ಮಂಡ್ಯ: ವಿಚಾರಣಾಧೀನ ಖೈದಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಆರೋಪದ ಬೆನ್ನಲ್ಲೇ ಮಂಡ್ಯ ಜಿಲ್ಲಾ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

ಜೈಲಿನಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲು ಖೈದಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 15 ವಿಚಾರಣಾಧೀನ ಖೈದಿಗಳ ಹೆಸರು, ಸಂಖ್ಯೆ ಹಾಗೂ ಹೆಬ್ಬೆಟ್ಟಿನ ಮುದ್ರೆಯೊಂದಿಗೆ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಪತ್ರ ಬರೆಯಲಾಗಿದ್ದು, ರಕ್ಷಣೆ ಹಾಗೂ ಸಮಗ್ರ ತನಿಖೆಗೆ ಮನವಿ ಮಾಡಲಾಗಿದೆ.

ಜೈಲು ಅಧೀಕ್ಷಕಿ ಶಾಂತಮ್ಮ ಹಾಗೂ ಸಿಬ್ಬಂದಿಗಳಾದ ಅನಿಲ್, ಶಿವರಾಜ ಮತ್ತು ರವಿ ವಿರುದ್ಧ ಖೈದಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಪತ್ರದಲ್ಲಿದೆ. ವಿವಿಧ ಸೆಲ್‌ಗಳಲ್ಲಿ ಇರಲು ತಿಂಗಳಿಗೆ ₹5 ಸಾವಿರದಿಂದ ₹15 ಸಾವಿರದವರೆಗೆ ಹಣ ಪಡೆಯಲಾಗುತ್ತಿದೆ. ರೂಮ್ ಬದಲಾವಣೆಗೆ ₹2 ಸಾವಿರ ಹಾಗೂ ಪನಿಷ್ಮೆಂಟ್ ಸೆಲ್‌ನಿಂದ ಹೊರಬರಲು ₹10 ಸಾವಿರ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಜೈಲಿನಲ್ಲೇ ವಿಶೇಷ ಅಡುಗೆ?
ಖೈದಿಗಳ ಬೇಡಿಕೆಯಂತೆ ಹಣ ಪಡೆದು ಮಟನ್, ಚಿಕನ್ ಸೇರಿದಂತೆ ವಿಶೇಷ ಆಹಾರ ತಯಾರಿಸಿಕೊಡಲಾಗುತ್ತಿದೆ ಎಂಬ ಆರೋಪವೂ ಪತ್ರದಲ್ಲಿದೆ. ಮಟನ್‌ಗೆ ಕೆಜಿಗೆ ₹1,250 ಹಾಗೂ ಚಿಕನ್‌ಗೆ ಕೆಜಿಗೆ ₹700 ದರ ನಿಗದಿಪಡಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಹಣ ನೀಡದ ಖೈದಿಗಳಿಗೆ ದೈಹಿಕ ಶಿಕ್ಷೆ ನೀಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪತ್ರದ ಆಧಾರದ ಮೇಲೆ ಕಾರಾಗೃಹ ಇಲಾಖೆ ತನಿಖೆ ಆರಂಭಿಸಿದ್ದು, ಆರೋಪಗಳ ಸತ್ಯಾಸತ್ಯತೆ ತನಿಖೆಯ ಬಳಿಕ ಹೊರಬರಬೇಕಿದೆ.







