ರಥೋತ್ಸವದ ವೇಳೆ ಭಕ್ತರ ತಳ್ಳಾಟದಿಂದಾಗಿ ಇಬ್ಬರು ಮೃತಪಟ್ಟ ಆಘಾತಕಾರಿ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಪಾರ್ವತಿಬೆಟ್ಟದಲ್ಲಿ ಭಾನುವಾರ ಸಂಭವಿಸಿದೆ.
ಎರಡು ವರ್ಷಗಳಿಂದ ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ರಥೋತ್ಸವವನ್ನು ಈ ವರ್ಷ ಮತ್ತೆ ಆರಂಭಿಸಲಾಗಿತ್ತು. ಭಾನುವಾರ ಅದ್ಧೂರಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ರಥೋತ್ಸವ ಆರಂಭವಾಗುತ್ತಿದ್ದಂತೆ ಏಕಾಏಕಿ ಭಕ್ತರ ನಡುವೆ ತಳ್ಳಾಟ ಆರಂಭವಾಗಿದ್ದರಿಂದ ರಥದ ಚಕ್ರಕ್ಕೆ ಸಿಲುಕಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದರು.

ನೂಕುನುಗ್ಗಲಿನಿಂದಾಗಿ ಜನ ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದರಿಂದ ಕಾಲ್ತುಳಿತಕ್ಕೆ ಕೆಲವರು ಸಿಲುಕಿ ಗಾಯಗೊಂಡಿದ್ದಾರೆ. ಕಂದೇಗಾಲದ ಸರ್ಪಭೂಷಣ ರಥದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದರೆ, ಕಬ್ಬಹಳ್ಳಿ ಗ್ರಾಮದ ಸ್ವಾಮಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇನ್ನೋರ್ವ ಗಾಯಳು ಮಹದೇವಣ್ಣ ಎಂಬುವರಿಗೆ ತೊಡೆಯ ಮೂಳೆ ಮುರಿತವಾಗಿದ್ದು ಕೂಡಲೇ ಗಾಯಳುಗಳನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ವರ್ಷಗಳ ನಂತರ ನಡೆದ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ನೂಕುನುಗ್ಗಲು ಉಂಟಾದ ಪರಿಣಾಮ ದುರ್ಘಟನೆ ಸಂಭವಿಸಿದೆ.