ಕರೋನ ಸಾಂಕ್ರಾಮಿಕ ನಡುವೆಯು ರೈತರ ಆತ್ಮಾಹತ್ಯೆ ಮುಂದುವರೆದಿದ್ದು, ಕಳೆದ ಒಂದೂವರೆ ವರ್ಷದಲ್ಲಿ 746 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡ ವರದಿಯಾಗಿದೆ.
ರಾಜ್ಯ ಕೃಷಿ ಇಲಾಖೆಯ ಅಂಕಿಅಂಶ ಪ್ರಕಾರ, ಕಳೆದ ವರ್ಷ 2020ರ ಏಪ್ರಿಲ್ ತಿಂಗಳಿನಿಂದ ಕಳೆದ ಸೆಪ್ಟೆಂಬರ್ ವರೆಗೆ 746 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ.
ಜಮೀನಿನಲ್ಲಿ ಉತ್ತಮ ಇಳುವರಿ ಸಿಕ್ಕದೆ, ಅವ್ಯಾಹತ ಮಳೆ, ಸಾಲದಿಂದ ನೊಂದು ರೈತರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಜ್ಞರು ಹೇಳುತ್ತಾರೆ. ಕೆಳೆದ ವರ್ಷಕ್ಕಿಂತ ಈ ವರ್ಷ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಲು ಒಂದು ಕಾರಣವಾಗಿದೆ” ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಮಾಜಿ ನಿರ್ದೇಶಕ ಮತ್ತು ಹಿರಿಯ ಸಲಹೆಗಾರ ಶ್ರೀನಿವಾಸ್ ರೆಡ್ಡಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಮಳೆ ಬಾರದಿದ್ದರೆ ರೈತರು ಹೂಡಿಕೆ ಮಾಡಿದ್ದಕ್ಕೆ ಶೇಕಡಾ 50ರಷ್ಟು ಕೂಡ ಇಳುವರಿ ಸಿಗುವುದಿಲ್ಲ. ಉತ್ತಮ ಮಳೆಯಾದರೆ ರೈತರ ಅರ್ಧ ಸಮಸ್ಯೆ ದೂರವಾಗುತ್ತದೆ. ಇದರಿಂದಾಗಿ ಆತ್ಮಹತ್ಯೆ ಪ್ರಕರಣಗಳು ಅಲ್ಲಲ್ಲಿ ಸಂಭವಿಸುತ್ತವೆ. ಸಾಮಾಜಿಕ-ಆರ್ಥಿಕ ಕಾರಣಗಳು ಕೂಡ ರೈತರ ಆತ್ಮಹತ್ಯೆಗೆ ಹಲವು ಬಾರಿ ಕಾರಣವಾಗುತ್ತವೆ ಎಂದು ಶ್ರೀನಿವಾಸ್ ರೆಡ್ಡಿ ಹೇಳುತ್ತಾರೆ.
ಉತ್ತಮ ಮಳೆಯಾದರೆ ರಾಜ್ಯದಲ್ಲಿ 150 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆಯಾಗುತ್ತದೆ. ಕಳೆದ ಕೆಲ ವರ್ಷಗಳಲ್ಲಿ ಕಳಪೆ ಗುಣಮಟ್ಟದ ಬೀಜ ವಿತರಣೆಯಿಂದಾಗಿ ರೈತರಿಗೆ ಉತ್ತಮ ಇಳುವರಿ ಸಿಕ್ಕಿಲ್ಲ. ಇದು ಕೂಡ ರೈತರ ಆತ್ಮಹತ್ಯೆಗೆ ಮುಖ್ಯ ಕಾರಣವಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ ನಾವು 10 ಲಕ್ಷ ಟನ್ ಕಳಪೆ ಗುಣಮಟ್ಟದ ಆಹಾರ ಪದಾರ್ಥ ವಶಪಡಿಸಿಕೊಂಡಿದ್ದೇವೆ. ಈ ಸಂಬಂಧ ವ್ಯಕ್ತಿಗಳು ಮತ್ತು ಕಂಪೆನಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದೇವೆ. ಬೀಜ ಕಳಪೆ ಗುಣಮಟ್ಟದ್ದಾಗಿದ್ದರೆ ಇಳುವರಿ ಶೇಕಡಾ 60ಕ್ಕಿಂತ ಹೆಚ್ಚು ಬರುವುದಿಲ್ಲ, ಇದು ರೈತರನ್ನು ಕಂಗೆಡಿಸುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
2020ರಲ್ಲಿ ದೇಶದಲ್ಲಿ ಒಟ್ಟು 10,281 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಗಳ ಪೈಕಿ ಕರ್ನಾಟಕವು 2ನೇ ಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ (ಎನ್ಸಿಆರ್ಬಿ) ಬಿಡುಗಡೆ ಮಾಡಿರುವ ಅಂಕಿ- ಅಂಶಗಳಿಂದ ತಿಳಿದುಬಂದಿದೆ. 2019-2020ರಲ್ಲಿ 1076 ರೈತರು ಆತ್ಮಹತ್ಯೆಗೆ ಬಲಿಯಾಗಿದ್ದಾರೆ.
2020-21 ರಲ್ಲಿ ಕರ್ನಾಟಕದಲ್ಲಿ 656 ಜನ ಆತ್ಮಾಹತ್ಯೆ ಮಾಡಿಕೊಂಢಿದ್ದರು, 2021 ರಿಂದ ಇಲ್ಲಿವರೆಗೆ 96 ರೈತರು ಆತ್ಮಾಹತ್ಯೆ ಮಾಡಿಕೊಂಡಿದ್ದಾರೆ.
ವರ್ಷದಿಂದ ವರ್ಷಕ್ಕೆ ಕೊಂಚ ಆತ್ಮಾಹತ್ಯೆ ಕಡಿಮೆಯಾಗಿದ್ದರು ಸಾವುಗಳಿನ್ನು ಆಗುತ್ತಿದ್ದೆ ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಲಬೇಕಿದೆ. ಈ ಕುರಿತು ಪ್ರತಿಕ್ರಿಯಿಸಿದ ಕೃಷಿ ಸಚಿವ ಬಿ ಸಿ ಪಾಟೀಲ್, ರೈತರ ಆತ್ಮಹತ್ಯೆಗಳನ್ನು ತಪ್ಪಿಸಬೇಕೆಂದರೆ ಉತ್ತಮ ಮಳೆ ಮತ್ತು ಸಾಮೂಹಿಕ ಪ್ರಯತ್ನದಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿದೆ. ರೈತರ ಸಂಬಂಧಿ ಕಾನೂನುಗಳು ಇತ್ತೀಚೆಗೆ ಅವರಿಗೆ ಅನುಕೂಲವಾಗಿದೆ. ನಮ್ಮ ಅಧಿಕಾರಿಗಳು ಇನ್ನಷ್ಟು ಜಾಗೃತರಾಗಿದ್ದು ಕಳಪೆ ಗುಣಮಟ್ಟದ ಬೀಜಗಳನ್ನು ವಶಪಡಿಸಿಕೊಂಡಿದ್ದಾರೆ. ಕೃಷಿ ಉತ್ಪನ್ನಗಳ ಅಂತರಾಜ್ಯ ಓಡಾಟಕ್ಕೆ ತೆರಿಗೆಯಿಲ್ಲ, ಉತ್ತಮ ಇಳುವರಿಯಾಗುತ್ತಿದೆ, ನಾವು ಮುಂದಿನ ದಿನಗಳಲ್ಲಿ ಆಹಾರ ಸಂಸ್ಕರಣಾ ಘಟಕಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಇದರಿಂದ ರೈತರ ಉತ್ಪನ್ನಗಳಿಗೆ ಇನ್ನೂ ಹೆಚ್ಚಿನ ಮಾರುಕಟ್ಟೆ ಬೆಲೆ ಬರುತ್ತದೆ ಎಂದರು.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಇನ್ನೂ ಸಿಗದಿರುವ ಬಗ್ಗೆ ಕೃಷಿ ಸಚಿವರನ್ನು ಕೇಳಿದಾಗ, ರಾಜ್ಯ ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಕೆಲವು ಕೇಸುಗಳಲ್ಲಿ ಹೆಚ್ಚುವರಿ ಆಯುಕ್ತರ ಸಮಿತಿಗಳು ಅಗತ್ಯ ದಾಖಲೆಗಳಿಗೆ ಒಪ್ಪಿಗೆ ನೀಡಿ ಹಣ ಮಂಜೂರು ಮಾಡಬೇಕಿದೆ. ಆ ಬಳಿಕವಷ್ಟೇ ಪರಿಹಾರ ಬಿಡುಗಡೆಯಾಗುತ್ತದೆ ಎಂದರು.
ಈ ಬಗ್ಗೆ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರೈತರ ಆತ್ಮಹತ್ಯೆಗಳೇನು ಕಡಿಮೆಯಾಗಿಲ್ಲ. ಅಧಿಕಾರಿಗಳು ಕೆಲವು ಆತ್ಮಹತ್ಯೆ ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಿಲ್ಲ ಅಥವಾ ಇದು ಅಪೂರ್ಣ ಮಾಹಿತಿಯಾಗಿರಬೇಕು. ಈ ವರದಿ, ಅಂಕಿಅಂಶವನ್ನು ನಾನು ಒಪ್ಪುವುದಿಲ್ಲ, ರೈತರು ಇನ್ನೂ ಸಂಕಷ್ಟದಲ್ಲಿದ್ದಾರೆ ಎಂದರು.
ರೈತರ ಆತ್ಮಾಹತ್ಯೆ ಸಂಖ್ಯೆಯಲ್ಲಿ ಕುಸಿತ ಮತ್ತು ಸಚಿವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ರೈತ ಹೋರಾಟಗಾರರಾದ ಪ್ರಕಾಶ್ ಕಮ್ಮರಡಿ ಅವರು, ಕರೋನ ಸಮಯದಲ್ಲಿ ಇಷ್ಟು ಜನ ಸತ್ತಿದ್ದಾರೆ ಎಂಬ ಅಂಕಿ ಅಂಶವೇ ತಪ್ಪು ಇದನ್ನು ನಂಬಲು ಸಾಧ್ಯವಿಲ್ಲ. ಈ ವರ್ಷ ಅಬ್ನಾರ್ಮಲ್ ವರ್ಷ. ಕರೋನ ಸಮಯದಲ್ಲಿ ಅನೇಕ ರೈತರ ಬೆಳೆ ಖರೀದಿಯಾಗಿಲ್ಲ ಕೆಲವಂತು ಕೊಳೆತೇ ಹೋಗಿವೆ. ಸಾಮನ್ಯ ದಿನಗಳಲ್ಲಿಯೇ ರೈತರಿಗೆ ಪರಿಹಾರ ಸಿಗಲ್ಲ ಇದು ಕರೋನ ಸಮಯ ಹೇಗೆ ಪರಿಹಾರ ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ರೈತರ ಸಾವಿನ ಅಂಕಿ ಅಂಶವನು ಹೇಳುವ ಬದಲು ಕರೋನ ಸಮಯದಲ್ಲಿ ರೈತರಿಗಾಗಿರುವ ನಷ್ಟದ ಬಗ್ಗೆ ಮಾತಾಡಬೇಕಿತ್ತು. ಶೇ.83% ರೈತರಿಗೆ ಆರೋಗ್ಯಕಿಂತ ಆದಾಯ ನಷ್ಟವಾಗಿದೆ ಎಂದು ತಮ್ಮ ಸಮಸ್ಯಯನ್ನು ವ್ಯಕ್ತಪಡಿಸಿದ್ದಾರೆ. ರೈತರಿಗೆ ಗೊಬ್ಬರ ಬೇಕೆ, ಬಿತ್ತನೆ ಬೀಜ ಬೇಕೆ ಏನು ಸಮಸ್ಯೆ ಎಂದು ಕೇಳಬೇಕಿತ್ತು ಆದರೆ ಇದನ್ನು ಮಾಡಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.