• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಮತಾಂತರ ವಿರುದ್ಧ ಸಮರ ಸಾರುವುದು ಮತನಿರಪೇಕ್ಷ ಸಂವಿಧಾನಕ್ಕೆ ಬಗೆದ ದ್ರೋಹ!

ನಾ ದಿವಾಕರ by ನಾ ದಿವಾಕರ
December 15, 2021
in ಅಭಿಮತ
0
ಮತಾಂತರ ವಿರುದ್ಧ ಸಮರ ಸಾರುವುದು ಮತನಿರಪೇಕ್ಷ ಸಂವಿಧಾನಕ್ಕೆ ಬಗೆದ ದ್ರೋಹ!
Share on WhatsAppShare on FacebookShare on Telegram

ಒಂದು ಸ್ವಸ್ಥ ಸಮಾಜಕ್ಕೆ ಬೇಕಾಗಿರುವುದು ಪರಸ್ಪರ ಸೌಹಾರ್ದಯುತವಾಗಿ ಬಾಳಲು ಅನುಕೂಲವಾದಂತಹ ಮನುಜ ಸಂಬಂಧಗಳು. ಮನುಜ ಸಂಬಂಧಗಳನ್ನು ನಿರ್ಮಿಸಲು ಬೇಕಿರುವುದು ಪರಸ್ಪರ ವಿಶ್ವಾಸ ಮತ್ತು ನಂಬಿಕೆ. ಈ ನಂಬಿಕೆಗಳನ್ನು ರೂಢಿಸಿಕೊಳ್ಳಲು ಬೇಕಿರುವುದು ಮಾನವ ಪ್ರಜ್ಞೆ. ಇದನ್ನು ಹೊರತಾದ ಯಾವುದೇ ಅಸ್ಮಿತೆಗಳು ಮಾನವ ಜಗತ್ತಿಗೆ ಅನಗತ್ಯವಾದುದು. ಹಾಗೆಯೇ ಒಂದು ಮತ ಅಥವಾ ಧರ್ಮ ಅಥವಾ ಜಾತಿ, ಪಂಥ, ಪಂಗಡ ಇತ್ಯಾದಿ. ಆದರೂ ಮಾನವ ಸಮಾಜ ತನ್ನ ಸಾಂಸ್ಥಿಕ, ಸಾಮುದಾಯಿಕ, ಜನಾಂಗೀಯ ಅಸ್ಮಿತೆಗಳಿಂದಾಚೆಗೆ ಬದುಕುವುದನ್ನೇ ಕಲಿತಿಲ್ಲ ಎನ್ನುವುದು ನಮ್ಮ ಕಣ್ಣೆದುರಿನ ವಾಸ್ತವ. ಮಾನವ ಸಮಾಜವೇ ರೂಪಿಸಿಕೊಂಡ ಒಂದು ನಿರ್ದಿಷ್ಟ ಮತ, ಹಿಂದೂ-ಇಸ್ಲಾಂ-ಕ್ರೈಸ್ತ ಇತ್ಯಾದಿ, ತನ್ನ ಸಾಂಸ್ಥಿಕ ಸ್ವರೂಪವನ್ನು ಗಟ್ಟಿಗೊಳಿಸುವ ಹಾದಿಯಲ್ಲಿ ಮಾನವೀಯ ಸ್ಪರ್ಶವನ್ನೇ ಕಳೆದುಕೊಂಡು ಅಸ್ಮಿತೆಗಳ ಶರಮಂಚದ ಮೇಲೆ ಆಸೀನರಾಗಿಬಿಡುತ್ತವೆ.

ADVERTISEMENT

ಈ ಅಸ್ಮಿತೆಗಳ ಚೌಕಟ್ಟಿನಲ್ಲೇ ಹುಟ್ಟಿ ಬೆಳೆದು ತಮ್ಮ ವ್ಯಕ್ತಿಗತ ನಂಬಿಕೆಗಳನ್ನು ರೂಢಿಸಿಕೊಳ್ಳುವ ಮನುಷ್ಯನಿಗೆ ಮತ ಅಥವಾ ಧರ್ಮ ಎನ್ನುವುದು ಒಂದು ಸಾಂತ್ವನದ ನೆಲೆಯಾಗಿ ಮಾತ್ರವೇ ನೆರವಾಗುತ್ತದೆ. ನಿತ್ಯ ಜೀವನದ ಸಂಕಷ್ಟಗಳನ್ನು ಮರೆಯಲು, ತನ್ನ ಬದುಕಿನ ಹತಾಶೆ ಮತ್ತು ಆತಂಕಗಳನ್ನು ಹೋಗಲಾಡಿಸಿಕೊಳ್ಳಲು ಮನುಷ್ಯ ಜೀವಿಗೆ ತನ್ನ ವ್ಯಾಪ್ತಿಗೆ ನಿಲುಕದ ಅತೀತ ಶಕ್ತಿಯ ಮೊರೆ ಹೋಗುವುದು ಅನಿವಾರ್ಯವಲ್ಲವಾದರೂ, ಹಲವಾರು ಸಂದರ್ಭಗಳಲ್ಲಿ ಅವಶ್ಯಕವಾಗಿಬಿಡುತ್ತದೆ. ಬಡತನದ ಬೇಗುದಿ, ಹಸಿವು, ಸಾಮಾಜಿಕ ತಾರತಮ್ಯ , ದೌರ್ಜನ್ಯ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಜಾತಿ ಶ್ರೇಷ್ಠತೆಯಿಂದ ಪೋಷಿಸಲ್ಪಡುವ ಅಸ್ಪೃಶ್ಯತೆ ತಳಸಮುದಾಯಗಳ ಬದುಕಿನ ಹಾದಿಗೆ ಮುಳ್ಳುಗಳಾಗಿಯೇ ಕಾಣುತ್ತದೆ. ಈ ಸಾಮಾಜಿಕ ಅನ್ಯಾಯಗಳ ಚೌಕಟ್ಟಿನಲ್ಲೇ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಮತ್ತು ಘನತೆಯ ಬದುಕಿನ ಹಕ್ಕಿನಿಂದ ವಂಚಿತನಾಗುವ ವ್ಯಕ್ತಿ ಅಥವಾ ಸಮುದಾಯ, ಜನ್ಮದಾರಭ್ಯ ಒದಗಿಬಂದ ಮತ ಅಥವಾ ಧರ್ಮದ ನೆಲೆಗಳನ್ನು ತೊರೆದು ಮತ್ತೊಂದು ನೆಮ್ಮದಿಯ ತಾಣವನ್ನು ಅರಸುವುದು ಒಂದು ಸಹಜ ಸ್ವಾಭಾವಿಕ ಪ್ರಕ್ರಿಯೆ.

ಇಂದು ವ್ಯಾಪಕ ಚರ್ಚೆ ಮತ್ತು ವಿವಾದಕ್ಕೊಳಗಾಗಿರುವ ಮತಾಂತರದ ಪ್ರಶ್ನೆಯನ್ನೂ ಹೀಗೆಯೇ ನೋಡಬೇಕಿದೆ. ಸಾಂವಿಧಾನಿಕವಾಗಿ ಒದಗಿಸಲಾಗಿರುವ ವ್ಯಕ್ತಿಸ್ವಾತಂತ್ರ್ಯದೊಂದಿಗೇ ಭಾರತದ ಪ್ರಜೆಗಳಿಗೆ ತಮ್ಮ ಆಯ್ಕೆಯನುಸಾರ ಯಾವುದೇ ಮತವನ್ನು ಅನುಸರಿಸುವ ಸ್ವಾತಂತ್ರ್ಯವನ್ನೂ ನೀಡಲಾಗಿದೆ. ಸಂವಿಧಾನದ ಮೂರನೆಯ ಪರಿಚ್ಚೇದದಲ್ಲಿ ಮೂಲಭೂತ ಹಕ್ಕುಗಳನ್ನು ಪ್ರಸ್ತಾಪಿಸಲಾಗಿದೆ. ಸಂವಿಧಾನ ವಿಧಿ 25 ರಿಂದ 28ರವರೆಗಿನ ನಿಯಮಗಳು ಭಾರತದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ಧರ್ಮವನ್ನು ಪಾಲಿಸುವ, ಅನುಸರಿಸುವ, ಪ್ರಚಾರ ಮಾಡುವ ಮತ್ತು ಆಚರಿಸುವ ಹಕ್ಕನ್ನು ನೀಡುತ್ತದೆ. ಸಾರ್ವಜನಿಕ ಸುವ್ಯವಸ್ಥೆಯನ್ನು, ನೈತಿಕತೆಯನ್ನು ಮತ್ತು ಆರೋಗ್ಯಕರ ವಾತಾವರಣವನ್ನು ಕಾಪಾಡಿಕೊಳ್ಳುವುದು ಈ ನಿಟ್ಟಿನಲ್ಲಿ ಅವಶ್ಯವಾಗಿರುತ್ತದೆ. ಅಂದರೆ ಯಾವುದೇ ವ್ಯಕ್ತಿಗೆ ತನ್ನ ವ್ಯಕ್ತಿಗತ ಬದುಕಿನಲ್ಲಿ ತನ್ನ ಮತವನ್ನು ತೊರೆದು ಮತ್ತೊಂದು ಮತವನ್ನು ಆಚರಿಸುವ ಹಕ್ಕು ಇರುತ್ತದೆ. ಈ ಸಾಂವಿಧಾನಿಕ ಹಕ್ಕು ಇಂದು ಮತಾಂತರದ ಪ್ರಶ್ನೆಯಾಗಿ ಪರಿಣಮಿಸಿದೆ.

ಮತಾಂತರ ಮತ್ತು ರಾಜಕಾರಣ

1960ರ ದಶಕದಿಂದಲೂ ಭಾರತದಲ್ಲಿ ಮತಾಂತರ ಒಂದು ರಾಜಕೀಯ ಚೌಕಟ್ಟಿನಲ್ಲೇ ಚರ್ಚೆಗೊಳಗಾಗುತ್ತಿದೆ. ಜನಸಾಮಾನ್ಯರ ಬದುಕಿನಲ್ಲಿ ಯಾವುದೇ ಪ್ರಕ್ಷುಬ್ಧತೆ ಉಂಟುಮಾಡದ ಈ ವಿದ್ಯಮಾನ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡುತ್ತದೆ. ಬಿಜೆಪಿ ಸರ್ಕಾರಗಳಿಗೆ ಮತ್ತು ಸಂಘಪರಿವಾರಕ್ಕೆ ತಮ್ಮ ಹಿಂದುತ್ವ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಮತಾಂತರದ ಪ್ರಶ್ನೆ ಒಂದು ಪ್ರಬಲ ಅಸ್ತ್ರವಾಗಿದೆ. “ ಅವಿದ್ಯಾವಂತ, ಬಡ ಹಿಂದೂಗಳು ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕೆ ಬಲಿಯಾಗಿ ಅನ್ಯಧರ್ಮಗಳನ್ನು ಸ್ವೀಕರಿಸುತ್ತಿದ್ದಾರೆ. ಹಾಗಾಗಿ ಇತರ ರಾಜ್ಯಗಳಲ್ಲಿನ ಮತಾಂತರ ನಿಷೇಧ ಕಾಯ್ದೆಗಳನ್ನು ಪರಾಮರ್ಶಿಸಿ ರಾಜ್ಯದಲ್ಲೂ ಅಂತಹುದೇ ಕಾಯ್ದೆಯನ್ನು ಜಾರಿಗೊಳಿಸಬೇಕು ” ಎಂದು ಭಾಜಪದ ಮಂತ್ರಿಗಳೊಬ್ಬರು 2009ರಲ್ಲೇ ಹೇಳಿದ್ದುಂಟು. ಈಗ ಬೊಮ್ಮಾಯಿ ಸರ್ಕಾರ ಇಂತಹ ಕಾಯ್ದೆಯೊಂದನ್ನು ಜಾರಿಗೊಳಿಸಲು ಮುಂದಾಗಿದೆ.

ಕ್ರೈಸ್ತ ಮಿಷನರಿಗಳು ಬಲವಂತವಾಗಿ, ಪ್ರಲೋಭನೆಗಳನ್ನೊಡ್ಡಿ, ಆಸೆ ಆಮಿಷಗಳನ್ನು ತೋರಿಸಿ ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲದಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕೆಲವು ಮತೀಯ ಕಾವಲುಪಡೆಗಳ ಉನ್ಮತ್ತ ಭಾವನೆ ಮತ್ತು ಅಭಿಪ್ರಾಯಗಳನ್ನೇ ಅಂತಿಮ ಸತ್ಯ ಎಂದೆಣಿಸುವುದು ಪ್ರಸ್ತುತ ಸನ್ನಿವೇಶಕ್ಕೆ ಕಾರಣವಾಗಿದೆ. “ಮತಾಂತರವನ್ನು ಒಪ್ಪಬಹುದು ಆದರೆ ಬಲವಂತದ ಮತಾಂತರ ಒಪ್ಪಲಾಗುವುದಿಲ್ಲ” ಎಂಬ ಉದಾರವಾದಿ ಚಿಂತನೆಗೂ ಸಾಕಷ್ಟು ಮೆರುಗು ನೀಡುವಲ್ಲಿ ಪ್ರಸ್ತುತ ಬೆಳವಣಿಗೆಗಳು ಸಹಕಾರಿಯಾಗಿವೆ. ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಮತ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಪಾಲಿಸುವ ಸಂವಿಧಾನಾತ್ಮಕ ಹಕ್ಕು ಇರುವುದಾದರೂ, ಸಂವಿಧಾನವನ್ನು ಒಪ್ಪಿರುವ ರಾಜಕೀಯ ಪಕ್ಷಗಳೇ ಮತಾಂತರದ ವಿರುದ್ಧ ಸಮರ ಸಾರುತ್ತಿರುವುದು ಮತನಿರಪೇಕ್ಷ ಸಂವಿಧಾನಕ್ಕೆ ದ್ರೋಹ ಬಗೆದಂತಾಗಿದೆ.

ಸ್ವಾತಂತ್ರ್ಯಪೂರ್ವದಲ್ಲೂ ಸಹ, 1936ರಲ್ಲಿ ರಾಯ್‍ಘರ್, 1942ರಲ್ಲಿ ಸರಗುಜಾ, 1946ರಲ್ಲಿ ಉದಯ್‍ಪುರ ಸಂಸ್ಥಾನಗಳು ಮತಾಂತರ ನಿಷೇದ ಕಾಯ್ದೆಯನ್ನು ಜಾರಿಗೊಳಿಸಿದ್ದನ್ನು ದಾಖಲಿಸಲಾಗಿದೆ. ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲನೆಯದಾಗಿ ಧರ್ಮ ಪರಿವರ್ತನೆಯ ವಿರುದ್ಧ ಶಾಸನ ಜಾರಿಗೊಳಿಸಿದ್ದು ಒರಿಸ್ಸಾದಲ್ಲಿ, 1967ರ ಒರಿಸ್ಸಾ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ಮೂಲಕ. ಈ ಕಾಯ್ದೆಯಲ್ಲಿ “ ಯಾವುದೇ ವ್ಯಕ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ ಮತ್ತೊಬ್ಬ ವ್ಯಕ್ತಿಯನ್ನು, ಪ್ರಲೋಭನೆಯನ್ನು ಒಡ್ಡಿ, ಬಲಾತ್ಕಾರ ಮಾಡಿ ಅಥವಾ ಮೋಸ ಮಾಡಿ, ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಪರಿವರ್ತಿಸುವಂತಿಲ್ಲ ” ಎಂದು ಹೇಳಲಾಗಿದೆ. ತದನಂತರ ಇದೇ ಹಾದಿಯನ್ನು ಅನುಸರಿಸಿ ಮಧ್ಯಪ್ರದೇಶ-1968, ಅರುಣಾಚಲಪ್ರದೇಶ-1978, ಗುಜರಾತ್-2003, ಛತ್ತಿಸ್‍ಗಢ್-2003, ರಾಜಸ್ತಾನ-2005, ಹಿಮಾಚಲ ಪ್ರದೇಶ-2006 ಮತ್ತು ತಮಿಳುನಾಡು-2002 ರಲ್ಲಿ ಇದೇ ರೀತಿಯ ಶಾಸನವನ್ನು ಜಾರಿಗೊಳಿಸಿದ್ದವು. ಈಗ ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದು ಇದು ಮೂಲತಃ ಮುಸ್ಲಿಂ ಯುವಕರ ಮೇಲೆ ಗುಂಪು ಹಲ್ಲೆ ನಡೆಸಲು ಮತೀಯ ಕಾವಲುಪಡೆಗಳಿಗೆ ಮುಕ್ತ ಅವಕಾಶ ನೀಡಿದಂತಾಗಿದೆ. ತಮಿಳುನಾಡಿನಲ್ಲಿ 2004ರಲ್ಲಿ ಈ ಕಾಯ್ದೆಯನ್ನು ಹಿಂಪಡೆಯಲಾಯಿತು.

1950ರಲ್ಲಿ ಸಂವಿಧಾನವನ್ನು ಅನುಷ್ಟಾನಗೊಳಿಸಿದ ಸಂದರ್ಭದಲ್ಲಿ ಸಂವಿಧಾನದ ವಿಧಿ 25ರ ಅಡಿ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತನ್ನದೇ ಆದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ, ಪಾಲಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಮಾನ್ಯ ಮಾಡಲಾಯಿತು. ಹಾಗಾಗಿ ಈ ರಾಜ ಸಂಸ್ಥಾನಗಳ ಶಾಸನಗಳು ಅನೂರ್ಜಿತವಾದವು. ಆದಾಗ್ಯೂ ಹೆಚ್ಚು ಸಂಖ್ಯೆಯ ಆದಿವಾಸಿಗಳನ್ನೊಳಗೊಂಡಿದ್ದ ಮಧ್ಯ ಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ವ್ಯಾಪಕವಾಗಿ ಕಾರ್ಯನಿರತವಾಗಿದ್ದ ಕ್ರೈಸ್ತ ಮಿಷನರಿಗಳ ಚಟುವಟಿಕೆಗಳ ಬಗ್ಗೆ ಗುಮಾನಿ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ಸರ್ಕಾರವು ಮಿಷನರಿಗಳ ಕಾರ್ಯವೈಖರಿಯ ಮೇಲೆ ನಿಗಾವಹಿಸಲು ಸಮಿತಿಯೊಂದನ್ನು ನೇಮಿಸಿತ್ತು. ಸಮಿತಿಯು ತನ್ನ ವರದಿಯಲ್ಲಿ ವಿದೇಶದಿಂದ ಹರಿದುಬರುವ ಹಣದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ್ದು, ಸಮಾಜ ಸೇವೆ ಮತ್ತು ದಾನಶೀಲತೆಯ ಹೆಸರಿನಲ್ಲಿ ದುರುಪಯೋಗ ನಡೆಯಬಹುದೆಂದು ಶಂಕೆ ವ್ಯಕ್ತಪಡಿಸಿತ್ತು. ಈ ಸಮಿತಿಯ ವರದಿಯೇ ಒರಿಸ್ಸಾದ ಕಾಯ್ದೆಗೆ ತಳಹದಿಯಾಗಿ ಪರಿಣಮಿಸಿತ್ತು. ಕರ್ನಾಟಕದ ಕಾಯ್ದೆಗೂ ಇದೇ ತಳಹದಿಯಾಗಿದೆ.
ಮತಾಂಧ ಪಡೆಗಳು ಮತ್ತು ಮತಾಂತರ

ಪ್ರಸ್ತುತ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಥವಾ ಸಂಘಪರಿವಾರ ಹೇಳುವ ಮಟ್ಟಿಗೆ ಮತಾಂತರ ನಡೆಯುತ್ತಿಲ್ಲ. ಆದರೆ ಕೈಯ್ಯಲ್ಲಿ ಬೈಬಲ್ ಹಿಡಿದು ಓಡಾಡುವುದೇ ಮಹಾಪರಾಧವಾಗಿರುವುದಂತೂ ಸತ್ಯ. ಕೋಲಾರದ ಶ್ರೀನಿವಾಸಪುರದಲ್ಲಿ ಕರಪತ್ರ ಹಂಚುತ್ತಿದ್ದ ಕ್ರೈಸ್ತರ ಮೇಲೆ ಮತೀಯ ಕಾವಲುಪಡೆಗಳು ದಾಳಿ ನಡೆಸಿವೆ. ಇತ್ತೀಚೆಗೆ ಬೇಲೂರಿನಲ್ಲೂ ಪ್ರಾರ್ಥನಾ ಸಭೆಯೊಂದರ ಮೇಲೆ ದಾಳಿ ನಡೆಸಲಾಗಿತ್ತು. ಧರ್ಮ ಬೋಧನೆಗೆ ಮತ್ತು ಪ್ರಚಾರಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಈ ಬೋಧನೆಯ ಮೂಲಕ ಮತಾಂತರಕ್ಕೆ ಬಲವಂತ ಮಾಡುವುದನ್ನು ನಿರ್ಬಂಧಿಸಲಾಗಿದೆ. ಆದರೆ ಈ ಬಲವಂತದ ಮತಾಂತರದ ಅರ್ಥ ಏನೆಂದು ತಿಳಿಯಬೇಕಲ್ಲವೇ ? ಕ್ರೈಸ್ತ ಮತ ಪ್ರಚಾರಕರ ಬೋಧನೆಗೆ ಶರಣಾಗಿ ತಮ್ಮ ಮೂಲ ಮತವನ್ನು ತ್ಯಜಿಸುವವರಿಗೆ ಸಂವಿಧಾನ ಆ ಹಕ್ಕನ್ನು ನೀಡಿದೆಯಲ್ಲವೇ ? ಇದನ್ನು ನಿರ್ಬಂಧಿಸುವುದೆಂದರೆ ಅದು ಸಾಂವಿಧಾನಿಕ ವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ.

ಆದರೆ ಕರ್ನಾಟಕದಲ್ಲಿ ಮತಾಂತರ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ ಎನ್ನಲು ಯಾವುದೇ ಪುರಾವೆಗಳಿಲ್ಲ. ಕ್ರೈಸ್ತ ಧರ್ಮ ಪ್ರಚಾರಕರು ಗ್ರಾಮಗಳಲ್ಲಿ, ಆದಿವಾಸಿ ಹಾಡಿಗಳಲ್ಲಿ ತಮ್ಮ ಧರ್ಮ ಪ್ರಚಾರ ಮಾಡಿದ ಮಾತ್ರಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದಾರೆಂದು ಭಾವಿಸುವುದೂ ತರವಲ್ಲ. ಹಾಗೆ ನೋಡಿದರೆ ಧರ್ಮ ಪ್ರಚಾರ ಕಾರ್ಯವನ್ನು ಎಲ್ಲ ಧರ್ಮಗಳೂ ಕೈಗೊಳ್ಳುತ್ತವೆ. ಹಿಂದೂ ಧರ್ಮದ ಪ್ರಚಾರಕರೂ ಪ್ರವಚನಗಳನ್ನು ನೀಡುತ್ತಲೇ ಇರುತ್ತಾರೆ. ದಿನಬೆಳಗಾದರೆ ಟಿವಿ ವಾಹಿನಿಗಳಲ್ಲಿ ಪ್ರವಚನಗಳ ಹೊಳೆಯೇ ಹರಿಯುತ್ತದೆ. ಇವೆಲ್ಲವನ್ನೂ ಮತಾಂತರದ ಪ್ರಯತ್ನಗಳೆಂದು ಭಾವಿಸಲು ಸಾಧ್ಯವೇ ? ಅಥವಾ ಕ್ರೈಸ್ತರು ಕೈಗೊಳ್ಳುವ ಪ್ರಚಾರ ಮಾತ್ರ ಮತಾಂತರ ಪ್ರೇರಿತ ಎಂದು ಭಾವಿಸಲು ಸಾಧ್ಯವೇ ? ಇನ್ನು ಮೂವತ್ತು ವರ್ಷಗಳಲ್ಲಿ ಭಾರತ ಕ್ರೈಸ್ತ ಅಥವಾ ಮುಸಲ್ಮಾನ ರಾಷ್ಟ್ರವಾಗುತ್ತದೆ, ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ ಎಂದು ಸಂಘಪರಿವಾರ ಮೂವತ್ತು ವರ್ಷಗಳಿಂದ ಹೇಳುತ್ತಲೇ ಬರುತ್ತಿದೆ. ಹುಯಿಲೆಬ್ಬಿಸುತ್ತಿದೆ. ಪರಿವಾರದ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿಯ ಪ್ರಚಾರವೂ ಒಂದು ಅಸ್ತ್ರವಷ್ಟೆ.

2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಕ್ರೈಸ್ತರ ಜನಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. 2001ರಲ್ಲಿ ಶೇ 1.91 (11.42 ಲಕ್ಷ) ಇದ್ದುದು 2011ರಲ್ಲಿ ಶೇ 1.87 (10.09 ಲಕ್ಷ)ಕ್ಕೆ ಇಳಿದಿದೆ. ಜನಸಂಖ್ಯಾ ಪ್ರಮಾಣದ ಹೆಚ್ಚಳದ ಪ್ರಮಾಣ ಕ್ರೈಸ್ತರಲ್ಲಿ ಶೇ 15.54ರಷ್ಟಿದೆ. ಮುಸಲ್ಮಾನರ ಜನಸಂಖ್ಯೆ 2001ರಲ್ಲಿ ಶೇ 12.12ರಷ್ಟಿದ್ದುದು (64.63 ಲಕ್ಷ) 2011ರಲ್ಲಿ ಶೇ 12.91ಕ್ಕೆ (78.93 ಲಕ್ಷ) ಏರಿದೆ. ಮುಸ್ಲಿಮರ ಜನಸಂಖ್ಯಾ ಹೆಚ್ಚಳದ ಪ್ರಮಾಣ ಇದೇ ಅವಧಿಯಲ್ಲಿ ಶೇ 29.52ರಿಂದ ಶೇ 24.60ಕ್ಕೆ ಇಳಿದಿದೆ. ಅಂದರೆ ಭಾರತ ಪಾಕಿಸ್ತಾನವಾಗುತ್ತದೆ, ಮುಸ್ಲಿಮರು, ಕ್ರೈಸ್ತರು ಬಹುಸಂಖ್ಯಾತರಾಗುತ್ತಾರೆ ಎಂಬ ಹುರುಳಿಲ್ಲದ ಪ್ರಚಾರಗಳನ್ನು ಈ ಅಧಿಕೃತ ಅಂಕಿಅಂಶಗಳೇ ಅಲ್ಲಗಳೆಯುತ್ತವೆ ಅಲ್ಲವೇ ?

ಭಾರತದ ಸಂದರ್ಭದಲ್ಲಿ ಮತಾಂತರ ಎಂಬ ಪದ ಬಳಕೆಯಲ್ಲೇ ಸಮಸ್ಯೆ ಕಾಣುತ್ತದೆ. ಹಿಂದೂ ಎಂದು ಹೇಳಲಾಗುವ ಮತ ಮೂಲತಃ ಹಲವು ಜಾತಿಗಳ ಒಕ್ಕೂಟವೇ ಹೊರತು ಒಂದು ನಿರ್ದಿಷ್ಟ ಸಾಂಸ್ಥಿಕ ಸ್ವರೂಪವನ್ನು ಹೊಂದಿಲ್ಲ. ಈ ಸಾಂಸ್ಥಿಕತೆಯನ್ನು ರೂಪಿಸಲು ಸಂಘಪರಿವಾರ ಪ್ರಯತ್ನಿಸುತ್ತಿದೆ. ಅಂಬೇಡ್ಕರ್ ಮತಾಂತರಕ್ಕೆ ಎರಡು ಕಾರಣಗಳನ್ನು ನೀಡುತ್ತಾರೆ. ಮೊದಲನೆಯದು ಅಸ್ತಿತ್ವಕ್ಕೆ ಸಂಬಂಧಿಸಿದ್ದು, ಎರಡನೆಯದು ಆಧ್ಯಾತ್ಮಿಕವಾದದ್ದು. ಅಸ್ತಿತ್ವಕ್ಕೆ ಸಂಬಂಧಿಸಿದಂತೆ ದಲಿತರು ನಿತ್ಯ ಎದುರಿಸುತ್ತಿರುವ ದೌರ್ಜನ್ಯ, ತಾರತಮ್ಯ, ಅಸ್ಪೃಶ್ಯತೆಯ ಅಪಮಾನ ಮುಂತಾದುವನ್ನು ಅಂಬೇಡ್ಕರ್ ಉದಾಹರಣೆಯಾಗಿ ನೀಡುತ್ತಾರೆ. ಇದನ್ನು ಅವರು ವರ್ಗ ಸಂಘರ್ಷ ಎಂದೇ ಭಾವಿಸುತ್ತಾರೆ.

“ ಅದು ಎರಡು ವ್ಯಕ್ತಿಗಳು ಅಥವಾ ಗುಂಪುಗಳ ನಡುವಿನ ಸಂಘರ್ಷವಲ್ಲ. ಅದು ಎರಡು ವರ್ಗಗಳ ನಡುವಿನ ಸಂಘರ್ಷ. ಒಬ್ಬ ವ್ಯಕ್ತಿ ಮತ್ತೊಬ್ಬನ ಮೇಲೆ ದಬ್ಬಾಳಿಕೆ ಅಥವಾ ಅನ್ಯಾಯ ಮಾಡುವುದಲ್ಲ. ಒಂದು ವರ್ಗ ಮತ್ತೊಂದರ ಮೇಲೆ ಮಾಡುವ ಅನ್ಯಾಯ. ಈ ಸಂಘರ್ಷಗಳನ್ನು ಗಮನಿಸಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ. ನೀವು ಮೇಲ್ವರ್ಗದವರೊಡನೆ ಸಮಾನತೆಯನ್ನು ಅಪೇಕ್ಷಿಸಿದಾಗ ಸಂಘರ್ಷ ಉಂಟಾಗುತ್ತದೆ. ನೀವು ನ್ಯಾಯಕ್ಕಾಗಿ ಆಗ್ರಹಿಸುವ ನಿಮ್ಮ ವರ್ತನೆಯೇ ಅವರ ಆಕ್ರೋಶಕ್ಕೆ ಕಾರಣವಾಗುತ್ತದೆ.ಇದು ಅವರ ಅಹಂಗೆ ಚ್ಯುತಿ ಉಂಟುಮಾಡುತ್ತದೆ.” “ ಸ್ಪೃಶ್ಯರು ಮತ್ತು ಅಸ್ಪೃಶ್ಯರ ನಡುವಿನ ಸಂಘರ್ಷ ನಿರಂತರವಾದುದು, ಶಾಶ್ವತವಾದುದು, ಏಕೆಂದರೆ ಅವರ ಪ್ರಕಾರ ನಿಮಗೆ ಕೆಳಸ್ತರದ ಸ್ಥಾನ ಕಲ್ಪಿಸಿರುವ ಧರ್ಮ ಸನಾತನವಾದುದು ಅದನ್ನು ಬದಲಾಯಿಸಲಾಗುವುದಿಲ್ಲ ” ಎಂದು ಅಂಬೇಡ್ಕರ್ ಹೇಳುತ್ತಾರೆ. ಈ ಹಿನ್ನೆಲೆಯಲ್ಲೇ ಅಂಬೇಡ್ಕರ್ ದಲಿತರ ಮತಾಂತರದ ಅಪೇಕ್ಷೆಯನ್ನು ಅಸ್ತಿತ್ವದ ಸಮಸ್ಯೆ ಎಂದೇ ಗುರುತಿಸುತ್ತಾರೆ.

ಹಿಂದೂ ವ್ಯಕ್ತಿ ಮತಾಂತರ ಹೊಂದಿದರೆ ಅವರು ಜಿಗಿಯುವುದು ಮತದಿಂದದ ಮತಕ್ಕೆ ಅಲ್ಲ, ಒಂದು ಜಾತಿಯಿಂದ ಜಾತಿಯ ಸೋಂಕಿಲ್ಲದ ಮತಕ್ಕೆ. ಮರುಮತಾಂತರವಾದರೆ ಅವರು ತಮ್ಮ ಮೊದಲ ಗೂಡಿಗೇ ಮರಳಬೇಕಲ್ಲವೇ ? ಹಿಂದೂ ಮತಕ್ಕೆ ಮರಳುವವರನ್ನು ಎಲ್ಲಿ ಕೂರಿಸುತ್ತಾರೆ ? ಮತ್ತದೇ ಮೂಲ ಜಾತಿಯ ವೃಕ್ಷಗಳಡಿ ಅಲ್ಲವೇ ? ಇಲ್ಲಿ ವ್ಯಕ್ತಿಗತವಾಗಿ ತನ್ನ ಆರ್ಥಿಕ ಸ್ಥಾನಮಾನಗಳಿಗನುಗುಣವಾಗಿ ಅಸ್ಪೃಶ್ಯತೆ, ತಾರತಮ್ಯ ಎದುರಿಸದಿದ್ದರೂ ಸಾಮುದಾಯಿಕವಾಗಿ ಇದು ಇದ್ದೇ ಇರುತ್ತದೆ. ಇದನ್ನು ಹೇಗೆ ಅರ್ಥೈಸುವುದು ? ಇಂದಿಗೂ ನಮ್ಮ ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆಯ ಹಿನ್ನೆಲೆಯಲ್ಲಿ ಇದನ್ನು ನೋಡಿದಾಗ, ಅಸ್ಪೃಶ್ಯ ಸಮುದಾಯಗಳು ತಮ್ಮ ನೆಲೆಯನ್ನು “ ಹಿಂದೂ ” ಎಂದು ಪರಿಭಾವಿಸಲಾಗುವ ಮತದ ಚೌಕಟ್ಟಿನಲ್ಲಿ ಏಕೆ ಕಂಡುಕೊಳ್ಳಬೇಕು. ಕೊಪ್ಪಳದ ದೇವಾಲಯಕ್ಕೆ ಎಂಟು ವರ್ಷದ ಹಸುಳೆ ಪ್ರವೇಶಿಸಿದ್ದಕ್ಕೆ ಬಹಿಷ್ಕಾರ ಹಾಕಿ ದಂಡ ವಿಧಿಸಿದ ಒಂದು ಸಮಾಜಕ್ಕೆ, ಅದೇ ಅಸ್ಪೃಶ್ಯರನ್ನು ನಮ್ಮೊಡನೆ ಇರಿ ಎಂದು ಹೇಳುವ ನೈತಿಕತೆ ಹೇಗಿರಲು ಸಾಧ್ಯ ?

ಅಸ್ಪೃಶ್ಯತೆ, ಜಾತಿ ದೌರ್ಜನ್ಯ, ತಾರತಮ್ಯ ಮತ್ತು ಅಪಮಾನಗಳಿಂದ ವಿಮುಕ್ತಿ ಪಡೆಯುವ ಒಂದು ಸಾರ್ವತ್ರಿಕ ಪ್ರಕ್ರಿಯೆಯಾಗಿ ಮತಾಂತರವೂ ನಡೆಯುತ್ತದೆ. ಹಾಗಾಗಿಯೇ ನಮ್ಮ ಸಂವಿಧಾನದಲ್ಲೂ ಇದಕ್ಕೆ ನಿರ್ಬಂಧಿತ ಅವಕಾಶವನ್ನು ಕಲ್ಪಿಸಲಾಗಿದೆ. ಬಲವಂತದ ಮತಾಂತರ, ಆಮಿಷ ಪ್ರಲೋಭನೆಗಳ ಮೂಲಕ ಮಾಡುವ ಮತಾಂತರವನ್ನು ನಿಷೇಧಿಸುವ ಮುನ್ನ ಸರ್ಕಾರ ಈ ಪದಗಳ ವ್ಯಾಪ್ತಿ ಮತ್ತು ಸ್ಪಷ್ಟವಾದ ಅರ್ಥವನ್ನು ಜನತೆಗೆ ತಿಳಿಸಬೇಕಿದೆ. ಅವಕಾಶವಂಚಿತರಿಗೆ ಶಿಕ್ಷಣ ನೀಡುವುದು, ಹಸಿದವರಿಗೆ ಅನ್ನ ನೀಡುವುದು, ನೆಲೆಯಿಲ್ಲದವರಿಗೆ ಸೂರು ಒದಗಿಸುವುದು ಆಮಿಷ ಎನಿಸಿಕೊಳ್ಳುವುದಿಲ್ಲ. ಮತ ಮತ್ತು ಧರ್ಮಗಳ ಪರಿಧಿಯಿಂದಾಚೆಗೆ ಇವು ಮಾನವೀಯ ಸಂವೇದನೆಯ ಮಾರ್ಗಗಳಾಗುತ್ತವೆ. ಬಿಜೆಪಿ ಸರ್ಕಾರ ಈ ಪದಗಳ ನಿಷ್ಕರ್ಷೆಯ ಅಧಿಕಾರವನ್ನು ಭಜರಂಗದಳ, ಹಿಂದೂ ಸೇನೆಯಂತ ಮತೀಯ ಕಾವಲುಪಡೆಗಳಿಗೆ ನೀಡುವ ಮೂಲಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವ ಮುಕ್ತ ಅವಕಾಶವನ್ನು ಕಲ್ಪಿಸಿದೆ.

ಈಗ ರಾಜ್ಯ ಸಂಸ್ಕೃತಿ ಇಲಾಖೆಯ ಸಚಿವರು ಲವ್ ಜಿಹಾದ್ ನಿಷೇಧ ಮಸೂದೆಯನ್ನೂ ಮಂಡಿಸುವುದಾಗಿ ಹೇಳಿದ್ದಾರೆ. ಲವ್ ಜಿಹಾದ್ ಒಂದು ಕಪೋಲ ಕಲ್ಪಿತ ಪರಿಕಲ್ಪನೆ ಎಂದು ನ್ಯಾಯಾಲಯಗಳೇ ಹೇಳಿವೆ. ಎರಡು ವಿಭಿನ್ನ ಮತಗಳ ಯುವಕ-ಯುವತಿ ಒಟ್ಟೊಟ್ಟಿಗೆ ಓಡಾಡುವುದೂ ಕಷ್ಟವಾಗುವಂತಹ ಪರಿಸ್ಥಿತಿ ಕರಾವಳಿಯಲ್ಲಿ ಉದ್ಭವಿಸಿದೆ. ಮುಸ್ಲಿಂ ಮತಾಂಧರೂ ಸಹ ಇಂತಹ ದಾಳಿಗಳನ್ನು ನಡೆಸುತ್ತಿದ್ದಾರೆ. ಜಾತಿ, ಮತ, ಧರ್ಮ ಮತ್ತು ಸಾಮುದಾಯಿಕ ಅಸ್ಮಿತೆಗಳನ್ನು ದಾಟಿದ ಮನುಜ ಸಂಬಂಧವೂ ಒಂದಿದೆ ಎಂಬ ಸಾಮಾನ್ಯ ಪರಿಜ್ಞಾನವನ್ನೂ ಕಳೆದುಕೊಂಡಿರುವ ಒಂದು ಸಮಾಜದಲ್ಲಿ ಮಾತ್ರ ಈ ರೀತಿಯ ಘಟನೆಗಳು ಸಂಭವಿಸಲು ಸಾಧ್ಯ. 12ನೆಯ ಶತಮಾನದ ಬಸವಣ್ಣನ ಕಾಲದಲ್ಲಿದ್ದ ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯ ಅಪಮಾನಗಳು ಇಂದಿಗೂ ಪ್ರಚಲಿತವಾಗಿವೆ ಎಂದರೆ ನಾವು ನಾಚಿಕೆಯಿಂದ ತಲೆತಗ್ಗಿಸಬೇಕಲ್ಲವೇ ? ಅಂದು ನಡೆದ ಮತಾಂತರದ ಪ್ರಕ್ರಿಯೆಯೇ ಇಂದೂ ನಡೆಯುತ್ತಿದೆ ಎಂದರೆ ಅದನ್ನು ಒಪ್ಪಿಕೊಳ್ಳಬೇಕಲ್ಲವೇ ?

ವಿಶ್ವದ ಶ್ರೇಷ್ಠ ಸಂವಿಧಾನವನ್ನು ಹೊಂದಿರುವ ಭಾರತದಲ್ಲಿ ಅಸ್ಪೃಶ್ಯತೆಯಂತಹ ಅಮಾನುಷ ಆಚರಣೆಯನ್ನು ಇನ್ನೂ ಜೀವಂತವಾಗಿರಿಸಿರುವ ಭಾರತೀಯ ಸಮಾಜ ಮನುಜ ಸಂಬಂಧಗಳನ್ನು ಜಾತಿ-ಮತ-ಧರ್ಮದ ಹಂಗಿಲ್ಲದೆ ಬೆಸೆಯುವ ನಿಟ್ಟಿನಲ್ಲಿ ಮುನ್ನಡೆಯುವ ಸಂಕಲ್ಪ ಮಾಡಬೇಕಿದೆ. ಆದರೆ ಮತಾಂತರ ನಿಷೇಧದಂತಹ ಅಸಾಂವಿಧಾನಿಕ ಶಾಸನಗಳನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಸರ್ಕಾರಗಳು ಈ ಮುನ್ನಡೆಯ ಹಾದಿಗಳಿಗೆ ಮುಳ್ಳು ಬೇಲಿಗಳನ್ನು ನಿರ್ಮಿಸುತ್ತಿದೆ. ನಮ್ಮ ಸಂವಿಧಾನದ ಶ್ರೇಷ್ಠತೆ ಇರುವುದು ಈ ಸಮನ್ವಯ ಮತ್ತು ಸೌಹಾರ್ದತೆಯಲ್ಲಿ, ಇದನ್ನು ಕಾಪಾಡಲು ಮತ ಮತ್ತು ಧರ್ಮ ನಿಮಿತ್ತ ಮಾತ್ರ, ಮಾನವೀಯ ಸ್ಪಂದನೆ ಮತ್ತು ನೈತಿಕ ಮೌಲ್ಯಗಳು ಮುಖ್ಯವಾಗುತ್ತವೆ. ಹಿಂದೂ ಎನ್ನಲಾಗುವ ಮತಾಚರಣೆಯಲ್ಲಿ ಮತ್ತು ವೈದಿಕಶಾಹಿಯ ಧಾರ್ಮಿಕ ಚಿಂತನೆಗಳಲ್ಲಿ ಈ ಮನುಜ ಕೇಂದ್ರಿತ ನೈತಿಕತೆ ಇಲ್ಲದ ಹೊರತು ಮತಾಂತರವನ್ನು ನಿರ್ಬಂಧಿಸುವ ನೈತಿಕ ಹಕ್ಕೂ ಇರುವುದಿಲ್ಲ.

ಮತೀಯ ಸೌಹಾರ್ದತೆಯ ಸಹಬಾಳ್ವೆಯ ಹಾದಿಗಳನ್ನು ಹಾಳುಗೆಡಹುವ ಮತಾಂಧ ಶಕ್ತಿಗಳಿಗೆ ಮತ್ತಷ್ಟು ಪ್ರಚೋದನ ನೀಡುವ ಮತಾಂತರ ನಿಷೇಧ ಕಾಯ್ದೆ ಅಸಾಂವಿಧಾನಿಕವಷ್ಟೇ ಅಲ್ಲ, ಅನೈತಿಕವೂ ಹೌದು.

Tags: BJPCongress PartyCovid 19ಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಮತಾಂತರ ನಿಷೇಧ ಕಾಯ್ದೆಸಿದ್ದರಾಮಯ್ಯ
Previous Post

ಸೇವಿಸುವ ಆಹಾರದ ಮಾಹಿತಿ ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬರಿಗಿದೆ : ದೆಹಲಿ ಹೈಕೋರ್ಟ್

Next Post

ಹಿಂದುತ್ವದ ಹಿಂʼಬಾಲಕʼರಾದ ಅರವಿಂದ್ ಕೇಜ್ರಿವಾಲ್!

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಹಿಂದುತ್ವದ ಹಿಂʼಬಾಲಕʼರಾದ ಅರವಿಂದ್ ಕೇಜ್ರಿವಾಲ್!

ಹಿಂದುತ್ವದ ಹಿಂʼಬಾಲಕʼರಾದ ಅರವಿಂದ್ ಕೇಜ್ರಿವಾಲ್!

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada