್ರೂರ ಅಪರಾಧ ನಡೆದರೂ ಸಹ ಮಹಿಳೆ ಸಂತ್ರಸ್ತೆಯಾಗುವುದಕ್ಕಿಂತಲೂ ಹೆಚ್ಚಾಗಿ, ಘಟನೆಯ ಉತ್ತರದಾಯಿಯಾಗುವ ಸನ್ನಿವೇಶವನ್ನು ನಾವು ಇತ್ತೀಚಿನ ದಿನಗಳಲ್ಲೂ ಕಂಡಿದ್ದೇವೆ.
ಇದರರ್ಥ ನಮ್ಮ ಸಾಮಾಜಿಕ ವ್ಯವಸ್ಥೆಯ ಗರ್ಭದಲ್ಲೇ ಇರುವ ಪಿತೃಪ್ರಧಾನ ಧೋರಣೆ ಮತ್ತು ಪುರುಷಾಧಿಪತ್ಯದ ಮನಸ್ಥಿತಿಯನ್ನು ನಾವು ಹೋಗಲಾಡಿಸದೆ ಇದ್ದರೆ, ನಮ್ಮ ನಡುವೆ ಶ್ರದ್ಧಾ ವಾಲ್ಕರ್ಗಳು ಹೆಚ್ಚಾಗುತ್ತಲೇ ಹೋಗುತ್ತಾರೆ. ಅಪರಾಧಿಗೆ ನೇಣು ಶಿಕ್ಷೆಯಾದರೂ ಮತ್ತೊಬ್ಬ ಅಪರಾಧಿ ಹುಟ್ಟಿಕೊಳ್ಳುತ್ತಾನೆ. ಏಕೆಂದರೆ ಬಾಹ್ಯ ಸಮಾಜದಲ್ಲಿ ನಾವು ಪಾತಕಿಗಳಿಗೂ ಒಂದು ʼ ಗೌರವಯುತ ʼ ಸ್ಥಾನಮಾನ ನೀಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದೇವೆ. ಕಾನೂನು ಮತ್ತು ನ್ಯಾಯ ವ್ಯವಸ್ಥೆ ಸಾಕ್ಷಿ ಪುರಾವೆಗಳನ್ನಾಧರಿಸಿ ಅಪರಾಧಿಗಳಿಗೆ ಶಿಕ್ಷೆ ನೀಡುತ್ತದೆ. ಸಾಕ್ಷ್ಯಾಧಾರಗಳಿಲ್ಲದ ಅಪರಾಧಗಳು ವಿಸ್ಮೃತಿಗೆ ಜಾರಿಬಿಡುತ್ತವೆ. ಇಂತಹ ಕ್ರೂರ ಅಪರಾಧಗಳು ನಮ್ಮ ನಡುವೆಯೇ ನಡೆಯುತ್ತಿದ್ದು, ಅಪರಾಧಿಗಳು ನಮ್ಮ ನಡುವೆಯೇ ಬದುಕುತ್ತಿದ್ದರೂ, ಬಾಹ್ಯ ಸಮಾಜ ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ಇಂಥವರನ್ನು ಸಹಿಸಿಕೊಂಡು ಮುನ್ನಡೆಯುತ್ತಿರುತ್ತದೆ.
ಏಕೆ ಹೀಗೆ ? ಏಕೆಂದರೆ ಇಲ್ಲಿ ಅನ್ಯಾಯಕ್ಕೊಳಗಾದವರ ಧ್ವನಿ ಕ್ಷೀಣವಾಗಿದೆ. ಅಥವಾ ಅಡಗಿಸಲ್ಪಟ್ಟಿದೆ. ಮಹಿಳೆಯರ ದೃಷ್ಟಿಯಿಂದ ನೋಡಿದಾಗ ಇದು ಇನ್ನೂ ನಿಕಟ ಸತ್ಯವಾಗಿ ಕಾಣುತ್ತದೆ. ಸ್ತ್ರೀವಾದ, ಸ್ತ್ರೀ ಸೂಕ್ಷ್ಮತೆ, ಮಹಿಳಾ ಸಂವೇದನೆ ಮುಂತಾದ ಶ್ರೀಮಂತ ಪದಗಳನ್ನು ಬದಿಗಿಟ್ಟು ನೋಡಿದಾಗಲೂ, ಸುಶಿಕ್ಷಿತ ಮಹಿಳಾ ಸಮುದಾಯದ ನಡುವೆಯೂ ಸಹ ಇಂತಹ ದೌರ್ಜನ್ಯಗಳ ವಿರುದ್ಧ ಸಾಮೂಹಿಕ ಧ್ವನಿ ಕೇಳಿಬರುವುದಿಲ್ಲ. ಹಿತವಲಯದಲ್ಲಿದ್ದುಕೊಂಡು, ತಮ್ಮದೇ ಆದ ಧಾರ್ಮಿಕ, ಜಾತಿ ಕೇಂದ್ರಿತ ಮತ್ತು ಇತ್ತೀಚಿನ ದಿನಗಳಲ್ಲಿ ರಾಜಕೀಯ ಅಸ್ಮಿತೆಗಳ ಸಂಕೋಲೆಗಳಲ್ಲಿ ಬಂಧಿತರಾಗಿರುವ ಒಂದು ಬೃಹತ್ ಸಮುದಾಯ ಈ ಜಡಚೇತನಕ್ಕೆ ಮತ್ತು ನಿಷ್ಕ್ರಿಯತೆಗೆ ಪುಷ್ಟಿ ನೀಡುತ್ತದೆ. ಈ ಸಂಕೋಲೆಗಳ ನಿರ್ಮಾಣ, ನಿರ್ವಹಣೆ ಮತ್ತು ನಿಯಂತ್ರಣಾಧಿಕಾರವು ಈ ದೇಶದ ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲೇ ಅಡಗಿದೆ. ಹಾಗಾಗಿಯೇ ನಮ್ಮ ವ್ಯಾಖ್ಯಾನಗಳೂ, ನಿರೂಪಣೆಗಳೂ ಈ ಪಾರಮ್ಯವನ್ನು ಸದಾ ಕಾಲಕ್ಕೂ ಕಾಪಾಡುವ ದಿಕ್ಕಿನಲ್ಲೇ ಸಾಗುತ್ತಿರುತ್ತದೆ. ಈ ಸಂಕೋಲೆಗಳನ್ನು ಕಿತ್ತೊಗೆದು ಮಹಿಳಾ ಸಮೂಹ ಸ್ತ್ರೀ ಸೂಕ್ಷ್ಮತೆಯ ನೆಲೆಗಳನ್ನು ಗಟ್ಟಿಗೊಳಿಸಬೇಕಿದೆ. ಭಾರತದ ಸಾಂಪ್ರದಾಯಿಕ ಹಾಗೂ ಅತ್ಯಾಧುನಿಕ ಸಮಾಜ ಮಹಿಳೆಯನ್ನು ನೋಡುವ ಮತ್ತು ಪರಿಭಾವಿಸುವ ದೃಷ್ಟಿಯೇ ಬದಲಾಗುವುದು ವರ್ತಮಾನದ ತುರ್ತು. ಹಾಗೆಯೇ ಯುವ ಸಮೂಹದಲ್ಲಿ ಆಳವಾಗಿ ಬೇರೂರಿರುವ ಪಿತೃಪ್ರಧಾನ ಧೋರಣೆಯನ್ನು ಹೋಗಲಾಡಿಸಿ, ಸ್ತ್ರೀ ಸಂವೇದನೆಯನ್ನು ಬೆಳೆಸುವ ಪ್ರಯತ್ನಗಳಿಗೆ ಈ ದೇಶದ ಪುರುಷ ಸಮಾಜವೂ ಮುಂದಾಗಬೇಕಿದೆ. ಜಾತಿ, ಮತ ಧರ್ಮಗಳ ಎಲ್ಲೆಗಳನ್ನು ಮೀರಿ ಈ ಆಲೋಚನೆಗೆ ಮುಂದಾದಾಗ, ಭಾರತೀಯ ಮಹಿಳೆ ನೆಮ್ಮದಿಯ ದಿನಗಳನ್ನು ಕಾಣಲು ಸಾಧ್ಯ. ಇಲ್ಲವಾದಲ್ಲಿ ಆಫ್ತಾಬ್ಗಳು ಮರೆಯಾಗುತ್ತಿದ್ದರೂ ಶ್ರದ್ಧಾ ವಾಲ್ಕರ್ಗಳು ನಮ್ಮ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತಲೇ ಇರುತ್ತಾರೆ.