ಇಂಫಾಲ : ಈಶಾನ್ಯರಾಜ್ಯ ಮಣಿಪುರ (Manipura) ಶಾಂತಿ ಮರುಸ್ಥಾಪನೆಗೆ ಒತ್ತು ನೀಡುವ ಜತೆಗೆ ಇಡೀ ಘಟನೆಯನ್ನು ಸಿಬಿಐ (CBI) ಮೂಲಕ ತನಿಖೆಗೆ ಒಳಪಡಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಣಿಪುರ ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಸಚಿವ ಅಮಿತ್ ಶಾ (amithShah) ರಾಜ್ಯದ ಸಿಎಂ ಬಿರೇನ್ ಸಿಂಗ್, ಸಚಿವರು, ಪ್ರಮುಖ ನಾಯಕರು, ಅಧಿಕಾರಿಗಳು ಕುಕಿ (kuki) ಬುಡಕಟ್ಟು ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು.
ಬಹುತೇಕ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಕರ್ಫ್ಯೂ (Curfew) ಜಾರಿಯಲ್ಲಿದೆ ಇದೆ. ಇಂಟರ್‌ನೆಟ್ ಕೂಡ ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಮೊದಲ ಆದ್ಯತೆ ನೀಡಬೇಕು. ನಿಧಾನವಾಗಿ ಕರ್ಫ್ಯೂ (Curfew) ತೆರವಿಗೆ ಒತ್ತು ಕೊಡಬೇಕು, ಇದರಿಂದ ಜನಜೀವನವೂ ಸಹಜ ಸ್ಥಿತಿಗೆ ಬರಲಿದೆ. ಹಿಂಸಾಚಾರದಲ್ಲಿ (violence) ಜೀವ ಕಳೆದುಕೊಂಡು ಕುಟುಂಬದವರಿಗೆ ತಲಾ ಹತ್ತು ಲಕ್ಷ ರೂ. ನೆರವು, ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ನೀಡಬೇಕು ಎನ್ನುವ ಸೂಚನೆಯನ್ನು ನೀಡಿದರು.

ಇಡೀ ಘಟನೆಯ ಸಮಗ್ರ ತನಿಖೆಯಾಗಿ ತಪ್ಪಿತಸ್ಥರ ವಿರುದ್ದಕ್ರಮ ಆಗಬೇಕು ಎನ್ನುವ ಕುಕಿ ಬುಡಕಟ್ಟು ಪ್ರತಿನಿಧಿಗಳ ಬೇಡಿಕೆಗೆ ಸ್ಪಂದಿಸಿದ ಅಮಿತ್ ಶಾ, ಸಿಬಿಐನಿಂದಲೇ ತನಿಖೆ ನಡೆಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೂ ಮೊದಲು ಸರ್ವಪಕ್ಷಗಳ ಸಭೆಯಲ್ಲೂ ಪಾಲ್ಗೊಂಡ ಅವರು ನಾಯಕರು ಶಾಂತಿ ಕಾಪಾಡಲು ಒತ್ತು ನೀಡಬೇಕು. ಪ್ರಚೋದನಾತ್ಮಕ ಹೇಳಿಕೆ ನೀಡಬಾರದು ಎಂದು ಸೂಚಿಸಿದರು. ಮಣಿಪುರ ರಾಜ್ಯದಲ್ಲಿ ಮೀಟೀ ಸಮುದಾಯಕ್ಕೆ ಮೀಸಲು ನೀಡುವ ಹಾಗೂ ಕುಕಿ ಸಮುದಾಯದವರನ್ನು ಅರಣ್ಯದಿಂದ ಒಕ್ಕಲೆಬ್ಬಿಸುವ ವಿಚಾರವಾಗಿ ಹಿಂಸಾಚಾರ ನಡೆದು ಎಂಬತ್ತಕ್ಕೂ ಹೆಚ್ಚು ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡು ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ.