ದಕ್ಷಿಣ ಕನ್ನಡ… ಸುಂದರ ಕಡಲಿನ ಅಲೆ, ಸಮುದ್ರ ತೀರದಲ್ಲಿ ಬೀಸುವ ತಂಪಾದ ಗಾಳಿ, ಮತ್ಸ್ಯಪ್ರಿಯರ ಬಾಯಲ್ಲಿ ನೀರೂರಿಸುವ ಖಾದ್ಯಗಳು, ಯಕ್ಷಗಾನ, ಹುಲಿವೇಷ, ಮಂಗಳೂರು ದಸರಾ, ಕರ್ನಾಟಕದ ಶಿಕ್ಷಣ ಕಾಶಿ ಹೀಗೆ ಹಲವು ವಿಚಾರಗಳಿಗೆ ಈ ಜಿಲ್ಲೆ ಜನಪ್ರಿಯ. ಆದರೆ, ಚುನಾವಣೆಗಳು ಹತ್ತಿರ ಬಂದಾಗ ನಡೆಯುವ ಕೊಳಕು ರಾಜಕಾರಣಕ್ಕೆ ಇಲ್ಲಿನ ಜನರು ಮೂಗು ಮುಚ್ಚಿಕೊಳ್ಳುವಂತಾಗುತ್ತದೆ. ಇದು ಇಂದು ನಿನ್ನೆಯ ಬೆಳವಣಿಗೆಯಲ್ಲ ಕಳೆದ ಕೆಲವು ವರ್ಷಗಳಿಂದ ಕೋಮು ರಾಜಕೀಯದ ಪ್ರಯೋಗ ಶಾಲೆಯಾಗಿ ಮಾರ್ಪಾಡಾಗಿರುವ ದಕ್ಷಿಣ ಕನ್ನಡದ ದುಸ್ಥಿತಿ.
ಸಾಲು ಸಾಲು ಕೊಲೆಗಳು, ಕೊಲೆ ಯತ್ನ, ಅನೈತಿಕ ಪೊಲೀಸ್’ಗಿರಿ, ರಾಜಕೀಯ ನಾಯಕರ ಕೆಸರೆರಚಾಟ ಇವೆಲ್ಲವನ್ನು ಇಲ್ಲಿ ಬುದ್ದವಂತ ಜನರು ಮೌನವಾಗಿ ಸಹಿಸಿಕೊಂಡು ಬಂದಿದ್ದಾರೆ. ತಲೆಗೆ ತಲೆ ತರುವ ಉದ್ರೇಕದಲ್ಲಿ ಸಂಪೂರ್ಣ ಜಿಲ್ಲೆಯನ್ನೇ ಸ್ಮಶಾನ ಮಾಡಲೂ ಹಿಂಜರಿಯದ ಕಟುಕರು ಇಲ್ಲಿದ್ದಾರೆ. ಇವರಿಗೆ ಜಾತಿ ಧರ್ಮದ ಹಂಗಿಲ್ಲ. ತಮ್ಮ ರಾಜಕೀಯ ಬುನಾದಿಯನ್ನು ಭದ್ರವಾಗಿ ನಿರ್ಮಿಸಲು ಇನ್ನೆಷ್ಟು ತಲೆಗಳನ್ನಾದರೂ ಕಡಿಯಲು ಅಥವಾ ತಮ್ಮದೇ ಪಕ್ಷದವರ ಜೀವ ಪಡೆಯಲೂ ಹೇಸದವರಿದ್ದಾರೆ. ಇದು ಕರಾವಳಿಯ ಸುಂದರ (?) ಜಿಲ್ಲೆಯಾದ ದಕ್ಷಿಣ ಕನ್ನಡದ ಅಂತರಂಗ.
ಇವೆಲ್ಲಕ್ಕಿಂತಲೂ ದುಃಖಪಡುವ ವಿಚಾರ ಏನೆಂದರೆ, ಬುದ್ದಿವಂತರ ಜಿಲ್ಲೆಯ ಜನರಿಗೆ ಇದು ಸರ್ವೇ ಸಾಧಾರಣ ಸಂಗತಿ. ಒಂದು ಕೊಲೆಯ ನಂತರ ಉಂಟಾಗುವ ತಳಮಳ ಮತ್ತೊಂದು ಕೊಲೆಯಾಗುವವರೆಗೆ ಮಾತ್ರ ಉಳಿಯುತ್ತದೆ. ಒಂದು ವಾರ/ತಿಂಗಳ ಬಳಿಕ ಮತ್ತೆ ಎಲ್ಲವೂ ಸಾಮಾನ್ಯವಾಗಿಬಿಡುತ್ತದೆ. ಒಂದು ಕೋಮಿನ ವ್ಯಕ್ತಿಯ ಕೊಲೆಯಾದರೆ ಅದರ ಆಕ್ರೋಶ ಮತ್ತೊಂದು ಕೋಮಿನ ವ್ಯಕ್ತಿಯ ಕೊಲೆಯಾಗುವವರೆಗೆ ಮಾತ್ರ. ಆ ಬಳಿಕ ಒಂದು ಕೋಮು ಸಂಪೂರ್ಣವಾಗಿ ನಿರಮ್ಮಳವಾಗುತ್ತದೆ. ಇನ್ನೊಂದು ಕೋಮಿನಲ್ಲಿ ಆಕ್ರೋಶದ ಜ್ವಾಲಾಮುಖಿ ಸ್ಫೋಟವಾಗುತ್ತದೆ.
ಆಶ್ಚರ್ಯಪಡುವಂತಹ ವಿಚಾರ ಅಲ್ಲದಿದ್ದರೂ ಹೇಳುತ್ತೇನೆ, ಈ ಸರಣಿ ಚುನಾವಣೆ ಮುಗಿಯುವ ವೇಳೆಗೆ ಸರಿಯಾಗಿ ಮುಗಿಯುತ್ತದೆ. ದಕ್ಷಿಣ ಕನ್ನಡದ ಪ್ರತಿಯೊಬ್ಬ ವ್ಯಕ್ತಿಗೂ ಈ ಕೋಮು ದ್ವೇಷ ರಾಜಕಾರಣದ ಸ್ಪಷ್ಟವಾದ ಪರಿಚಯ ಇದೆ. ನೇರವಾಗಿ ಅಲ್ಲದಿದ್ದರೂ, ಎಲ್ಲೋ ಮನಸ್ಸಿನಾಳದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೋಮು ದ್ವೇಷದ ಭಾವನೆಗಳನ್ನು ಮುಚ್ಚಿಟ್ಟುಕೊಂಡೇ ಬದುಕುತ್ತಾನೆ. ಗಲಭೆಗಳು ನಡೆದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕವೋ, ವೈಯಕ್ತಿಕ ಚರ್ಚೆಗಳ ಮೂಲಕವೋ ಆ ಭಾವನೆಗಳೆಲ್ಲಾ ಹೊರಬರುತ್ತದೆ. ಇದು ಕರಾವಳಿಯ ಅಸಲಿ ಮುಖ.
ಇಲ್ಲಿ ಕೊಲೆಯಾಗುವವರು ಯಾರು? ಯಾಕೆ ಬಿಲ್ಲವ, ದಲಿತರಂತಹ ಕೆಳ ಜಾತಿಯ ಯುವಕರೇ ಸಾವನ್ನಪ್ಪುತ್ತಿದ್ದಾರೆ? ಇಲ್ಲಿನ ಅನೈತಿಕ ಪೊಲೀಸರಲ್ಲಿ ಬಹುತೇಕರು ಕೆಳ ಜಾತಿಯವರೇ ಯಾಕಿದ್ದಾರೆ? ಅವರು ಮಾತ್ರ ಗೋರಕ್ಷಕರೇ? ಮೇಲ್ವರ್ಗದವರಿಗೆ ಹಿಂದೂ ಧರ್ಮದ ರಕ್ಷಣೆ, ಗೋರಕ್ಷಣೆ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇ? ಇವೆಲ್ಲಾ ಪ್ರಶ್ನೆಗಳನ್ನು ಹಲವು ವರ್ಷಗಳಿಂದ ಕೇಳುತ್ತಾ ಬಂದಿದ್ದರೂ ಯಾರೊಬ್ಬರೂ ಸಮರ್ಪಕ ಉತ್ತರ ಕೊಡಲಿಲ್ಲ. In fact, ಯಾವ ಸಮುದಾಯ ಈ ಪ್ರಶ್ನೆಗಳನ್ನು ಕೇಳಬೇಕಾಗಿತ್ತೋ ಆ ಸಮುದಾಯಗಳು ಧರ್ಮವೆಂಬ ಅಫೀಮಿನ ಅಮಲಿನಲ್ಲಿ ತೇಲಿಕೊಂಡು ಧರ್ಮಕ್ಕಾಗಿ ಪ್ರಾಣ ನೀಡುವ ‘ಜಿಹಾದಿ’ ಮನಸ್ಥಿತಿಯನ್ನು ನೇರವಾಗಿ ಒಪ್ಪಿಕೊಂಡು ಸಂಪೂರ್ಣ ಜಿಲ್ಲೆಯನ್ನೇ ರಣರಂಗವಾಗಿ ಮಾರ್ಪಾಡು ಮಾಡಿದ್ದಾರೆ. ಇದು ಉತ್ಪ್ರೇಕ್ಷೆಯಲ್ಲ. ವಾಸ್ತವ. ಈ ವಾಸ್ತವವನ್ನು ಸಂಪೂರ್ಣವಾಗಿ ಕಡೆಗಣಿಸಿ ಬದುಕಿದ ಕಾರಣಕ್ಕೆ ಇಂದು ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದೆ. ಒಂದು ಕುಟುಂಬ ತನ್ನ ಮನೆಯ ಭರವಸೆಯ ಕಿರಣವನ್ನು ಕಳೆದುಕೊಂಡಿದೆ. ಕೊಳಕು ಕೋಮು ರಾಜಕಾರಣದ ಅಪವಿತ್ರ ಯಜ್ಞಕ್ಕೆ ಆಹುತಿ ನೀಡಲಾಗಿದೆ.

ಈ ಕೊಲೆಗೆ ನೇರವಾಗಿ ಇಲ್ಲಿನ ಧಾರ್ಮಿಕ ಹಾಗೂ ರಾಜಕೀಯ ಪುಢಾರಿಗಳೇ ಹೊಣೆ ಹೊರಬೇಕು. ಕಿಂಚಿತ್ತೂ ಅಳುಕಿಲ್ಲದೆ, ಅದರ ಕೈ ಕಡಿಯಿರಿ, ಕಾಲು ಕಡಿಯಿರಿ, ತಲೆ ಕಡಿಯಿರಿ, ಜಿಲ್ಲೆಗೆ ಬೆಂಕಿ ಹಚ್ಚಿ ಎಂಬ ಪ್ರಚೋದನಾತ್ಮಕ ಭಾಷಣಗಳನ್ನು ಬಿಗಿದು ತಮ್ಮ ಎಸಿ ಕಾರಿನಲ್ಲಿ ಭವ್ಯವಾದ ಬಂಗಲೆಗೆ ತೆರಳುವ ರಾಜಕೀಯ ಹಾಗೂ ಧಾರ್ಮಿಕ ನಾಯಕರು ಎಂದಿಗೂ ಕರಾವಳಿಯ ರಣರಂಗದಲ್ಲಿ ತೊಡೆತಟ್ಟಿ ನಿಂತವರಲ್ಲ. ಇವರು ಇನ್ನೊಬ್ಬರ ಮನೆಯ ಯುವಕರನ್ನು ಮುಂದಿಟ್ಟುಕೊಂಡು ತಮ್ಮ ಬೇಳೆ ಬೇಯಿಸುವ ನಪುಂಸಕ ನಾಯಕರೇ ಹೊರತು ಜನನಾಯಕರಲ್ಲ. ಆದರೂ, ಜಿಲ್ಲೆಯಲ್ಲಿ ಹರಡಿರುವ ಅಫೀಮು ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ, ಈ ನಾಯಕರ ಮಾತುಗಳೇ ಇಲ್ಲಿನ ಯುವಕರಿಗೆ ವೇದ ವಾಕ್ಯ. ಈ ವಿಷ ವರ್ತುಲದಿಂದ ಹೊರಬರುವುದು ಸುಲಭವಲ್ಲ. ಸಂಘ ಪರಿವಾರದ ಕೋಮು ರಾಜಕಾರಣದ ಪ್ರಯೋಗಶಾಲೆ ಬಹುಶಃ ಬೇರೆ ಎಲ್ಲೂ ಇಷ್ಟು ಪರಿಣಾಮಕಾರಿಯಾದ ಸಫಲತೆಯನ್ನು ನೀಡಿಲ್ಲವೇನೋ. ದಕ್ಷಿಣ ಕನ್ನಡ ಮಾತ್ರ ಪ್ರತಿಕ್ಷಣವೂ ಸುಪ್ತ ಜ್ವಾಲಾಮುಖಿಯಂತೆ ಕೋಮು ದ್ವೇಷದ ಬೆಂಕಿಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುತ್ತದೆ. ಸ್ಫೋಟಗೊಂಡಾಗ, ಹಲವು ಕುಟುಂಬಗಳು ಬೀದಿಗೆ ಬಂದಿರುತ್ತವೆ. ಈ ಕುಟುಂಬಗಳ ಕಣ್ಣೀರಿಗೆ ನೇರ ಕಾರಣ ಅದೇ ಇಲ್ಲಿನ ಧಾರ್ಮಿಕ ಹಾಗೂ ರಾಜಕೀಯ ಪುಢಾರಿಗಳೇ ಹೊರತು ಬೇರೆ ಯಾರೂ ಅಲ್ಲ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಇಲ್ಲಿಗೇ ಮುಗಿಯುವುದಿಲ್ಲ. ಈ ಹತ್ಯೆಗೆ ಕಾರಣರಾದವರ ಬಂಧನವಾದರೂ ಸಮಸ್ಯೆ ಕೊನೆಗೊಳ್ಳುವುದಿಲ್ಲ. ಇನ್ನೂ ಚುನಾವಣೆಗೆ ಸರಿಸುಮಾರು ಒಂದು ವರ್ಷ ಬಾಕಿ ಇದೆ. ಸರ್ಕಾರದ ವೈಫಲ್ಯಗಳ ಪಟ್ಟಿ ತುಂಬಾ ಉದ್ದ ಇದೆ. ಆ ವೈಫಲ್ಯಗಳನ್ನು ಮರೆಮಾಚಲು ಇನ್ನೂ ಹಲವು ತಲೆಗಳು ಉರುಳಬೇಕಿವೆ. ಅದು ಯಾರದ್ದು ಎಂಬುದನ್ನು ರಾಜಕೀಯ ನಾಯಕರು ನಿರ್ಧರಿಸುತ್ತಾರೆ. ಬಹುಶಃ, ಅದು ನಿಮ್ಮ ಮನೆ ಮಗನ ತಲೆಯಾಗಿರಲೂಬಹುದು. ಒಂದು ತಲೆ ಹೋದರೆ ಒಂದು ಓಟು ಹೋಗುತ್ತದೆ. ಆದರೆ, ಅದೇ ಅನುಕಂಪದಿಂದ ಸಾವಿರ ಓಟು ಗೆಲ್ಲಬಹುದು. ಚುನಾವಣೆ ಮುಗಿದ ಬಳಿಕದ ನಾಲ್ಕು ವರ್ಷ ಜಿಲ್ಲೆಗೆ ನೆಮ್ಮದಿ. ಐದನೇ ವರ್ಷ ಮತ್ತೆ ಇದೇ ಕೊಲೆಗಳ ಪುನರಾವರ್ತನೆ. ಜಿಲ್ಲೆ ಸಂಪೂರ್ಣವಾಗಿ ಸ್ಮಶಾನವಾಗುವವರೆಗೂ ಈ ವಿಷವರ್ತುಲ ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ತದೆ. ಇದು ಬೇಡವಾದರೆ ಇಲ್ಲಿನ ಕೆಳ ಜಾತಿಯ ಸಮುದಾಯಗಳು ಎಚ್ಚೆತ್ತುಕೊಳ್ಳಬೇಕು. ತಾವು ಹುಟ್ಟಿದ್ದು ಇನ್ನೊಬ್ಬರ ಅಧಿಕಾರದಾಸೆಗೆ ಕೊಲೆಯಾಗಲು ಅಲ್ಲ ಎಂಬುದನ್ನು ಮನಗಾಣಬೇಕು. ಸತ್ತವರ ಮನೆಗೆ ಲಕ್ಷ ಲಕ್ಷ ದೇಣಿಗೆ ನೀಡುವ ಬದಲು, ಬದುಕಿರುವ ಯುವಕರ ವೃತ್ತಿಪರ ಸಬಲೀಕರಣಕ್ಕಾಗಿ ಹೋರಾಡಬೇಕು. ಇಲ್ಲವಾದರೆ, ಜಿಲ್ಲೆಯ ಪ್ರತಿ ಮನೆಯಲ್ಲೂ ಚಿತೆ ಉರಿಯುತ್ತದೆ. ಪ್ರತಿ ಚಿತೆಯಿಂದಲೂ ಸಾವಿರ ಓಟುಗಳು ಲಭಿಸುತ್ತವೆ.



