ಬಿಜೆಪಿ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲಿಂಗಾಯತ ಮತದಾರರಲ್ಲಿ ಹಾಗೂ ಧಾರವಾಡ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೀರುವ ಪ್ರಭಾವವನ್ನು ಕುಗ್ಗಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ.
ಅವಿಭಿಜಿತ ಧಾರವಾಡ ಜಿಲ್ಲೆಯ ಬಿಜೆಪಿಯ 175 ಪ್ರಮುಖರ ಜೊತೆ ಅಮಿತ್ ಶಾ ಹುಬ್ಬಳ್ಳಿಯ ಖಾಸಗಿ ಹೊಟೆಲ್ ನಲ್ಲಿ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಗದಗ,ಹಾವೇರಿ ಧಾರವಾಡ ವ್ಯಾಪ್ತಿಯ ಸಚಿವರು,ಹಾಲಿ ಶಾಸಕರು,ಮಂಡಳ ಪ್ರಮುಖರು,ಹಾಲಿ ಮತ್ತು ಮಾಜಿ ಪಂಚಾಯತ್ ಹಾಗೂ ಪಾಲಿಕೆ ಸದಸ್ಯರು ಭಾಗಿಯಾಗಿದ್ದಾರೆ.
ಬಿಜೆಪಿ ಶೆಟ್ಟರ್ ಗೆ ಅನ್ಯಾಯ ಮಾಡಿಲ್ಲ. ಆದರೆ,
ಶೆಟ್ಟರ್ ಬಿಜೆಪಿಗೆ ಮೋಸ ಮಾಡಿ ಕಾಂಗ್ರೆಸ್ ಸೇರಿದ್ದಾರೆ. ಶೆಟ್ಟರ್ ರನ್ನು ಬಿಜೆಪಿ ಸಿಎಂ ಮಾಡಿದೆ, ಪ್ರಮುಖ ಹುದ್ದೆಗಳನ್ನು ನೀಡಿದೆ ಎನ್ನುವುದನ್ನು ಅಮಿತ್ ಶಾ ಲಿಂಗಾಯತ ನಾಯಕರಿಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಅಲ್ಲದೆ, ಇದನ್ನು ಮತದಾರರಿಗೂ ಮನವರಿಕೆ ಮಾಡಿಕೊಡುವ ಟಾಸ್ಕ್ ಅನ್ನು ಆ ಭಾಗದ ನಾಯಕರಿಗೆ ವಹಿಸಿಕೊಡಲಾಗಿದೆ.
ಇನ್ನು, ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎನ್ನುವ ಕಾಂಗ್ರೆಸ್ ಆರೋಪವನ್ನೂ ಸಮರ್ಥವಾಗಿ ಎದುರಿಸಲು ಅಮಿತ್ ಶಾ ಯೋಜನೆ ಹಾಕಿದ್ದು, ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ. ಹಿರಿಯ ಲಿಂಗಾಯತ ನಾಯಕರ ಬದಲಿಗೆ ಲಿಂಗಾಯತ ಯುವ ನಾಯಕರಿಗೆ ಟಿಕೆಟ್ ನೀಡಲಾಗಿದೆ ಎನ್ನುವುದು ಲಿಂಗಾಯತ ಮತದಾರರಿಗೆ ತಲುಪಿಸಲು ಅಮಿತ್ ಶಾ ಲಿಂಗಾಯತ ನಾಯಕರಿಗೆ ಸೂಚಿಸಿದ್ದಾರೆ.

ಶೆಟ್ಟರ್ ಗೆ ಎಲ್ಲ ಸ್ಥಾನಮಾನ ಕೊಡಲು ಹೈಕಮಾಂಡ್ ಸಿದ್ದವಿತ್ತು, ಆದ್ರೆ ಶೆಟ್ಟರ್ ಟಿಕೆಟ್ ಬೇಕೆ ಬೇಕೆ ಎಂದು ಪಟ್ಟು ಹಿಡದಿದ್ದು, ಬಿಜೆಪಿ ಯಾವುದೇ ಕಾರಣಕ್ಕೂ ಶೆಟ್ಟರ್ ಗೆ ಅನ್ಯಾಯ ಮಾಡಿಲ್ಲ ಅನ್ನೋದನ್ನು ಸಭೆಯಲ್ಲಿ ಭಾಗಿಯಾದ ಪ್ರಮುಖರಿಗೆ ಶಾ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಸಭೆಯಲ್ಲಿ ಅಮಿತ್ ಶಾ ನೀಡಿದ ಸಂದೇಶವನ್ನೇ ಮತದಾರರಿಗೆ ಮನದಟ್ಟು ಮಾಡಿಸಲು ಸೂಚನೆಗಳನ್ನು ನೀಡಲಾಗಿದೆ.
ವ್ಯಕ್ತಿಗಿಂತ ಪಕ್ಷ ಮುಖ್ಯ ಅನ್ನೋದರ ಬಗ್ಗೆ ಒತ್ತಿ ಹೇಳಿದ್ದು, ಶೆಟ್ಟರ್ ಯಾವುದೇ ಬಿಜೆಪಿ ಮುಖಂಡ, ನಾಯಕರ ಮೇಲೆ ಪ್ರಭಾವ ಬೀರದಂತೆ ತಡೆಯಲು ಯೋಜನೆ ಹಾಕಿಕೊಳ್ಳಲಾಗಿದೆ. ಅಮಿತ್ ಶಾ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಬಿಸಿ ಪಾಟೀಲ್, ಶಂಕರ್ ಪಾಟೀಲ್ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ್ ಮೊದಲಾದವರು ಭಾಗಿಯಾಗಿದ್ದರು.