ಹುಯಿಲಗೋಳ ನಾರಾಯಣರಾವ್ ಅವರ ಕನಸಿನ ನಮ್ಮ ಚೆಲುವ ಕನ್ನಡ ನಾಡು ಉದಯಿಸಿ 66 ವರ್ಷಗಳು ಪೂರೈಸಿ ನವಂಬರ್ 1ರಂದು ರಾಜ್ಯದ ಜನತೆ 67ನೆಯ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಕನ್ನಡದ ಭಾಷಿಕ ಚೌಕಟ್ಟಿನಲ್ಲಿ ಕರ್ನಾಟಕದ ಭೌಗೋಳಿಕ ಚೌಕಟ್ಟನ್ನು ಅಳವಡಿಸಲು ಪ್ರಯತ್ನಿಸಿದಾಗೆಲ್ಲಾ, ನಮಗೆ ಹತ್ತು ಹಲವು ಸಮಸ್ಯೆಗಳು ಎದುರಾಗುತ್ತವೆ. ಸುಮಾರು ಏಳು ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ ಕನ್ನಡದ ಪ್ರಶ್ನೆ ಎದುರಾದಾಗ ಒಂದೆಡೆ ʼ ಕನ್ನಡ ಅಪಾಯದಲ್ಲಿದೆ ʼ, ʼ ಭಾಷೆ ಅಳಿವಿನ ಅಂಚಿನಲ್ಲಿದೆ ʼ, ʼ ಕನ್ನಡ ಬಳಕೆ ಕ್ಷೀಣಿಸುತ್ತಿದೆ ʼ ಎಂಬ ಆತಂಕದ ಮಾತುಗಳು ನಮ್ಮ ನಡುವೆ ಕೇಳಿಬರುತ್ತಲೇ ಇರುತ್ತವೆ. ಮೆಟ್ರೋಪಾಲಿಟನ್ ನಗರಗಳಲ್ಲಿ, ಆಧುನಿಕತೆಯತ್ತ ಧಾವಿಸುತ್ತಿರುವ ನಗರ ಜನಜೀವನದ ನಡುವೆ ಕನ್ನಡ ಒಂದು ಸಂವಹನ ಮಾಧ್ಯಮವಾಗಿಯೂ ಸಹ ಅಪರೂಪವಾಗಿ ಕೇಳಿಬರುವ ಒಂದು ಪರಿಸ್ಥಿತಿಯನ್ನು ರಾಜಧಾನಿ ಬೆಂಗಳೂರಿನಲ್ಲೇ ಪ್ರತ್ಯಕ್ಷವಾಗಿ ಕಾಣಬಹುದು.
ಮೇಲೆ ಉಲ್ಲೇಖಿಸಿದಂತಹ ಆತಂಕದ ಮಾತುಗಳು ಬಾಹ್ಯ ನೋಟಕ್ಕೆ ಕಾಣುವಂತಹ ನಿತ್ಯ ಜನಜೀವನದಲ್ಲಿ ಗುರುತಿಸಬಹುದಾದ ಲಕ್ಷಣಗಳನ್ನು ಆಧರಿಸಿರುತ್ತವೆ. ಆದರೆ ಒಳಹೊಕ್ಕು ನೋಡಿದಾಗ ಕನ್ನಡ ಒಂದು ಭಾಷೆಯಾಗಿ ಅಪಾಯದಂಚಿನಲ್ಲಿ ಇಲ್ಲದಿರುವುದೂ ಸ್ಪಷ್ಟವಾಗುತ್ತದೆ. ಏಕೆಂದರೆ ಕನ್ನಡದ ಓದು ಮತ್ತು ಬರಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮ ತಾಣಗಳು ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವ ಒಂದು ಮಹತ್ಕಾರ್ಯವನ್ನು ಮಾಡುತ್ತಿರುವುದೇ ಅಲ್ಲದೆ, ಇಂದು ವಿದ್ಯುನ್ಮಾನ ತಂತ್ರಜ್ಞಾನ ಆಧಾರಿತ ಸಾಮಾಜಿಕ ತಾಣಗಳು ಕನ್ನಡ ಸಾಹಿತ್ಯ ಮತ್ತು ಕಲೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಬೃಹತ್ ಹೆಜ್ಜೆಗಳನ್ನಿಟ್ಟಿವೆ. ಆದರೆ ಭಾಷೆಯ ಬೆಳವಣಿಗೆಗೆ ಬೇಕಾದ ಪರಿಕರಗಳನ್ನು, ಅಧ್ಯಯನ ಸಂಶೋಧನೆ ಮತ್ತು ವಿದ್ವತ್ ವಲಯದ ಚಟುವಟಿಕೆಗಳಿಗೆ ಗಮನ ನೀಡುವಂತಹ ಸಂಯಮ ಮತ್ತು ವ್ಯವಧಾನವನ್ನು ಆಡಳಿತ ವ್ಯವಸ್ಥೆ ಕಳೆದುಕೊಂಡಿರುವುದರಿಂದ ಈ ಆತಂಕಗಳು ಕೆಲವು ಸಂದರ್ಭಗಳಲ್ಲಿ ವಾಸ್ತವತೆಯನ್ನು ಪಡೆಯುತ್ತವೆ.
ಭಾಷೆ ಒಂದು ಸಂವಹನ ಸಾಧನವಾಗಿ ದಟ್ಟ ಮಾರುಕಟ್ಟೆಯಲ್ಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ತಮ್ಮ ನಿತ್ಯ ಜೀವನದ ಅನಿವಾರ್ಯತೆಗಳಿಗೆ ಅಗತ್ಯವಾದ ಭಾಷಾ ಸಂವಹನವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದ್ದೇ ಇರುತ್ತದೆ. ಈ ವೈಯಕ್ತಿಕ ಹಕ್ಕು ಅಥವಾ ಆದ್ಯತೆಯನ್ನು ಬಲವಂತವಾಗಿ ಪ್ರಶ್ನಿಸುವುದಾಗಲೀ, ತಿರಸ್ಕರಿಸುವುದಾಗಲೀ ಪ್ರಜಾತಂತ್ರದ ಲಕ್ಷಣ ಅಲ್ಲ. ಆದರೆ ಈ ಸಂವಹನದ ಮಾರ್ಗಗಳಲ್ಲಿ, ಕನ್ನಡ ಭಾಷೆಗೆ ತನ್ನದೇ ಆದ ಸ್ಥಾನ ಮತ್ತು ಅವಕಾಶವನ್ನು ಕಲ್ಪಿಸುವುದು ನಮ್ಮ ಆಡಳಿತ ವ್ಯವಸ್ಥೆ ಮತ್ತು ಇತರ ಜವಾಬ್ದಾರಿಯುತ ಸರ್ಕಾರಿ/ಸ್ವಾಯತ್ತ/ಸರ್ಕಾರೇತರ ಸಂಸ್ಥೆಗಳ ಹೊಣೆಯಾಗುತ್ತದೆ. ನಿತ್ಯ ಜೀವನದಲ್ಲಿ ಜನಸಾಮಾನ್ಯರು ಕನ್ನಡ ಬಳಕೆಯಿಂದ ವಿಮುಖರಾದಷ್ಟೂ, ಮೇಲೆ ಉಲ್ಲೇಖಿಸಿದಂತಹ ಆತಂಕಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಇದರಿಂದ ಭಾವನಾತ್ಮಕ ಉನ್ಮಾದವೂ ಹೆಚ್ಚಾಗುತ್ತದೆ. ಇಂತಹ ಉನ್ಮಾದ ಮತ್ತು ಉತ್ಸಾಹಗಳನ್ನು ಸರಿದೂಗಿಸಲೆಂದೋ ಅಥವಾ ಆತಂಕಗಳನ್ನು ದೂರ ಮಾಡಲೆಂದೋ ನಾವು ಕೆಲವು ಆಚರಣೆಗಳಲ್ಲಿ ಪಾಲ್ಗೊಂಡು ತೃಪ್ತಿಪಟ್ಟುಕೊಳ್ಳುತ್ತೇವೆ. ಇತ್ತೀಚೆಗೆ ನಡೆದ ಕೋಟಿಕಂಠದ ನಾಡಗೀತೆ ಗಾಯನ ಇಂತಹ ಒಂದು ಅಪೇಕ್ಷಣೀಯ ಎನ್ನಬಹುದಾದ ಕಾರ್ಯಕ್ರಮ.
75ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮನೆಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮದಂತೆಯೇ ಕೋಟಿಕಂಠ ಗಾಯನವೂ ಸಹ ನಮ್ಮ ಭಾವನೆಗಳ ಉದ್ಧೀಪನಕ್ಕೆ ಕಾರಣವಾಗುತ್ತದೆ. ಇದರಿಂದ ಪ್ರಯೋಜನವೇನು ಎಂದು ಯೋಚಿಸಿದಾಗ, ತಾರ್ಕಿಕ ನೆಲೆಯಲ್ಲಿ ಕೇವಲ ಜನಸಾಮಾನ್ಯರ ಭಾವನಾ ಜಗತ್ತಿನಲ್ಲಿ ಉಂಟಾಗುವ ಒಂದು ಸಂಚಲನವನ್ನು ಮಾತ್ರವೇ ಗುರುತಿಸಬಹುದು. ಏಕೆಂದರೆ ಈ ರೀತಿಯ ಸಾಂಕೇತಿಕ ಆಚರಣೆಗಳಾವುವೂ ಜನರ ಬದುಕಿನ ಜಂಜಾಟಗಳನ್ನು ಬಾಧಿಸುವುದಿಲ್ಲ ಅಥವಾ ಸಾಮಾಜಿಕ-ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಕೆಳಸ್ತರದ ಜನಸಮುದಾಯಗಳಿಗೆ ಜೀವನೋತ್ಸಾಹವನ್ನೂ ತುಂಬುವುದಿಲ್ಲ. ಹೆಚ್ಚೆಂದರೆ ʼ ನಮ್ಮ ಕನ್ನಡ ʼದ ಶ್ರೀಮಂತಿಕೆ ಮತ್ತು ಐಕ್ಯತೆಯ ಬಗ್ಗೆ ಹೆಮ್ಮೆ ಮೂಡುತ್ತದೆ. ಈ ಪ್ರಭಾವವನ್ನು ನಾವು ಕಾಣಲು ಸಾಧ್ಯವಾಗುವುದು ಸುಶಿಕ್ಷಿತ ಹಿತವಲಯದ ಮಧ್ಯಮ ವರ್ಗಗಳಲ್ಲಿ ಮತ್ತು ಮೆಟ್ರೋಪಾಲಿಟನ್ ಸಂಸ್ಕೃತಿಗೊಳಗಾಗಿ ಕನ್ನಡವನ್ನು ಅನಿವಾರ್ಯತೆ ಇದ್ದರಷ್ಟೇ ಬಳಸುವ ಮೇಲ್ ಮಧ್ಯಮ ವರ್ಗಗಳಲ್ಲಿ, ಶ್ರೀಮಂತರಲ್ಲಿ.
ಬದಲಾಗುತ್ತಿರುವ ಆರ್ಥಿಕತೆ ಮತ್ತು ಕ್ಷಿಪ್ರ ಬದಲಾವಣೆ ಕಾಣುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕನ್ನಡ ಒಂದು ಬಳಕೆಯ ಭಾಷೆಯಾಗಿ ಹೇಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಿದೆ ಎನ್ನುವುದು ಒಂದು ಪ್ರಶ್ನೆಯಾದರೆ, ಮತ್ತೊಂದೆಡೆ ಕನ್ನಡ ಭಾಷೆ, ಕನ್ನಡ ನಾಡಿನ ಜನತೆಯ ಅನ್ನದ ಭಾಷೆಯಾಗಿದೆಯೇ ಎಂಬ ಸೂಕ್ಷ್ಮ ಪ್ರಶ್ನೆ ಮತ್ತೊಂದೆಡೆ ನಮ್ಮನ್ನು ಕಾಡುತ್ತಲೇ ಇದೆ. ಆಡಳಿತ ವ್ಯವಸ್ಥೆ ಎಂದು ನಾವು ಗುರುತಿಸಬಹುದಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಮತ್ತು ದೈನಂದಿನ ಸರ್ಕಾರಿ/ಖಾಸಗಿ ಕಚೇರಿಗಳ ಮತ್ತು ಉದ್ಯಮಗಳ ನೆಲೆಯಲ್ಲಿ ಕನ್ನಡ ಭಾಷೆಯ ಬಳಕೆ ಎಷ್ಟರ ಮಟ್ಟಿಗೆ ವೃದ್ಧಿಯಾಗಿದೆ ಎಂಬ ಸಂದಿಗ್ಧ ನಮ್ಮನ್ನು ಸದಾ ಕಾಡುತ್ತಲೇ ಇದೆ. ಹೀಗೆ ನೋಡಿದಾಗ ಸರ್ಕಾರದ ಅಧಿಕೃತ ಮಾಹಿತಿಗಳು ನೀಡುವ ಚಿತ್ರಣಕ್ಕೂ, ಬಾಹ್ಯ ಸಮಾಜದಲ್ಲಿ ಜನಸಾಮಾನ್ಯರು ನಿತ್ಯ ಎದುರಿಸುವ ವಾಸ್ತವ ಸನ್ನಿವೇಶಗಳಿಗೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಎದುರಾಗುವ ಸಾಮಾಜಿಕಾರ್ಥಿಕ ಸಮಸ್ಯೆಗಳು ಭಾಷಿಕ ನೆಲೆಯಲ್ಲೂ ಪ್ರಭಾವ ಬೀರುವುದನ್ನು ಕಾಣುತ್ತಲೇ ಇದ್ದೇವೆ. ಹೊರ ರಾಜ್ಯಗಳಿಂದ ವಲಸೆ ಬರುವ ಲಕ್ಷಾಂತರ ಶ್ರಮಜೀವಿಗಳು ಕನ್ನಡ ಭಾಷಾ ಬಳಕೆಗೆ ಬೇಗನೆ ಒಗ್ಗಿಕೊಳ್ಳಬೇಕು ಎಂದು ಸಾಮಾನ್ಯವಾಗಿ ಬಯಸುತ್ತೇವೆ. ಆದರೆ ಮೇಲ್ ಸ್ತರದ ಉದ್ಯೋಗಗಳಲ್ಲಿ, ಮಾಹಿತಿ ತಂತ್ರಜ್ಞಾನ ವಲಯದಲ್ಲಿ, ಔದ್ಯೋಗಿಕ ಕ್ಷೇತ್ರದಲ್ಲಿ, ಹಣಕಾಸು ಸಂಸ್ಥೆಗಳಲ್ಲಿ ಅನ್ಯ ರಾಜ್ಯಗಳಿಂದ ಬರುವ ವಿದ್ಯಾವಂತ ಸಮುದಾಯವೂ ಸಹ ಕನ್ನಡ ಬಳಕೆ ಮತ್ತು ಕಲಿಕೆಯ ಬಗ್ಗೆ ಉದಾಸೀನ ತೋರುವುದನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕರ್ನಾಟಕದ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳಲ್ಲಿ ಇಂದಿಗೂ ಸಹ ಬಹುಪಾಲು ನಮೂನೆ ಫಾರಂಗಳು, ಅರ್ಜಿಗಳು ಕನ್ನಡ ಭಾಷೆಯಲ್ಲಿ ಇಲ್ಲ ಎನ್ನುವುದು ಕಣ್ಣೆದುರಿನ ವಾಸ್ತವ. ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರವನ್ನು ನಮ್ಮ ರಾಜ್ಯವು ಒಪ್ಪಿಕೊಂಡಿರುವುದರಿಂದ ಕನ್ನಡದೊಂದಿಗೆ ಹಿಂದಿ ಮತ್ತು ಆಂಗ್ಲ ಭಾಷೆಯನ್ನು ಸಂವಹನದ ಸಾಧನಗಳಲ್ಲಿ ಬಳಸುತ್ತಲೇ ಬಂದಿದ್ದೇವೆ. ಆದರೆ ಇದು ಸಮಗ್ರವಾಗಿ ಚಾಲನೆ ಪಡೆದಿಲ್ಲ ಎನ್ನುವುದು ವಾಸ್ತವ. ಬ್ಯಾಂಕುಗಳಲ್ಲಿ ನಗದು ಜಮಾ ಮಾಡುವ, ಹಿಂಪಡೆಯುವ ಚಲನ್ ಮತ್ತು ಚೆಕ್ಕುಗಳಲ್ಲೂ ಸಹ ಕನ್ನಡ ಇಲ್ಲದಿರುವುದನ್ನು ಕಾಣುತ್ತಿದ್ದೇವೆ. ಗ್ರಾಹಕರ ನಿತ್ಯಾವಶ್ಯಗಳನ್ನು ಪೂರೈಸಿಕೊಳ್ಳಲು ಬ್ಯಾಂಕುಗಳಲ್ಲಿ ಅಗತ್ಯವಾಗಿರುವ ಬಹುತೇಕ ಅರ್ಜಿ ನಮೂನೆಗಳು ದ್ವಿಭಾಷೆಯಲ್ಲೇ ಇರುತ್ತವೆ. ಕನ್ನಡದ ಕಂಪು ಇಲ್ಲಿ ನುಸುಳದೆ ಇರುವುದೂ ಸಹ ವಾಸ್ತವ. ಅಲ್ಲಲ್ಲಿ ಅಪವಾದಗಳಿರಬಹುದಾದರೂ, ಇದು ಸಾಮಾನ್ಯೀಕರಿಸಬಹುದಾದ ಅಂಶ.
ಕನ್ನಡ ಅನ್ನದ ಭಾಷೆ ಆಗಬೇಕು ಎಂದರೆ ಕನ್ನಡ ಕಲಿತವರಿಗೆ ಅಥವಾ ಕನ್ನಡವನ್ನೇ ಅವಲಂಬಿಸಿದವರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು. ಔದ್ಯಮಿಕ ವಲಯದಲ್ಲಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ , ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಿ/ಸರ್ಕಾರೇತರ/ಸ್ವಾಯತ್ತ ಸಂಸ್ಥೆಗಳಲ್ಲಿ ಕನ್ನಡ ಭಾಷಿಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಔದ್ಯೋಗಿಕ/ಔದ್ಯಮಿಕ ನೀತಿಗಳನ್ನು ಗಮನಿಸಿದರೆ, ಈ ಎಲ್ಲ ಉದ್ಯೋಗಗಳೂ ಖಾಸಗೀಕರಣ, ಕಾರ್ಪೋರೇಟೀಕರಣಕ್ಕೊಳಗಾಗುತ್ತಿದ್ದು, ಹೊರಗುತ್ತಿಗೆ ನೌಕರಿಯೇ ಇಂದು ಖಾಯಂ ನೌಕರಿಯಾಗಿ ಪರಿಣಮಿಸಿದೆ. ಕಾರ್ಯಾಂಗ ಮತ್ತು ಸರ್ಕಾರಿ ಇಲಾಖೆಗಳಲ್ಲೂ ಸಹ ಹೊರಗುತ್ತಿಗೆ ನೌಕರಿಯೇ ಹೆಚ್ಚಾಗುತ್ತಿದ್ದು, ಈ ಹೊರಗುತ್ತಿಗೆಯನ್ನು ನಿರ್ವಹಿಸುವ ಸಂಸ್ಥೆಗಳು ಕಾರ್ಪೋರೇಟ್ ವಲಯದ ಹಿಡಿತದಲ್ಲಿರುತ್ತವೆ. ಹಾಗಾಗಿ ಇಲ್ಲಿನ ನೇಮಕಾತಿ ನಿಯಮಗಳ ಬಗ್ಗೆ ಸರ್ಕಾರಕ್ಕಾಗಲೀ, ಆಡಳಿತ ವ್ಯವಸ್ಥೆಗಾಗಲೀ ಯಾವುದೇ ಆಕ್ಷೇಪ ವ್ಯಕ್ತಪಡಿಸಲಾಗುವುದಿಲ್ಲ. ಕಾರ್ಪೋರೇಟ್ ಬಂಡವಾಳದ ಹರಿವು, ಉಳಿವು ಮತ್ತು ಸುಸ್ಥಿರತೆಯ ದೃಷ್ಟಿಯಿಂದ ಔದ್ಯಮಿಕ ವಲಯಗಳಲ್ಲಿ ಸರ್ಕಾರ ಮೂಗು ತೂರಿಸುವುದೇ ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ.
ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ಶೈಕ್ಷಣಿಕ ಸಂಸ್ಥೆಗಳವರೆಗೂ ಎಲ್ಲ ಬೋಧಕ ಹುದ್ದೆಗಳನ್ನು, ಆಡಳಿತ ಹುದ್ದೆಗಳನ್ನು ಹೊರಗುತ್ತಿಗೆ ನೀಡುವ ಮೂಲಕ ಉಪನ್ಯಾಸಕರಲ್ಲಿ, ಶಿಕ್ಷಕರಲ್ಲಿ, ಬೋಧಕ/ಬೋಧಕೇತರ ಸಿಬ್ಬಂದಿಗಳಲ್ಲಿ ಲಕ್ಷಾಂತರ ʼ ಅತಿಥಿಗಳನ್ನು ʼ ಸೃಷ್ಟಿಸಿರುವ ಸರ್ಕಾರಗಳು ಈ ʼ ಅತಿಥಿ ʼಗಳ ವೇತನ ಇತ್ಯಾದಿ ಸೌಲಭ್ಯಗಳನ್ನು ನಿಷ್ಕರ್ಷೆ ಮಾಡುವ ಸಂಪೂರ್ಣ ಅಧಿಕಾರವನ್ನೂ ಕಳೆದುಕೊಂಡಿವೆ. ವಿಶ್ವವಿದ್ಯಾಲಯಗಳಲ್ಲಿ, ಬೌದ್ಧಿಕ ಶಿಕ್ಷಣ ಕೇಂದ್ರಗಳಲ್ಲಿ ನೇಮಕವಾಗುವ ಸಿಬ್ಬಂದಿಯ ವೇತನ ಮತ್ತಿತರ ಸೌಲಭ್ಯಗಳನ್ನೂ ಅನೇಕ ಸಂದರ್ಭಗಳಲ್ಲಿ ಹೊರಗುತ್ತಿಗೆ ಕಂಪನಿಗಳೇ ನಿರ್ಧರಿಸುತ್ತವೆ. ಸಹಜವಾಗಿಯೇ ಲಾಭಗಳಿಕೆಗಾಗಿಯೇ ಈ ಉದ್ಯಮ ನಡೆಸುವ ಸಂಸ್ಥೆಗಳು ಕಡಿಮೆ ಕೂಲಿಯಲ್ಲಿ ಹೆಚ್ಚಿನ ಶ್ರಮಶಕ್ತಿಯನ್ನು ಬಯಸುತ್ತವೆ. ಹಾಗಾಗಿ ಈ ವಲಯಗಳಲ್ಲಿ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿದ್ದು, ಕನ್ನಡ ಭಾಷಿಕರು, ಕನ್ನಡವನ್ನೇ ಅವಲಂಬಿಸಿದವರು ಇದರ ಋಣಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗಿದೆ. ಆರ್ಥಿಕತೆಯು ಕಾರ್ಪೋರೇಟೀಕರಣಕ್ಕೊಳಗಾದಷ್ಟೂ ಕನ್ನಡ ಭಾಷಿಕರ ಉದ್ಯೋಗಾವಕಾಶಗಳು ಕ್ಷೀಣಿಸುತ್ತಲೇ ಹೋಗುತ್ತವೆ. ಇದಕ್ಕೆ ಪೂರಕವಾಗಿ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಮಾಣವೂ ಕ್ಷೀಣಿಸುವುದರಿಂದ, ಕನ್ನಡಿಗರಿಗೇ ಆದ್ಯತೆ ನೀಡಬೇಕೆಂಬ ಕೂಗು ಬಹುಶಃ ಅಜ್ಞಾತ ಸ್ಥಿತಿಯಲ್ಲೇ ಉಳಿದುಬಿಡುತ್ತದೆ.
ಸಾಹಿತ್ಯಕ ದೃಷ್ಟಿಯಿಂದ ನೋಡಿದಾಗ ಕನ್ನಡ ಸಾಹಿತ್ಯ ಕೆಲವು ಅಪವಾದಗಳ ಹೊರತಾಗಿಯೂ ಸಮೃದ್ಧವಾಗುತ್ತಿದೆ. ಬರಹಗಾರರು ಹೆಚ್ಚಾಗಿದ್ದಾರೆ. ಪುಸ್ತಕಗಳ ಪ್ರಕಟಣೆಗಳು ಹೆಚ್ಚಾಗಿವೆ. ಹೆಚ್ಚು ಹೆಚ್ಚು ಯುವ ಪೀಳಿಗೆ ಬರವಣಿಗೆಯಲ್ಲಿ ತೊಡಗಿಕೊಳ್ಳುತ್ತಿರುವುದನ್ನು ಸಾಮಾಜಿಕ ತಾಣಗಳ ಮೂಲಕವಾದರೂ ಗುರುತಿಸಬಹುದು. ಆದರೆ ಮುದ್ರಣ ಕಾಗದದ ಬೆಲೆ ಜಿಎಸ್ಟಿ ವತಿಯಿಂದ ಗಗನಕ್ಕೇರಿರುವುದರಿಂದ ಪುಸ್ತಕಗಳ ಪ್ರಕಟಣೆಯ ಉದ್ಯಮವೂ ಸಹ ಇಂದು ಹಿಂಜರಿತ ಎದುರಿಸುತ್ತಿದೆ. ನವ ಪೀಳಿಗೆಯ ಬರಹಗಾರರನ್ನು, ಸಾಹಿತ್ಯವನ್ನು ಮತ್ತು ಅಧ್ಯಯನಗಳನ್ನು ಉತ್ತೇಜಿಸಲು ಅಗತ್ಯವಾದ ಯಾವುದೇ ನೀತಿಯನ್ನು ರಾಜ್ಯ ಸರ್ಕಾರ ರೂಪಿಸಿಲ್ಲ. ವಿಶ್ವವಿದ್ಯಾಲಯಗಳಲ್ಲಿರುವ ಕನ್ನಡ ಅಧ್ಯಯನ ಪೀಠಗಳು ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳಾಗಿ, ಸ್ವಾಯತ್ತತೆಯನ್ನು ಕಳೆದುಕೊಂಡಿರುವುದರಿಂದ, ವರ್ತಮಾನದ ಸಮಾಜಕ್ಕೆ ಅಗತ್ಯವಾದ ಸಾಹಿತ್ಯ ಸಂಶೋಧನೆಗಳು ಮತ್ತು ಅಧ್ಯಯನಗಳು ಕುಂಠಿತವಾಗಿವೆ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪೀಠಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಚಿಸದೆ ಇರುವುದು ಈ ಸಂದರ್ಭದಲ್ಲಿ ವಿಷಾದದಿಂದ ನೆನೆಯಬೇಕಿದೆ.
ಮೈಸೂರಿನಲ್ಲಿ 2008ರಲ್ಲಿ ಸ್ಥಾಪನೆಯಾದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ತನ್ನ ಹದಿನೈದನೆ ವರ್ಷದ ಸಂದರ್ಭವನ್ನು ಅತ್ಯುತ್ಸಾಹದೊಂದಿಗೆ ಆಚರಿಸುತ್ತಿದೆ. ಆದರೆ ಈ ಹದಿನಾಲ್ಕು ವರ್ಷಗಳಲ್ಲಿ ಈ ಸಂಸ್ಥೆಗೆ ಸ್ವಾಯತ್ತತೆಯನ್ನು ಪಡೆಯಲು ಬೇಕಾದ ಪ್ರಯತ್ನಗಳನ್ನು ಸರ್ಕಾರವಾಗಲೀ, ಸಂಸ್ಥೆಯಾಗಲೀ ಸಮರ್ಪಕವಾಗಿ ಮಾಡುತ್ತಿಲ್ಲ. ಕನ್ನಡ ಪರ ಹೋರಾಟಗಾರರು, ಸಾಹಿತಿ ಕಲಾವಿದರು ಈ ಸಂಸ್ಥೆಯ ಸ್ವಾಯತ್ತತೆಗಾಗಿ ನಡೆಸುತ್ತಿರುವ ಹೋರಾಟಗಳು ಇಂದಿಗೂ ಸಾಗುತ್ತಲೇ ಇದ್ದರೂ, ಜನಪ್ರತಿನಿಧಿಗಳ ಅಸೂಕ್ಷ್ಮತೆ ಮತ್ತು ನಿರ್ಲಕ್ಷ್ಯದಿಂದ ಇದು ಕೈಗೂಡಲಾಗುತ್ತಿಲ್ಲ. ತಮಿಳುನಾಡಿನ ಜನಪ್ರತಿನಿಧಿಗಳು ತಮಿಳು ಶಾಸ್ತ್ರೀಯ ಕೇಂದ್ರಕ್ಕೆ ಸ್ವಾಯತ್ತತೆ ಪಡೆದು ಹಲವು ವರ್ಷಗಳೇ ಕಳೆದಿದ್ದು, ಇತ್ತೀಚೆಗೆ ತಮ್ಮದೇ ಆದ ಕಟ್ಟಡವನ್ನೂ ನಿರ್ಮಿಸಿದ್ದಾರೆ. ಆದರೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಇಂದಿಗೂ ಸಹ ಭಾರತೀಯ ಭಾಷಾ ಸಂಸ್ಥಾನದ ಸುಪರ್ದಿಯಲ್ಲೇ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಗೆ ಸ್ವಾಯತ್ತತೆ ಪಡೆದು, ಶಾಸ್ತ್ರೀಯ ಕನ್ನಡದ ಅಧ್ಯಯನಕ್ಕೆ ಹೆಚ್ಚು ಉತ್ತೇಜನ ನೀಡುವ ಮೂಲಕ, ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸುವ ಅವಕಾಶಗಳನ್ನು ನಾವು ಕೈಚೆಲ್ಲಿ ಕುಳಿತಿದ್ದೇವೆ. ಕಳೆದ 14 ವರ್ಷಗಳಲ್ಲಿ ಈ ಸಂಸ್ಥೆಯಿಂದ ಹೆಚ್ಚಿನ ಪ್ರಕಟಣೆಗಳೂ ಬಂದಿಲ್ಲ ಎನ್ನುವುದೂ ಸಹ ಗಂಭೀರವಾಗಿ ಆಲೋಚನೆ ಮಾಡಬೇಕಾದ ವಿಚಾರ. ಇಂತಹ ಒಂದು ಪ್ರತಿಷ್ಠಿತ ಸಂಸ್ಥೆ ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿದ್ದರೂ, ಇಲ್ಲಿನ ಜನಪ್ರತಿನಿಧಿಗಳು ಈ ಸಂಸ್ಥೆಗೆ ಸ್ವಾಯತ್ತತೆ ಪಡೆಯಲು ಹೆಚ್ಚಿನ ಶ್ರಮ ವಹಿಸದೆ ಇರುವುದು ವಿಷಾದಕರ.
ಬದಲಾಗುತ್ತಿರುವ ಭಾರತದಲ್ಲಿ ಆರ್ಥಿಕ ನೆಲೆಯಲ್ಲಿ ಸರ್ಕಾರದ ಸ್ವಾಮ್ಯತೆ ಮತ್ತು ಯಜಮಾನಿಕೆ ಕ್ರಮೇಣ ನಶಿಸಿಹೋಗುತ್ತಿರುವಂತೆಯೇ, ಶೈಕ್ಷಣಿಕ ವಲಯದಲ್ಲೂ ಸಹ ಕಾರ್ಪೋರೇಟ್ ಸಹಭಾಗಿತ್ವ ಹೆಚ್ಚಾಗುತ್ತಿದೆ. ವಿದೇಶಿ ವಿಶ್ವವಿದ್ಯಾಲಯಗಳೊಡನೆ ಒಡಂಬಡಿಕೆಗಳನ್ನು ಮಾಡಿಕೊಳ್ಳುವುದರ ಮೂಲಕ ಜಗತ್ತಿನ ಶೈಕ್ಷಣಿಕ ವಲಯದಲ್ಲಿ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶಗಳು ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಇರಬಹುದು. ಆದರೆ ಈ ಅವಕಾಶವನ್ನು ಕನ್ನಡ ಭಾಷೆಯ ಸಮೃದ್ಧಿ ಮತ್ತು ಬೆಳವಣಿಗೆಗೆ ಎಷ್ಟರ ಮಟ್ಟಿಗೆ ಬಳಸಿಕೊಳ್ಳಲಾಗುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಅಧ್ಯಯನ ಮತ್ತು ಸಂಶೋಧನೆಯ ಆಸಕ್ತಿಯನ್ನೇ ಕಳೆದುಕೊಂಡು, ಸಾಮಾಜಿಕ ತಾಣಗಳ ಸಂವಹನದ ಮೂಲಕವೇ ಜಗತ್ತನ್ನು ಅರಿಯಲು ಯತ್ನಿಸುತ್ತಿರುವ ಶತಮಾನದ ಪೀಳಿಗೆಗೆ, ಅಂದರೆ ಇಂದಿನ ಯುವ ಸಮುದಾಯಕ್ಕೆ, ಕನ್ನಡ ಭಾಷೆ ಮತ್ತು ಸಾಹಿತ್ಯದ ಪರಿಚಯ ಮಾಡಿಸುವ ಯಾವುದೇ ಪ್ರಯತ್ನಗಳು ವಿಶ್ವವಿದ್ಯಾಲಯದ ಅಧ್ಯಯನದ ಪೀಠಗಳ ಮೂಲಕ ನಡೆಯುತ್ತಿಲ್ಲ. ಹಾಗಾಗಿ ಈ ಮಿಲಿನಿಯಂ ಜನಸಂಖ್ಯೆ ಇತಿಹಾಸದ ಅರಿವೂ ಇಲ್ಲದೆ, ಭಾಷಾ ಬೆಳವಣಿಗೆಯ ಚರಿತ್ರೆಯ ಪರಿವೆಯೂ ಇಲ್ಲದೆ, ಕನ್ನಡವನ್ನು ಕೇವಲ ಬಳಕೆಯ ಭಾಷೆಯನ್ನಾಗಿ ಬಳಸುವಂತಾಗಿದೆ. ಭಾಷಾ ಅಭಿವೃದ್ಧಿಯ ದೃಷ್ಟಿಯಿಂದ ನೋಡಿದಾಗ ಇದು ಸ್ವಾಗತಾರ್ಹ, ಅಪೇಕ್ಷಣೀಯ ಎನಿಸುವುದಿಲ್ಲ.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ ನಡೆಸುವ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಆಂಗ್ಲ ಭಾಷೆಗೆ ಮಾತ್ರವೇ ಅವಕಾಶವಿದ್ದು, ಕನ್ನಡ ಭಾಷಿಕರಿಗೆ ಪರೀಕ್ಷೆಗಳನ್ನೆದುರಿಸುವುದು ಕಷ್ಟಕರವಾಗಲಿದೆ. ಅಧಿಕೃತ ಭಾಷಾ ಸಮಿತಿಯ ಶಿಫಾರಸುಗಳಲ್ಲೂ ಸಹ ಕೇಂದ್ರೀಯ ವಿದ್ಯಾಲಯಗಳಲ್ಲಿ, ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಐಐಟಿ ಹಾಗೂ ಐಐಎಂ ಮುಂತಾದ ರಾಷ್ಟ್ರೀಯ ಸಂಸ್ಥೆಗಲ್ಲಿ ಆಂಗ್ಲ ಭಾಷೆಯನ್ನು ಕೈಬಿಟ್ಟು ಹಿಂದಿಯನ್ನು ಏಕೈಕ ಕಲಿಕಾ ಮಾಧ್ಯಮವನ್ನಾಗಿ ಅಳವಡಿಸಲು ಶಿಫಾರಸು ಮಾಡಿರುವುದು ಸಹ ಕನ್ನಡಿಗರ ಪಾಲಿಗೆ ಆತಂಕಕಾರಿಯಾಗಿದೆ. ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ನಡೆಯುವ ಪ್ರವೇಶ ಪರೀಕ್ಷೆಗಳನ್ನೂ ಹಿಂದಿ ಭಾಷೆಯಲ್ಲಿ ನಡೆಸಲು ಶಿಫಾರಸು ಮಾಡಲಾಗಿದೆ. ಇದರ ಅಂತಿಮ ಫಲಿತಾಂಶ ಏನೇ ಆಗಿದ್ದರೂ, ಕನ್ನಡ ವ್ಯಾಸಂಗ ಮಾಡಿದ ಕನ್ನಡಿಗರಿಗೆ ಆಂಗ್ಲ ಭಾಷೆಯ ಮೂಲಕ ಈ ಹುದ್ದೆಗಳಲ್ಲಿ ಪ್ರವೇಶ ಪಡೆಯುವ ಅವಕಾಶಗಳು ಕ್ಷೀಣಿಸುತ್ತವೆ. ರಾಜ್ಯಮಟ್ಟದಲ್ಲೇ ಸರ್ಕಾರಿ ಹುದ್ದೆಗಳು ಕ್ಷೀಣಿಸುತ್ತಿದ್ದು, ರೈಲ್ವೆ, ವಿಮಾನಯಾನ, ರಸ್ತೆ ಸಾರಿಗೆಯನ್ನೂ ಒಳಗೊಂಡಂತೆ ಎಲ್ಲ ಸಾರ್ವಜನಿಕ ಉದ್ಯಮಗಳೂ ಕಾರ್ಪೋರೇಟ್ ವಶವಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಕಲಿತ ಅಥವಾ ಕನ್ನಡವನ್ನೇ ನಂಬಿ ಬದುಕುವ ಕನ್ನಡಿಗರು ತಮ್ಮ ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳಲಿದ್ದಾರೆ. ರಾಜ್ಯದ ಶಾಲೆಗಳಲ್ಲಿ ಕನ್ನಡ ಕಲಿಸುವುದರೊಂದಿಗೇ ವ್ಯಾಸಂಗವನ್ನು ಮುಗಿಸಿ ಹೊರಬರುವ ಕೋಟ್ಯಂತರ ಕನ್ನಡಿಗರಿಗೆ ಸೂಕ್ತ ಉದ್ಯೋಗ ಮತ್ತು ಜೀವನೋಪಾಯದ ಮಾರ್ಗಗಳನ್ನು ಕಲ್ಪಿಸುವ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎನ್ನುವುದನ್ನು ಮರೆಯಕೂಡದು.
ಕನ್ನಡ ಅನ್ನದ ಭಾಷೆಯಾಗಬೇಕಾದರೆ ಕನ್ನಡ ಔದ್ಯಮಿಕ ಭಾಷೆಯೂ ಆಗಬೇಕು ಔದ್ಯೋಗಿಕ ಭಾಷೆಯೂ ಆಗಬೇಕು. ಈ ಸವಾಲುಗಳ ನಡುವೆಯೇ ಮತ್ತೊಂದು ರಾಜ್ಯೋತ್ಸವವನ್ನು ಆಚರಿಸೋಣ.