
ಸಾಮಾಜಿಕ-ರಾಜಕೀಯ ಸಂಕಥನಗಳು ವರ್ತಮಾನದ ನೆಲೆಯಲ್ಲಿ ನಡೆಯಬೇಕಿವೆ
ನಾ ದಿವಾಕರ
ಭಾಗ 2
ಪ್ರಜಾಪ್ರಭುತ್ವದ ಮಾರ್ಗಸೂಚಿ
ಈ ಎಲ್ಲ ದಾರ್ಶನಿಕರೂ ರಾಜಕೀಯವಾಗಿ ಬೋಧಿಸಿದ, ಡಾ. ಬಿ.ಆರ್. ಅಂಬೇಡ್ಕರ್ ಅತ್ಯಂತ ತುರ್ತು ಹಾಗೂ ಪ್ರಧಾನವಾದ ಮೌಲ್ಯ ಎಂದು ಗುರುತಿಸಲ್ಪಟ್ಟಿರುವ “ ಪ್ರಜಾಪ್ರಭುತ್ವದ ಮೌಲ್ಯಗಳ ”ನ್ನು ರಾಜಕೀಯ ಸಂಕಥನಗಳಲ್ಲಿ, ವಿಭಿನ್ನ ಮಾದರಿಗಳಲ್ಲಿ ಗುರುತಿಸಬಹುದು. ವಿದ್ವತ್ ಪೂರ್ಣವಾಗಿ ಈ ದಾರ್ಶನಿಕರ ವ್ಯಾಖ್ಯಾನ, ನಿರೂಪಣೆಗಳನ್ನು ಜನಸಾಮಾನ್ಯರ ಮುಂದಿಡುತ್ತಾ, ವರ್ತಮಾನದ ಭಾರತಕ್ಕೆ ಇದರ ಅಗತ್ಯತೆ ಮತ್ತು ಪ್ರಸ್ತುತತೆಯನ್ನು ಮತ್ತೆಮತ್ತೆ ಹೇಳಲಾಗುತ್ತಿದೆ. ಇದು ಅವಶ್ಯವೇನೋ ಹೌದು. ಆದರೆ ಈ ಚಿಂತಕರು ಏನು ಹೇಳಿದ್ದಾರೆ ಎನ್ನುವುದಕ್ಕಿಂತಲೂ, ಆ ಉದಾತ್ತ ಚಿಂತನೆಗಳನ್ನು ನಾವು , ನಮ್ಮ ಕಾರ್ಯಕ್ಷೇತ್ರಗಳಲ್ಲಿ ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬ ಚರ್ಚೆಗಳು ನಡೆಯುತ್ತಿಲ್ಲ. ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ರಾಜಕೀಯ ಪಕ್ಷಗಳು, ಈವರೆಗೂ ಆಂತರಿಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳದಿರುವುದು ಢಾಳಾಗಿ ಕಾಣುವ ಒಂದು ಕೊರತೆ.
ಕಮ್ಯುನಿಸ್ಟ್ ಪಕ್ಷಗಳು ತಾವು ಪಾರಂಪರಿಕವಾಗಿ ಅಳವಡಿಸಿಕೊಂಡು, ಮುಂದುವರೆಸುತ್ತಿರುವ “ ಕೇಂದ್ರೀಯ ಪ್ರಜಾಪ್ರಭುತ್ವ” ವನ್ನು (Democratic Centralism) ಸಮರ್ಥಿಸಿಕೊಂಡರೂ, ಇದು ನಿಜಾರ್ಥದಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಪೋಷಿಸುವುದಿಲ್ಲ, ಬದಲಾಗಿ ಮೇಲಿನಿಂದ ಹೇರಲ್ಪಡುವ ತಾತ್ವಿಕ ಸಂಕೋಲೆಯಾಗಿ ಕಾಣುತ್ತದೆ. ಶತಮಾನದ ಹಿಂದಿನ ಈ ನಿಯಮವನ್ನು ಮರುವಿಮರ್ಶೆ ಮಾಡುವುದೇ “ ಪರಿಷ್ಕರಣವಾದ ”ದ ಆರೋಪಕ್ಕೆ ಗುರಿಯಾಗುತ್ತದೆ. ( ಆ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಕ್ಷಗಳಲ್ಲಿ ಪ್ರಧಾನವಾಗಿ ಇರುತ್ತಿದ್ದ ಕಾರ್ಮಿಕರ ಪೈಕಿ ಹೆಚ್ಚು ಅಕ್ಷರಸ್ಥರು, ಇರುತ್ತಿರಲಿಲ್ಲ. ಸುದ್ದಿ, ಮಾಹಿತಿ ಮತ್ತು ಸೈದ್ಧಾಂತಿಕ ವಿಚಾರಗಳನ್ನು ಮನದಟ್ಟಾಗುವಂತೆ ಹೇಳಲು ವಿದ್ಯಾವಂತರನ್ನು, ಶೈಕ್ಷಣಿಕ ಬುದ್ಧಿಜೀವಿಗಳನ್ನು ಅವಲಂಬಿಸಲಾಗುತ್ತಿತ್ತು. ಇವರ ನಡುವೆ ಸಹಜವಾಗಿ ಭಿನ್ನಾಭಿಪ್ರಾಯಗಳು ಇರುತ್ತಿದ್ದವು. ಈ ಕಾರಣಕ್ಕಾಗಿ ಪಕ್ಷದಲ್ಲಿ ಒಮ್ಮತದ ಅಭಿಪ್ರಾಯವನ್ನು ಅಳವಡಿಸುವ ಉದ್ದೇಶದಿಂದ, ಈ ನಿಯಮವನ್ನು ರೂಪಿಸಲಾಗಿತ್ತು. ಡಿಜಿಟಲ್ ಯುಗದಲ್ಲಿ ಇದರ ಅವಶ್ಯಕತೆ ಇಲ್ಲ). ಇತರ ಬೂರ್ಷ್ವಾ ಪಕ್ಷಗಳಲ್ಲೂ, ಪ್ರಜಾಪ್ರಭುತ್ವಕ್ಕೆ ಅಹರ್ನಿಶಿ ಹೋರಾಡುವ ಜನಪರ ಸಂಘಟನೆಗಳಲ್ಲೂ ಇದೇ ಕೊರತೆಯನ್ನು ಗುರುತಿಸಬಹುದು. ಶತಮಾನದ ಇತಿಹಾಸ ಇರುವ ಕಮ್ಯುನಿಸ್ಟ್ ಪಕ್ಷಗಳಿಗೆ ಈವರೆಗೂ ಒಬ್ಬ ಮಹಿಳೆಯೂ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತವಾಗಿಲ್ಲ. ಬಹುತೇಕ ಪ್ರಾದೇಶಿಕ ರಾಜಕೀಯ ಪಕ್ಷಗಳು, ದಲಿತ ಚಳುವಳಿಗಳಿಗೂ ಸಹ ಇದನ್ನು ಆರೋಪಿಸಬಹುದು. ನಾಯಕತ್ವ ಎನ್ನುವುದು ಆಂತರಿಕ ಪ್ರಬಲ ಗುಂಪಿನ ಆದ್ಯತೆಯಾಗದೆ, ತಳಮಟ್ಟದವರೆಗಿನ ಸಾಮಾನ್ಯ ಕಾರ್ಯಕರ್ತರ ಆಯ್ಕೆ ಆಗುವುದು ನಿಜವಾದ ಪ್ರಜಾಪ್ರಭುತ್ವ ಅಲ್ಲವೇ ? ಹಾಗಾದಲ್ಲಿ ನಾವೆಲ್ಲಿದ್ದೇವೆ ? ಈ ಗಂಭೀರ ವಿಚಾರವನ್ನು ಆತ್ಮವಿಮರ್ಶಾತ್ಮಕ ನೆಲೆಯಲ್ಲಿ ಚರ್ಚಿಸುತ್ತಿದ್ದೇವೆಯೇ ?

ಈ ಕಾರಣಗಳಿಂದಲೇ ಭಾರತದ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಪ್ರಜಾಪ್ರಭುತ್ವೀಯ ಸಂಘಟನೆಗಳಲ್ಲಿ ಪಿತೃಪ್ರಧಾನತೆ ಇಂದಿಗೂ ಗಟ್ಟಿಯಾಗಿದೆ. ಮಹಿಳಾ ಪ್ರಾತಿನಿಧ್ಯ ʼ ಗಂಡಾಳ್ವಿಕೆಯು ಕೊಡುವ ʼ ಒಂದು ಅವಕಾಶ ಅಥವಾ ಸೌಲಭ್ಯವಾಗಿ ಕಾಣಲಾಗುತ್ತಿದೆ. ಮುಖ್ಯವಾಹಿನಿಯ ಕಮ್ಯುನಿಸ್ಟ್ ಪಕ್ಷಗಳಿಗೆ ಇಂದಿಗೂ ಜಾತಿ ವ್ಯವಸ್ಥೆಯನ್ನು ಎದುರಿಸುವ ಸ್ಪಷ್ಟ ಸೈದ್ದಾಂತಿಕ ಮಾರ್ಗಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ, ಅಂಬೇಡ್ಕರ್ವಾದಿಗಳಿಗೆ ನವ ಉದಾರವಾದ ಮತ್ತು ಕಾರ್ಪೋರೇಟ್ ಬಂಡವಾಳಶಾಹಿಯನ್ನು ಎದುರಿಸುವ ಬಗೆ ಹೊಳೆಯುತ್ತಿಲ್ಲ. ಮೂಲ ಅಂಬೇಡ್ಕರ್ವಾದದಲ್ಲಿ ವ್ಯಾಖ್ಯಾನಿಸಲ್ಪಟ್ಟ ಔದ್ಯೋಗಿಕ ಬಂಡವಾಳ, ಕೈಗಾರಿಕೀಕರಣ ಮತ್ತು ವಸಾಹತೀಕರಣದ ಪ್ರಕ್ರಿಯೆಗಳು ಈ ಡಿಜಿಟಲ್ ಯುಗದಲ್ಲಿ ಸಂಪೂರ್ಣ ರೂಪಾಂತರಗೊಂಡಿವೆ. ಅಂಬೇಡ್ಕರ್ ಬರಹಗಳಲ್ಲೇ ಇದಕ್ಕೆ ಉತ್ತರಗಳನ್ನು ಶೋಧಿಸಲಾಗುವುದಿಲ್ಲ ಏಕೆಂದರೆ, ಬಂಡವಾಳಶಾಹಿಯು ಸಾಮ್ರಾಜ್ಯಶಾಹಿ ರೂಪ ತಳೆಯುವ ತಾತ್ವಿಕ ನೆಲೆಗಳನ್ನು ಅಂಬೇಡ್ಕರ್ ಚರ್ಚಿಸಿಲ್ಲ. ಗಾಂಧಿವಾದದಲ್ಲಿ ಇದರ ಸುಳಿವೂ ಇರುವುದಿಲ್ಲ. ಇದಕ್ಕೆ ಮಾರ್ಕ್ಸ್ವಾದದ ಅನುಸಂಧಾನ ಅತ್ಯವಶ್ಯ. ಇದು ಈ ದಾರ್ಶನಿಕರ ಕೊರತೆ ಎಂದು ಭಾವಿಸಬೇಕಿಲ್ಲ. ಬದಲಾಗಿ ವರ್ತಮಾನದ ಹಾಗೂ ಭವಿಷ್ಯದ ಭಾರತದ ದೃಷ್ಟಿಯಿಂದ ಈ ಚಿಂತನೆಗಳನ್ನು ಮರುವಿಮರ್ಶೆಗೊಳಪಡಿಸುವ ತುರ್ತು ನಮ್ಮ ಮುಂದಿದೆ ಅಲ್ಲವೇ ?
ಈ ದೃಷ್ಟಿಯಿಂದ ಗಾಂಧಿ-ಅಂಬೇಡ್ಕರ್-ಮಾರ್ಕ್ಸ್ ವಿಚಾರಧಾರೆಗಳು ಏನು ಎಂದು ಜನರಿಗೆ ಹೇಳಲು ಸಾಧ್ಯವಾಗಿದೆಯೇ ಹೊರತು, ಆ ಆಲೋಚನೆಗಳನ್ನು ಡಿಜಿಟಲ್ ಯುಗದಲ್ಲಿ ಹೇಗೆ ಅಳವಡಿಸಿ, ಅನುಕರಿಸಬೇಕು ಎಂಬ ಕಾರ್ಯವಿಧಾನಗಳನ್ನು ರೂಪಿಸಲು ಸಾಧ್ಯವಾಗಿಲ್ಲ. ಪರ-ವಿರೋಧ-ಮಧ್ಯಮ ಮಾರ್ಗಗಳ ಮೂಲಕ ಈ ದಾರ್ಶನಿಕರ ವೈಭವೀಕರಣ-ಖಂಡನೆ ಅಥವಾ ಅವಗಣನೆ ಕಾಣುತ್ತಿದೆಯೇ ಹೊರತು, ತಾತ್ವಿಕ ಅನುಸಂಧಾನ ಮತ್ತು ವರ್ತಮಾನದ ಪರಿಹಾರೋಪಾಯಗಳ ಹಾದಿಯಲ್ಲಿ ಚರ್ಚೆಗಳು ಸಾಗುತ್ತಿಲ್ಲ. ಈ ದಾರ್ಶನಿಕರು ಸಮಾಜದ ಮುಂದಿಟ್ಟ ವ್ಯಾಖ್ಯಾನಗಳು 75 ವರ್ಷಗಳ ಸ್ವತಂತ್ರ ಭಾರತದಲ್ಲಿ ಖಂಡಿತವಾಗಿಯೂ ಪುನರ್ ವಿಮರ್ಶೆಗಳಗಾಗಬೇಕಿದೆ. ಆದರೆ ಮಾರ್ಕ್ಸ್ನನ್ನೂ ಒಳಗೊಂಡಂತೆ ಆ ಬೌದ್ಧಿಕ ನಿರೂಪಣೆಗಳನ್ನು ಮರುವ್ಯಾಖ್ಯಾನಿಸುವುದೇ ಅಪರಾಧ ಎಂದು ಭಾವಿಸುವ ಮನಸ್ಥಿತಿಯೇ ನಮ್ಮನ್ನು ನಿಯಂತ್ರಿಸುತ್ತಿದೆ. ಈ ಮನೋಭಾವದ ಸಾಂಸ್ಥೀಕರಣವೇ ನಮ್ಮನ್ನು ಆತ್ಮಾವಲೋಕನದ ಹಾದಿಯಿಂದ ವಿಮುಖವಾಗಿಸುತ್ತಿವೆ.

ಸಾಮಾಜಿಕ ಸಂಕಥನಗಳು
ಸಾಮಾಜಿಕ ಸಂಕಥನಗಳನ್ನು ಗಮನಿಸಿದಾಗ ನಮ್ಮ ಮುಂದೆ ಇದೇ ದಾರ್ಶನಿಕರು ನಿಲ್ಲುತ್ತಾರೆ. ಇವರೊಂದಿಗೆ ಬುದ್ಧನಿಂದ ಬಸವನವರೆಗೆ, 19-20ನೆ ಶತಮಾನದ ಫುಲೆ, ನಾರಾಯಣಗುರು, ಪೆರಿಯಾರ್, ರವೀಂದ್ರ ನಾಥ ಠಾಗೋರ್ , ವಿವೇಕಾನಂದ ಮೊದಲಾದವರು ಕಾಣುತ್ತಾರೆ. ಈ ಎಲ್ಲ ದಾರ್ಶನಿಕರು ಕಂಡ ಹಾಗೂ ಬದುಕಿದ ಸಮಾಜಗಳಿಗೂ, 21ನೆ ಶತಮಾನದಲ್ಲಿ ನಾವು ಕಾಣುತ್ತಿರುವ ಸಮಾಜಗಳಿಗೂ ಇರುವ ಸೂಕ್ಷ್ಮ ಅಂತರ ಮತ್ತು ವ್ಯತ್ಯಾಸವನ್ನು ನಾವು ಗಮನಿಸಬೇಕಾಗುತ್ತದೆ. ಮಹಿಳಾ ಸಮಾನತೆ, ಅಸ್ಪೃಶ್ಯತೆಯ ನಿರ್ಮೂಲ, ಸಾಮಾಜಿಕ ತಾರತಮ್ಯಗಳನ್ನು ತೊಡೆದುಹಾಕುವ ತಾತ್ವಿಕತೆ, ದುಡಿಯುವ ವರ್ಗಗಳ ಶೋಷಣೆ ಈ ಎಲ್ಲ ವಿಚಾರಗಳಲ್ಲೂ ನವ ಭಾರತದ, ಆರ್ಥಿಕವಾಗಿ ಸಾಮಾಜಿಕವಾಗಿ ಮುಂದುವರೆದ ಸಮಾಜ ತನ್ನ ಪ್ರಾಚೀನ ನಡವಳಿಕೆಗಳನ್ನು, ಮನೋಧೋರಣೆಗಳನ್ನು ಹಾಗೂ ತಾತ್ವಿಕ ಚೌಕಟ್ಟುಗಳನ್ನು ಮೂಲದಲ್ಲಿ ಕಾಪಾಡಿಕೊಂಡೇ ಬಂದಿದೆ.
ಅಂಬೇಡ್ಕರ್ ಜಾತಿ ವಿನಾಶದ ಕರೆ ಕೊಟ್ಟಾಗ, ಪೆರಿಯಾರ್ ವೈಚಾರಿಕ ಪ್ರಜ್ಞೆಯ ಪ್ರತಿಪಾದನೆ ಮಾಡಿದಾಗ, ನಾರಾಯಣಗುರು, ವಿವೇಕಾನಂದ ಮೊದಲಾದವರು ಎಲ್ಲ ಮತ-ಧರ್ಮ-ಜಾತಿಗಳನ್ನೂ ಸಮಾನವಾಗಿ ನೋಡುವ ಪರಂಪರೆಯನ್ನು ಬೋಧಿಸಿದಾಗ, ಠಾಗೋರ್ ಪಾಶ್ಚಿಮಾತ್ಯ ಚಿಂತನೆ ಮತ್ತು ವೈಜ್ಞಾನಿಕ ಮನಸ್ಥಿತಿಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದಾಗ, ಭಾರತೀಯ ಸಮಾಜದ ಶೇಕಡಾ 80ಕ್ಕೂ ಹೆಚ್ಚು ಜನಸಂಖ್ಯೆ ಅನಕ್ಷರಸ್ಥರನ್ನು ಹೊಂದಿತ್ತು. ಆದರೆ 77 ವರ್ಷಗಳ ಸ್ವತಂತ್ರ-ಸ್ವಾವಲಂಬಿ ಆಳ್ವಿಕೆಯ ನಂತರ ಇಂದು ಈ ಅನುಪಾತ ಅದಲುಬದಲಾಗಿದೆ. ಶೈಕ್ಷಣಿಕವಾಗಿ ವಿಶ್ವಮಾನ್ಯ ಸಂಸ್ಥೆಗಳಿಗೆ ಭಾರತ ನೆಲೆಯಾಗಿದೆ. ಗ್ರಾಮೀಣ ಭಾರತದ ಹೆಚ್ಚು ಹೆಚ್ಚು ಜನರು ವಿದ್ಯಾರ್ಜನೆಯ ಉತ್ತುಂಗ ತಲುಪುತ್ತಿದ್ದಾರೆ. ವೈಜ್ಞಾನಿಕವಾಗಿ ಬಾಹ್ಯಾಕಾಶ ವಿಜ್ಞಾನದಲ್ಲೂ ಭಾರತ ಅಗ್ರಶ್ರೇಣಿಯನ್ನು ತಲುಪುತ್ತಿದೆ. ಇವರ ನಡುವೆ ನಮ್ಮ ಎಲ್ಲ ರೀತಿಯ ಜನಪರ ಹೋರಾಟಗಳೂ, ವಿಭಿನ್ನ ಸೈದ್ದಾಂತಿಕ ಚೌಕಟ್ಟುಗಳಲ್ಲಿ ಕ್ರಿಯಾಶೀಲವಾಗಿವೆ.

ಹೀಗಿರುವಾಗ ನಾವು ಸ್ವಾತಂತ್ರ್ಯ ಪೂರ್ವದ ದಾರ್ಶನಿಕರ ಚಿಂತನೆಗಳನ್ನು ಮರುಓದಿಗೆ ಒಳಪಡಿಸುವುದೇ ಅಲ್ಲದೆ, ಮತ್ತೆಮತ್ತೆ ಸಾರ್ವಜನಿಕವಾಗಿ ಹೇಳಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದ್ದೇವೆ. ಬೌದ್ಧಿಕ-ರಾಜಕೀಯ ನೆಲೆಯಲ್ಲಿ ಇದು ಸಾಧ್ಯವಾಗುತ್ತಿದೆ. ಆದರೆ ಜನಪರ ಹೋರಾಟಗಳ ವೇದಿಕೆಗಳಲ್ಲಿ ರೂಪುಗೊಳ್ಳುವ ಸಂಕಥನಗಳಲ್ಲಿ, ಸಂವಾದಗಳಲ್ಲಿ, ಈ ದಾರ್ಶನಿಕರ ಚಿಂತನೆಗಳನ್ನು ಪರಾಮರ್ಶಿಸುವಾಗ, ವರ್ತಮಾನದ ತಾತ್ವಿಕ ನೆಲೆಗಳನ್ನೇ ಬಳಸಿಕೊಂಡು, ಪರಸ್ಪರ ಮುಖಾಮುಖಿಯಾಗಿಸುವ ಒಂದು ವಿಧಾನವನ್ನು ಅನುಸರಿಸಲಾಗುತ್ತಿದೆ. ಇದು ಅಗತ್ಯವೇನೋ ಹೌದು, ಆದರೆ ಈ ಚಿಂತನೆಗಳು ಹುಟ್ಟಿಕೊಂಡ ಕಾಲಘಟ್ಟಗಳಿಗೂ, ವರ್ತಮಾನದ ಡಿಜಿಟಲ್ ಯುಗಕ್ಕೂ ನಡುವೆ ಇರುವ ಸೂಕ್ಷ್ಯ ವ್ಯತ್ಯಾಸವನ್ನು ಗಮನಿಸಿದಾಗ, ಈ ಎಲ್ಲ ಚಿಂತನೆಗಳನ್ನೂ, ಈಗಿನ ಯುವ ತಲೆಮಾರಿಗೆ ಅರ್ಥವಾಗುವ ರೀತಿಯಲ್ಲಿ ಮರುವ್ಯಾಖ್ಯಾನಿಸುವ ಅಗತ್ಯತೆಯನ್ನು ನಾವು ಮನಗಾಣಬೇಕಿದೆ. ವಿವೇಕಾನಂದ ಮೊದಲಾದವರ ಅಧ್ಯಾತ್ಮ ಇಂದು ಸಾಂಸ್ಥೀಕರಣಕ್ಕೊಳಗಾಗಿರುವುದನ್ನು, ಮಾರ್ಕ್ಸ್ನ ಆರ್ಥಿಕ ಚಿಂತನೆಗಳು ಕಾರ್ಮಿಕ ಸಂಘಟನೆಗಳ ಚೌಕಟ್ಟುಗಳಿಗೆ ಸೀಮಿತವಾಗಿರುವುದನ್ನು, ಅಂಬೇಡ್ಕರ್-ಪೆರಿಯಾರ್ ಚಿಂತನೆಗಳು ಜಾತಿ ಸಮೀಕರಣಗಳ ಸಿಕ್ಕುಗಳಲ್ಲಿ ಸಿಲುಕಿರುವುದನ್ನು, ಠಾಗೋರ್ ಮುಂತಾದವರ ಆಧುನಿಕತೆಯ ಚಿಂತನೆಗಳು ಸಾಂಸ್ಥೀಕರಣಗೊಂಡು, ಅಧಿಕಾರಸ್ಥರ ಪಾಲಾಗಿರುವುದನ್ನು ಈ ದೃಷ್ಟಿಯಿಂದಲೇ ಗುರುತಿಸಬೇಕಿದೆ.
ಸಾಂಸ್ಕೃತಿಕ ನೆಲೆಯಲ್ಲಿ, ಮನುವಾದ ಇತ್ಯಾದಿ,,,,
ಸಾಮಾಜಿಕ-ರಾಜಕೀಯ ಸಂಕಥನಗಳನ್ನು ಇತ್ತೀಚೆಗೆ ಅತಿ ಹೆಚ್ಚು ಬಳಕೆಯಲ್ಲಿರುವ, ಒಂದು ರೀತಿಯಲ್ಲಿ ಕ್ಲೀಷೆಯಾಗಿಹೋಗಿರುವ ಪದ ಎಂದರೆ ʼ ಮನುವಾದ/ಮನುವಾದಿ ʼ ಎಂಬ ಪದಬಳಕೆ. ಸಾಮಾನ್ಯವಾಗಿ ದಲಿತರು ಹಾಗೂ ಇನ್ನಿತರ ಶೋಷಿತ ತಳಸಮುದಾಯಗಳ, ಹಿಂದುಳಿದ ವರ್ಗಗಳ, ಶೂದ್ರಾತಿಶೂದ್ರ ಸಮಾಜಗಳ , ಮತೀಯ ಅಲ್ಪಸಂಖ್ಯಾತರ ವಿರೋಧಿ ಧೋರಣೆಗಳನ್ನು ಹೊಂದಿರುವ ಎಲ್ಲ ವಿದ್ಯಮಾನಗಳನ್ನೂ, ʼ ಬ್ರಾಹ್ಮಣ್ಯʼದ/ವೈದಿಕಶಾಹಿಯ ಸಂಕೇತವಾಗಿ ʼ ಮನುವಾದ ʼ ಎಂದು ಕರೆಯುವುದು ವಾಡಿಕೆಯಾಗಿದೆ. ರಾಜಕೀಯವಾಗಿ ಬಿಜೆಪಿ ಈ ಹಣೆಪಟ್ಟಿಗೆ ಅರ್ಹವಾಗಿ ಕಂಡರೆ, ಸಾಮಾಜಿಕ ನೆಲೆಯಲ್ಲಿ ಮೇಲ್ಜಾತಿಗಳ ಸಾಂಸ್ಥಿಕ-ಸಾಂಘಿಕ ವೇದಿಕೆಗಳು ಇಲ್ಲಿ ಪ್ರಧಾನವಾಗಿ ಬಿಂಬಿಸಲ್ಪಡುತ್ತವೆ. ಮಧ್ಯಕಾಲೀನ ಭಾರತದಲ್ಲಿ ʼಮನುಸ್ಮೃತಿʼಯು ಇಡೀ ಭಾರತೀಯ ಸಮಾಜವನ್ನು ನಿಯಂತ್ರಿಸುವ ಮತ್ತು ನಿರ್ದೇಶಿಸುವ ಒಂದು ಧರ್ಮ ಸಂಹಿತೆಯಾಗಿ ದೇಶದ ಸಾರ್ವಜನಿಕ ಸಂಕಥನಗಳಲ್ಲಿ, ಪರ-ವಿರೋಧ ನೆಲೆಗಳಲ್ಲಿ ವ್ಯಾಖ್ಯಾನಿಸಲ್ಪಡುತ್ತವೆ.
ಈ ಸಾಂಪ್ರದಾಯಿಕ ಧರ್ಮಸಂಹಿತೆಯಲ್ಲಿ ವಿಧಿಸಲಾಗಿರುವ ಜಾತಿ ಪ್ರಧಾನ ಕಟ್ಟಳೆಗಳು ಮತ್ತು ನಿಯಮಗಳು ಡಿಜಿಟಲ್ ಯುಗದ ಭಾರತದಲ್ಲೂ ಜಾರಿಯಲ್ಲಿರುವುದರಿಂದ, ಶೋಷಿತ ತಳವರ್ಗಗಳು, ತಳಸ್ತರದ ಜಾತಿಗಳು ಇದರ ದುಷ್ಪರಿಣಾಮಗಳನ್ನು ಅನುಭವಿಸುತ್ತಲೇ ಬಂದಿರುವುದು ಚಾರಿತ್ರಿಕ ಸತ್ಯ. ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ-ಬೌದ್ಧಿಕ ಹಾಗೂ ಆಧ್ಯಾತ್ಮಿಕ ವಲಯಗಳನ್ನೂ ಆವರಿಸಿರುವ ಈ ಪ್ರಾಚೀನ ಸಂಹಿತೆಗಳು ವರ್ತಮಾನದ ಸಮಾಜದಲ್ಲಿ ಹಲವು ರೂಪಾಂತರಗಳೊಡನೆ ವ್ಯಕ್ತವಾಗುವುದನ್ನು ಗಂಭೀರವಾಗಿ ಪರಾಮರ್ಶಿಸಬೇಕಿದೆ. ಅಸ್ಪೃಶ್ಯತೆ ಮತ್ತು ಮಹಿಳಾ ಅಧೀನತೆಯನ್ನೂ ಒಳಗೊಂಡಂತೆ, ಸಮಾಜದಲ್ಲಿ ʼಅನ್ಯʼ ರನ್ನು ಗುರುತಿಸಿ, ಪ್ರತ್ಯೇಕಿಸಿ, ಕೆಲವೊಮ್ಮೆ ತುಚ್ಛೀಕರಿಸಿ, ದೂರೀಕರಿಸುವ ಪ್ರಾಚೀನ ನಡವಳಿಕೆಗಳು, ಆಚರಣಾತ್ಮಕವಾಗಿ ನಮ್ಮ ನಡುವೆ ಜಾರಿಯಲ್ಲಿರುವುದು ಕಟು ಸತ್ಯ.
ಆದರೆ 21ನೆ ಶತಮಾನದಲ್ಲಿ ನಿಂತು ʼ ಮನುವಾದʼವನ್ನು ನಿರ್ವಚಿಸುವಾಗ ನಮಗೆ ಅದರೊಳಗೆ ಕಾಣಬೇಕಿರುವುದು ಕೇವಲ ವೈದಿಕಶಾಹಿಯು ವಿಧಿಸಿರುವ ಧಾರ್ಮಿಕ ವಿಧಿವಿಧಾನಗಳು, ಆಚರಣೆಗಳು, ಕಟ್ಟಳೆಗಳು ಮಾತ್ರವೇ ಅಲ್ಲ. ಕೌಟುಂಬಿಕ ನೆಲೆಯಲ್ಲಿ ಪೋಷಿಸಲ್ಪಟ್ಟು ಸಾಮಾಜೀಕರಣಕ್ಕೊಳಗಾಗುವ ಈ ನಡವಳಿಕೆಗಳಿಗಿಂತಲೂ ಹೆಚ್ಚಾಗಿ, ಮನುಸ್ಮತಿ ಬೋಧಿಸುವ ಪಿತೃಪ್ರಧಾನ-ಊಳಿಗಮಾನ್ಯ-ಯಜಮಾನಿಕೆಯ ಮೌಲ್ಯಗಳನ್ನು ಒಳಗೊಂಡಂತೆಯೇ ʼ ಮನುವಾದ ʼ ವನ್ನು ನಿರ್ವಚಿಸಬೇಕಿದೆ. ಭಾರತೀಯ ಸಮಾಜದಲ್ಲಿ ಬೇರೂರಿರುವ ಅತ್ಯಂತ ಹೀನ ಆಚರಣೆಯಾದ ಅಸ್ಪೃಶ್ಯತೆ ಒಂದು ನೆಲೆಯಲ್ಲಿ, ಈ ತಾರತಮ್ಯಕ್ಕೊಳಗಾಗುವ ವ್ಯಕ್ತಿಯ ಹುಟ್ಟನ್ನು ಆಧರಿಸಿದ್ದರೆ, ಮತ್ತೊಂದು ನೆಲೆಯಲ್ಲಿ ಲಿಂಗತ್ವವನ್ನೂ ಆಧರಿಸಿರುತ್ತದೆ ಎನ್ನುವುದು ವಾಸ್ತವ. ಮೇಲ್ಜಾತಿಗಳಲ್ಲೂ ಸಹ ಕೌಟುಂಬಿಕ ನೆಲೆಯಲ್ಲಿ, ನಾಲ್ಕು ಗೋಡೆಗಳ ನಡುವೆ, ಸದ್ದಿಲ್ಲದೆ ಅನುಸರಿಸಲ್ಪಡುವ ʼಅಸ್ಪೃಶ್ಯತೆ-ಬಹಿಷ್ಕಾರ ʼಕ್ಕೆ ಮೊದಲು ತುತ್ತಾಗುವುದು ಮಹಿಳೆಯೇ ಎನ್ನುವುದನ್ನು ಗುರುತಿಸಬೇಕಲ್ಲವೇ ? ಇದು ಎಲ್ಲ ಜಾತಿಗಳಲ್ಲೂ ಅನುಸರಿಸುವ ಪ್ರಾಚೀನ ಪದ್ಧತಿಯೂ ಹೌದು.

ಸ್ತ್ರೀವಾದಿ ನೆಲೆಯಲ್ಲಿ
ಮುಟ್ಟಾದ ಹೆಣ್ಣುಮಕ್ಕಳನ್ನು ಮೈಲಿಗೆ ಎಂದು ಭಾವಿಸುವುದು, ಸಂಗಾತಿಯನ್ನು ಕಳೆದುಕೊಂಡ ವಿಧವೆಯರನ್ನು ಸಾಂಪ್ರದಾಯಿಕ-ಧಾರ್ಮಿಕ ಆಚರಣೆಗಳ ಸಂದರ್ಭಗಳಲ್ಲಿ ʼ ಬಹಿಷ್ಕೃತʼ ರಾಗಿ ಕಾಣುವುದು, ಅನ್ಯ ಜಾತಿಯ ವ್ಯಕ್ತಿಯನ್ನು ವಿವಾಹವಾದರೆ ʼಬಹಿಷ್ಕರಿಸುವುದುʼ ( ಕೊಲೆ ಮಾಡುವುದು), ತೃತೀಯ/ಅನ್ಯ ಲಿಂಗಿಗಳನ್ನು ಕಳಂಕ ಎಂದು ಕಾಣುವುದು, ಇವೆಲ್ಲವೂ ಮಡಿ-ಮೈಲಿಗೆ ಅಥವಾ ಶುದ್ಧ-ಅಶುದ್ಧ ಅಥವಾ ಪವಿತ್ರ-ಅಪವಿತ್ರ ಎಂಬ ಪಿತೃಪ್ರಧಾನ ಮೌಲ್ಯಗಳಿಂದ ಸೃಷ್ಟಿಯಾಗಿರುವ ಪ್ರಾಚೀನ ನಡವಳಿಕೆಗಳು. ಹೀಗೆ ಇಡೀ ಸಮಾಜವನ್ನು ಅಥವಾ ಸಮಾಜದ ಒಂದು ವರ್ಗವನ್ನು, ಆ ವರ್ಗದೊಳಗೇ ಕೆಲವು ವ್ಯಕ್ತಿಗಳನ್ನು ಪ್ರತ್ಯೇಕಿಸುವ ಸಾಂಪ್ರದಾಯಿಕ ಪರಂಪರೆಗೆ ಮನುಸ್ಮೃತಿಯೇ ಮೂಲ. ಹೀಗೆ ಒಂದು ಸಮಾಜ ಅಥವಾ ಸಮುದಾಯ ತನ್ನ ಸುತ್ತಲೂ ಬೇಲಿಗಳನ್ನು ಕಟ್ಟಿಕೊಂಡು, ಮತ್ತೊಂದು ʼಅನ್ಯʼವನ್ನು ಹೊರಗಿಡುವ ಪ್ರಕ್ರಿಯೆಗೆ ʼ ಮನುವಾದ ʼ ಎಂದು ಹೇಳಬಹುದಾದರೆ, ಭಾರತದ ಇಂದಿನ ರಾಜಕಾರಣದಲ್ಲಿ ಯಾವ ಪಕ್ಷವನ್ನು, ಯಾವ ಸಂಘಟನೆಯನ್ನು ʼಮನುವಾದಿʼ ಹಣೆಪಟ್ಟಿಯಿಂದ ಮುಕ್ತವಾಗಿಸಲು ಸಾಧ್ಯ ?

ಮನುಸ್ಮೃತಿಯ ಪ್ರಧಾನ ಧಾತುವನ್ನು “ಸಮಾಜವನ್ನು, ಅದರೊಳಗಿನ ಸಮುದಾಯ/ಜಾತಿ/ಉಪಜಾತಿ ಗುಂಪುಗಳನ್ನು, ಶ್ರೇಷ್ಠ-ಕನಿಷ್ಠ ಅಥವಾ ಮೇಲು ಕೀಳುಗಳ ಆಧಾರದಲ್ಲಿ ವಿಂಗಡಿಸುವುದು, ಹೀಗೆ ವಿಂಗಡಿಸಲ್ಪಟ್ಟ ಗುಂಪುಗಳಲ್ಲಿ ಕೆಲವನ್ನು ಹೊರಗಿಡುವುದು, ಪ್ರತ್ಯೇಕಿಸುವುದು ಅಥವಾ ಅಸ್ಪೃಶ್ಯರಂತೆ ಪರಿಗಣಿಸುವುದು, ಮೇಲ್ಪದರದ ಯಜಮಾನಿಕೆ ಸ್ಥಾಪಿಸುವುದು, ಕೆಳಸ್ತರದ ಸಮಾಜವನ್ನು ಅಧೀನಗೊಳಿಸುವುದು, ಮಹಿಳೆಯನ್ನು ಅಧೀನಳಾಗಿ ನೋಡುವುದು ” ಈ ಲಕ್ಷಣಗಳಲ್ಲಿ ಗುರುತಿಸಬಹುದು. ಡಾ. ಅಂಬೇಡ್ಕರ್ ಪದೇಪದೇ ಹೇಳಿರುವಂತೆ ಭಾರತದಲ್ಲಿ ಪ್ರತಿಯೊಂದು ಜಾತಿಯೂ ತನಗಿಂತಲೂ ಕೆಳಗಿನ ಜಾತಿಯನ್ನು ಕೀಳಾಗಿಯೇ ನೋಡುತ್ತದೆ, ಹಾಗಾಗಿಯೇ ಅಂಬೇಡ್ಕರ್ ಭಾರತದ ಜಾತಿ ವ್ಯವಸ್ಥೆಯನ್ನು “ ಮೆಟ್ಟಿಲುಗಳಿಲ್ಲದ ಬಹುಮಹಡಿ ಕಟ್ಟಡ ” ಎಂದು ವ್ಯಾಖ್ಯಾನಿಸಿದ್ದರು.
ಮುಂದುವರೆಯುತ್ತದೆ,,,,,,








