ದೇಶದಲ್ಲಿ ಸತತ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಅಮಿತ್ ಷಾ ಅವರನ್ನು ಚುನಾವಣಾ ಚಾಣಕ್ಯ ಎಂದೇ ಕರೆಯುತ್ತದೆ. ಅದರಂತೆ ಚುನಾವಣಾ ಪೂರ್ವದಲ್ಲಿ ಅಮಿತ್ ಷಾ, ರಣತಂತ್ರಗಳನ್ನು ರೂಪಿಸುವುದು, ಎದುರಾಳಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದು, ಮತಗಳನ್ನು ಸೆಳೆದು ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಒಂದು ರೀತಿಯ ಪಂಟರ್. ಇದೀಗ ಅಮಿತ್ ಷಾ ಕಣ್ಣು ನಿದ್ದಿರುವುದು ಹಳೇ ಮೈಸೂರು ಭಾಗದ ಮೇಲೆ. ಭಾರತದ ಮೇಲೆ ಅಲೆಕ್ಸಾಂಡರ್ ಸಾಕಷ್ಟು ಬಾರಿ ದಂಡೆತ್ತಿ ಬಂದರು ಹಿಮಾಲಯವನ್ನು ದಾಟಿ ಒಳಕ್ಕೆ ಬರಲು ಸಾಧ್ಯವೇ ಆಗಲಿಲ್ಲ ಎನ್ನುವ ಮಾತಿನಂತೆ ಕೇಸರಿ ಸೇನೆ ಹಳೇ ಮೈಸೂರು ಭಾಗದಲ್ಲಿ ಅಟ್ಟಹಾಸ ಮೆರೆಯುವುದಕ್ಕೆ ಸಾಧ್ಯವೇ ಆಗಿಲ್ಲ. ಕೇಸರಿ ಸೇನೆಗೆ ಅಡ್ಡಿಯಾಗಿ ನಿಂತಿರುವುದು ಕಾಂಗ್ರೆಸ್ ಹಾಗು ಜೆಡಿಎಸ್ ಎನ್ನುವ ಎರಡು ಮಹಾ ಕೋಟೆ. ಆದರೆ ಈ ಬಾರಿ ಜೋಡಿ ಕೋಟೆಗೆ ಲಗ್ಗೆ ಹಾಕಲು ಬಿಜೆಪಿ ಅಮಿತ್ ಷಾ ಅವರನ್ನೇ ಕರೆತಂದಿದ್ದು, ಕೋಟೆ ಛಿದ್ರ ಮಾಡುವ ಮುನ್ಸೂಚನೆ ಸಿಕ್ಕಿದೆ.
ರಾತ್ರಿ ರಹಸ್ಯ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು..!
ಹಳೇ ಮೈಸೂರು ಭಾಗದಲ್ಲಿ ಈ ಭಾರಿ ಯಶಸ್ಸು ಸಾಧಿಸಬೇಕು. ಜೆಡಿಎಸ್ ಹಾಗು ಕಾಂಗ್ರೆಸ್ ಜೋಡಿ ಕೋಟೆಗೆ ಲಗ್ಗೆ ಹಾಕಬೇಕು ಅನ್ನೋದು ಕೇಸರಿ ಕಲಿಗಳ ಕಸರತ್ತು. ಅದೇ ಕಾರಣಕ್ಕೆ ಮಂಡ್ಯದಲ್ಲಿ ಬೃಹತ್ ಸಾರ್ವಜನಿಕ ಸಭೆ ಮಾಡುವ ಮೂಲಕ ಈ ಬಾರಿ ತ್ರಿಕೋನ ಸ್ಪರ್ಧೆಗೆ ರೆಡಿ ಇರುವಂತೆ ಕಾಂಗ್ರೆಸ್ ಹಾಗು ಜೆಡಿಎಸ್ಗೆ ಸಂದೇಶ ಕಳುಹಿಸಿ ಆಗಿದೆ. ಆ ಬಳಿಕ ಸಂಜೆ ಬೆಂಗಳೂರಿನಲ್ಲಿ ಹಳೇ ಮೈಸೂರು ಭಾಗದ ನಾಯಕರ ಜೊತೆಗೆ ಮಹತ್ವದ ಸಭೆ ಮಾಡಲಾಯ್ತು. ಈ ಸಭೆಯಲ್ಲಿ ಚುನಾವಣಾ ಚಾಣಕ್ಯ ಮಹತ್ವದ ಸಲಹೆ ಸೂಚನೆಗಳನ್ನು ನೀಡಿದ್ದು, ಬಿಜೆಪಿ ನಡೆಸಿರುವ ಕಾಯಿ ಯಾರನ್ನು ಹೊಡೆದುಕೊಂಡು ಹೋಗುತ್ತೆ ಎನ್ನುವ ಕುತೂಹಲ ಮೂಡಿಸಿದೆ. ಏನು ಮಾಡ್ತೀರಿ ಅನ್ನೋದು ನನಗೆ ಗೊತ್ತಿಲ್ಲ. ಹಳೆ ಮೈಸೂರು ಭಾಗದಲ್ಲಿ 40ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು ಎನ್ನುವ ಟಾರ್ಗೆಟ್ ಫಿಕ್ಸ್ ಆಗಿದೆ. ಅದಕ್ಕೆ ಬೇಕಾಗಿರುವ ತಂತ್ರಗಾರಿಕೆಯೂ ರೆಡಿಯಾಗಿದೆ ಎನ್ನಲಾಗ್ತಿದೆ.
ಹಳೇ ಮೈಸೂರು ಭಾಗದ ಸಂಘಟನೆಗೆ ಅತೃಪ್ತಿ..!
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರು ಹಾಜರಿದ್ದ ಸಭೆಯಲ್ಲಿ ಅಮಿತ್ ಷಾ ಜಿಲ್ಲಾವಾರು ಸಂಘಟನೆ ಬಗ್ಗೆ ಚರ್ಚೆ ನಡೆಸಿದ್ದು, ಬಿಜೆಪಿ ನಾಯಕರ ಪ್ರಯತ್ನಕ್ಕೆ ಸಮಧಾನ ಇಲ್ಲ ಎಂದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಹಳೆ ಮೈಸೂರು ಭಾಗದಲ್ಲಿ ಮಾಡಿರೋ ತಂತ್ರಗಾರಿಕೆಗಳು ತೃಪ್ತಿ ಇಲ್ಲ. ಈಗಿನಿಂದಲೇ ಮತ್ತಷ್ಟು ಸುಧಾರಣೆ ಆಗಬೇಕು ಎಂದು ಅಮಿತ್ ಷಾ ಖಡಕ್ ಸೂಚನೆ ಕೊಟ್ಟಿದ್ದಾರೆ. ಮಂಡ್ಯಕ್ಕೆ ಭೇಟಿ ಕೊಟ್ಟು ಜನರ ನಾಡಿ ಮಿಡಿತ ಅಮಿತ್ ಷಾ, ಹಳೇ ಮೈಸೂರು ಭಾಗದಲ್ಲಿ ಚುನಾವಣೆಗೆ ಹೋಗುತ್ತಿರುವ ದಿಕ್ಕು ಸರಿಯಾಗಿಲ್ಲ ಎನ್ನುವುದನ್ನು ಕಡ್ಡಿ ಮುರಿದಂತೆ ತಿಳಿಸಿದ್ದಾರೆ. ಗೆಲ್ಲಲು ಬೇಕಿರುವ ಸೂಕ್ತ ಮಾರ್ಗಗಳ ಬಗ್ಗೆಯೂ ಅಮಿತ್ ಷಾ ಸೂಚ್ಯವಾಗಿ ಹೇಳಿದ್ದು, ಮುಂದಿನ ದಿನಗಳಲ್ಲಿ ಕೇಸರಿ ಮಯ ಮಾಡುವುದಕ್ಕೆ ಸಿದ್ಧ ಎಂದಿದ್ದಾರೆ.

ರೌಡಿ ಶೀಟರ್ಸ್ ಪಕ್ಷಕ್ಕೆ ಬೇಡ, ಗೆಲ್ಲುವ ಅಭ್ಯರ್ಥಿ ಹುಡುಕಿ..!
ಹಳೇ ಮೈಸೂರು ಭಾಗದಲ್ಲಿ ಗೆಲುವು ಸಿಗದೆ ಬಹುಮತ ಕಷ್ಟ ಸಾಧ್ಯ. ಎಲ್ಲಾ ಬಾರಿಯೂ ಹಳೇ ಮೈಸೂರಿನಲ್ಲಿ ಯಾರು ಪ್ರಾಬಲ್ಯ ಹೊಂದುತ್ತಾರೆಯೋ ಅವರೇ ಅಧಿಕಾರ ಹಿಡಿಯುವುದು ಖಚಿತ. ಈ ಬಾರಿ ಹಳೇ ಮೈಸೂಇನದಲ್ಲಿ ನಾವು ಕನಿಷ್ಟ 40 ಸ್ಥಾನಗಳನ್ನು ಗೆಲ್ಲಬೇಕು ಎಂದು ಬಿಜೆಪಿ ನಾಯಕರಿಗೆ ಟಾಸ್ಕ್ ನೀಡಿದ್ದಾರೆ. ಆದರೆ ಇತ್ತೀಚಿಗೆ ರೌಡಿ ಶೀಟರ್ಗಳಿಗೆ ಮಣೆ ಹಾಕಿದ್ದ ಬಿಜೆಪಿ ನಾಯಕರಿಗೆ ಚಾಟಿ ಬೀಸಿರುವ ಅಮಿತ್ ಷಾ, ಪಕ್ಷಕ್ಕೆ ಡ್ಯಾಮೇಜ್ ಆಗುವ ಯಾವುದೇ ಕೆಲಸ ಮಾಡಬೇಡಿ, ಪಕ್ಷ ಸೇರ್ಪಡೆ ವೇಳೆ ವ್ಯಕ್ತಿಯ ಹಿನ್ನೆಲೆ ಪರಿಶೀಲನೆ ಮಾಡಿ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಏನು ಬೇಕಾದರೂ ಮಾಡಿ ಎಂದಿರುವ ಅಮಿತ್ ಷಾ, ಬೇರೆ ಪಕ್ಷದ ಅಭ್ಯರ್ಥಿಗಳನ್ನೇ ಸೆಳೆಯುವಂತೆ ಮೌಕಿಕವಾಗಿ ಸೂಚನೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ.
ಬಿಜೆಪಿಯಿಂದ ನಡೆಯುತ್ತಾ ಆಪರೇಷನ್ ಅಭ್ಯರ್ಥಿ..!
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಸಾಧ್ಯ ಎನ್ನುವುದು ರಾಜ್ಯ ಬಿಜೆಪಿ ನಾಯಕರಿಗೆ ಚೆನ್ನಾಗಿ ಗೊತ್ತಿರುವ ವಿಚಾರ. ಬಿಜೆಪಿಯಿಂದ ಗೆದ್ದಿದ್ದಾರೆ ಎಂದರೆ ಬೇರೆ ಪಕ್ಷದ ಒಡಕಿನ ಲಾಭ ಅಥವಾ ಬೇರೆ ಪಕ್ಷದ ನಾಯಕರ ಕೃಪಾಶಿರ್ವಾದ ಪಡೆದಿದ್ದಾರೆ ಎಂದು ಸಿದ್ದಂಕೋಚವಾಗಿ ಹೇಳಬಹುದು. ಇದೀಗ ಬಿಜೆಪಿ ಗೆಲ್ಲಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ. 40 ಸ್ಥಾನಗಳ ಟಾರ್ಗೆಟ್ ಕೂಡ ಫಿಕ್ಸ್ ಆಗಿದೆ. ಅಮಿತ್ ಷಾ ಸಭೆಯಲ್ಲಿ ಭಾಗಿಯಾಗಿದ್ದ ಸಚಿಒವ ಆರ್.ಅಶೋಕ್ ಕೂಡ ಅದನ್ನೇ ಹೇಳಿದ್ದು, ಕಾಂಗ್ರೆಸ್, ಜೆಡಿಎಸ್ ಸೋಲಿಸಲು ರಣತಂತ್ರ ರೆಡಿಯಾಗಿದೆ ಎಂದಿದ್ದಾರೆ. ಒಟ್ಟು 59 ಕ್ಷೇತ್ರ ಗಳ ಪೈಕಿ ಕೇವಲ 13 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿರುವ ಬಿಜೆಪಿ ಈ ಬಾರಿ ಹಳೇ ಮೈಸೂರಿನಲ್ಲಿ ಗೆಲುವಿನ ಕಹಳೆ ಊದುವುದಕ್ಕೆ ಸಿದ್ಧತೆ ಮಾಡುತ್ತಿದೆ. ಸಭೆ ಬಳಿಕ ಸಿ.ಟಿ ರವಿ ಮಾತನಾಡಿದ್ದು, ಗೆಲ್ಲುವ ಕ್ಷೇತ್ರ ಗಳಲ್ಲಿ ನಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಕೊಡ್ತೀವಿ. ಎಲ್ಲಿ ನಮ್ಮ ಅಭ್ಯರ್ಥಿಗಳು ಸ್ಟ್ರಾಂಗ್ ಇಲ್ಲವೋ, ಅಲ್ಲಿ ನಿಸ್ಸಂಕೋಚದಿಂದ ಅನ್ಯಪಕ್ಷದ ಪ್ರಬಲ ಅಭ್ಯರ್ಥಿಗಳನ್ನು ಬಿಜೆಪಿಗೆ ಕರೆದುಕೊಳ್ತೀವಿ. ಗೆಲ್ಲುವುದೊಂದೇ ಮಾನದಂಡ. ನಾವು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಈ ಮೂಲಕ ಆಪರೇಷನ್ ಅಭ್ಯರ್ಥಿ ಎನ್ನುವ ಸುಳಿವು ಕೊಟ್ಟಂತಾಗಿದೆ.
ಕೃಷ್ಣಮಣಿ