ತಮಿಳುನಾಡು ರಾಜಕೀಯಕ್ಕೆ ವಿ.ಕೆ ಶಶಿಕಲಾ ಎಂಟ್ರಿ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್ ಆಗುತ್ತಿದ್ದು, ಉಚ್ಚಾಟಿತ ಎಐಎಡಿಎಂಕೆ ಮುಖ್ಯಸ್ಥೆ ತನ್ನ ಬೆಂಬಲಿಗರೊಂದಿಗೆ ನಿರಂತರವಾಗಿ ಪೋನ್ ಕಾಲ್ ಮೂಲಕ ಸಂಭಾಷಣೆ ನಡೆಸುತ್ತಿದ್ದು, ನಿವೃತ್ತಿ ಘೋಷಿಸಿದ ನಾಯಕಿ ಮತ್ತೆ ರಾಜಕೀಯಕ್ಕೆ ಬರುವ ಸುಳಿವನ್ನು ಹರಿಬಿಟ್ಟಿದ್ದಾರೆ.
ಎಐಎಡಿಎಂಕೆ ಪಕ್ಷವನ್ನು ಸರಿದಾರಿಗೆ ತರಲು ನಾನು ಶೀಘ್ರದಲ್ಲಿಯೇ ರಾಜಕೀಯಕ್ಕೆ ಬರುತ್ತೇನೆ, ಚಿಂತಿಸ ಬೇಡಿ, ಧೈರ್ಯವಾಗಿರಿ, ಕರೋನಾ ಸಾಂಕ್ರಾಮಿಕ ಮುಗಿಯಲಿ ಎಂದು ಶಶಿಕಲಾ ಕಾರ್ಯಕರ್ತನಿಗೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಕರ್ತ ನಾವು ನಿಮ್ಮ ಹಿಂದೆ ಇರುತ್ತೇವೆ ಅಮ್ಮ ಎಂದಿದ್ದಾನೆ. ಈ ಆಡಿಯೋ ಹೆಚ್ಚು ಸದ್ದು ಮಾಡಿದ ಬೆನ್ನೆಲೆ ಇದೀಗ ಮತ್ತೊಂದು ಆಡಿಯೋ ರೆಕಾರ್ಡಿಂಗ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.
“ತನ್ನ ರಕ್ತದಿಂದ ಪಕ್ಷವನ್ನು ಬೇರ್ಪಡಿಸಲು ಸಾಧ್ಯವಿಲ್ಲ” ಎಂದು ಹೇಳುವ ಮೂಲಕ ಶಶಿಕಲಾ ರಾಜಕೀಯಕ್ಕೆ ಮರಳುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದಂತಿದೆ. ‘ನಾನು ಎಐಎಡಿಎಂಕೆ ಪಕ್ಷವನ್ನು ಉತ್ತಮ ಸ್ಥಾನಕ್ಕೆ ತರಲು ಬಯಸುತ್ತೇನೆ ಏಕೆಂದರೆ ನಾನು ಪಕ್ಷಕ್ಕಾಗಿ ತುಂಬಾ ಕೆಲಸ ಮಾಡಿದ್ದೇನೆ. ಅದನ್ನು ನನ್ನ ರಕ್ತದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಕಾರ್ಯಕರ್ತರ ದುಃಖವನ್ನು ಕೇಳಿ ನಾನು ಹೇಗೆ ಸುಮ್ಮನಿರಲಿ? ನಾನು ಖಂಡಿತವಾಗಿಯೂ ಎಐಎಡಿಎಂಕೆ ಗೆ ಮರಳುತ್ತೇನೆ” ಎಂದಿದ್ದಾರೆ.

ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ 4 ವರ್ಷ ಜೈಲು ಸೇರಿದ್ದರು. ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರಿಂದ ಜನವರಿ 27 ರಂದು ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳಿಸಲಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದರು. ರಾಜಕೀಯ ಹೊರತಾಗಿ ಏನಾದರೊಂದು ಮಾಡುತ್ತೇನೆ ಎಂದಿದ್ದರು.
ನನ್ನ ಅಕ್ಕ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಡಳಿತ ಸಮಯದಲ್ಲಿ ಇದ್ದ ಸುವರ್ಣಾಡಳಿತವನ್ನು ಮತ್ತೆ ತರಲು ಪ್ರಯತ್ನಿಸುತ್ತೇನೆ, ಅವರ ದೃಷ್ಟಿಕೋನದಂತೆ ರಾಜ್ಯವನ್ನು ಮುನ್ನಡೆಸುವ ಶಕ್ತಿಯನ್ನು ಆ ದೇವರು ನನಗೆ ಕೊಡಲಿ ಎಂದಿದ್ದರು. ರಾಜಕಾರಣದಿಂದ ದೂರವಿರುವುದಾಗಿ ಘೋಷಿಸಿದ್ದ ಶಶಿಕಲಾ ತಮ್ಮ ಇತ್ತೀಚಿನ ಆಡಿಯೋ ಸಂಭಾಷಣೆಗಳ ಮೂಲಕ ಸಕ್ರೀಯ ರಾಜಕೀಯಕ್ಕೆ ಮರಳಲು ಸೂಚನೆ ಕೊಡುತ್ತಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ ಉಪ ನಾಯಕ ಮತ್ತು ವಿಪ್ ಆಯ್ಕೆಗಾಗಿ ಜೂನ್ 14 ರಂದು ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಎಐಎಡಿಎಂಕೆ ಕಾರ್ಯಕರ್ತರೊಂದಿಗೆ ಶಶಿಕಲಾ ನಿರಂತರ ಮಾತನಾಡುತ್ತಿರುವ ಆಡಿಯೋ ರೆಕಾರ್ಡಿಂಗ್ ಬಿಡುಗಡೆ ಮಧ್ಯೆ ನಡೆಯುತ್ತಿರುವ ಸಭೆ ಮಹತ್ವ ಪಡೆದುಕೊಂಡಿದೆ.












