ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ(Parappana Agrahara Jail) ಇರುವ ನಟ ದರ್ಶನ್(Darshan )ಅವರನ್ನು ನೋಡಲು ನಿಯಮ ಮೀರಿ ಹೋದ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಅವರಿಗೆ ಸಹಾಯ ಮಾಡಿದ ಜೈಲು ವಾರ್ಡನ್ ವಿರುದ್ಧ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್(DGP Alok Kumar) ಕಠಿಣ ಕ್ರಮ ಕೈಗೊಂಡಿದ್ದಾರೆ.

ಜನವರಿ 24ರಂದು ಯಲಹಂಕ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಒಬ್ಬರು, ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಬಿಡಲು ಬಂದ ವೇಳೆ, ಜೈಲು ವಾರ್ಡನ್ ಪ್ರಭಾಕರ್ ಚೌಹಾನ್ ಸಹಾಯದಿಂದ ರಹಸ್ಯವಾಗಿ ದರ್ಶನ್ ಇದ್ದ ಬ್ಯಾರಕ್‌ಗೆ ತೆರಳಿದ್ದಾರೆ. ಈ ವೇಳೆ ಸಿಸಿಟಿವಿ ಕ್ಯಾಮರಾಗಳನ್ನು ತಪ್ಪಿಸಿ ಜೈಲು ನಿಯಮ ಉಲ್ಲಂಘನೆ ಮಾಡಿ ನಟ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.

ಜನವರಿ 26ರಂದು ಜೈಲಿಗೆ ಭೇಟಿ ನೀಡಿದ ಡಿಜಿಪಿ ಅಲೋಕ್ ಕುಮಾರ್ ಅವರು ಈ ಕುರಿತು ಪರಿಶೀಲನೆ ನಡೆಸಿದರು. ದರ್ಶನ್ ನೀಡಿದ ಹೇಳಿಕೆ ಹಾಗೂ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆಯಿಂದ ಘಟನೆ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ವಾರ್ಡನ್ ಪ್ರಭಾಕರ್ ಚೌಹಾನ್ ಅವರನ್ನು ಚಾಮರಾಜನಗರ ಜೈಲಿಗೆ ವರ್ಗಾವಣೆ ಮಾಡಲಾಗಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಅಲ್ಲದೇ, ಯಲಹಂಕದ ಪೊಲೀಸ್ ಪೇದೆ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲು ಡಿಸಿಪಿಗೆ ಸೂಚನೆ ನೀಡಲಾಗಿದೆ. ಜೈಲಿನೊಳಗೆ ಯಾರೇ ಇದ್ದರೂ ನಿಯಮಗಳು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಡಿಜಿಪಿ ಈ ಕ್ರಮದ ಮೂಲಕ ನೀಡಿದ್ದಾರೆ. ಈ ಘಟನೆ ಪೊಲೀಸ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.











