ಭಾರತದಲ್ಲೂ ಮುಟ್ಟಿನ ರಜೆ ನೀಡಬೇಕು ಎಂದು ಕೂಗು ವ್ಯಾಪಕವಾಗಿರುವ ನಡುವೆಯೇ ಆಂಧ್ರಪ್ರದೇಶ ಸರ್ಕಾರವು ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ 7 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ಸುಮಾರು 10 ಲಕ್ಷ ಹುಡುಗಿಯರಿಗೆ ಪ್ರತಿ ತಿಂಗಳು 10 ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ನೀಡುವ “ಸ್ವೇಚ್ಛಾ” ಯೋಜನೆಯನ್ನು ಪ್ರಾರಂಭಿಸಿದೆ.
ಕಳೆದ ವರ್ಷ zomato ಸಂಸ್ಥೆ ತನ್ನ ಮಹಿಳಾ ಸಿಬ್ಬಂದಿಗಳಿಗೆ ಮುಟ್ಟಿನ ರಜೆಯನ್ನು ನೀಡಲಾಗುವುದು ಎಂದು ಘೋಷಿಸಿ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈಗಾಗಲೇ ಹಲವು ಪಾಶ್ಚಾತ್ಯ ದೇಶಗಳಲ್ಲಿ ಮುಟ್ಟಿನ ರಜೆ ಜಾರಿಯಲ್ಲಿದ್ದು ಭಾರತದಲ್ಲೂ, ಕನಿಷ್ಠ ಸರ್ಕಾರಿ ಮಟ್ಟದಲ್ಲಾದರೂ ಮುಟ್ಟಿನ ರಜೆ ನೀಡಬೇಕೆಂಬ ಧ್ವನಿ ಎದ್ದಿತ್ತು. ಅದರ ಜೊತೆಗೆ ಉದ್ಯೋಗಸ್ಥ ಮಹಿಳೆಯರಿಗೆ ಕನಿಷ್ಠ ಮುಟ್ಟಿನ ದಿನಗಳ ನೈರ್ಮಲ್ಯದ ಬಗ್ಗೆ ಅರಿವಾದರೂ ಇದೆ, ಆದರೆ ಈ ದೇಶದ ಅಸಂಖ್ಯಾತ ಹದಿಹರೆಯದ ಹೆಣ್ಣು ಮಕ್ಕಳಿಗೆ ಆ ದಿನಗಳಲ್ಲಿ ಕಾಪಾಡಿಕೊಳ್ಳಬೇಕಾದ ನೈರ್ಮಲ್ಯದ ಬಗ್ಗೆ ಗೊತ್ತೇ ಇಲ್ಲ, ಅವರಿಗೆಲ್ಲಾ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎನ್ನುವ ಕೂಗೂ ಎದ್ದಿತ್ತು.

ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಒದಗಿಸುವ ಯೋಜನೆಗಳು ಜಾರಿಯಲ್ಲಿದೆ. ಇದೀಗ ಆಂದ್ರಪ್ರದೇಶ ಸರ್ಕಾರವೂ ಈ ಯೋಜನೆಯನ್ನು ಜಾರಿಗೆ ತಂದಿದ್ದು “ದೇಶದ ಸುಮಾರು 23 ಪ್ರತಿಶತ ಹುಡುಗಿಯರು ತಮ್ಮ ಮಾಸಿಕ ಋತುಸ್ರಾವದ ಅವಧಿಯಲ್ಲಿ ಶಾಲೆ ಮತ್ತು ಕಾಲೇಜುಗಳಿಂದ ದೂರ ಉಳಿದಿದ್ದಾರೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಈ ಪರಿಸ್ಥಿತಿಯನ್ನು ಬದಲಿಸುವ ಸಲುವಾಗಿ, ನಮ್ಮ ಸರ್ಕಾರವು ನಾಡು-ನೆಡು ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ಶೌಚಾಲಯಗಳ ಶುಚಿತ್ವವನ್ನು ಸುಧಾರಿಸುವಂತಹ ಹಲವಾರು ಕ್ರಮಗಳನ್ನು ಆರಂಭಿಸಿದೆ ಮತ್ತು ಈಗ ಸ್ವೇಚ್ಛಾ ಯೋಜನೆಯನ್ನು ಜಾರಿಗೆ ತಂದಿದೆ” ಎಂದು ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಹೇಳಿದ್ದಾರೆ.
ಈ ಯೋಜನೆಯ ಪ್ರಕಾರ ಪ್ರತಿ ವಿದ್ಯಾರ್ಥಿಯು ಪ್ರತಿ ವರ್ಷ ಉತ್ತಮ ಗುಣಮಟ್ಟದ 120 ನ್ಯಾಪ್‌ಕಿನ್‌ಗಳನ್ನು ಪಡೆಯಲಿದ್ದು ರಾಜ್ಯ ಸರ್ಕಾರವು ಇದಕ್ಕಾಗಿ 32 ಕೋಟಿ ರೂ. ಗಳನ್ನು ಮೀಸಲಿಡಲಿದೆ. ಸರ್ಕಾರದ ಸ್ವಚ್ಛ ಆಂಧ್ರ ಪ್ರದೇಶ (CLAP) ಅಡಿಯಲ್ಲಿ ಅಕ್ಟೋಬರ್ 2 ರಂದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉತ್ತಮ ನೈರ್ಮಲ್ಯ ಸೇವೆಗಳನ್ನು ಒದಗಿಸಲು ಆರಂಭವಾದ ಕಾರ್ಯಕ್ರಮಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಸ್ವೇಚ್ಛಾ ಕಾರ್ಯಕ್ರಮದ ಅಡಿಯಲ್ಲಿ, ಪ್ರತಿ ತಿಂಗಳಿಗೊಮ್ಮೆ ಮಹಿಳಾ ಶಿಕ್ಷಕರು, ಎಎನ್‌ಎಂಗಳು ಮತ್ತು ಮಹಿಳಾ ಪೊಲೀಸರಿಂದ ವಿದ್ಯಾರ್ಥಿಗಳಿಗೆ ಮುಟ್ಟಿನ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಸಿಎಂ ಹೇಳಿದರು. ಮಹಿಳಾ ಸುರಕ್ಷತೆಗಾಗಿ ಸರ್ಕಾರವು ತಂದಿರುವ ‘ದಿಶಾ’ ಆಪ್ ಬಗ್ಗೆಯೂ ಶಾಲಾ ಬಾಲಕಿಯರಿಗೂ ಅರಿವು ಮೂಡಿಸಲಾಗುವುದು, ಜಿಲ್ಲಾ ಮಟ್ಟದಲ್ಲಿ ಈ ಕಾರ್ಯಕ್ರಮಗಳನ್ನು ಜಾಯಿಂಟ್ ಕಲೆಕ್ಟರ್ ಮೇಲ್ವಿಚಾರಣೆ ಮಾಡಲಿದ್ದಾರೆ ಮತ್ತು ಪ್ರತಿ ಶಾಲೆಯಲ್ಲಿ ಮಹಿಳಾ ಶಿಕ್ಷಕರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸರ್ಕಾರವು ನಾಡು-ನೆಡು ಕಾರ್ಯಕ್ರಮದ ಮೂಲಕ 56,703 ಶಾಲೆಗಳ ಮತ್ತು ಹಾಸ್ಟೆಲ್‌ಗಳಲ್ಲಿನ ಶೌಚಾಲಯಗಳಿಗೆ ನೀರಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ನವೀಕರಿಸಲಿದೆ. ಮೊದಲ ಹಂತದಲ್ಲಿ 15,715 ಶಾಲೆಗಳನ್ನು ನವೀಕರಿಸಲಾಗಿದೆ ಮತ್ತು ಉಳಿದ ಎಲ್ಲಾ ಶಾಲೆಗಳನ್ನು 2023 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಿಎಂ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ತಾನೇತಿ ವನಿತಾ ಅವರು ಖಾಸಗಿ ಕಂಪನಿಗಳಿಂದ ನ್ಯಾಪ್ಕಿನ್‌ಗಳನ್ನು ಖರೀದಿಸಲಾಗುತ್ತಿದೆ ಮತ್ತು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಗೆ ಅಗತ್ಯವಿರುವ ಸ್ಟಾಕ್‌ಗಳನ್ನು ಈಗಾಗಲೇ ಶಾಲೆಗಳಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.













