ರಾಜಕೀಯ ಅಂದ ಮೇಲೆ ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಒಂದು ಪಕ್ಷ ಸೋಲಬೇಕು, ಇನ್ನೊಂದು ಪಕ್ಷ ಗೆಲ್ಲಬೇಕು. ಚುನಾವಣೆಯಲ್ಲಿ ಒಂದು ಪಕ್ಷವನ್ನು ಪ್ರತಿನಿಧಿಸುವ ಅಭ್ಯರ್ಥಿ, ಗೆದ್ದು ಬಂದ ಬಳಿಕ ಒಂದು ಪಕ್ಷದ ಅಭ್ಯರ್ಥಿ ಆಗಿ ಉಳಿಯುವುದಿಲ್ಲ. ಒಂದು ಕ್ಷೇತ್ರದ ಜನಪ್ರತಿನಿಧಿಯಾಗಿ ನಿಲ್ಲುತ್ತಾರೆ. ಹೀಗಾಗಿ ಗೆಲುವು ಕಂಡ ಜನಪ್ರತಿನಿಧಿ ಇಡೀ ಕ್ಷೇತ್ರದ ಅಭಿವೃದ್ಧಿಗೆ ಶ್ರಮ ಪಡಬೇಕು. ಒಂದು ವೇಳೆ ಸಚಿವ ಸ್ಥಾನ ಸಿಕ್ಕರೆ ಇಡೀ ರಾಜ್ಯದ ಅಭಿವೃದ್ಧಿಗೆ ಕಟಿಬದ್ಧರಾಗಿ ದುಡಿಯಬೇಕು. ಅಂತಿಮವಾಗಿ ರಾಜ್ಯದ ಜನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಬೇಕು. ಆದರೆ ನಾಗಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಸಿದ್ದರಾಮಯ್ಯ ನೇತೃತ್ವದಲ್ಲಿ ಕೃಷಿ ಸಚಿವರಾಗಿರುವ ಎನ್. ಚಲುವರಾಯಸ್ವಾಮಿ, ಸಣ್ಣದೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ಮಂಗಳವಾರ ನಾಗಮಂಗಲಕ್ಕೆ ಭೇಟಿ ನೀಡಿದ್ದ ಎನ್.ಚಲುವರಾಯಸ್ವಾಮಿ, ನೀಡಿರುವ ಹೇಳಿಕೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

‘ಕಾಂಗ್ರೆಸ್‌ನ 5 ಗ್ಯಾರಂಟಿಗಳು ಚುನಾವಣೆ ಗಿಮಿಕ್’
ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದು, ಉಚಿತ ಗ್ಯಾರಂಟಿಗಳು ಚುನಾವಣೆ ಗಿಮಿಕ್ ಅಷ್ಟೇ ಎಂದು ಮಾಧ್ಯಮಗಳ ಎದುರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಫ್ರೀ ಯೋಜನೆಗಳನ್ನು ಕೊಡುವುದು ಒಳ್ಳೇದಲ್ಲ ಅಂತಾ ಇಡೀ ದೇಶದಲ್ಲಿ ಚರ್ಚೆಯಾಗಿದೆ. ಎಲ್ಲಾ ಫ್ರೀ ಫ್ರೀ ಅಂತಾ ಹೋದರೆ ಎಲ್ಲಿಗೆ ಹೋಗಿ ಮುಟ್ಟತ್ತದೆ. ಆದರೆ ರಾಜಕೀಯದಲ್ಲಿ ನಾವು ಅದನ್ನೇ ಹೇಳಿಕೊಂಡು ಹೊರಟಿದ್ದೇವೆ. ಅಂತಿಮವಾಗಿ ಚುನಾವಣೆ, ರಿಸಲ್ಟ್, ಸರ್ಕಾರ ಬಂದರೆ ತಾನೇ ನಾವು ಕೆಲಸ ಮಾಡಲು ಸಾಧ್ಯವಾಗುವುದು. ಅಧಿಕಾರ ಸಿಕ್ಕರೆ ತಾನೆ ನಾನು ಕೆಲಸ ಮಾಡಲು ಸಾಧ್ಯವಾಗುವುದು ಅನ್ನೋ ದೃಷ್ಟಿಯಲ್ಲಿ ನೀಡಿದಾಗ ರಿಸಲ್ಟ್ ಅಂತಿಮ ಆಗುತ್ತದೆ. ರಿಸಲ್ಟ್ ಅನಿವಾರ್ಯ ಆಗುತ್ತದೆ. ರಿಸಲ್ಟ್ ಬರಬೇಕು ಅಂದಾಗ ಈ ರೀತಿಯ ಚೀಫ್ ಪಾಪ್ಯುಲಾರಿಟಿ, ಇಲ್ಲದ್ದು, ಸಲ್ಲದ್ದು ಎಲ್ಲವನ್ನೂ ಮಾಡಬೇಕಾಗುತ್ತದೆ. ಸಿದ್ದರಾಮಯ್ಯಗೆ ಇಷ್ಟ ಇದ್ಯೋ ಇಲ್ವೋ ಎಲ್ಲವನ್ನೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಬೆಂಬಲಿಗರನ್ನು ಮೆಚ್ಚಿಸಲು ಸಚಿವರ ಎಡವಟ್ಟು ಹೇಳಿಕೆ
ನೀವು ಮನಸ್ಸಿಗೆ ಬೇಸರ ಮಾಡಿಕೊಳ್ಳಬೇಡಿ, ಯಾರಾದರೂ ಬಂದು ನನ್ನನ್ನು ಭೇಟಿ ಮಾಡಿದಾಕ್ಷಣ ನಾನು ವೋಟ್ ಹಾಕದವರಿಗೆ ಯಾವುದೇ ಕೆಲಸ ಮಾಡಿಕೊಡುವುದಿಲ್ಲ. ನೀವು ಹೇಳಿದವರಿಗೆ ಮಾತ್ರವೇ ನಾನು ಕೆಲಸ ಮಾಡೋದು. ಬೇರೆಯವರಿಗೆ ಒಂದು ಪೆನ್ನು ಎತ್ತಿ ಸಹಿ ಕೂಡ ಹಾಕಲ್ಲ. ನಮ್ಮ ಮನೆ ಬಾಗಿಲಿಗೆ ಬಂದವರನ್ನು ಕುತ್ತಿಗೆ ಹಿಡಿದು ತಳ್ಳುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಬಂದವರಿಗೆ ಕಾಫಿ, ತಿಂಡಿ ಕೊಟ್ಟು ಕಳುಹಿಸುವುದು ನಮ್ಮ ಧರ್ಮ, ಅದನ್ನು ಮಾಡಬೇಕಾಗುತ್ತದೆ ಎಂದಿದ್ದಾರೆ. ಅಂದರೆ ಚುನಾವಣೆ ಮುಗಿದ ಮೇಲೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮಾತ್ರ ನಾನು ಕೆಲಸ ಮಾಡಿಕೊಡೋದು, ಬೇರೆ ಯಾವುದೇ ಪಕ್ಷದ ನಾಯಕರು ಕಾರ್ಯಕರ್ತರು ಬಂದರೂ ನಾನು ಯಾವುದೇ ಕೆಲಸ ಮಾಡಿಕೊಡಲ್ಲ ಎನ್ನುವ ಮೂಲಕ ಸಣ್ಣತನವನ್ನು ಪ್ರದರ್ಶನ ಮಾಡಿದ್ದಾರೆ. ಗೆದ್ದು ಅಧಿಕಾರ ಹಿಡಿದ ಮೇಲೆ ಯಾರಿಗೆ ಕೆಲಸ ಮಾಡಬೇಕು, ಯಾರಿಗೆ ಸ್ಪಂದಿಸಬೇಕು ಅನ್ನೋದು ಕೃಷಿ ಸಚಿವರಾದ ಚಲುವರಾಯಸ್ವಾಮಿಯವರ ಮನಸ್ಸಿಗೆ ಬಿಟ್ಟಿದ್ದು, ಆದರೆ ಬಹಿರಂಗವಾಗಿ ದ್ವೇಷ ಪ್ರದರ್ಶನ ಮಾಡುವ ಅವಶ್ಯಕತೆ ಇರಲಿಲ್ಲ ಎನ್ನಬಹುದು.
ಆಡಿಯೋ ವೈರಲ್ ಬಗ್ಗೆ ಮೌನ, ಚಾಟಿ ಬೀಸಿದ ಬಿಜೆಪಿ
ವೈರಲ್ ಆಗಿರುವ ಹೇಳಿಕೆ ಬಗ್ಗೆ ಚಲುವರಾಯಸ್ವಾಮಿ ಸ್ಪಷ್ಟನೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ನಾವು ಕೊಟ್ಟಿರುವ ಭರವಸೆಯನ್ನ ಈಡೇರಿಸಿದ್ದೇವೆ ಅಷ್ಟೇ. ನಾವು ಗಿಮಿಕ್ ಅಂತ ಹೇಳಿಲ್ಲ ಎಂದಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ಗಿಮಿಕ್ ಅಂತಾ ಹೇಳಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಚಿವರು ಸಿಡಿಮಿಡಿಗೊಂಡಿದ್ದಾರೆ. ಬಿಜೆಪಿಯವ್ರು ವೈರಲ್ ಮಾಡ್ತಾರೆ ಅಷ್ಟೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಉಡುಪಿಯಲ್ಲಿ ಮಾತನಾಡಿರುವ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಚಲುವರಾಯಸ್ವಾಮಿ ಕಾಂಗ್ರೆಸ್ ಗ್ಯಾರೆಂಟಿಗಳು ಗಿಮಿಕ್ ಎಂದಿದ್ದಾರೆ. ಇರುವ ಸತ್ಯವನ್ನು ಕಾಂಗ್ರೆಸ್ಸಿಗರು ಒಪ್ಪಿಕೊಂಡಿದ್ದಾರೆ. ಬಹುತೇಕ ಎಲ್ಲಾ ಕಾಂಗ್ರೆಸ್ಸಿಗರಿಗೆ ಗ್ಯಾರಂಟಿ ಅಸಾಧ್ಯ ಎಂದು ಗೊತ್ತಿರಬಹುದು. ಆರ್ಥಿಕವಾಗಿ ಬಹುದೊಡ್ಡ ಕುಸಿತ ಮತ್ತು ಹೊಡೆತ ಎಂದು ತಿಳಿದಿರಬಹುದು. ಮತಕ್ಕಾಗಿ, ಚುನಾವಣೆ ಗೆಲ್ಲಲು ಹೀಗೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಅವರಿಗೂ ಅರ್ಥವಾಗಿರಬಹುದು. ಚುನಾವಣೆಗಾಗಿ ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಸಾರ್ವತ್ರಿಕವಾಗಿ ರಾಜ್ಯಕ್ಕೆ ಇವರ ಹೇಳಿಕೆಯಿಂದ ಗೊತ್ತಾಗಿದೆ. ಸತ್ಯ ಒಪ್ಪಿಕೊಂಡ ಚೆಲುವರಾಯಸ್ವಾಮಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಕೃಷ್ಣಮಣಿ