ರಾಜ್ಯದಲ್ಲಿ ಕಾವೇರಿ ಹೋರಾಟ ಜೋರಾಗಿದೆ. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದೆ ಜಲಾಶಯಗಳು ಭರ್ತಿ ಆಗಿಲ್ಲ. ಆದರೂ ತಮಿಳುನಾಡಿಗೆ ನೀರು ಬಿಡುತ್ತಿರುವ ಕ್ರಮವನ್ನು ಖಂಡಿಸಿ ಮಂಡ್ಯ ಬಂದ್ ಬಳಿಕ ಬೆಂಗಳೂರು ಬಂದ್ಗೆ ಕರೆ ಕೊಡಲಾಗಿದೆ. ಬೆಂಗಳೂರು ಬಂದ್ ಜೊತೆಗೆ ಶುಕ್ರವಾರ ಕರ್ನಾಟಕ ಬಂದ್ ಮಾಡುವ ಚರ್ಚೆಗಳು ಶುರುವಾಗಿವೆ. ಆದರೆ ಇದನ್ನು ಬಗೆಹರಿಸಬೇಕಿದ್ದ ಕಾಂಗ್ರೆಸ್ ಮಾತ್ರ ಪಕ್ಷದೊಳಗೆ ಶುರುವಾಗಿರುವ ಕಿತ್ತಾಟವನ್ನು ಸರಿ ಮಾಡುವ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಕಾವೇರಿ ಸಮಸ್ಯೆ ಬಿಗಡಾಯಿಸಿರುವಂತೆಯೇ ಕಾಂಗ್ರೆಸ್ ಪಕ್ಷದೊಳಗೆ ದಿನದಿಂದ ದಿನಕ್ಕೆ ಸಮಸ್ಯೆ ಜಟಿಲವಾಗುತ್ತಲೇ ಸಾಗುತ್ತಿದೆ. ಹೈಕಮಾಂಡ್ ಮಾತ್ರ ಮೌನಕ್ಕೆ ಶರಣಾಗಿರುವುದು ಮುಂದಿನ ದಿನಗಳಲ್ಲಿ ಸಂಕಷ್ಟ ತೊಂದೊಡ್ಡುವ ಸುಳಿವು ಸಿಗುತ್ತಿದೆ.
ರಾಜ್ಯದಲ್ಲಿ 3 ಡಿಸಿಎಂ ಸಾಕಾಗಲ್ಲ.. 6 ಮಂದಿ ಡಿಸಿಎಂ ಬೇಕು..!
ರಾಜ್ಯದಲ್ಲಿ ಮೂವರು ಡಿಸಿಎಂಗಳನ್ನು ಮಾಡಬೇಕು ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದರು. ಸಮುದಾಯವಾರು ಡಿಸಿಎಂ ಸ್ಥಾನ ಸೃಷ್ಟಿ ಮಾಡಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಅಂದ್ರೆ ಸಮುದಾಯವಾರು ಡಿಸಿಎಂ ಸ್ಥಾನ ಸೃಷ್ಟಿ ಮಾಡುವ ಅವಶ್ಯಕತೆ ಇದೆ ಎಂದು ರಾಜಣ್ಣ ಹೇಳಿದ್ದರು. ಆ ಬಳಿಕ ಸಮರ್ಥನೆ ಮಾಡಿಕೊಂಡಿದ್ದ ಸಚಿವ ರಾಜಣ್ಣ, ನಾನು ಹೈಕಮಾಂಡ್ಗೆ ಈ ಬಗ್ಗೆ ಪತ್ರ ಬರೆಯುತ್ತೇನೆ ಎಂದಿದ್ದರು. ಇದೀಗ ಮೂರು ಜನರಿಗೆ ಕೊಟ್ಟರೆ ಸಾಲಲ್ಲ, ಕನಿಷ್ಟ ಪಕ್ಷ 6 ಜನ ಡಿಸಿಎಂಗಳನ್ನು ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಇದೀಗ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ತಳಮಳ ಶುರುವಾಗಿದೆ.
ಡಿಕೆಶಿ ಶಕ್ತಿ ಕುಂದಿಸಲು ಡಿಸಿಎಂ ಅಸ್ತ್ರ.. ಕೌಂಟರ್ ಅಟ್ಯಾಕ್..
ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಜೊತೆಗೆ ಜಟಾಪಟಿ ನಡೆಸಿದ ಡಿ.ಕೆ ಶಿವಕುಮಾರ್, ಬಿ.ಕೆ ಹರಿಪ್ರಸಾದ್ ಮೂಲಕ ದಾಳಿ ನಡೆಸಿದ್ದರು. ಹರಿಪ್ರಸಾದ್ ದಾಳಿಗೆ ಕೌಂಟರ್ ಅಟ್ಯಾಕ್ ಎನ್ನುವಂತೆ ರಾಜಣ್ಣ ಸೇರಿದಂತೆ ಬಹುತೇಕ ಸಿದ್ದರಾಮಯ್ಯ ಬೆಂಬಲಿಗರು ಮಾತನಾಡಿದ್ದರು. ಒಬ್ಬನೇ ಒಬ್ಬ ಡಿಸಿಎಂ ಇರಬೇಕು ಎಂದು ಡಿಕೆ ಶಿವಕುಮಾರ್ ಷರತ್ತು ಹಾಕಿದ್ದಾರೆ ಅನ್ನೋ ಕಾರಣಕ್ಕೆ ಡಿಸಿಎಂ ಶಕ್ತಿ ಕುಂದಿಸುವುದು ಸಿದ್ದರಾಮಯ್ಯ ಬಣದ ಉದ್ದೇಶ ಎನ್ನಲಾಗಿತ್ತು. ಇದೇ ಕಾರಣಕ್ಕೆ ಸಿದ್ದರಾಮಯ್ಯ ಬಣದಲ್ಲಿ ಗುರ್ತಿಸಿಕೊಂಡಿರುವ ನಾಯಕರು ಡಿಸಿಎಂ ಹೆಸರಲ್ಲಿ ಟಾಂಗ್ ಕೊಡುವಕ್ಕೆ ಶುರು ಮಾಡಿದ್ದರು. ಆದರೆ ಡಿಕೆ ಶಿವಕುಮಾರ್ ಪರವಾಗಿ ಬ್ಯಾಟ್ ಬೀಸುವುದಕ್ಕೆ ಒಂದಿಬ್ಬರು ಬಿಟ್ಟರೆ ಯಾರು ಇಲ್ಲದಂತಾಗಿದ್ದಾರೆ. ಒಬ್ಬೊಬ್ಬರ ಕೈಲಿ ಹೇಳಿಕೆ ಕೊಡಿಸುತ್ತಿದ್ದ ಡಿಕೆ ಬಣ ಇದೀಗ ಸಿಎಂ ಕುರ್ಚಿಗೆ ರಿಸರ್ವ್ ಮಾಡಿಸುವ ಸಂಚು ಮಾಡಿದೆ.
ಏಕಾಂಗಿ ಡಿಕೆ ಶಿವಕುಮಾರ್ ಪರ ಒಂದಿಬ್ಬರ ವಾದ..
ಹರಿಪ್ರಸಾದ್ಗೆ ಸಿದ್ದರಾಮಯ್ಯ ಬಣದಿಂದ ಕೌಂಟರ್ ಆಗಿ ಡಿಸಿಎಂ ಮಾಡುವ ಆಗ್ರಹ ಕೇಳಿಬಂದಿತ್ತು. ಯಾವಾಗ ಡಿಸಿಎಂ ಸ್ಥಾನ ಮೂರು ಸಮುದಾಯಕ್ಕೆ ಕೊಡಬೇಕು, ಆರು ಸಮುದಾಯಕ್ಕೆ ಕೊಡಬೇಕು ಎಂದು ಹೇಳಿಕೆ ನೀಡುತ್ತ ಡಿಸಿಎಂ ಸ್ಥಾನಮಾನವನ್ನು ಕಡಿಮೆ ಮಾಡುವ ಆತಂಕ ಎದುರಾಯ್ತೋ, ಡಿಕೆ ಬ್ರದರ್ಸ್ ಲಿಂಗಾಯತ ಅಸ್ತ್ರ ಬಿಟ್ಟಿದ್ದಾರೆ. ಡಿ.ಕೆ ಶಿವಕುಮಾರ್ ಬೆಂಬಲಿಗನಾಗಿರುವ ದಾವಣಗೆರೆಯ ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ, 3 ಜನ ಡಿಸಿಎಂ ಬೇಕಿಲ್ಲ, ಮಾಡೋದಾದ್ರೆ ಸಿಎಂ ಸ್ಥಾನ ನಮ್ಮ ಸಮುದಾಯಕ್ಕೆ ಕೊಡಿ, ವೀರಶೈವ ಶಾಸಕರೇ ಹೆಚ್ಚಾಗಿದ್ದೀವಿ. ನಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ಕೊಡಬಹುದಲ್ವಾ..? ಎಂದು ಸಿದ್ದರಾಮಯ್ಯ ಬಣಕ್ಕೆ ಪ್ರತ್ಯಾಸ್ತ್ರ ಬಿಟ್ಟಿದ್ದಾರೆ. ಇದೀಗ ಭಾನುವಾರ ತುಮಕೂರಿನಲ್ಲಿ ಮಾತನಾಡಿರುವ ಸಚಿವ ರಾಜಣ್ಣ, ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ಸಿಗಬೇಕು ಅನ್ನೋದು ನನ್ನ ಆಸೆ, ಎಲ್ಲಾ ಸಮುದಾಯಕ್ಕೂ ಸಿಕ್ಕಿದೆ, ದಲಿತ ಸಮುದಾಯಕ್ಕೂ ಸಿಗಲಿ ಎಂದು ಮತ್ತೊಂದು ವರಸೆ ಶುರು ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್ನಲ್ಲಿ ಸಿಎಂ-ಡಿಸಿಎಂ ಕೈಕುಲುಕಿ ನಗುನಗುತ್ತ ಮಾತನಾಡಿದರೂ ಆಪ್ತ ವಲಯ ಮಾತ್ರ ಸಮರ ಸಾರಿದೆ ಅನ್ನೋದಂತು ಸತ್ಯ.
ಕೃಷ್ಣಮಣಿ