ಆಕಾಶ್ ( Akash ), ಅರಸು ( Arasu ) ಅಜಿತ್ ( Ajith ), ಅಭಯ್ ( Abhay ), ಅತಿರಥ ( Atiratha ), ಸೇರಿದಂತೆ ಹಲವು ವಿಶಿಷ್ಟ ಹಾಗೂ ವಿಭಿನ್ನ ಪ್ರೇಮಕಥೆಗಳ ( Love Stories) ಸಿನಿಮಾವನ್ನ ನಿರ್ದೇಶಿಸಿ, ಯಶಸ್ವಿ ನಿರ್ದೇಶಕ ಎಂದು ಎನಿಸಿಕೊಂಡಿರುವ ಮಹೇಶ್ ಬಾಬು, ಇದೀಗ ಮತ್ತೋಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ, ಇದೀಗ ಅವರ ಸಾರಥ್ಯದಲ್ಲಿ ಅಪರೂಪ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜುಲೈ 14ರಂದು ರಾಜ್ಯಾದ್ಯಂತ ಈ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದ್ದು. ಅಪರೂಪ ಸಿನಿಮಾ ಮೂಲಕ ಸುಘೋಷ್ ಮತ್ತು ಹೃತಿಕಾ ಕನ್ನಡ ಸಿನಿಮಾ ಲೋಕಕ್ಕೆ ನಾಯಕ ಹಾಗೂ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಹೊಸ ರೀತಿಯ ಪ್ರೇಮಕಥೆಯಾಗಿರುವ ಅಪರೂಪ ಸಿನಿಮಾದಲ್ಲಿ ನಾಯಕ ನಾಯಕಿಯ ನಡುವೆ ಬರುವ ಅಹಂ ವಿಲನ್ ಆಗುತ್ತದೆ. ಅದರಿಂದ ಏನೇನು ತೊಂದರೆ ಉಂಟಾಗುತ್ತದೆ ಅನ್ನೋದು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ನಾಯಕ ಸುಘೋಷ್ ಮೂಲತಃ ಮಂಡ್ಯದವರು. ಚಿಕ್ಕಂದಿನಿಂದಲೇ ಸಿನಿಮಾ ಕನಸು ಕಟ್ಟಿಕೊಂಡವರು. ಮಹೇಶ್ ನಿರ್ದೇಶನದ ಅತಿರಥ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರ ನಟನೆ ನೋಡಿ ಅಪರೂಪ ಸಿನಿಮಾಗೆ ನಾಯಕರನಾಗಿ ನಟಿಸುವ ಅವಕಾಶ ನೀಡಿದ್ದಾರೆ. ನೃತ್ಯದಲ್ಲಿಯೂ ಪರಿಣಿತರಾಗಿರುವ ಸುಘೋಷ್, ಕಷ್ಟಕರವಾದ ಸ್ಟೆಪ್ಸ್ ಗಳನ್ನು ಸರಾಗವಾಗಿ ಮಾಡಬಲ್ಲರು. ಅವರು ಹೆಜ್ಜೆ ಹಾಕಿರುವ ‘ಲವ್ ಗೆ ನೋ ನೋ’ ಎಂಬ ಹಾಡು ಈಗಾಗಲೇ ಸಖತ್ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಕಿ ಹೃತಿಕಾ ತೆಲುಗಿನ ಖ್ಯಾತ ನಟಿ ಅಮನಿ ಸಹೋದರನ ಪುತ್ರಿ. ವಿಷ್ಣುವರ್ಧನ್ ನಟನೆಯ ಅಪ್ಪಾಜಿ ಚಿತ್ರದಲ್ಲಿ ಅಮನಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು.

ಅಶೋಕ್ , ಅರುಣಾ ಬಲರಾಜ್, ಅವಿನಾಶ್, ಕುರಿಪ್ರತಾಪ್ , ದಿನೇಶ್ ಮಂಗಳೂರು, ವಿಜಯ್ ಚೆಂಡೂರು, ಕಡ್ಡಿಪುಡಿ ಚಂದ್ರು, ಮೋಹನ್ ಜುನೇಜಾ ಅಪರೂಪ ಸಿನಿಮಾದ ಭಾಗವಾಗಿದ್ದಾರೆ. ಪ್ರಜ್ವಲ್ ಪೈ ಸಂಗೀತ ಹಾಡುಗಳಿಗೆ ಅರ್ಮನ್ ಮಲ್ಲಿಕ್, ಅನಿರುದ್ಧ್ ಶಾಸ್ತ್ರೀ, ಸಂಗೀತ ರವೀಂದ್ರನಾಥ್, ಪ್ರಜ್ವಲ್ ಪೈ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದು ಹಾಡಿಗೆ ಧ್ವನಿಯಾಗಿರುವುದು ವಿಶೇಷ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕಾಶ್ಮೀರದಲ್ಲಿ ಶೂಟಿಂಗ್ ನಡೆಸಲಾಗಿದ್ದು, ಸೂರ್ಯಕಾಂತ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಸುಗ್ಗಿ ಸಿನಿಮಾಸ್ ಬ್ಯಾನರ್ ನಡಿ ತಯಾರಾಗಿರುವ ಅಪರೂಪ ಸಿನಿಮಾವನ್ನು ಕೆಆರ್ ಜಿ ಸ್ಟುಡಿಯೋಸ್ ರಾಜ್ಯಾದ್ಯಂತ ವಿತರಣೆ ಮಾಡಲಿದೆ.