ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆಗಾಗ ಹೊಸ ಹೊಸ ಬಸ್ಗಳನ್ನು ಪ್ರಯಾಣಿಕರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೊಸದಾಗಿ ಐಷಾರಾಮಿ ಸೌಲಭ್ಯವುಳ್ಳ ವಿನೂತನ ಮಾದರಿಯ ಸ್ಲೀಪರ್ ಬಸ್ಗಳನ್ನು ಪರಿಚಯಿಸಿದೆ.
ಮಹತ್ವಾಕಾಂಕ್ಷೆಯ ವೋಲ್ವೋ ಅಂಬಾರಿ ಬಸ್ ಸೇವೆಗೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಾಂಕೇತಿಕ ಚಾಲನೆ ನೀಡಿದ್ದಾರೆ.
ವಿಧಾನಸೌಧದ ಮಹಾದ್ವಾರದ ಬಳಿ ವೋಲ್ವೋ ಮಲ್ಟಿ ಆಕ್ಸಲ್ ಬಸ್ ಗಳ ಲೋಕಾರ್ಪಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗೆ ಈ ವರ್ಷ ಒಂದು ಸಾವಿರ ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವೋಲ್ವೋ ಬಿಎಸ್ – ವಿಆಯ್ ೯೬೦೦ಎಸ್ ಮಾದರಿಯ ಮಲ್ಟಿ ಆಕ್ಸಲ್ ಮೂಲಕ ಅಂಬಾರಿ ಉತ್ಸವ ಎಂಬ ಬ್ರ್ಯಾಂಡ್ ಹೆಸರು ಮತ್ತು ಸಂಭ್ರಮದ ಪ್ರಯಾಣ ಎಂಬ ಟ್ಯಾಂಗ್ ಲೈನ್ ನೀಡಿದೆ .
೪೦ ಆಸನಗಳು ೨+೧ ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಮಲಗುವ ಮತ್ತು ಕುಳಿತುಕೊಳ್ಳವ ಸ್ಥಾನದಲ್ಲಿ ಬೆಸ್ಟ್ -ಇನ್ ಕ್ಲಾಸ್ ಹೆಡ ರೂಮ್ ಜೊತೆಗೆ ಉನ್ನತ ಪ್ರಯಾಣದ ಅನುಭವವನ್ನು ನೀಡುತ್ತದೆ .
ಅಂತಾರಾಜ್ಯ ಪ್ರಯಾಣಿಕರಿಗಾಗಿ ಸಿದ್ಧವಾದ ‘9600 ವೋಲ್ವೋ ಮಲ್ಟಿ-ಆಕ್ಸಲ್ ಸ್ಲೀಪರ್’ ಬಸ್ಗೆ ‘ಅಂಬಾರಿ ಉತ್ಸವ’ ಎಂದು ನಾಮಕರಣ ಮಾಡಲಾಗಿದೆ.
ಕೆಎಸ್’ಆರ್’ಟಿಸಿ ನಿರ್ವಹಿಸುವ ಎಲ್ಲಾ ಸ್ಲೀಪರ್ ಕೋಚ್ ಬಸ್ಗಳಿಗಿಂತ ಅತ್ಯುತ್ತಮ ಸೌಕರ್ಯ ಹೊಂದಿರುವ ಬಸ್ ಇದಾಗಿದೆ. ಅಂಬಾರಿ ಉತ್ಸವ್- ಸೆಲೆಬ್ರೇಷನ್ ಆಫ್ ಜರ್ನಿ ಎಂದು ಎಂಬ ಘೋಷವಾಕ್ಯದಲ್ಲಿ ಕೆಎಸ್’ಆರ್’ಟಿಸಿ ಬಸ್ ಸೇವೆ ನೀಡಲಿದೆ.

1.70 ಕೋಟಿ ರೂ ವೆಚ್ಚ
ವ್ಯವಸ್ಥಿತ, ಸುಖಕರ ಪ್ರಯಾಣಕ್ಕೆ ಸುಸಜ್ಜಿತ ಸೌಲಭ್ಯವುಳ್ಳ ಪ್ರತಿ ಬಸ್ ಖರೀದಿಗೆ ಸಾರಿಗೆ ಸಂಸ್ಥೆಯು 1.70 ಕೋಟಿ ರೂ. ವೆಚ್ಚ ಮಾಡಿದೆ. ಮೊದಲ ಹಂತದಲ್ಲಿ 20 ಬಸ್ ಗಳನ್ನು ವೋಲ್ವೋ ಸಂಸ್ಥೆ ಪೂರೈಸಿದೆ. ಈ ವರ್ಷ ಒಟ್ಟು 50 ಬಸ್ ಗಳನ್ನು ಖರೀದಿಸಲು ಸಂಸ್ಥೆ ತೀರ್ಮಾನಿಸಿದೆ.
ಯುರೋಪಿಯನ್ ಮಾದರಿ ಎಸಿ-ಸ್ಲೀಪರ್ ಬಸ್ ಆಗಿದ್ದು, ಈ ಬಸ್’ಗಳು ಬೆಂಗಳೂರು ನಗರದಿಂದ ಮಂಗಳೂರು, ಕುಂದಾಪುರ, ಪುಣೆ, ಹೈದರಾಬಾದ್, ಪಣಜಿ, ಸಿಕಂದ್ರಾಬಾದ್, ಎರ್ನಾಕುಲಂ, ತ್ರಿಶೂರ್, ತಿರುವನಂಥಪುರಂಗೆ ಸಂಚರಿಸಲಿವೆ. ಬೆಂಗಳೂರು ಮತ್ತು ಮಂಗಳೂರು ವಿಭಾಗಗಳಿಂದ ಈ ಬಸ್’ಗಳು ಕಾರ್ಯನಿರ್ವಹಿಸಲಿವೆ.