ಇತ್ತೀಚೆಗಷ್ಟೇ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಂಪುಟ ರಚನೆಯಾಯ್ತು. ಕೇಂದ್ರ ಬಿಜೆಪಿ ನಾಯಕರ ಆದೇಶದ ಮೇರೆಗೆ ಒಂದು ಹಂತಕ್ಕೆ ಅಳೆದು ತೂಗಿ ಬಸವರಾಜ್ ಬೊಮ್ಮಾಯಿ ಖಾತೆ ಹಂಚಿಕೆ ಮಾಡಿದರು. ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿ ಹಿರಿಯ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಸಚಿವ ಆನಂದ್ ಸಿಂಗ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಕೇಳಿದ್ದು ಒಂದು, ಇವರು ನೀಡಿದ್ದೊಂದು ಖಾತೆ ಎಂದು ಸಿಎಂ ವಿರುದ್ಧ ಆನಂದ್ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ.
ನಾನು ಕೇಳಿದ್ದ ಖಾತೆಯನ್ನು ಸಿಎಂ ಬೊಮ್ಮಾಯಿಯವರು ಕೊಟ್ಟಿಲ್ಲ. ನನಗೊಂದು ಇಂಥದ್ದೇ ಉತ್ತಮ ಖಾತೆ ಕೊಡಿ ಎಂದು ಕೇಳಿದ್ದೆ. ನಾನು ಬಯಸಿದ್ದೇ ಬೇರೆ, ಸಿಕ್ಕಿದ್ದೇ ಬೇರೆ. ಈ ಬಗ್ಗೆ ಬಸವರಾಜ್ ಬೊಮ್ಮಾಯಿ ಜೊತೆಗೆ ಮಾತಾಡುತ್ತೇನೆ ಎಂದು ಖಾತೆ ಹಂಚಿಕೆ ಬೆನ್ನಲ್ಲೇ ಆನಂದ್ ಸಿಂಗ್ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದರು. ಇದಾದ ನಂತರ ನನ್ನ ಆಪ್ತರೊಂದಿಗೆ ಸಮಾಲೋಚನೆ ನಡೆಸಿ ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದಿದ್ದರು. ಈ ಮೂಲಕ ನನ್ನ ನಿರೀಕ್ಷೆಯ ಖಾತೆ ಕೊಟ್ಟಿಲ್ಲ ಎಂದರೆ ರಾಜೀನಾಮೆ ನೀಡೋಕು ಸಿದ್ಧ ಎಂದು ಸಂದೇಶ ಸಾರಿದ್ದರು. ಈಗ ಆನಂದ್ ಸಿಂಗ್ ಭೇಟಿ ಬಳಿ ಬಸವರಾಜ್ ಬೊಮ್ಮಾಯಿಗೆ ಇದು ತಲೆನೋವಾಗಿ ಪರಿಣಮಿಸಿದೆ.
ಸರ್ಕಾರ ರಚನೆಗೆ ಮೊದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದೇನೆ. ನನಗೆ ಸರ್ಕಾರದ ಮೇಲೆ ಭರವಸೆ ಇದೆ. ನನಗೆ ನಾನು ಕೇಳಿದ ಖಾತೆ ಕೊಡಿ. ನನಗೆ ಪ್ರವಾಸೋದ್ಯಮ, ಪರಿಸರ ಮತ್ತು ಪರಿಸರ ವಿಜ್ಞಾನ ಖಾತೆ ಬೇಡ. ಇಲ್ಲದೇ ಹೋದಲ್ಲಿ ನನ್ನ ತೀರ್ಮಾನ ನಾನು ಮಾಡುತ್ತೇನೆ ಎಂದು ಸಿಎಂಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ನನಗೇ ಮೊದಲೇ ಪವರ್ಫುಲ್ ಖಾತೆ ನೀಡುವುದಾಗಿ ಭರವಸೆ ನೀಡಿದ್ದೀರಿ. ರಾಜ್ಯದ ಪ್ರಬಲ ಇಲಾಖೆಗಳಾದ ಇಂಧನ, ಲೋಕೋಪಯೋಗಿ, ಗೃಹ ಅಥವಾ ಜಲಸಂಪನ್ಮೂಲ ಇಲಾಖೆ ನೀಡುವೆ ಎಂದು ಹೇಳಿದ್ರಿ. ಈಗ ನನಗೆ ಪರಿಸರ ಇಲಾಖೆ ನೀಡಿದ್ದೀರಿ ಎಂದು ಬೊಮ್ಮಾಯಿಗೆ ಆನಂದ್ ಸಿಂಗ್ ಪ್ರಶ್ನಿಸಿದ್ದಾರೆ. ಈ ಬೆನ್ನಲ್ಲೇ ಸಿ.ಸಿ ಪಾಟೀಲ್ ಕೂಡ ಸಿಎಂ ಬೊಮ್ಮಾಯಿರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ವೇಳೆ ಸಿಸಿ ಪಾಟೀಲ್ಗೆ ಆನಂದ್ ಸಿಂಗ್ ರಾಜೀನಾಮೆ ನೀಡದಂತೆ ನೋಡಿಕೊಳ್ಳಿ, ನಾನು ಏನಾದ್ರೂ ಒಂದು ಮಾಡುತ್ತೇನೆ ಎಂದಿದ್ದಾರಂತೆ.

ಹಾಗಾದ್ರೆ ಸಿಎಂ ಮುಂದಿರುವ ತಂತ್ರಗಳೇನು?
- ಲೋಕೋಪಯೋಗಿ ಖಾತೆ ಬದಲಾವಣೆ ಮಾಡುವ ಸಾಧ್ಯತೆ ಇದೆ.
- ಸಿ.ಸಿ ಪಾಟೀಲ್ ಲೋಕೋಪಯೋಗಿ ಖಾತೆ ನಿಭಾಯಿಸುತ್ತಿದ್ದಾರೆ.
- ಇಂಧನ ಖಾತೆ ಬದಲಾವಣೆ ಮಾಡೋಕೆ ಆಗಲ್ಲ, ಸುನೀಲ್ ಕುಮಾರ್ ಹೊಸ ಮುಖ, ಜೊತೆಗೆ ಸಂಘ ಪರಿವಾರದಿಂದ ಬಂದವರು.
- ಜಲಸಂಪನ್ಮೂಲ ಖಾತೆ ಬದಲಾವಣೆ ಮಾಡಿದರೆ, ಹಿರಿಯ ನಾಯಕ ಗೋವಿಂದ ಕಾರಜೋಳಗೆ ಅಸಮಾಧಾನ ಆಗುವ ಸಾಧ್ಯತೆ ಇದೆ.
- ಡಿಸಿಎಂ ಸ್ಥಾನದಿಂದ ತೆಗೆದಿರುವ ಗೋವಿಂದ ಕಾರಜೋಳರಿಗೆ ಬಿ. ಗ್ರೇಡ್ ಇಲಾಖೆ ಕೊಟ್ಟರೆ ಹಿಂದುಳಿದ ಸಮುದಾಯಕ್ಕೆ ಬೇರೆ ತರನಾದ ಸಂದೇಶ ಹೋಗುತ್ತೆ.
- ಗೃಹ ಇಲಾಖೆಯಲ್ಲಿ ಅರಗ ಜ್ಞಾನೇಂದ್ರ ಈಗಷ್ಟೇ ಕೆಲಸ ಆರಂಭಿಸಿದ್ದಾರೆ. ಯಡಿಯೂರಪ್ಪ ಸಮಕಾಲೀನರು, ಜೊತೆಗೆ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಸಿದವರು.
- ಇವೆಲ್ಲವು ನೋಡಿದರೆ ಲೋಕೋಪಯೋಗಿ ಇಲಾಖೆಯೇ ಆನಂದ್ ಸಿಂಗ್ಗೆ ಸೂಕ್ತ.
- ಹಾಗಾಗಿ ಸಿಸಿ ಪಾಟೀಲ್ ಖಾತೆ ಬದಲಿಸಿ, ಲೋಕೋಪಯೋಗಿ ಖಾತೆ ಆನಂದ್ ಸಿಂಗ್ಗೆ ನೀಡುವುದು.