ಸಂವಿಧಾನ ಮತ್ತು ಜಾತ್ಯತೀತತೆಯಲ್ಲಿ ನಂಬಿಕೆಯಿರುವ, ಆದರೆ ಹಿಂದುತ್ವದ ಮೇಲೆ ನಂಬಿಕೆಯಿದದ ಯಾವುದೇ ಸರ್ಕಾರವೂ ಎನ್ಡಿಎ ಅಧಿಕಾರವಿರುವ ಭಾರತದಲ್ಲಿ ಸುರಕ್ಷಿತವಲ್ಲ ಎಂದು ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಯಶವಂತ್ ಸಿನ್ಹಾ ಕಿಡಿಕಾರಿದ್ದಾರೆ. ಮಹಾರಾಷ್ಟ್ರದ ಉದ್ಧವ್ ಸರ್ಕಾರ ಪತನದ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ಮಾಜಿ ಸಂಘ ಪರಿವಾರ ನಾಯಕ ನೀಡಿದ್ದಾರೆ.
ತಮಿಳುನಾಡಿನಲ್ಲಿ ತಮಗೆ ಬೆಂಬಲ ನೀಡಿದ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿನ್ಹಾ ಅವರು (ಬಿಜೆಪಿ) ಮಹಾರಾಷ್ಟ್ರದ ಮುಖ್ಯಮಂತ್ರಿಯʼಕುರ್ಚಿ’ಯನ್ನು ಆಕ್ರಮಿಸಲು ಬಲಿಪಶುವನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ʼಕೇಂದ್ರದಲ್ಲಿರುವ ಈ ಆಡಳಿತ ಪಕ್ಷಕ್ಕೆ ಮತ್ತು ಭಾರತ ಸರ್ಕಾರಕ್ಕೆ ನಮ್ಮ ಸಂವಿಧಾನದ ಫೆಡರಲ್ ರಚನೆಯ ಬಗ್ಗೆ ಯಾವುದೇ ಗೌರವವಿಲ್ಲ ಎಂದು ಇದು ತೋರಿಸುತ್ತದೆ. ಅವರು ಸಂವಿಧಾನದ ಸಂಪ್ರದಾಯವನ್ನು ಉಲ್ಲಂಘಿಸುತ್ತಿದ್ದಾರೆʼ ಎಂದು ಅವರು ಕಿಡಿ ಕಾರಿದ್ದಾರೆ.
“ನಾನು ಮಹಾರಾಷ್ಟ್ರದ ಬಿಜೆಪಿ ನಾಯಕನ ಭಾಷಣವನ್ನು ಕೇಳುತ್ತಿದ್ದೆ. ಅವರು ನಿರಂತರವಾಗಿ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದರು. ಹಿಂದುತ್ವದಲ್ಲಿ ನಂಬಿಕೆಯಿಲ್ಲದ ಕಾರಣ ನಾವು ಉದ್ಧವ್ ಸರ್ಕಾರವನ್ನು ಉರುಳಿಸಿದ್ದೇವೆ ಎಂದು ಹೇಳಿದ್ದಾರೆ. ಇದರರ್ಥ ಸಂವಿಧಾನದಲ್ಲಿ ನಂಬಿಕೆ ಇರುವ, ಹಿಂದುತ್ವದಲ್ಲಿ ನಂಬಿಕೆಯಿಲ್ಲದ, ಆದರೆ ಜಾತ್ಯತೀತತೆಯನ್ನು ನಂಬುವ ಯಾವುದೇ ಸರ್ಕಾರವು ಈ ದೇಶದಲ್ಲಿ, ಎನ್ಡಿಎ ಅಧಿಕಾರದಡಿಯಲ್ಲಿ ಸುರಕ್ಷಿತವಲ್ಲ” ಎಂದು ಅವರು ಹೇಳಿದ್ದಾರೆ.
“ನಾನು ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿರುವುದು ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ಮಿತಿಮೀರಿದ ನಡೆಯ ವಿರುದ್ಧದ ನಿರಂತರ ಹೋರಾಟವಾಗಿದೆ. ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾದರೆ ಸಂವಿಧಾನ ಮತ್ತು ಅದರ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಎತ್ತಿಹಿಡಿಯುತ್ತೇನೆ” ಎಂದು ಸಿನ್ಹಾ ಭರವಸೆ ನೀಡಿದ್ದಾರೆ.