ಲಕ್ನೋ ಸೂಪರ್ ಗೈಂಟ್ಸ್ ತಂಡವನ್ನು 24 ರನ್ ಗಳಿಂದ ಮಣಿಸಿದ ರಾಜಸ್ಥಾನ್ ರಾಯಲ್ಸ್ ಐಪಿಎಲ್ ಟಿ-20 ಟೂರ್ನಿಯ ಪ್ಲೇಆಫ‍್ ಗೆ ಮತ್ತಷ್ಟು ಹತ್ತಿರವಾಗಿದೆ.
ಮುಂಬೈ ಬ್ರೆಬೋರ್ನ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಗೆ 178 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಲಕ್ನೋ ಸೂಪರ್ ಗೈಂಟ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಗೆ 154 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ 13 ಪಂದ್ಯಗಳಿಂದ 8 ಜಯ ಹಾಗೂ 5 ಸೋಲಿನೊಂದಿಗೆ 16 ಅಂಕ ಕಲೆ ಹಾಕಿ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಲಕ್ನೋ ಸೂಪರ್ ಗೈಂಟ್ಸ್ ಕೂಡ 13 ಪಂದ್ಯಗಳಿಂದ 8 ಜಯ ಹಾಗೂ 5 ಸೋಲಿನೊಂದಿಗೆ 16 ಅಂಕ ಕಲೆ ಹಾಕಿದರೂ ರನ್ ಸರಾಸರಿಯಲ್ಲಿ ಹಿಂದೆ ಬಿದ್ದು 3ನೇ ಸ್ಥಾನಕ್ಕೆ ಇಳಿಯಿತು.

ರಾಜಸ್ಥಾನ್ ಪರ ಮಾರಕ ದಾಳಿ ಸಂಘಟಿಸಿದ ಪ್ರಸಿದ್ಧ ಕೃಷ್ಣ, ಟ್ರೆಂಟ್ ಬೌಲ್ಟ್ ಮತ್ತು ಒಬೆಡ್ ಮೆಕೊಯ್ ತಲಾ 2 ವಿಕೆಟ್ ಗಳಿಸಿದರು. ಒಂದು ಹಂತದಲ್ಲಿ 29 ರನ್ ಗೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿದ್ದ ಲಕ್ನೋ ಪರ ದೀಪಕ್ ಹೂಡಾ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 58 ರನ್ ಗಳಿಸಿ ಹೋರಾಟ ನಡೆಸಿದರು.
ಮಧ್ಯಮ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ (25), ಮಾರ್ಕುಸ್ ಸ್ಟೋನಿಸಿಸ್ (27) ಹೋರಾಟ ಪ್ರಯೋಜನವಾಗಲಿಲ್ಲ.