- ನಾ ದಿವಾಕರ
40 ವರ್ಷಗಳ ಅನಂತರ ಕ್ಷಮೆ ಕೋರುವಾಗಲೂ ಹೃದಯ ನೋವಿನಿಂದ ಕಂಪಿಸುತ್ತದೆ ಅಮ್ಮಾ
ಪ್ರತಿವರ್ಷವೂ ಜೂನ್ 5 ಸಮೀಪಿಸುತ್ತಿದ್ದಂತೆ ನನ್ನ ಮನಸ್ಸು ಹಿಂದಕ್ಕೆ ಚಲಿಸುತ್ತದೆ, ಎದೆಬಡಿತ ಮೃದುವಾಗುತ್ತದೆ, ಅಂತರಂಗದ ಯಾವುದೋ ನೋವು ಮತ್ತೆಮತ್ತೆ ಮೇಲೆದ್ದು ಬಂದು, ನಿತ್ಯ ಬದುಕಿನ ಕ್ಷಣಗಳನ್ನು ತಲ್ಲಣಗೊಳಿಸುತ್ತದೆ. ನನ್ನ ಬದುಕಿನಿಂದ ನೀನು ನಿರ್ಗಮಿಸಿ ಇಂದಿಗೆ 33 ವರ್ಷಗಳು ತುಂಬುತ್ತವೆ (ಜೂನ್ 5 1991). ಇಷ್ಟೂ ವರ್ಷಗಳಲ್ಲಿ ನನ್ನ ಬೆಳವಣಿಗೆಯನ್ನು ನೋಡಿ ಅತೀವ ಹರುಷ ವ್ಯಕ್ತಪಡಿಸಬಹುದಾಗಿದ್ದ ಏಕೈಕ ವ್ಯಕ್ತಿ ನೀನಾಗಿದ್ದೆ ಎಂಬ ಸುಡುವಾಸ್ತವ ಎದೆಗೆ ತಟ್ಟಿದಾಗ ಆಂತರ್ಯದ ನೋವು ಮತ್ತಷ್ಟು ಉಲ್ಬಣಿಸುತ್ತದೆ. ಆದರೂ, ಅಮ್ಮ ಬೇರಾವ ಸಾಂಪ್ರದಾಯಿಕ ರೀತಿಯಲ್ಲೂ ನಿನ್ನನ್ನು ನೆನೆಯಲಾಗದ ನನಗೆ ಕೆಲವು ಅಕ್ಷರಗಳಷ್ಟೇ ತುಸು ನೆಮ್ಮದಿ ಕರುಣಿಸುತ್ತದೆ. ಈ ಅಕ್ಷರಗಳ ಪ್ರತಿಯೊಂದು ಬಿಂದುವಿನಲ್ಲೂ ನಿನ್ನ ಮಡಿಲ ಪ್ರೀತಿಯ ತುಣುಕುಗಳು ಅಡಗಿರುತ್ತವೆ ಅಮ್ಮ.
1981ರಲ್ಲಿ ಅನಿಶ್ಚಿತ ಸಂಕಷ್ಟದ ದಿನಗಳ ನಡುವೆ ನೀನು ಮೌನವಾಗಿ ಅನುಭವಿಸಿದ ಯಾತನೆಗೆ ನೇರ ಸಾಕ್ಷಿಯಾಗಿರುವ ನನಗೆ 43 ವರ್ಷಗಳ ಬಳಿಕ ಆ ಸಮಯದ ಘಟನೆಗಳಿಗಾಗಿ ನಿನ್ನ ಬಳಿ ಕ್ಷಮೆ ಯಾಚಿಸುವ ಮನಸ್ಸಾಗಿದೆ ಅಮ್ಮ. ಏಕೆ ಎಂದು ಕೇಳದಿರು. ಬಹುಶಃ ತದನಂತರದ ಸಮಾಧಾನಕರ ಬದುಕು ನನ್ನಿಂದ ಈ ಕ್ಷಮಾಯಾಚನೆಯ ಆಲೋಚನೆಯನ್ನು ದೂರಮಾಡಿದ್ದಿರಬಹುದು. ನಾನೇ ಏಕೆ ಕ್ಷಮೆ ಕೇಳಬೇಕು ? ಏಕೆಂದರೆ ನಿನ್ನನ್ನು ಸಂಕಷ್ಟದ ದಡದಿಂದ ನಿರ್ಗತಿಕತೆಯ ಕೂಪಕ್ಕೆ ದೂಡಿದ ಅಣ್ಣ ಈಗ ಬದುಕಿಲ್ಲ. ಆ ಸಮಯದಲ್ಲಿ ನನಗೆ ಹೆಗಲಾಗಿದ್ದ ಅಣ್ಣನೂ ಈಗಿಲ್ಲ. ನೈತಿಕವಾಗಿ ಈ ಜವಾಬ್ದಾರಿ ಹೊರಬೇಕಾದ ಇಬ್ಬರು ಸೋದರಿಯರಲ್ಲಿ ಒಬ್ಬಳು ಮಗನಿಂದಲೇ ವರ್ಜಿಸಲ್ಪಟ್ಟ ಅಸಹಾಯಕ ಸ್ಥಿತಿಯಲ್ಲಿದ್ದಾಳೆ. ಮತ್ತೊಬ್ಬಳು ಇಟ್ಟ ಹೆಜ್ಜೆಗಳನ್ನೇ ಮರೆತಂತಿದ್ದಾಳೆ. ಇನ್ನೊಬ್ಬಳು ನನ್ನ ಮಾತುಗಳಿಗೆ ಸಾಕ್ಷಿಯಾಗುತ್ತಾಳೆ.
ಹಿಂತಿರುಗಿ ನೋಡೋಣವೇ ಅಮ್ಮ ?
1981ರ ಅಗಸ್ಟ್-ಸೆಪ್ಟಂಬರ್‌ನಲ್ಲಿ ನಿನ್ನ ಹೆಗಲಿಗೆ ಭಾರವಾಗಿದ್ದ ಜೀವಗಳು ಐದು. ನಾವು ಮೂವರು ಸೋದರರು. ಸೋದರಿಯರು ಇಬ್ಬರು. ಐವರಲ್ಲಿ ಒಬ್ಬನಿಗೆ ಮಾತ್ರ ವರಮಾನ. ಮನೆಯಲ್ಲಿ ಅಕ್ಕಿ ಇದ್ದರೆ ಅನ್ನ ಇಲ್ಲವಾದರೆ ನೀರು ಎಂಬ ಸ್ಥಿತಿ. ಕೈಯ್ಯಲ್ಲಿ ಕೊಂಚ ಕಾಸಿದ್ದರೆ ತರಕಾರಿ-ಬೇಳೆ ಇಲ್ಲವಾದರೆ ತಿಳಿಮಜ್ಜಿಗೆ ಅನ್ನವೇ ಕೂಳು. ಅಪ್ಪ ಹೋದ ನಂತರ ನಿನ್ನನ್ನು ಕಾಡುತ್ತಿದ್ದ ಮಧುಮೇಹದ ಬಗ್ಗೆ ಯಾರಿಗೂ ಚಿಂತೆ ಇರಲಿಲ್ಲ. ಇದ್ದರೂ ಏನು ಮಾಡಲು ಸಾದ್ಯವಿತ್ತು ? ಆದರೂ ನಿನ್ನ ಗಟ್ಟಿ ಮನಸ್ಸು, ದೃಢ ನಿಶ್ಚಯ ನಮ್ಮೆಲ್ಲರ ನಾವೆಯನ್ನು ಸಾಗಿಸುತ್ತಿದ್ದುದು ವಾಸ್ತವ. ದ್ವಿತೀಯ ಬಿಕಾಂ ಕಾಲೇಜಿಗೆ ಹೋಗದೆಯೇ ಶೇ 58ರಷ್ಟು ಅಂಕ ಪಡೆದಿದ್ದ ನನಗೆ 1982ರ ಅಂತಿಮ ಪದವಿ ಪರೀಕ್ಷೆಯಲ್ಲಿ ಕನಿಷ್ಠ ಪಾಸಾಗುವ ಭರವಸೆಯಂತೂ ಇತ್ತು. ಇನ್ನ ಆಕಾಂಕ್ಷೆಯೂ ಅದೇ ಆಗಿತ್ತು.
“ ನೀನಾದರೂ ಪದವಿ ಪಡೆದು ನಮ್ಮನ್ನು ದಡ ಸೇರಿಸು ಮಗೂ ” ಎಂಬ ನಿನ್ನ ಮಾತುಗಳು ಇಂದಿಗೂ ಗುನುಗುನಿಸುತ್ತವೆ. ಆದರೆ 1981ರ ಸೆಪ್ಟಂಬರ್ ಮೊದಲವಾರ, ಊರಿನ ಕೆರೆಕಟ್ಟೆ ಒಡೆದು ಪ್ರವಾಹ ಸ್ಥಿತಿ ಉಂಟಾಗುವ ಮುನ್ನವೇ ನಮ್ಮ ಮನೆಯಲ್ಲಿ ಸಂಭವಿಸಿದ ಕಂಪನ ನಿನ್ನನ್ನು ಅಲುಗಾಡಿಸಿಬಿಟ್ಟಿತು. ನನ್ನನ್ನು ಅನಾಥ ಪ್ರಜ್ಞೆಗೆ ದೂಡಿಬಿಟ್ಟಿತ್ತು. ಐದಾರು ವರ್ಷಗಳ ಕಾಲ ನಮ್ಮೆಲ್ಲರಿಗೆ ಆಸರೆಯಾಗಿದ್ದ ಅಣ್ಣ, ರವಿ ತನ್ನ ಹೆಗಲನ್ನು ಕೊಡವಿಬಿಟ್ಟ. ಒಂದೇ ಏಟಿಗೆ ನಾವೆಲ್ಲರೂ ತಪತಪನೆ ನೆಲಕ್ಕೆ ಬಿದ್ದಂತಾಯಿತು. ನೀನು, ಇಬ್ಬರು ಅಕ್ಕಂದಿರು, ನಾನು ಮತ್ತು ಸೋದರ ನಾಗರಾಜ ಹೊಸಕೋಟೆಗೆ ರವಾನೆಯಾಗುವಂತಾಯಿತು. ಈ ನಿರ್ಧಾರ ತಳೆದ ಅಣ್ಣನಿಗೆ ನನ್ನ ಪದವಿ ಪರೀಕ್ಷೆ-ವ್ಯಾಸಂಗ ಮುಖ್ಯ ಅಂಶವಾಗಲೇ ಇಲ್ಲ. ನಾಳಿನ ದಿನಗಳನ್ನೇ ಎದುರುನೋಡುತ್ತಿದ್ದ ನನಗಾಗಲೀ ನಿನಗಾಗಲೀ ಏಕೆ ಎಂದು ಪ್ರಶ್ನಿಸುವ ಧ್ವನಿಯೂ ಉಡುಗಿಹೋಗಿತ್ತೇನೋ, ಅಲ್ಲವೇನಮ್ಮಾ ?
ನಾವೆಲ್ಲರೂ ಹೊಸಕೋಟೆಗೆ ಶಿಫ್ಟ್ ಆದೆವು. ಅಲ್ಲಿ ಪೆಟ್ರೋಲ್ ಬಂಕ್ ಒಂದರಲ್ಲಿ ನಾನು ಮತ್ತು ಸೋದರ ನೌಕರಿ ಮಾಡುವ ಒಪ್ಪಂದ, ಮಾಸಿಕ 250 ರೂಗಳ ಸಂಬಳಕ್ಕೆ. ಅದಕ್ಕೆ ತಕ್ಕಂತಹ ಒಂದು ಪುಟ್ಟ ಮನೆ. ಅಣ್ಣ ರವಿ ಬಂಗಾರಪೇಟೆಯಲ್ಲೇ ಉಳಿದ. ಸೋದರ ನಾಗರಾಜ ಹೃದ್ರೋಗಿಯಾಗಿದ್ದರಿಂದ ನೈಟ್ ಶಿಫ್ಟ್ ಮಾಡುವ ಜವಾಬ್ದಾರಿ ನನ್ನದೇ ಆಯಿತು. ಹೋದಕೂಡಲೇ ನೌಕರಿಯೇನೋ ಪಕ್ಕಾ ಆಯಿತು. ವಾಹನಗಳಿಗೆ ಪಟ್ರೋಲ್-ಡೀಸೆಲ್ ಹಾಕುವುದರಿಂದ ಹಿಡಿತು, ಗಲ್ಲಾಪೆಟ್ಟಿಯನ್ನು ನಿರ್ವಹಿಸಿ, ಬ್ಯಾಂಕಿಗೆ ಹಣ ಸಂದಾಯ ಮಾಡುವ ಹೊಣೆಯೂ ನಮ್ಮದೇ ಆಯಿತು. ಬಹುಶಃ ಒಂದೂವರೆ ತಿಂಗಳು ಈ ಕೆಲಸ ಮಾಡಿದೆವು ಎನಿಸುತ್ತದೆ. ನವಂಬರ್ 25 ನಾನು ಮನೆಗೆ ದಿನಸಿ ತರಲು ಬಂಗಾರಪೇಟೆಗೆ ಹೋದೆ ಅಂದು ರಾತ್ರಿ ಅಣ್ಣ ನಾಗರಾಜ ನೈಟ್ ಶಿಫ್ಟ್ ಇರಬೇಕಿತ್ತು.
26ರ ಮಧ್ಯಾಹ್ನ ನಾನು ಹಿಂದಿರುಗುವಷ್ಟರಲ್ಲಿ ಅನಾಹುತ ಸಂಭವಿಸಿತ್ತು. ರಾತ್ರಿ ಸಂಗ್ರಹವಾದ ಹಣವನ್ನು ಬ್ಯಾಂಕಿಗೆ ಜಮಾಮಾಡುವ ಜವಾಬ್ದಾರಿಯನ್ನು ಗೆಳೆಯನೊಬ್ಬನಿಗೆ ನೀಡುವ ಮೂಲಕ ಅಣ್ಣ ನಾಗರಾಜ ನಮ್ಮ ಬದುಕಿನ ಮತ್ತೊಂದು ದುರಂತ ಪಯಣಕ್ಕೆ ನಾಂದಿ ಹಾಡಿದ್ದ. ಆ ವಂಚಕ ಗೆಳೆಯ (ಅವನ ಹೆಸರು ದ್ವಾರಕಾನಾಥ್ ಅಲಿಯಾಸ್ ಗೋಪಿನಾಥ್ ಅಲಿಯಾಸ್ ಕಾಶೀನಾಥ್) ಹಣ ತೆಗೆದುಕೊಂಡು ಪರಾರಿಯಾಗಿದ್ದ. ಸಂಜೆಯ ವೇಳೆಗೆ ಮಾಲೀಕರ ಮುಂದೆ ನಮ್ಮಿಬ್ಬರ ವಿಚಾರಣೆ, ಕೆಲಸದಿಂದ ವಜಾ, ದುಡಿದ ದಿನಗಳಿಗೆ ಕೊಡಬೇಕಾಗಿದ್ದ ಕೂಲಿಗೂ ಕೊಕ್. ಬರಿಗೈಯ್ಯಲ್ಲಿ ಮನೆಗೆ ಹಿಂದಿರುಗಿ ನಿನಗೆ ನಡೆದುದೆಲ್ಲವನ್ನೂ ವಿವರಿಸಿದಾಗ ನಿನ್ನಿಂದ ಬಂದ ಒಂದೇ ಮಾತು “ ನಾಳೆಯಿಂದ ಏನು ಮಾಡೋದು ಮಗೂ !!! ”.
(ಸಂಕಷ್ಟ)2 X (ಬಡತನ)2 = ಜೀವನ
ಮನೆ ಬಾಡಿಗೆಗೆ ನಾಮ ಹಾಕಿ, ಇದ್ದ ದಿನಸಿಯನ್ನು ಹೊಟ್ಟೆಗಿಳಿಸಿಕೊಳ್ಳುವುದನ್ನು ಬಿಟ್ಟರೆ ಅನ್ಯ ಮಾರ್ಗವೇ ಇರಲಿಲ್ಲ. ಇದೇ ವೇಳೆ ನಮ್ಮೊಡನಿದ್ದ ಅಕ್ಕಂದಿರ ಪೈಕಿ ಹಿರಿಯಳು ನಾಪತ್ತೆಯಾದಳು. ಅವಳ ಶೋಧಕ್ಕೆ ಅಗತ್ಯವಾದ ದೈಹಿಕ ಶಕ್ತಿಯಾಗಲೀ, ಹಣಕಾಸಿನ ನೆರವಾಗಲೀ ಇರಲಿಲ್ಲ. ಹುಡುಕಾಟದಲ್ಲಿ ದೇಹ ದಣಿಯಿತು. ಮನಸ್ಸು ಖಿನ್ನವಾಯಿತು. ಬಂಗಾರಪೇಟೆಯಲ್ಲಿದ್ದ ಅಣ್ಣನೂ ನಾಪತ್ತೆಯಾಗಿದ್ದ. ಐದು ಹೊಟ್ಟೆಗಳನ್ನು ಸಲಹುವ ನಿನ್ನ ಜವಾಬ್ದಾರಿಗೆ ನೆರವಾದದ್ದು ದೊಡ್ಡ ಮಗಳ ಮದುವೆಯಲ್ಲಿ ಕೊಂಡಿದ್ದ ಕಂಚಿ ರೇಷ್ಮೆ ಸೀರೆ. ಕಲಾಸಿಪಾಳ್ಯಂನ ಒಬ್ಬ ಮಾರವಾಡಿ ಅದಕ್ಕೆ 300 ರೂ ಕೊಟ್ಟ. “ ಎಷ್ಟು ತೂಕ ಇದೆ ಮರಿ ಈ ಸೀರೆ ಯಾಕೆ ಮಾರಾಟ ಮಾಡ್ತಿದೀರಿ ? ” ಅವನ ಪ್ರಶ್ನೆಗೆ ನಮ್ಮ ಹಸಿದ ಹೊಟ್ಟೆ ಏನು ಉತ್ತರಿಸಲಾಗುತ್ತಿತ್ತು. ನಾನು ಅಣ್ಣ ನಾಗರಾಜ ಹೊಸಕೋಟೆಯಿಂದ ಕೆಆರ್ ಪುರಕ್ಕೆ ಸಾಕಷ್ಟು ಓಡಾಡಿ ಅಲ್ಲಿದ್ದ ಎಲ್ಲ ಕಾರ್ಖಾನೆಗಳ ಗೇಟನ್ನೂ ತಟ್ಟಿದೆವು. ಆದರೆ ನೌಕರಿ ಸಿಕ್ಕಲಿಲ್ಲ. ಹತ್ತಾರು ಕಿಲೋಮೀಟರ್ ನಡಿಗೆಯಿಂದ ಹಸಿದಿದ್ದ ದೇಹ ದಣಿಯಿತಷ್ಟೇ. ಅದು ಹೇಗೋ ಪ್ರಾಣ ಉಳಿಯಿತು. ರೇಷ್ಮೆ ಸೀರೆಯ ಹಣವೂ ಖರ್ಚಾದ ಮೇಲೆ ಉಳಿದದ್ದೇನು ? ನೆನಪಿದೆಯೇನಮ್ಮಾ ?
ಬಾಡಿಗೆ ನೀಡಲಾಗದೆ ಮನೆ ಖಾಲಿ ಮಾಡಬೇಕಾಯಿತು. ಆದರೆ ಎಲ್ಲಿಗೆ ಹೋಗುವುದು ? ಎಲ್ಲೂ ಸೂರು ಕಾಣದಂತಹ ಭೀಕರ ಪರಿಸ್ಥಿತಿ. ಕೂಳೂ ಇಲ್ಲದೆ, ಸೂರೂ ಇಲ್ಲದೆ ಬಹುಮಟ್ಟಿಗೆ ರಸ್ತೆಗೆ ಬಿದ್ದ ಕುಟುಂಬವನ್ನು ಎತ್ತ ಕರೆದೊಯ್ಯುವುದು ? ಆಗಲೂ ನಿನ್ನ ಕಣ್ಣಲ್ಲಿ ಹನಿ ಕಂಡ ನೆನಪಿಲ್ಲ. ಹತಾಶ ಮುಖದಲ್ಲಿ ಭೀತಿ ಇತ್ತು. ನನ್ನ ಮತ್ತು ಸೋದರ ನಾಗರಾಜನ ಅಸಹಾಯಕತೆ ನಿನ್ನ ಕಣ್ಣುಗಳಲ್ಲಿ ಪ್ರತಿಧ್ವನಿಸುತ್ತಿದ್ದವು. “ ನಮ್ಮನ್ನು ಎಲ್ಲಾದರೂ ಬಿಟ್ಟು ನೀನು ಊರಿಗೆ ಹೋಗಿ ಪರೀಕ್ಷೆ ಬರಿ ಮಗೂ ” ಎಂಬ ನಿನ್ನ ಮಾತುಗಳಿಗೆ ನನ್ನ ಬಳಿ ಉತ್ತರವೇ ಇರಲಿಲ್ಲ. ಬಂಗಾರಪೇಟೆಗೆ ಹೋದರೂ ಎಲ್ಲಿ ತಂಗುವುದು ? ನೀನು, ಕಡೆಯ ಸೋದರಿ ಮತ್ತು ಸೋದರನನ್ನು ಎಲ್ಲಿ ಬಿಡುವುದು ? ಅನಾಥ ಕುಟುಂಬಕ್ಕೆ ಆಸರೆ ನೀಡುವವರಾದರೂ ಯಾರು ? ಈ ಪ್ರಶ್ನೆಗಳನ್ನು ಹೊತ್ತುಕೊಂಡೇ ನಾವೆಲ್ಲರೂ ಹೋಗಿದ್ದು ವಿಜಯಪುರದಲ್ಲಿದ್ದ ದೊಡ್ಡಕ್ಕನ ಮನೆಗೆ. ಬಿದ್ದಿದ್ದು ಭಾವನ ಬೆನ್ನಿಗೆ. ಒಲ್ಲದ ಮನಸ್ಸಿನಿಂದ ಅಳಿಯನನ್ನು ಆಶ್ರಯಿಸಬೇಕಾಗಿ ಬಂದಾಗ ನಿನ್ನ ಸ್ವಾಭಿಮಾನಕ್ಕೆ ಎಷ್ಟು ಪೆಟ್ಟು ಬಿದ್ದಿರಬಹುದು. ಮೊದಲ ಕ್ಷಮೆ ಈ ಕಾರಣಕ್ಕಾಗಿ.
ಪರಕೀಯತೆಯ ನೋವಿನಲ್ಲಿ
ನೀವು ಮೂವರು ಅಕ್ಕನ ಮನೆಯಲ್ಲಿ ವಾಸ. ಬೆಂಗಳೂರಿನಲ್ಲಿ ನೌಕರಿಯಲ್ಲಿದ್ದ ಒಬ್ಬ ಸೋದರಿಗೆ ಇವೆಲ್ಲವೂ ಇವತ್ತಿನ ಟಿವಿ ಧಾರಾವಾಹಿಯಂತೆ. ಭಾವನೆಗಳು ಉಕ್ಕಿದರೂ ಸ್ಪಂದಿಸಲು ಮುಂದಾಗದ ಮನಸ್ಥಿತಿ. ಎಲ್ಲರಿಗೂ ಅವರವರ ಬದುಕು ಮುಖ್ಯವಾಗಿತ್ತು ಅಲ್ಲವೇನಮ್ಮ ? ನಾಪತ್ತೆಯಾದ ಸೋದರ-ಸೋದರಿಯನ್ನು ಹುಡುಕುವ ಬಗ್ಗೆ ಯೋಚನೆಯನ್ನೂ ಮಾಡದೆ ಜನವರಿ 16 1982ರಂದು ನಾನು ಬಂಗಾರಪೇಟೆಗೆ ಹೋದಾಗ ನನ್ನೆದುರು ಇದ್ದ ಒಂದೇ ಗುರಿ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯುವ ಅಂತಿಮ ಪರೀಕ್ಷೆಯನ್ನು ದಾಟುವುದು. ಗೆಳೆಯ ಗಜೇಂದ್ರನ ಮನೆಯಲ್ಲಿ ರಾತ್ರಿಯ ಓದು-ನಿದ್ದೆ. ಭೈರಾರೆಡ್ಡಿ-ಭಾರತಿ ಎಂಬುವರ ಹಳೆಯ ನೆರೆಮನೆಯಲ್ಲಿ ಬೆಳಿಗ್ಗೆ ತಿಂಡಿ. ಮಧ್ಯಾಹ್ನದ ಊಟಕ್ಕೆ ನೂರುಲ್ಲಾ ಎಂಬ ಗೆಳೆಯ ಸುಜಾತ ಮೆಸ್‌ನಲ್ಲಿ ಕೊಡಿಸಿದ ಊಟದ ಕೂಪನ್. ಪದವಿ ಪರೀಕ್ಷೆಗೆ ಶುಲ್ಕ ( ಬಹುಶಃ 60 ರೂ ಇರಬೇಕು) ಕೊಟ್ಟಿದ್ದ ಅಮರ್ ಎಂಬ ಮತ್ತೊಬ್ಬ ಗೆಳೆಯ. ರಾತ್ರಿ ಓದಲು ಒಂದು ಸಣ್ಣ ಬಲ್ಬ್ ಬೆಳಕಿದ್ದ ಕೋಣೆಯನ್ನು ಉಚಿತವಾಗಿ ಬಿಟ್ಟುಕೊಟ್ಟಿದ್ದು ಒಬ್ಬ ಹಿರಿಯ ಮುಸ್ಲಿಂ ಅಜ್ಜ ( ಹೆಸರೂ ಹಯಾತ್ ಸಾಬ್ ಇರಬೇಕು) ಆತ ಮಸೀದಿಯಲ್ಲಿ ಕೆಲಸ ಮಾಡುತ್ತಿದ್ದರು. ಕರೆಂಟ್ ಇಲ್ಲದಿದ್ದರೆ ಬುಡ್ಡಿ ದೀಪವೇ ಗತಿ.
ಹಾಗೂ ಹೀಗೂ ಪರೀಕ್ಷೆ ಬರೆದು ಊರಿಗೆ ವಿದಾಯ ಹೇಳಿ ವಿಜಯಪುರಕ್ಕೆ ಓಡೋಡಿ ಬಂದೆ. ಕೇವಲ ಭರವಸೆಗಳಿದ್ದವು, ಆಕಾಂಕ್ಷೆಗಳಿದ್ದವು ಆದರೆ ನಿರ್ದಿಷ್ಟ ಗೊತ್ತುಗುರಿ ಇರಲಿಲ್ಲ. ಪಾಸ್ ಆಗುವ ಭರವಸೆಯಂತೂ ಇತ್ತು. ಅತ್ತ ಅಕ್ಕನ ಮನೆಯಲ್ಲಿದ್ದ ಸೋದರ ನಾಗರಾಜ ಯಾವುದೊ ಲಾರಿ ಆಫೀಸ್‌ನಲ್ಲಿ ಲೆಕ್ಕ ಬರೆಯಲು ಹೋಗುತ್ತಿದ್ದ. ಸಂಬಳ ಅಂತೇನೂ ಇರಲಿಲ್ಲ. ಸಮಯ ಕಳೆಯಲಷ್ಟೇ. ಹೋದ ಕೂಡಲೇ ಎದುರಾದ ಪರಿಸ್ಥಿತಿಯನ್ನು ನೆನೆದರೆ ಇಂದಿಗೂ ಎದೆ ಝಲ್ಲೆನ್ನುತ್ತದೆ ಅಮ್ಮ. ಭಾವನಿಗೆ ಏನು ಹೇಳುವುದು ? ನಿನ್ನ ತಾಯಿಯನ್ನು ಕರೆದುಕೊಂಡು ಹೋಗು ಎಂದರೆ ಎಲ್ಲಿಗೆ ? ಇನ್ನು ನನ್ನಿಂದ ಸಾಧ್ಯವಿಲ್ಲ ಎಂದು ಭಾವ ಕೈಚೆಲ್ಲಿಬಿಟ್ಟರೆ ಮುಂದೇನು ಗತಿ ? ಮೊದಲೇ ಮೂವರಿದ್ದರು ಈಗ ನಾನೂ ಸೇರಿಕೊಂಡು ಇನ್ನೂ ಇಲ್ಲೇ ಇರುತ್ತೇವೆ ಎಂದು ಲಜ್ಜೆಯಿಲ್ಲದೆ ಹೇಳಬೇಕಾದ ಪರಿಸ್ಥಿತಿ. ಈ ಆತಂಕಗಳೊಂದಿಗೇ ಅಕ್ಕನ ಮನೆಗೆ ಹೋದಾಗ ನಿನ್ನಿಂದ ಬಂದದ್ದು ಎರಡೇ ಪ್ರಶ್ನೆಗಳು.
“ ಪರೀಕ್ಷೆ ಹೇಗೆ ಮಾಡಿದೆ ಕರೂ ? ಇನ್ನು ಮೇಲೆ ಏನು ಮಾಡೋದು ಮಗೂ ಇಲ್ಲಿ ಎಷ್ಟು ದಿನ ಇರೋಕಾಗುತ್ತಪ್ಪಾ ? ” ಎರಡನೆ ಕ್ಷಮಾ ಯಾಚನೆಯ ಕಾರಣ ಇದು.
ಈ ಎರಡೂ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವೇ ಇರಲಿಲ್ಲ. ಆದರೆ ನನ್ನ ಭಾವನಲ್ಲಿ ಉತ್ತರ ಇತ್ತು. ಓತಪ್ರೋತವಾಗಿ ಅವರ ಬಾಯಿಂದ ಹರಿದ ಹರಿತವಾದ ಮಾತುಗಳು ನನ್ನ ಎದೆಯನ್ನು ಮಾತ್ರ ಇರಿಯಲಿಲ್ಲ. ಬದುಕೇ ವ್ಯರ್ಥ ಎನ್ನುವಂತೆ ಮಾಡಿಬಿಟ್ಟಿತು. ಅಕ್ಕ ಮತ್ತು ಇಬ್ಬರು ಮಕ್ಕಳೊಂದಿಗೆ ಶಾಲಾ ಶಿಕ್ಷಕರಾಗಿ ಜೀವನ ಸವೆಸುತ್ತಿದ್ದ ಭಾವನಿಗಾದರೂ ಎಷ್ಟು ಭಾರ ಹೊರಲು ಸಾಧ್ಯವಿತ್ತು. ಅವರ ಪ್ರತಿಯೊಂದು ಬೈಗುಳವೂ ಸ್ವಾಭಾವಿಕವೇನೋ ಎನಿಸುತ್ತಿತ್ತು. ಜವಾಬ್ದಾರಿ ಹೊರಲಾರದೆ ಪರಾರಿಯಾಗಿದ್ದ ಅಕ್ಕ-ಅಣ್ಣ ನನ್ನ ನೈತಿಕ ಧ್ವನಿಯನ್ನು ಕಸಿದುಕೊಂಡಿದ್ದರು. ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುವುದು. ಭಾವನ ಬೈಗುಳಗಳು ನನ್ನೊಳಗಿನ ಸ್ವಾಭಿಮಾನಕ್ಕೆ ಕಿಚ್ಚು ಹಚ್ಚಿದ್ದರೂ,ಬದುಕಿನ ವಾಸ್ತವತೆ ಕಿಚ್ಚನ್ನು ನಂದಿಸಿತ್ತು. ಅಲ್ಲವೇನಮ್ಮಾ ? ನಾನು ಏನು ಮಾಡಲು ಸಾಧ್ಯವಿತ್ತು ಅಮ್ಮಾ ?
ಆ ಭೀಕರ ಕ್ಷಣಗಳ ನೆನಪು
ಒಂದು ದಿನ ರಾತ್ರಿ ಊಟದ ವೇಳೆ ಮತ್ತೆ ಭಾವನ ಸಹಸ್ರನಾಮ ಶುರುವಾಯಿತು. ಊಟ ಮಾಡುತ್ತಿದ್ದ ನಿನ್ನ ಕಣ್ಣುಗಳಲ್ಲಿದ್ದ ಆ ಅಸಹಾಯಕತೆ ನನ್ನನ್ನು ಇರಿಯುತ್ತಿತ್ತು. ಆದರೆ ಹೊಟ್ಟೆ ಕೇಳಬೇಕಲ್ಲಾ ! ನನಗೂ ಪ್ರತಿದಿನದ ಬೈಗುಳಗಳಿಂದ ಮನಸ್ಸು ರೋಸಿ ಹೋಗಿತ್ತು. ಆದರೂ ಸಮಾಧಾನದಿಂದಲೇ “ ಭಾವ ಒಂದು ಸ್ವಲ್ಪ ದಿನ ಸಮಯ ಕೊಡಿ ಯಾವುದಾದರೂ ಕೆಲಸ ನೋಡಿಕೊಂಡು ಅಮ್ಮನ್ನು ಕರೆದೊಯ್ಯುತ್ತೇನೆ ” ಎಂದು ವಿನಂತಿಸಿದೆ. ಆಗ ಭಾವನಿಂದ ಬಂದ ಮಾತುಗಳು ನನ್ನ ಕೊನೆಯಿಸಿರು ಇರುವವರೆಗೂ ನೆನಪಿರುವಂತಹುದು. ನಿನಗೆ ಮತ್ತೊಮ್ಮೆ ನೆನಪಿಸುತ್ತೇನೆ ಕೇಳಮ್ಮಾ !
“ ನಿಮ್ಮಂತಹ ಗತಿಗೆಟ್ಟ ಬೇವರ್ಸಿಗಳಿಗೆ ಎಲ್ಲೋ ಸಿಗುತ್ತೆ ಕೆಲಸ, ಆ ಯೋಗ್ಯತೆ ಇದ್ದಿದ್ದರೆ ಇಲ್ಲೇಕೆ ಬಿದ್ದಿರುತ್ತಿದ್ದಿರಿ, ಅವರಿಬ್ಬರೇಕೆ ಓಡಿಹೋಗುತ್ತಿದ್ದರು, ಪರೀಕ್ಷೆಯೇನೋ ಆಯ್ತು ನೌಕರಿ ಪಡೆದುಕೊಂಡೇ ಇಲ್ಲಿಗೆ ಬರಲು ಏನಾಗಿತ್ತು ನಿನಗೆ ರೋಗ, ಖಾಲಿ ಕೈಯ್ಯಲ್ಲಿ ಬಂದಿದ್ದೀಯ ನಾಚಿಕೆ ಆಗಲ್ವೇ,,,,,, ಇತ್ಯಾದಿ ಇತ್ಯಾದಿ. ”.
ನಾವು ನಾಲ್ಕೂ ಜನರು ಮೌನಕ್ಕೆ ಶರಣಾದೆವು. ಅಕ್ಕನ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು. ಅವಳ ಅಸಹಾಯಕತೆ ಅರ್ಥವಾಗುವಂತಹುದೇ. ಭಾವನ ಬೈಗುಳಗಳ ನಡುವೆಯೇ ನಾನು ಏನೋ ಸಮಜಾಯಿಷಿ ಕೊಡಲು ಬಾಯ್ದೆರೆದದ್ದೇ ಸಾಕಾಯ್ತು “ ನೀವು ಬಿಟ್ಟಿ ತಿಂತಾ ಇರೋದು ಅನ್ನ ಅಲ್ಲ ಕಣ್ರೋ ನನ್ನ ಹೇಲು !!!!!!! ” ಭಾವನ ಈ ಕಟು ನುಡಿಗಳಿಗೆ ನಾನು ಕುಸಿದು ಹೋದೆ. ಅಮ್ಮಾ, ಆಗ ನಿನ್ನ ಕಣ್ಣ ಹನಿ ಅನ್ನದೊಂದಿಗೆ ಕಲಸಿಹೋಗಿತ್ತು. ಸೋದರ ಮೂಕನಾಗಿದ್ದ. ನನ್ನ ಕೈಯ್ಯಲ್ಲಿ ಹಿಡಿದಿದ್ದ ಸ್ಟೀಲ್ ಲೋಟ ನನ್ನ ಬಿಗಿಮುಷ್ಟಿ ತಾಳಲಾರದೆ ನೆಗ್ಗಿಹೋಗಿತ್ತು. ಈ ಮಾತಿಗೆ ಯಾವ ಉತ್ತರ ನೀಡಲು ಸಾಧ್ಯವಿತ್ತು ಹೇಳಮ್ಮಾ ? ( ಈಗಲೂ ಕಣ್ಣೀರೊಂದೇ ಉತ್ತರ) . ಕೇವಲ ಹದಿನೈದು ವರ್ಷಗಳ ಮುನ್ನ ರಾಣಿಯಂತೆ ಮೆರೆದಿದ್ದ ನಿನಗೆ ಈ ಮಾತುಗಳನ್ನು ಕೇಳಬೇಕಾಗಿ ಬಂತಲ್ಲಾ ? ಅದಕ್ಕೆ ನಾನೂ ಕಾರಣ ಎನ್ನುವ ನೋವು ಇನ್ನೂ ಕಾಡುತ್ತಿದೆ. ಬೈದವರನ್ನು ನಾನು ದೂಷಿಸುವುದಿಲ್ಲ. ನಮ್ಮ ಅಸಹಾಯಕತೆಯನ್ನು ದೂಷಿಸುತ್ತೇನೆ. ಈ ಕಾರಣಕ್ಕಾಗಿ ನನ್ನ ಮೂರನೆಯ ಕ್ಷಮಾ ಯಾಚನೆ ಅಮ್ಮ !
ಅಂದು ರಾತ್ರಿ ನಿನ್ನ ಎದೆಯಾಳದಿಂದ ಬಂದ ಅಸಹಾಯಕ ಮಾತುಗಳು ಇಂದಿಗೂ ನೆನಪಿದೆ ಅಮ್ಮ. “ ಮಗೂ ನಾಳೆಯೇ ನಮ್ಮನ್ನು ಎಲ್ಲಿಗಾದರೂ ಕರೆದುಕೊಂಡು ಹೋಗು ಇಲ್ಲಿ ಮಾತ್ರ ಇರುವುದು ಬೇಡ ಕಣೋ, ಉಪವಾಸ ಇದ್ದರೂ ಚಿಂತೆಯಿಲ್ಲ ನಿನ್ನ ಜೊತೆ ಇರ್ತೀನಿ ,,,,,” ಈ ನೋವಿನ ನುಡಿಗಳು ನನ್ನೊಳಗಿನ ಸ್ವಾಭಿಮಾನವನ್ನು ಹೆಚ್ಚಿಸಿದ್ದಷ್ಟೇ ಅಲ್ಲ ಅಮ್ಮ ಅದು ಭವಿಷ್ಯದ ಬದುಕಿಗೂ ದಾರಿ ತೋರಿದ್ದವು. ಏಕೆಂದರೆ ನಿನ್ನಿಂದ ಬಂದದ್ದು ಬದುಕುವ ನುಡಿಗಳು. ಸಾವಿನ ಮಾತಲ್ಲ. ಚಿಂತಾಮಣಿ ಸಮೀಪದ ಭಟ್ಟರಹಳ್ಳಿಯಲ್ಲಿದ್ದ ನಿನ್ನ ಅಕ್ಕನ ಮಗಳ ಮನೆಯಲ್ಲಿ ನಿನ್ನನ್ನು-ಸೋದರಿಯನ್ನು ಬಿಟ್ಟು ಬಂದೆ. ಮತ್ತೊಮ್ಮೆ ನಿನ್ನನ್ನು ಅನಾಥ-ಪರಕೀಯತೆಯೊಂದಿಗೆ ಬಾಳುವಂತೆ ಮಾಡಿದ ನನ್ನ ತಪ್ಪಿಗೆ ಹೇಗೆ ಕ್ಷಮೆ ಕೇಳಲಿ ಅಮ್ಮ. ಆದರೂ ಈ 42 ವರ್ಷಗಳ ನಂತರ ಈಗ ನಾಲ್ಕನೆಯ ಕ್ಷಮಾಯಾಚನೆ ಈ ಕಾರಣಕ್ಕಾಗಿ.
ಇದರ ನಂತರದ ಸ್ವಾಭಿಮಾನದ ಬದುಕಿನ ಹೆಜ್ಜೆಗಳಿಗೆ ಬೇರೆಯೇ ಆಯಾಮಗಳಿವೆ. ಇರಲಿ ಮತ್ತೊಮ್ಮೆ ನಿನಗೆ ನೆನಪು ಮಾಡುತ್ತೇನೆ. ಸದ್ಯಕ್ಕೆ ಇಷ್ಟು ಸಾಕು ಅಲ್ಲವೇನಮ್ಮಾ ? ನೀನು ಆ ಏಳೆಂಟು ತಿಂಗಳ ಅವಧಿಯಲ್ಲಿ ತೋರಿದ ದಿಟ್ಟತನ, ಸ್ವಾಭಿಮಾನ, ಆತ್ಮಸ್ಥೈರ್ಯ ಮತ್ತು ಆಗ ನೀನು ನನ್ನ ಮೇಲಿಟ್ಟಿದ್ದ ಭರವಸೆ, ನನಗೆ ತೋರಿದ ವಾತ್ಸಲ್ಯ ಇವೆಲ್ಲವೂ ನನ್ನನ್ನು ಇಲ್ಲಿಯವರೆಗೂ ಎಳೆದುತಂದಿದೆ ಅಮ್ಮ. ಆ ದಿನಗಳ ತಪ್ಪಿಗೆ ಕ್ಷಮೆ ಕೋರುತ್ತಲೇ ಈ ಕ್ಷಣದ ಬದುಕಿಗೆ ಪ್ರೇರಣೆ ನೀಡಿದ ನಿನ್ನ ತಾಯ್ಮಡಿಲಿನ ವಾತ್ಸಲ್ಯಕ್ಕೆ ವಂದಿಸುತ್ತೇನೆ. ಇದೇ ನನ್ನ ಅಶ್ರು ತರ್ಪಣ ಅಲ್ಲವೇನಮ್ಮಾ ? ಎದೆಯೊಳಗೆ ಇದ್ದೀಯ. ಇದ್ದುಬಿಡು. ನಾನಿರುವವರೆಗೂ.