ಬೆಂಗಳೂರು ; ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಕಾಫಿ ಬೆಲೆಗಳು ಶುಕ್ರವಾರ ತೀವ್ರವಾಗಿ ಹೆಚ್ಚಳ ದಾಖಲಿಸಿ ಹೊಸ ಎತ್ತರಕ್ಕೆ ಏರಿ ಸರ್ವಕಾಲಿಕ ದಾಖಲೆ ನಿರ್ಮಿಸಿದವು. ಮಾರುಕಟ್ಟೆಗೆ ಸರಬರಾಜಿನಲ್ಲಿ ಕೊರತೆ ಉಂಟಾದ ಕಾರಣಕ್ಕೆ ಕಳೆದ ಗುರುವಾರ ಮತ್ತು ಶುಕ್ರವಾರ ಅರೇಬಿಕಾ ಪಾರ್ಚ್ ಮೆಂಟ್ ಕಾಫಿ ದರಗಳು ಜಿಗಿತ ದಾಖಲಿಸಿದವು.ಕೇವಲ ಎರಡು ದಿನದಲ್ಲೇ ಚೀಲಕ್ಕೆ 1200 ರೂಪಾಯಿಗಳಷ್ಟು ಏರಿಕೆ ದಾಖಲಾಗಿದೆ.
ಆದರೆ ದೇಶೀ ಮಾರುಕಟ್ಟೆಯಲ್ಲಿ ಮಾತ್ರ ಅಂತರ್ರಾಷ್ಟ್ರೀಯ ಮಾರುಕಟ್ಟೆಯ ಏರಿಕೆಯ ಅನುಪಾತದಲ್ಲಿ ಏರಿಕೆ ಆಗಿಲ್ಲ.ಕೊಡಗಿನಲ್ಲಿ ಬಹುತೇಕ ಕಾಫಿ ಖರೀದಿದಾರರು ಅರೇಬಿಕಾ ಪಾರ್ಚ್‌ಮೆಂಟ್ 50 ಕೆಜಿ ಚೀಲಕ್ಕೆ 21 ಸಾವಿರದಿಂದ 22 ಸಾವಿರ ರೂಪಾಯಿಗಳವರೆಗೆ ಮಾತ್ರ ಖರೀದಿಸುತಿದ್ದಾರೆ. ಮೂಡಿಗೆರೆಯ ಮುದ್ರೆಮನೆ ಕಾಫಿ ಕ್ಯೂರಿಂಗ್ ವರ್ಕ್ಸ್ ನಲ್ಲಿ ಭಾನುವಾರ ಖರೀದಿ ದರ 23,500 ರೂಪಾಯಿ ಇತ್ತು. ಈ ದರ ಸರ್ವಕಾಲಿಕ ದಾಖಲೆ ಆಗಿದೆ. 1990 ರ ದಶಕದಲ್ಲಿ ಕಾಫಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ನೀಡಿದ ನಂತರ ಇಷ್ಟು ದರ ಏರಿಕೆ ಆಗಿರುವುದು ಇದೇ ಮೊದಲಾಗಿದೆ. ನಾವು ಇಂದು ಈ ದರಕ್ಕೆ ಖರೀದಿಸುತಿದ್ದೇವೆ ಎಂದು ಮುದ್ರೆಮನೆ ಕಾಫಿಯ ವ್ಯವಸ್ಥಾಪಕ ಉಮೇಶ್ ತಿಳಿಸಿದರು.
ವಿವಿಧ ಪಟ್ಟಣಗಳಲ್ಲಿ ಭಾನುವಾರ ಕಾಫಿ ಖರೀದಿ ದರದಲ್ಲಿ ಭಾರೀ ವ್ಯತ್ಯಾಸ ಗೋಚರವಾಯಿತು. ಕುಶಾಲನಗರದ ಎಸ್ ಎಲ್ ಎನ್ ಕಾಫಿ ಕ್ಯೂರಿಂಗ್ ವರ್ಕ್ಸ್ ನಲ್ಲಿ ಭಾನುವಾರ ಅರೇಬಿಕಾ ಫಾರ್ಚ್ ಮೆಂಟ್ ದರ 5೦ ಕೆ ಜಿ ಚೀಲಕ್ಕೆ 21,200 ಇದ್ದರೆ ಸೋಮವಾರಪೇಟೆಯ ಬ್ಲಾನ್ ಕಾಫಿ ಯಲ್ಲಿ ದರ 22 ಸಾವಿರ ಇತ್ತು. ಅರೇಬಿಕಾ ಪಾರ್ಚ್ ಮೆಂಟ್ ಕಾಫಿ ಮಾತ್ರ ಅನಿರೀಕ್ಷಿತ ಜಿಗಿತ ದಾಖಲಿಸಿದ್ದು ಅರೇಬಿಕಾ ಚೆರ್ರಿ ಕಾಫಿ, ರೊಬಸ್ಟಾ ಪಾರ್ಚ್‌ಮೆಂಟ್ ಮತ್ತು ರೊಬಸ್ಟಾ ಚೆರಿ ದರ ದಲ್ಲಿ ಏರಿಕೆ ಆಗಿಲ್ಲದಿರುವುದು ಅಚ್ಚರಿ ಮೂಡಿಸಿದೆ.
ವಾಸ್ತವವಾಗಿ ರೊಬಸ್ಟಾ ಪಾರ್ಚ್‌ಮೆಂಟ್ ಕಾಫಿ ದರ 15 ದಿನದ ಹಿಂದೆ 20 ಸಾವಿರಕ್ಕೆ ತಲುಪಿದ್ದು ನಂತರ ಈಗ ಕುಸಿತ ದಾಖಲಿಸಿದೆ. ಭಾನುವಾರ ರೊಬಸ್ಟಾ ಪಾರ್ಚ್ ಮೆಂಟ್ ಖರೀದಿ ದರ 19 ಸಾವಿರದಿಂದ 19,500 ರ ವರೆಗೂ ಇತ್ತು. ಚಿಕ್ಕಮಗಳೂರಿನಲ್ಲಿ ಈ ದರ 20 ಸಾವಿರ ರೂಪಾಯಿ ಇತ್ತು.ವಿಶ್ವದ ಅತಿದೊಡ್ಡ ಅರೇಬಿಕಾ ಕಾಫಿ ಉತ್ಪಾದಕರಾದ ಬ್ರೆಜಿಲ್ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕಾಫಿ ಉತ್ಪಾದನೆಗೆ ಬಲವಾದ ಪೆಟ್ಟುಬಿದ್ದಿದ್ದು ಅಂತರ್ರಾಷ್ಟ್ರೀಯ ಮಾರುಕಟ್ಟೆಗೆ ಕಾಫಿ ಸರಬರಾಜು ಕಡಿಮೆ ಆಗಿದ್ದರಿಂದ ಕಾಫಿ ದರ ಕಳೆದ ವರ್ಷದಿಂದ ಏರಿಕೆ ದಾಖಲಿಸುತ್ತಿದೆ. ವಿಶ್ವದ ಎರಡನೇ ಅತೀ ದೊಡ್ಡ ಕಾಫಿ ಉತ್ಪಾದಕ ವಿಯಟ್ನಾಂ ನಲ್ಲಿಯೂ ಹವಾಮಾನ ವೈಪರೀತ್ಯದಿಂದಾಗಿ ಉತ್ಪಾದನೆ ಗಣನೀಯವಾಗಿ ಕುಸಿದಿದೆ.
ಕಾಫಿಯ ದರ ಗೂಳಿ ಓಟದಂತೆ ಏರಿಕೆ ದಾಖಲಿಸುತ್ತಿರುವ ಹಿನ್ನೆಲೆಯಲ್ಲಿ ಕಾಫಿ ವರ್ತಕರು ಖರೀದಿಗೆ ಮುಂದಾಗುತ್ತಿಲ್ಲ. ಏಕೆಂದರೆ ಕಳೆದ ಮೂರು ದಶಕಗಳಲ್ಲಿ ಕಾಫಿ ವಹಿವಾಟಿನಲ್ಲಿ ತೊಡಗಿರುವ ನೂರಾರು ವರ್ತಕರು ದರ ಕುಸಿದಾಗ ಲಕ್ಷಗಟ್ಟಲೆ ಹಣ ಕಳೆದುಕೊಂಡು ದಿವಾಳಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ವರ್ತಕರು ಪ್ರತಿನಿತ್ಯ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗಿರುವ ದರ ಮೊಬೈಲ್ ಬಂದರೂ ಈ ದುಬಾರಿ ದರದಲ್ಲಿ ಖರೀದಿಗೆ ಹಿಂದೇಟು ಹಾಕುತಿದ್ದಾರೆ.
ಈ ದರವು ಸ್ಥಿರವಾಗಿಲ್ಲ ಎಂಬುದೇ ವರ್ತಕರ ಆತಂಕಕ್ಕೆ ಕಾರಣ ಆಗಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ದರ ಏರಿಕೆ ಆಗಿದ್ದರೂ ಕಾಫಿ ಬೆಳೆಗಾರರ ಪರಿಸ್ಥಿತಿ ಏನೂ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಈ ವರ್ಷದ ಕಾಫಿ ಫಸಲಿನ ಮೇಲೆ ಗಣನೀಯ ಹೊಡೆತ ಬಿದ್ದಿದೆ. ಹಣ್ಣಾದ ಕಾಫಿ ಉದುರಿದ್ದು ನೆಲದಲ್ಲಿ ಬಿದ್ದಿದ್ದು ಕೊಳೆಯುತ್ತಿದೆ. ಮತ್ತೊಂದೆಡೆ ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆಯೂ ಇದೆ. ಕಾರ್ಮಿಕರ ಕೂಲಿ ದರವೂ ದುಪ್ಪಟ್ಟಾಗಿದೆ , ಅಷ್ಟು ಕೊಟ್ಟರೂ ಜನ ಸಿಗುತ್ತಿಲ್ಲ ಎಂದು ಗ್ರಾಮೀಣ ಭಾಗದ ಕಾಫಿ ಬೆಳೆಗಾರರ ಅಳಲಾಗಿದೆ. ವರದಿ :ಕೋವರ್ ಕೊಲ್ಲಿ ಇಂದ್ರೇಶ್