ಕೊಚ್ಚಿ: ಗುದನಾಳದಲ್ಲಿ ಚಿನ್ನ ಇಟ್ಟುಕೊಂಡು ಸಾಗಿಸಲು ಯತ್ನಿಸಿದ ಗಗನಸಖಿಯನ್ನು ಅರೆಸ್ಟ್ ಮಾಡಲಾಗಿದೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ (Air India Express) ಕೆಲಸ ಮಾಡುತ್ತಿದ್ದ ಕೊಲ್ಕತ್ತಾದ ಗಗನಸಖಿ ಸುರಭಿ ಖಾತೂನ್ ಬಂಧಿತ ಆರೋಪಿ. ಕಣ್ಣೂರು ವಿಮಾನ ನಿಲ್ದಾಣದಲ್ಲಿ (Kannur Airport) ಆರೋಪಿಯನ್ನು ಬಂಧಿಸಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಇಂದು ತಿಳಿಸಿದೆ. ಇವರು ಗುದನಾಳದಲ್ಲಿ 1 ಕೆಜಿ ಚಿನ್ನ ಇಟ್ಟುಕೊಂಡು ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.
ಬಂಧಿತ ಆರೋಪಿ ಮೇ 28ರಂದು ಮಸ್ಕತ್ನಿಂದ ಕಣ್ಣೂರಿಗೆ ಬಂದಿಳಿದ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ಸಿಬ್ಬಂದಿಯಾಗಿದ್ದರು. ಬಂಧನದ ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. 14 ದಿನಗಳ ಕಾಲ ಕಸ್ಟಡಿಗೆ ಕೋರ್ಟ್ ನೀಡಿದೆ.
ಇವರು ಈ ಹಿಂದೆ ಕೂಡ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಆರೋಪವಿದೆ. ಕ್ಯಾಬಿನ್ ಸಿಬ್ಬಂದಿಯ ಇತರ ಸದಸ್ಯರು ಸಹ ಚಿನ್ನ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬುವುದು ಈ ಮೂಲಕ ಖಚಿತವಾಗಿದೆ. ಸ್ವತಃ ಸುರಭಿಯೇ ಅಧಿಕಾರಿಗಳಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಕಳ್ಳಸಾಗಣೆ ಚಟುವಟಿಕೆಗಳಿಗೆ ತನ್ನನ್ನು ನೇಮಿಸಿಕೊಳ್ಳಲಾಗಿತ್ತು ಮತ್ತು ಪ್ರತಿ ಬಾರಿ ಸ್ಮಗ್ಲಿಂಗ್ ಮಾಡುವಾಗಲೂ ಕಮಿಷನ್ ಸಿಗುತ್ತಿತ್ತು ಎಂದು ಹೇಳಿದ್ದಾಳೆ ಎನ್ನಲಾಗಿದ್ದು, ಈ ಕುರಿತು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.