ಮೊನ್ನೆ ಸುರಿದ ಮಳೆ ಬೆಂಗಳೂರಿಗೆ ಮಾಡಿದ ಸಂಕಷ್ಟ ಅಷ್ಟಿಷ್ಟಲ್ಲ. ನಗರದ ಎಲ್ಲಾ ಕಡೆ ನೀರು ತುಂಬಿ ಪ್ರವಾಹದ ರೀತಿಯಲ್ಲಿತ್ತು. ಇದೀಗ ಅಂಥಾ ರಣ ಮಳೆಯಿಂದ ಬೆಂಗಳೂರು ಇನ್ನೂ ಹೊರ ಬಂದಿಲ್ಲ. ಕೆಲವು ಕಡೆ ಈಗಲೂ ನೀರು ನಿಂತು ಅದ್ವಾನವೇ ಆಗಿದೆ. ಕಳೆದ ಮೂರು ದಿನಗಳಿಂದ ಜನರ ಬದುಕು ಭೀಕರವಾಗಿದೆ.
ವರುಣಾರ್ಭಟ ನಿಂತು ನಾಲ್ಕು ದಿನಗಳಾದರೂ ನಿಲ್ಲದ ಜನರ ಸಂಕಷ್ಟ !
ಬೆಂಗಳೂರು ಕಂಡು ಕೇಳದ ರೀತಿಯಲ್ಲಿ ಮೊನ್ನೆ ಮಳೆ ಅಬ್ಬರಿಸಿತ್ತು. ಬಡಾವಣೆಯೆಲ್ಲಾ ನೀರು ತುಂಬಿ ಜಲ ಬಂಧನದಲ್ಲಿತ್ತು. ಒಂದೆರಡು ದಿನಕ್ಕೆ ಮತ್ತೆ ಎಲ್ಲವೂ ಸಹಜ ಸ್ಥಿತಿಯತ್ತ ಸಾಗುತ್ತೆ ಎಂದುಕೊಂಡಿದ್ದ ಜನರಿಗೆ ಮಳೆರಾಯ ಶಾಕ್ ಕೊಟ್ಟಿದ್ದಾನೆ. ದಿನ ನಾಲ್ಕಾದರೂ ಮಳೆ ನೀರು ಇನ್ನೂ ನಿಂತಲ್ಲೇ ನಿಂತಿದೆ ಕೆಲವು ಕಡೆ. ಈ ಹಿನ್ನೆಲೆ ಮನೆ ಸ್ವಚ್ಚ ಮಾಡಲಾಗದೆ ಜನರು ಪರದಾಡುತ್ತಿದ್ದಾರೆ. ಮಳೆ ಸಂಬಂಧ ಆದ ಅವಾಂತರಗಳನ್ನು ಪರೀಕ್ಷಿಸಲು ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್ ಅನ್ನೂ ಮಾಡಿದರು.
ಹೊರಮಾವು ಸಾಯಿ ಲೇಔಟ್ ಜನರಿಗೆ ಸಿಕ್ಕಿಲ್ಲ ಜಲ ಬಂಧನದಿಂದ ಮುಕ್ತಿ !
ಮೊನ್ನೆಯ ಮಳೆಗೆ ನಗರದ ಹಲವು ಭಾಗಗಳು ತತ್ತರಿಸಿ ಹೋಗಿತ್ತು. ಈ ಪೈಕಿ ನಗರದ ಹೊರಮಾವಿನ ಸಾಯಿ ಲೇಔಟ್ ಕೂಡ ಒಂದು. ಪಕ್ಕದಲ್ಲಿದ್ದ ಕೆರೆ ಒತ್ತುವರಿಯಾಗಿರುವ ಹಿನ್ನೆಲೆ ನೀರೆಲ್ಲಾ ಲೇಔಟ್ ಗೆ ನುಗ್ಗಿದೆ. ಕಳೆದ ಬಾರಿಯೂ ಇದೇ ಜಾಗಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಈ ಬಾರಿಯ ಮಾನ್ಸೂನ್ ಪೂರ್ವ ಮಳೆಗೂ ಕೂಡ ಈ ಭಾಗದ ಜನರು ನಲುಗಿದ್ದಾರೆ. ಕೆರೆಯ ಪಕ್ಕದಲ್ಲೇ ಮನೆ ಕಟ್ಟಿಕೊಂಡವರು ಇದೀಗ ಮಳೆಯಿಂದಾದ ಬವಣೆ ಬಿಚ್ಚಿಟ್ಟಿದ್ದಾರೆ. ಮಳೆ ನೀರು ನುಗ್ಗಿ ತಮ್ಮ ಎಲ್ಲಾ ಸಂಪಾದನೆಗಳು ನೀರು ಪಾಲಾಗಿದೆ. ಮತ್ತು ಒಂದು ತಿಂಗಳಿಗೆ ತಂದಿದ್ದ ರೇಷನ್ ಕೂಡ ನೀರು ಪಾಲಾಗಿದೆ ಎಂದು ಬೇಸರ ವ್ಯಕ್ತಪಡಿಸದರು.

ಹಾನಿಗೊಳಗಾದ 3,453 ಮನೆಗಳ ಗುರುತು.. 8,63,25,000 ಕೋಟಿ ಪರಿಹಾರ !
ರಣ ಮಳೆಗೆ ರಾಜಧಾನಿಯಲ್ಲಾದ ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ 25 ಸಾವಿರ ರೂಪಾಯಿಯನ್ನು ಸಿಎಂ ಬೊಮ್ಮಾಯಿ ಪರಿಹಾರ ಘೋಷಿಸಿದ್ದರು. ಈ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಹಾರ ಬಿಡುಗಡೆಗೆ ಸಿದ್ಧತೆ ಮಾಡಲಾಗುತ್ತಿದೆ. ಪಾಲಿಕೆ ಸರ್ವೇ ಮಾಡಿ ನಗರದಲ್ಲಿ ಹಾನಿಗೊಳಗಾದ 3,453 ಮನೆಗಳ ಗುರುತು ಮಾಡಿಕೊಂಡಿದೆ. ಒಟ್ಟು 8,63,25,000 ಕೋಟಿ ಪರಿಹಾರ ಮೊತ್ತ ಅಂದಾಜು ಮಾಡಿರುವ ಪಾಲಿಕೆ, ಮೊದಲ ಹಂತದಲ್ಲಿ 3,453 ಮನೆಗಳ ಗುರುತಿಸಿ ಸರ್ವೇ ಮುಂದುವರಿಸಿದೆ.
ಒಟ್ಟಾರೆ ದಿನದಿಂದ ದಿನಕ್ಕೆ ಬೆಂಗಳೂರಿಗರಿಗೆ ಆತಂಕ ಇಮ್ಮಡಿಯಾಗುತ್ತಿದೆ. ಒಂದೇ ಮಳೆಗೆ ನಗರ ತುಂಬೆಲ್ಲಾ ನೀರು ತುಂಬಿ ಅವಾಂತರ ಸೃಷ್ಟಿಯಾದರೆ ಇನ್ನು ಮುಂಗಾರು ಪ್ರವೇಶ ಕಂಡರೆ ರಾಜ್ಯ ರಾಜಧಾನಿಯ ಪಾಡೇನು ಏನು ಎಂಬ ಭಯ ಸದ್ಯದ್ದು.






