ಬೆಂಗಳೂರು: ಹಿರಿಯ IPS ಅಧಿಕಾರಿ ಅಲೋಕ್ ಕುಮಾರ್ ಗೆ ಭಡ್ತಿ ನೀಡಿ ಅದೇಶ ಮಾಡಿರುವ ರಾಜ್ಯ ಸರ್ಕಾರ ಅವರನ್ನು ಕಾರಾಗೃಹ ಇಲಾಖೆಯ ನೂತನ ಡಿಜಿಪಿಯಾಗಿ ವರ್ಗಾವಣೆ ಮಾಡಿ ಆದೇಶ ಮಾಡಿದೆ. ಹಾಗೆ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯಿಂದ ಬಿ.ದಯಾನಂದ್ ರನ್ನ ಪೊಲೀಸ್ ತರಬೇತಿ ಇಲಾಖೆಯ ಎಡಿಜಿಪಿಯಾಗಿ ವರ್ಗಾವಣೆ ಮಾಡಿದೆ.
ಕಳೆದ 8 ತಿಂಗಳಿಂದ ಅಲೋಕ್ ಕುಮಾರ್ ತಮಗೆ ಸಿಗಬೇಕಾದ ಭಡ್ತಿಗಾಗಿ ಹೋರಾಟ ನಡೆಸುತ್ತಿದ್ದರು. ಕೊನೆಗೂ ಅಲೋಕ್ ಕುಮಾರ್ ಹೋರಾಟಕ್ಕೆ ಜಯ ಸಿಕ್ಕಿದೆ.
2019 ರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ವಿರುದ್ಧ ನಡೆದಿದ್ದ ಫೋನ್ ಟ್ಯಾಪಿಂಗ್ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿತ್ತು. ಆದರೆ 2025ರ ಮೇನಲ್ಲಿ ರಾಜ್ಯ ಸರ್ಕಾರ ಪ್ರಕರಣದ ಬಗ್ಗೆ ಇಲಾಖಾ ತನಿಖೆಗೆ ಆದೇಶ ಮಾಡಿತ್ತು. ಸರ್ಕಾರದ ಈ ಆದೇಶ ಪ್ರಶ್ನಿಸಿ ಅಲೋಕ್ ಕುಮಾರ್ ಸಿಎಟಿ ಮೊರೆ ಹೋಗಿದ್ದರು. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ, ಡಿಜಿಪಿಯಾಗಿ ಭಡ್ತಿ ಮಾಡಬಾರದೆಂಬ ಉದ್ದೇಶದಿಂದ ಈ ಇಲಾಖಾ ತನಿಖೆ ನಡೆಸಲಾಗ್ತಿದೆ ಎಂದು ಅಲೋಕ್ ಕುಮಾರ್ ವಾದ ಮಾಡಿದ್ದರು.
ಅಲೋಕ್ ಕುಮಾರ್ ವಾದ ಪುರಸ್ಕರಿಸಿದ್ದ ಸಿಎಟಿ ರಾಜ್ಯ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆ ರದ್ದುಗೊಳಿಸಿತ್ತು. ಹಾಗದ ಅಲೋಕ್ ಕುಮಾರ್ ಗೆ ಭಡ್ತಿ ಮತ್ತು ಸವಲತ್ತು ನೀಡಲು ಆದೇಶಿಸಿತ್ತು. ಆದರೂ ಸಿಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ಸಿಎಟಿ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ಈಗ ಅಲೋಕ್ ಕುಮಾರ್ ಗೆ ಡಿಜಿಪಿಯಾಗಿ ಭಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.













