ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ನಿರ್ಣಾಯಕವಾಗಬೇಕಾದರೆ, ಈ ಪ್ರಜೆಗಳ ನಡುವೆ ಸಾಮಾಜಿಕ ಪ್ರಜ್ಞೆ, ಸಾಂವಿಧಾನಿಕ ಮೌಲ್ಯಗಳ ಪರಿವೆ ಮತ್ತು ಭಾರತದ ಸಂದರ್ಭದಲ್ಲಿ ಅತ್ಯವಶ್ಯವಾದ ಸಾಂಸ್ಕೃತಿಕ ವೈವಿಧ್ಯತೆಯ ಪರಿಜ್ಞಾನ ಇರಬೇಕು. ವಸಾಹತು ಆಳ್ವಿಕೆಯ ಲೂಟಿಕೋರರಿಂದ ಬರಿದಾಗಿದ್ದ ಭಾರತದ ಒಡಲನ್ನು, ತನ್ನೊಳಗಿದ್ದ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಸಮರ್ಪಕ ಬಳಕೆಯಿಂದಲೇ ಒಂದು ಸದೃಢ ರಾಷ್ಟ್ರವನ್ನಾಗಿ ರೂಪಿಸಲು ಸಾಧ್ಯವಾಗಿದ್ದು ನಮ್ಮ ಸಂವಿಧಾನ ನೀಡಿದ ಸುಭದ್ರ ಬುನಾದಿಯಿಂದ. ಬಹುಸಾಂಸ್ಕೃತಿಕ, ಬಹುಧಾರ್ಮಿಕ, ಬಹುಭಾಷಿಕ ಮತ್ತು ಬಹುಜಾತೀಯ ಸಮಾಜವೊಂದನ್ನು ಏಕಸಂಸ್ಕೃತಿಯ ತಳಹದಿಯ ಮೇಲೆ ಕಟ್ಟಲಾಗುವುದಿಲ್ಲ ಎಂಬ ಸಾಮಾನ್ಯ ಗ್ರಹಿಕೆ ನಮ್ಮ ಸ್ವಾತಂತ್ರ್ಯ ಶಿಲ್ಪಿಗಳಲ್ಲಿ ಇದ್ದುದರಿಂದಲೇ, ಡಾ ಬಿ ಆರ್ ಅಂಬೇಡ್ಕರ್ ಸಮ ಸಮಾಜಕ್ಕೆ ಅತ್ಯಗತ್ಯವಾದ ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕೃತಿಕ ಸ್ವಾಯತ್ತತೆ, ಆರ್ಥಿಕ ಸಮಾನತೆಯನ್ನು ಪೋಷಿಸುವಂತಹ ಒಂದು ಸಂವಿಧಾನವನ್ನು ಸಿದ್ಧಪಡಿಸಲು ಸಾಧ್ಯವಾಯಿತು. ಒಬ್ಬ ವ್ಯಕ್ತಿಗೆ ಒಂದು ಮತ ಮತ್ತು ಒಂದು ಮತಕ್ಕೆ ಒಂದು ಮೌಲ್ಯ ಎನ್ನುವ ತಾತ್ವಿಕ ತಳಹದಿಯ ಮೇಲೆ ರಚಿತವಾಗಿರುವ ಭಾರತದ ಸಂವಿಧಾನ ಈ ಮತದ ಮೌಲ್ಯವನ್ನು ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಮಡಿಲಿಗೆ ಹಾಕಿದೆ. ಪ್ರಜೆಗಳಿಂದಲೇ ಚುನಾಯಿತವಾಗುವ ಸರ್ಕಾರಗಳು ಈ ಮೌಲ್ಯವನ್ನು ಯಥಾಸ್ಥಿತಿಯಲ್ಲಿ ಕಾಪಾಡಲು ವಿಫಲವಾದಾಗ ದೇಶದಲ್ಲಿ ಅಶಾಂತಿ, ಸಾಮಾಜಿಕ ಕ್ಷೋಭೆ ಮತ್ತು ಆರ್ಥಿಕ ಏರುಪೇರುಗಳು ಸಂಭವಿಸುತ್ತವೆ.
ಬಹುಶಃ ತನ್ನ 75ನೆಯ ವರ್ಷದಲ್ಲಿ ಸ್ವತಂತ್ರ ಭಾರತ ತಾನು ನಡೆದ ಬಂದ ಹಾದಿಯಲ್ಲಿನ ಪ್ರಮಾದಗಳನ್ನು ಮರುಶೋಧನೆಗೊಳಪಡಿಸಬೇಕಾದ ಸನ್ನಿವೇಶ ಎದುರಿಸುತ್ತಿದೆ. ಸಮ ಸಮಾಜದ ಮೌಲ್ಯಗಳನ್ನು ಮತ್ತು ಸಾಂವಿಧಾನಿಕ ಆಶಯಗಳನ್ನು ಗ್ರಾಂಥಿಕವಾಗಿ ಕಾಪಾಡಿಕೊಂಡು ಬಂದಿರುವ ಅಧಿಕಾರ ರಾಜಕಾರಣದ ವಾರಸುದಾರರು, ಜನಸಾಮಾನ್ಯರ ನಡುವೆ ಮೇಲು ಕೀಳಿನ ತಾರತಮ್ಯದ ಗೋಡೆಗಳನ್ನು ಬಲಪಡಿಸುತ್ತಲೇ ಬಂದಿದ್ದಾರೆ. ಪ್ರಾತಿನಿಧಿಕ ರಾಜಕಾರಣದಲ್ಲಿ ಜನಸಾಮಾನ್ಯರಿಗೆ ದೊರೆಯಬೇಕಾದ ಪ್ರಾತಿನಿಧ್ಯವನ್ನು ವಂಚಿಸುತ್ತಲೇ ಬಂದಿರುವ ಬಂಡವಳಿಗ ಪಕ್ಷಗಳು, ಜನತೆಯ ಪ್ರತಿಯೊಂದು ಮತಕ್ಕೂ ಇರುವ ಮೌಲ್ಯವನ್ನೂ ಅಪಮೌಲ್ಯಗೊಳಿಸುತ್ತಲೇ ಬರುತ್ತಿವೆ. ಅಧಿಕಾರ ರಾಜಕಾರಣವು ಸಮಕಾಲೀನ ವಾಸ್ತವಗಳ ಗ್ರಹಿಕೆ ಇಲ್ಲದೆ, ಸಾಂಪ್ರದಾಯಿಕ ಸಮಾಜದ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸಲು ಮುಂದಾದಾಗ ಸಹಜವಾಗಿಯೇ ಅಪಮೌಲ್ಯಗೊಂಡ ಮತಗಳು ಮಾರುಕಟ್ಟೆಯ ಸರಕುಗಳಾಗುತ್ತವೆ ಅಥವಾ ಭಾವನಾತ್ಮಕ ಜಗತ್ತಿನ ಕಚ್ಚಾವಸ್ತುಗಳಾಗುತ್ತವೆ. ವೈಜ್ಞಾನಿಕ ನೆಲೆಯಲ್ಲಿ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳದೆಯೇ ಸರ್ವಧರ್ಮ ಸಮಭಾವದ ನೆಲೆಯಲ್ಲಿ ರೂಪುಗೊಂಡಿರುವ ಭಾರತದ ರಾಜಕಾರಣ ಇಂದು ಜಾತ್ಯತೀತ ಮೌಲ್ಯಗಳನ್ನೂ ಅಪಮೌಲ್ಯಗೊಳಿಸುವತ್ತ ದಾಪುಗಾಲು ಹಾಕುತ್ತಿದೆ.
ಒಂದು ಆರೋಗ್ಯಕರ ಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಪೇರಿಸಲಾಗುವ ಪ್ರತಿಯೊಂದು ಇಟ್ಟಿಗೆಗೂ ಒಂದು ತಾತ್ವಿಕ ಸ್ಪರ್ಶ ಇಲ್ಲದೆ ಹೋದರೆ ಸಮಾಜ ಮೇಲ್ನೋಟಕ್ಕೆ ಸುಸ್ಥಿರವಾಗಿದ್ದರೂ ಆಂತರಿಕವಾಗಿ ಜಡ್ಡುಗಟ್ಟುತ್ತಲೇ ಹೋಗುತ್ತದೆ. ಸಾಮಾಜಿಕ ಸ್ವಾಸ್ಥ್ಯವನ್ನು ನಿರ್ಧರಿಸುವುದು ಆರ್ಥಿಕ ಸಬಲತೆ ಅಲ್ಲ ಅಥವಾ ಸಂಪತ್ತು ಸಂಪನ್ಮೂಲಗಳ ಭಂಡಾರವೂ ಅಲ್ಲ. ಒಂದು ಭೌಗೋಳಿಕ ಪ್ರದೇಶವನ್ನು ದೇಶ ಅಥವಾ ರಾಷ್ಟ್ರ ಎಂದು ಪರಿಭಾವಿಸಿ ಅದರೊಳಗೆ ನಾವು ನಿರ್ಮಿಸಲು ಯತ್ನಿಸುವ ನಾಗರಿಕತೆಗೆ ಚಾರಿತ್ರಿಕವಾದ ಒಂದು ಸಾಂಸ್ಕೃತಿಕ ತಳಹದಿ ಇರಬೇಕಾಗುತ್ತದೆ. ಈ ತಳಹದಿಯನ್ನು ನಿರ್ಧರಿಸುವುದು ಲಿಖಿತ ಇತಿಹಾಸಕ್ಕಿಂತಲೂ ಹೆಚ್ಚಾಗಿ ಆ ಭೌಗೋಳಿಕ ದೇಶದ ತಳಮೂಲದ ಸಾಂಸ್ಕೃತಿಕ ನೆಲೆಗಳು ಮತ್ತು ಜನಸಂಸ್ಕೃತಿಯ ಬೇರುಗಳು. ಭಾರತದ ಸಂದರ್ಭದಲ್ಲಿ ಈ ಬೇರುಗಳನ್ನು ಶೋಧಿಸುತ್ತಾ ಹೋದಂತೆಲ್ಲಾ ಸಾಕಷ್ಟು ಕವಲುಗಳೊಡೆಯುತ್ತವೆ. ಹರಪ್ಪಾ ನಾಗರಿಕತೆಯಿಂದ ಬ್ರಿಟೀಷ್ ವಸಾಹತು ಆಳ್ವಿಕೆಯವರೆಗಿನ ಭೌಗೋಳಿಕ ಇತಿಹಾಸದಲ್ಲಿ ಈ ದೇಶದಲ್ಲಿ ನೆಲೆಯೂರಿದ ವೈವಿಧ್ಯಮಯ ಸಾಂಸ್ಕೃತಿಕ ನೆಲೆಗಳು ಅನಾವರಣವಾಗುತ್ತಾ ಹೋಗುತ್ತವೆ. ಯಾವುದು ದೇಸೀ ಯಾವುದು ಪರಕೀಯ ಎನ್ನುವುದಕ್ಕಿಂತಲೂ ಹೆಚ್ಚಾಗಿ ವರ್ತಮಾನದ ಭಾರತೀಯ ಸಮಾಜ ಯಾವುದರ ಮೇಲೆ ನಿಂತಿದೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.
ಸಮಕಾಲೀನ ಭಾರತದಲ್ಲಿ ನಾವು ಕಂಡುಕೊಳ್ಳಬೇಕಿರುವುದು ಈ ಸುಡು ವಾಸ್ತವಗಳನ್ನು ಮತ್ತು ವರ್ತಮಾನದ ಅವಶ್ಯಕತೆಗಳನ್ನು. ಈ ದಾರ್ಶನಿಕ ಮುನ್ನೋಟದೊಂದಿಗೇ ಭಾರತದ ಸಂವಿಧಾನವನ್ನೂ ರೂಪಿಸಲಾಗಿದೆ. ಬಹುಸಂಸ್ಕೃತಿಯ ಬೇರುಗಳನ್ನು ಉಳಿಸಿಕೊಳ್ಳದಿದ್ದರೆ ನಾವು ಭ್ರಮಿಸುತ್ತಿರುವ ಅಥವಾ ಸ್ವಾತಂತ್ರ್ಯ ಶಿಲ್ಪಿಗಳು ಕನಸು ಕಂಡ ಭಾರತವನ್ನು ಉಳಿಸಿಕೊಳ್ಳುವುದೂ ದುಸ್ಸಾಧ್ಯವಾದೀತು. ಹಾಗಾಗಿಯೇ ಸರ್ಕಾರಗಳು ಆಯಾ ಕಾಲಘಟ್ಟದಲ್ಲಿ ಜಾರಿಗೊಳಿಸುವ ಆಡಳಿತ ನೀತಿಗಳನ್ನು ಈ ದೇಶದ ಜನತೆ ಪ್ರಶ್ನಿಸುತ್ತಲೇ ಇರಬೇಕಾಗುತ್ತದೆ. ಭೌತಿಕ ಬಡತನ ಅಥವಾ ದಾರಿದ್ರ್ಯ ಕಣ್ಣಿಗೆ ಕಾಣುವಂತಹುದು. ಇದನ್ನು ಅನುಭವಿಸುವವರಿಗೆ ಎತ್ತಿ ತೋರಿಸಬೇಕಿಲ್ಲ. ಆದರೆ ಬೌದ್ಧಿಕ ದಾರಿದ್ರ್ಯ ಅಗೋಚರವಾದ ವಿದ್ಯಮಾನ. ಇತಿಹಾಸದ ವಿಭಿನ್ನ ಕಾಲಘಟ್ಟಗಳಲ್ಲಿ ಈ ದಾರಿದ್ರ್ಯ ತಲೆದೋರಿದಾಗೆಲ್ಲಾ ಭಾರತದ ನೆಲದಲ್ಲಿ ದಾರ್ಶನಿಕರು ಹುಟ್ಟಿಕೊಂಡು ಸಮಾಜ ಸುಧಾರಣೆಯ ಹೆಸರಿನಲ್ಲಿ, ಪರಿವರ್ತನೆಯ ಹಾದಿ ತೋರುತ್ತಲೇ ಬಂದಿದ್ದಾರೆ. ಬುದ್ಧನಿಂದ ಅಂಬೇಡ್ಕರ್‌ವರೆಗಿನ ಈ ಕ್ರಾಂತಿಕಾರಿ ಸುಧಾರಕರ ಪಯಣದಲ್ಲೇ ಭಾರತೀಯ ಸಮಾಜ ತನ್ನೊಳಗಿನ ಅನೇಕಾನೇಕ ಅನಿಷ್ಠಗಳನ್ನು ತೊಡೆದುಹಾಕಿ ಆಧುನಿಕತೆಯತ್ತ ಹೊರಳುತ್ತಿದೆ. ಜಾತಿ, ಮತ, ಧರ್ಮಗಳ ಎಲ್ಲೆಗಳನ್ನು ಮೀರಿದ ಈ ದಾರ್ಶನಿಕ ಚಿಂತನೆಗಳೇ ಸಮಕಾಲೀನ ಭಾರತವನ್ನು ಜಾಗತಿಕ ಭೂಪಟದಲ್ಲಿ ಪ್ರತಿಷ್ಠಿತ ಸ್ಥಾನದಲ್ಲಿ ಕೂರಿಸಿದೆ.

ಈ ಚಿಂತನೆಗಳನ್ನು ಸಮಗ್ರತೆಯ ನೆಲೆಯಲ್ಲಿ ಸಾಕಾರಗೊಳಿಸುವ ಒಂದು ಪ್ರಯತ್ನವೇ ಭಾರತದ ಸಂವಿಧಾನ. ಸಾಮಾಜಿಕ ಅನ್ಯಾಯ, ತಾರತಮ್ಯ ಮತ್ತು ದೌರ್ಜನ್ಯಗಳನ್ನು ಕೊನೆಗಾಣಿಸಿ, ಆರ್ಥಿಕ ಅಸಮಾನತೆಗಳನ್ನು ಅಳಿಸಿಹಾಕಿ, ಸಾಂಸ್ಕೃತಿಕ ಪಾರಮ್ಯ ಮತ್ತು ತತ್‌ಪ್ರೇರಿತ ಶೋಷಣೆಗೆ ಅಂಕುಶ ಹಾಕಿ, ಮನುಷ್ಯ ಸಮಾಜವನ್ನು ಮೃಗೀಯವಾಗಿಸಿದ್ದ ಸ್ಪೃಶ್ಯಾಸ್ಪೃಶ್ಯತೆಯ ಧೋರಣೆಯನ್ನು ಹೋಗಲಾಡಿಸಿ, ತುಳಿತಕ್ಕೊಳಗಾದ ವಂಚಿತ ಸಮುದಾಯಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಭಾರತದ ಸಂವಿಧಾನವನ್ನು ಸಿದ್ಧಪಡಿಸಲಾಗಿದೆ. ಹಾಗಾಗಿಯೇ ಸಮಾನತೆ, ಭ್ರಾತೃತ್ವ ಮತ್ತು ಜಾತ್ಯತೀತತೆಯನ್ನೂ, ವ್ಯಕ್ತಿ ಸ್ವಾತಂತ್ರ್ಯವನ್ನೂ, ಧಾರ್ಮಿಕ ಸ್ವಾತಂತ್ರ್ಯವನ್ನೂ ಸಂವಿಧಾನ ಎತ್ತಿಹಿಡಿಯುತ್ತದೆ. ಈ ಮೌಲ್ಯಗಳಿಂದ ದೂರವಾದಷ್ಟೂ ಭಾರತದ ಸಾಮಾಜಿಕ ಅಡಿಪಾಯ ಶಿಥಿಲವಾಗುತ್ತಲೇ ಹೋಗುವ ಅಪಾಯವನ್ನು ಅರಿತಿದ್ದೇ ಅಂಬೇಡ್ಕರ್ ಅವರೂ ಸಹ ಭಾರತದ ಆಳುವ ವರ್ಗಗಳನ್ನು ಪದೇ ಪದೇ ಎಚ್ಚರಿಸುತ್ತಲೇ ಇದ್ದುದನ್ನು ಸ್ಮರಿಸಬಹುದು. ಈ ಬಹುಸಂಸ್ಕೃತಿಯ ಅಡಿಪಾಯವನ್ನು ಶಿಥಿಲವಾಗದಂತೆ ಕಾಪಾಡುವ ಹೊಣೆ ಈ ದೇಶದ ನಾಗರಿಕರ ಮೇಲಿದೆ, ಈ ಹೊಣೆಯನ್ನು ಅರಿತವರು ಮಾತ್ರವೇ ದೇಶಪ್ರೇಮ, ರಾಷ್ಟ್ರೀಯತೆ ಅಥವಾ ದೇಶಾಭಿಮಾನದ ಬಗ್ಗೆ ಮಾತನಾಡಲು ಅರ್ಹರೆನಿಸಿಕೊಳ್ಳುತ್ತಾರೆ.
ಇಂದು ಏನಾಗುತ್ತಿದೆ ? ದೇಶದ ಅಭಿವೃದ್ಧಿಯ ಸಂಕಥನದಿಂದ ಜನಸಾಮಾನ್ಯರ ಭೌತಿಕ ದಾರಿದ್ರ್ಯ ಮರೆಯಾಗಿದೆ. ಬೌದ್ಧಿಕ ದಾರಿದ್ರ್ಯ ತೀವ್ರವಾಗುತ್ತಿದ್ದರೂ ಲೆಕ್ಕಿಸದೆ, ಚಾರಿತ್ರಿಕ ವಾಸ್ತವಗಳನ್ನು ಅಲ್ಲಗಳೆದು ಸಮಕಾಲೀನ ಮಿಥ್ಯೆಗಳನ್ನು ಮೆರೆಸಲಾಗುತ್ತಿದೆ. ಪೌರಾಣಿಕ ಮಿಥ್ಯೆಗಳಿಗೆ ಇತಿಹಾಸದ ಲೇಪನ ನೀಡಿ ಇತಿಹಾಸದ ಸತ್ಯಗಳನ್ನು ಮರೆಮಾಚಲಾಗುತ್ತಿದೆ. ಮಾರುಕಟ್ಟೆಯ ಸೂಚ್ಯಂಕವೇ ಭಾರತವನ್ನು ಬಣ್ಣಿಸುವ ಹೊರಕವಚ ಎಂದು ಭಾವಿಸುವುದಾದರೆ ಭಾರತ ಇಂದು ಪ್ರಕಾಶಿಸುತ್ತಿರುವಂತೆಯೇ ಕಾಣುತ್ತದೆ. ಆದರೆ ಕವಚವನ್ನು ಭೇದಿಸಿದಾಗ ಕಾಣುವ ಸುಡುವಾಸ್ತವಗಳು ಕಣ್ಣಿಗೆ ರಾಚುವಂತಿವೆ. ಇತಿಹಾಸದ ಯಾವುದೋ ಕಾಲಘಟ್ಟದಲ್ಲಿ ಸಾಮ್ರಾಟನೊಬ್ಬನಿಂದ ಧ್ವಂಸಗೊಂಡ ಒಂದು ಸ್ಥಾವರದತ್ತ ಗಮನಹರಿಸುತ್ತಿರುವ ನಾವು, ನಾವೇ ಏಳು ದಶಕಗಳ ಪರಿಶ್ರಮದಿಂದ ನಿರ್ಮಿಸಿರುವ ಬೃಹತ್ತಾದ ಸಾರ್ವಜನಿಕ ಉದ್ದಿಮೆಗಳು ಒಂದಾದಮೇಲೊಂದರಂತೆ ಶಿಥಿಲವಾಗಿ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಮಡಿಲಿಗೆ ಬೀಳುತ್ತಿರುವುದನ್ನು ಕಂಡೂ ಕಾಣದಂತೆ ನಿಷ್ಕ್ರಿಯರಾಗಿದ್ದೇವೆ. ಖಾಸಗೀಕರಣಗೊಳ್ಳುತ್ತಿರುವ ರೈಲ್ವೆ ಇಲಾಖೆಯಲ್ಲಿ 72 ಸಾವಿರ ಹುದ್ದೆಗಳನ್ನು ರದ್ದುಪಡಿಸಲಾಗಿರುವ ವಿಚಾರ ಭವಿಷ್ಯದ ಬಗ್ಗೆ ಯೋಚನೆ ಇರುವ ಯಾರನ್ನೇ ಆದರೂ ಬಾಧಿಸಬೇಕಲ್ಲವೇ ? ಹೊಸ ಶಿಕ್ಷಣ ನೀತಿಯಿಂದ ತಮ್ಮ ಜೀವನೋಪಾಯ ಕಳೆದುಕೊಳ್ಳುತ್ತಿರುವ 13 ಲಕ್ಷ ಅಂಗನವಾಡಿ ನೌಕರರು, ಇತ್ತೀಚೆಗೆ ತಮ್ಮ ಭವಿಷ್ಯದ ಬದುಕಿಗಾಗಿ ಮುಷ್ಕರ ನಡೆಸಿದ 42 ಸಾವಿರ ಆಶಾ ಕಾರ್ಯತರ್ತೆಯರು (ಇವರನ್ನು ಕೋವಿದ್ ಸಂದರ್ಭದಲ್ಲಿ ಆಪದ್ಬಾಂಧವರೆಂದೇ ಪರಿಗಣಿಸಲಾಗಿತ್ತು) ನಮ್ಮ ಒಳಗಣ್ಣಿಗೆ ಗೋಚರಿಸಬೇಕಲ್ಲವೇ ? ಲಕ್ಷಾಂತರ ಜೀವನೋಪಾಯದ ಆಸರೆಯಾಗಿರುವ ಜೀವ ವಿಮಾ ನಿಗಮ ನಿರ್ಜೀವವಾಗುತ್ತಿರುವುದು ನಮ್ಮನ್ನು ಕೆಣಕಬೇಕಲ್ಲವೇ ?
ಬೆಂಬಲ ಬೆಲೆಗಾಗಿ ನಿತ್ಯ ಹೋರಾಡುತ್ತಿರುವ ರೈತಾಪಿ, ವಸತಿಹೀನ ವಲಸೆ ಕಾರ್ಮಿಕರು, ಭವಿಷ್ಯಹೀನ ಪೌರಕಾರ್ಮಿಕರು, ಅನಿಶ್ಚಿತ ಭವಿಷ್ಯ ಎದುರಿಸುತ್ತಿರುವ ಕಾರ್ಖಾನೆಯ ಕಾರ್ಮಿಕರು, ಕೃಷಿ ಬಿಕ್ಕಟ್ಟಿನಿಂದ ಕಂಗಾಲಾಗುತ್ತಿರುವ ಗ್ರಾಮೀಣ ಜನತೆ, ಉದ್ಯೋಗಾವಕಾಶಗಳಿಲ್ಲದೆ ಸಮಾಜಘಾತುಕ ಶಕ್ತಿಗಳ ಕಾಲಾಳುಗಳಾಗುತ್ತಿರುವ ಯುವಪೀಳಿಗೆ, ದೌರ್ಜನ್ಯ-ಅತ್ಯಾಚಾರದ ನಿರಂತರ ಭೀತಿಯಲ್ಲೇ ಬದುಕಬೇಕಾಗಿರುವ ಶೋಷಿತ ಮಹಿಳಾ ಸಮುದಾಯ, ಹೊಸ ಶಿಕ್ಷಣ ನೀತಿಯಿಂದ ಶಿಕ್ಷಣ ವಂಚಿತರಾಗಲಿರುವ ಕೋಟ್ಯಂತರ ಬಡ ಜನತೆ, ಇಂದಿಗೂ ಜಾತಿ ದೌರ್ಜನ್ಯ ಮತ್ತು ಅಸ್ಪೃಶ್ಯತೆಯಿಂದ ಬಹಿಷ್ಕೃತರಾಗಿಯೇ ಉಳಿದಿರುವ ಜನಸಮುದಾಯಗಳು, ಅನೈತಿಕ ಮಾರುಕಟ್ಟೆ ರಾಜಕಾರಣ ಮತ್ತು ತತ್‌ಪ್ರೇರಿತ ಆರ್ಥಿಕ ಭ್ರಷ್ಟಾಚಾರದಿಂದ ನಲುಗಿ ಹೋಗುತ್ತಿರುವ ಮಧ್ಯಮ ವರ್ಗಗಳು, ಸಾಂವಿಧಾನಿಕ ಸವಲತ್ತುಗಳಿಂದ ನಿರಂತರ ವಂಚಿತರಾಗುತ್ತಿರುವ ತಳಸಮುದಾಯಗಳು ಮತ್ತು ಇನ್ನು ಮುಂದಿನ ದಿನಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸೃಷ್ಟಿಯಾಗಲಿರುವ ನಿರುದ್ಯೋಗ ಪೀಡಿತ ಯುವ ಪೀಳಿಗೆ- ಈ ಒಂದು ದೃಶ್ಯ ಕಾಲ್ಪನಿಕವಾಗಿಯಾದರೂ ನಮ್ಮನ್ನು ಕಾಡದೆ ಹೋದರೆ ನಮಗೆ ವರ್ತಮಾನದ ವಾಸ್ತವ ಅರ್ಥವಾಗಿಲ್ಲ ಎಂದೇ ಅರ್ಥ.
ಈ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಪಾಯಗಳು ಮತ್ತು ಸಂಭಾವ್ಯ ತಲ್ಲಣಗಳ ಹೊರತಾಗಿಯೂ ಭಾರತವನ್ನು ಒಂದು ಸದೃಢ ರಾಷ್ಟ್ರವನ್ನಾಗಿ ಕಾಪಾಡಿಕೊಳ್ಳಬೇಕೆಂದರೆ, ಸಂವಿಧಾನ ಗ್ರಾಂಥಿಕವಾಗಿ ಸುರಕ್ಷಿತವಾಗಿದ್ದರೆ ಸಾಲದು, ನಮ್ಮ ಸಾಂಸ್ಕೃತಿಕ ಬೇರುಗಳು ಗಟ್ಟಿಯಾಗಬೇಕು. ಭವಿಷ್ಯದ ಪೀಳಿಗೆಯನ್ನು ರೂಪಿಸುವ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಒದಗಿಸುವ ದಾರ್ಶನಿಕ ಚಿಂತನೆಗಳು, ಆಲೋಚನೆಗಳು ಈ ಬೇರುಗಳನ್ನು ಗಟ್ಟಿಗೊಳಿಸುವ ಮೂಲ ಸಾಧನಗಳೂ ಆಗುತ್ತವೆ. ಹಾಗಾಗಿಯೇ ಪಠ್ಯಕ್ರಮಗಳಲ್ಲಿ ನಮಗೆ ಬುದ್ಧ, ಬಸವ, ಕನಕ, ನಾರಾಯಣಗುರು, ಫುಲೆ, ಠ್ಯಾಗೋರ್, ವಿವೇಕಾನಂದ, ಅರಬಿಂದೋ, ಗಾಂಧಿ, ಅಂಬೇಡ್ಕರ್ ಮತ್ತು ಚರಿತ್ರೆಯಲ್ಲಿ ಆಗಿಹೋದ ಅಸಂಖ್ಯಾತ ಸೂಫಿ ಸಂತರು ಮುಖ್ಯವಾಗುತ್ತಾರೆ. ಬಹುಸಾಂಸ್ಕೃತಿಕ ಬೇರುಗಳನ್ನು ಕಸಿ ಮಾಡುವ ಮೂಲಕ ಸಮನ್ವಯದ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಈ ಚಿಂತಕರ ಬೋಧನೆಗಳು ನೆರವಾಗುತ್ತವೆ. ಈ ಬೇರುಗಳಿಗೆ ಚಾರಿತ್ರಿಕ ವಿಕೃತಿಗಳನ್ನು ಬೆರೆಸಿ ಏಕಸಾಂಸ್ಕೃತಿಕ ವೃಕ್ಷಗಳನ್ನು ನೆಡುವ ಪ್ರಯತ್ನಗಳು, ಸ್ವಸ್ಥ ಭಾರತದ ಅಡಿಪಾಯವನ್ನೇ ಶಿಥಿಲಗೊಳಿಸುತ್ತದೆ. ಇತಿಹಾಸದ ಸಾಮ್ರಾಟರು ಗತ ಭಾರತದ ಭವ್ಯತೆಯ ದೃಷ್ಟಿಯಿಂದ ಸ್ಮರಣೀಯರಾಗಲು ಸಾಧ್ಯ ಆದರೆ ಭವಿಷ್ಯ ಭಾರತದ ಸುಭದ್ರ ಬುನಾದಿಗೆ ಈ ಸಾಂಸ್ಕೃತಿಕ ಚಿಂತಕರು ಮುಖ್ಯವಾಗುತ್ತಾರೆ. ಈ ಯಾವುದೇ ಚಿಂತಕರನ್ನು ವರ್ತಮಾನದ ಸಂಕಥನದಡಿ ಹಿಂದೂ-ಮುಸ್ಲಿಂ ಅಥವಾ ಪರ-ವಿರೋಧಗಳ ನೆಲೆಯಲ್ಲಿ ವ್ಯಾಖ್ಯಾನಿಸುವುದು ಸಾಧ್ಯವೂ ಆಗುವುದಿಲ್ಲ. ಆದರೆ ಈ ಎಲ್ಲ ಚಿಂತಕರೂ ಭಾರತೀಯ ಸಮಾಜದ ಶ್ರೇಣೀಕೃತ ಜಾತಿ ವ್ಯವಸ್ಥೆಯ ದೌರ್ಜನ್ಯ ಮತ್ತು ಕ್ರೌರ್ಯಗಳನ್ನು ಕೊನೆಗಾಣಿಸಲು ಶ್ರಮಿಸಿದವರು ಎನ್ನುವುದು ಚಾರಿತ್ರಿಕ ಸತ್ಯ.

ಈ ಚಾರಿತ್ರಿಕ ಸತ್ಯದ ಮೂಲ ಬೇರುಗಳೇ ಭಾರತದ ಸಂವಿಧಾನದ ಅಡಿಪಾಯವನ್ನು ಸುಭದ್ರವಾಗಿ, ಸುರಕ್ಷಿತವಾಗಿ ಇರಿಸಲು ಸಾಧ್ಯ. ಈ ಬೇರುಗಳ ರಕ್ಷಣೆಗಾಗಿಯೇ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕಿದೆ. ಇತಿಹಾಸದ ಪುಟಗಳನ್ನು ಅಳಿಸಿಹಾಕುವ ಮೂಲಕ, ಚಾರಿತ್ರಿಕ ವ್ಯಕ್ತಿಗಳನ್ನು ಬೌದ್ಧಿಕವಾಗಿ ಇಲ್ಲವಾಗಿಸುವ ಮೂಲಕ, ದಾಖಲಿತ ಚರಿತ್ರೆಯ ಪುಟಗಳನ್ನು ಹರಿದುಹಾಕುವ ಮೂಲಕ ಅಥವಾ ಅಳಿದು ಹೋದ ಸಾಮ್ರಾಟರನ್ನು ಅಲ್ಲಗಳೆಯುವ ಮೂಲಕ ಈ ಬೇರುಗಳನ್ನು ರಕ್ಷಿಸಲಾಗುವುದಿಲ್ಲ. ವರ್ತಮಾನದ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ನಮ್ಮ ಕಣ್ಣೆದುರಿನ ಸ್ಥಾವರಗಳು ಬಿಂಬಿಸುತ್ತವೆಯೇ ಹೊರತು, ಆ ಸ್ಥಾವರಗಳಡಿ ಹುದುಗಿರಬಹುದಾದ ಕಲ್ಪಿತ ಇತಿಹಾಸ ಅಲ್ಲ ಅಥವಾ ಅದರ ಪಳೆಯುಳಿಕೆಗಳೂ ಅಲ್ಲ. ಈ ಸ್ಥಾವರಗಳನ್ನು ಧ್ವಂಸಗೊಳಿಸಿ ಭೂಗತ ಚರಿತ್ರೆಯನ್ನು ಅಗೆದು ಸಾಮಾಜಿಕ ಸಾಮರಸ್ಯ ಸಾಧಿಸಲು ಸಾಧ್ಯವೇ ? ಅಳಿದು ಹೋದ ಚರಿತ್ರೆಯಲ್ಲಿ ಸಂಭವಿಸಿರುವ ದೌರ್ಜನ್ಯ ಮತ್ತು ಅನ್ಯಾಯಗಳನ್ನೇ ಅಳತೆಗೋಲನ್ನಾಗಿರಿಸಿಕೊಂಡು ವರ್ತಮಾನದ ಸಾಮಾಜಿಕ ಚೌಕಟ್ಟುಗಳನ್ನು ಭೇದಿಸುವುದೇ ಆದರೆ, ಶತಮಾನಗಳ ತಾರತಮ್ಯ ಶೋಷಣೆ ಮತ್ತು ದೌರ್ಜನ್ಯಗಳನ್ನೆದುರಿಸಿದ ತಳ ಸಮುದಾಯಗಳು ಹೇಗೆ ಪ್ರತಿಕ್ರಯಿಸಬೇಕು ? ಚಾರಿತ್ರಿಕ ಪ್ರಮಾದಗಳಿಗೆ ವರ್ತಮಾನದ ಉತ್ತರ ಬಯಸುವುದೇ ಆದರೆ ಈ ದೇಶದ ಅಸ್ಪೃಶ್ಯರು, ದಲಿತರು ಮತ್ತು ವಂಚಿತ ಸಮುದಾಯಗಳು ಯಾರಿಂದ ಉತ್ತರ ಬಯಸಬೇಕು ? ಈ ಪ್ರಶ್ನೆಗೆ ಎದೆಮುಟ್ಟಿಕೊಂಡು ಪ್ರಾಮಾಣಿಕ ಉತ್ತರ ನೀಡುವ ನೈತಿಕತೆಯನ್ನು ನಾವು ಉಳಿಸಿಕೊಂಡಿದ್ದೇವೆಯೇ ?
ಈ ಪ್ರಶ್ನೆಗಳಿಗೆ ಉತ್ತರಗಳನ್ನು ಶೋಧಿಸುತ್ತಲೇ ನಾವು ಭಾರತದ ಸಂವಿಧಾನದತ್ತ ದೃಷ್ಟಿ ಹೊರಳಿಸಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ಕಾರಗಳು ಎಂದಿಗೂ ಶಾಶ್ವತವಲ್ಲ ಎಂಬ ವಾಸ್ತವವನ್ನು ಅರಿತು ಆಡಳಿತ ನಿರ್ವಹಣೆ ನಡೆಸಿದಲ್ಲಿ ಈ ಪ್ರಶ್ನೆಗಳನ್ನು ಎದುರಿಸುವುದು ಸುಲಭವಾಗುತ್ತದೆ. ಭಾರತದ ಸಂವಿಧಾನದ ಬೇರುಗಳು ಈ ಎಲ್ಲ ಪ್ರಶ್ನೆಗಳನ್ನೂ ಒಳಗೊಂಡ ಸಮನ್ವಯದ ಆಗರವಾಗಿವೆ. ಆರ್ಥಿಕ ಅಸಮಾನತೆ ದಿನದಿಂದ ದಿನಕ್ಕೆ ಹಿಗ್ಗುತ್ತಲೇ ಇರುವ ವಿಷಮ ಸನ್ನಿವೇಶದಲ್ಲಿ ಭಾರತದ ಶ್ರಮಜೀವಿ ವರ್ಗಗಳು ತಮ್ಮ ಜೀವನೋಪಾಯದ ಮಾರ್ಗಗಳ ಶೋಧದಲ್ಲಿ ತೊಡಗಿವೆ. ಇಲ್ಲಿಂದ ಉಗಮಿಸುವ ಒಂದು ಯುವಪೀಳಿಗೆಗೆ ಒಂದು ಸುಭದ್ರ ನೆಲೆಯನ್ನು ಕಲ್ಪಿಸುವ ಹೊಣೆಯನ್ನೂ ಈ ವರ್ಗಗಳೇ ಹೊತ್ತಿವೆ. ದೇಶದ ಭೌಗೋಳಿಕ ಅಖಂಡತೆ ಮತ್ತು ಭೌತಿಕ ಸಾರ್ವಭೌಮತ್ವವನ್ನು ಉಳಿಸಲು ಈ ದುಡಿಮೆಯ ಕೈಗಳು ಬಲಿಷ್ಟವಾಗಬೇಕಿದೆ. ಬಲಿಷ್ಟವಾಗಬೇಕಿರುವುದು ವಿನಾಶಕಾರಿ ಯುದ್ಧಮಾಡಲು ಅಲ್ಲ, ಸೌಹಾರ್ದತೆ ಮತ್ತು ಸಮನ್ವಯದ ದೇಶವನ್ನು ಕಟ್ಟಲು. ಈ ಕಟ್ಟುವ ಪ್ರಕ್ರಿಯೆಗೆ ಬೇಕಾದ ಬೌದ್ಧಿಕ ಚಿಂತನೆ ಮತ್ತು ಆಲೋಚನೆಗಳನ್ನು ಯುವಪೀಳಿಗೆಯ ಮನಸುಗಳಲ್ಲಿ ಬಿತ್ತುವ ನಿಟ್ಟಿನಲ್ಲಿ ಪ್ರಜ್ಞಾವಂತ ಸಮಾಜ ಯೋಚಿಸಬೇಕಿದೆ. ಹಾಗೆಯೇ ಜಾತಿ, ಮತ, ಧರ್ಮ ಮತ್ತು ಕೋಮು ವಿಷಬೀಜಗಳನ್ನು ಕಿತ್ತೊಗೆಯಲೂ ಮುಂದಾಗಬೇಕಿದೆ. ಭೂಮಿ ನಮ್ಮದು, ನೇಗಿಲು ನಮ್ಮದು. ಮಿದುಳು ಸಹ ನಮ್ಮದೇ. ಮಿದುಳಿನ ನಿಯಂತ್ರಕರು ನಾವೇ ಆದರೆ ಇದು ಸಾಧ್ಯ ಅಲ್ಲವೇ ?








