ಒಂದು ಕಡೆ ಉಸ್ತುವಾರಿ ಸಚಿವರ ನೇಮಕ ಮಾಡಿ ಸರ್ಕಾರ ಹೊಸ ಆದೇಶ ಹೊರಡಿಸಿದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಸಂಪುಟ ಸಮರ ಆರಂಭವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ವಿಷಯದಲ್ಲಿಯೂ ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡಲಾಗಿದ್ದು, ಹಲವು ಪ್ರಭಾವಿ ನಾಯಕರು ಸ್ವಂತ ಜಿಲ್ಲೆಯ ಉಸ್ತುವಾರಿಯಿಂದ ವಂಚಿತರಾಗಿದ್ದಾರೆ.
ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ಅವರಿಬ್ಬರೂ ಶಿವಮೊಗ್ಗ ಜಿಲ್ಲೆಯಿಂದ ಪ್ರಭಾವಿ ಸಚಿವರಾಗಿದ್ದರೂ, ಇಬ್ಬರನ್ನೂ ಬದಿಗೆ ಸರಿಸಿ ಮಂಡ್ಯ ಜಿಲ್ಲೆಯ ಕೆ ಸಿ ನಾರಾಣಗೌಡರಿಗೆ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಹಾಗೇ ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಪಡೆಯುವ ಮೂಲಕ ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಭಾವ ವೃದ್ಧಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ಹಿರಿಯ ಸಚಿವ ಆರ್ ಅಶೋಕ್, ವಿ ಸೋಮಣ್ಣ ಮತ್ತು ಡಾ ಅಶ್ವಥನಾರಾಯಣ ಅವರಿಬ್ಬರನ್ನೂ ಬದಿಗೊತ್ತಿ, ಮುಖ್ಯಮಂತ್ರಿಗಳೇ ಬೆಂಗಳೂರು ನಗರ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಅಲ್ಲದೆ ಆರ್ ಅಶೋಕ್ ಮತ್ತು ಜೆ.ಸಿ.ಮಾಧುಸ್ವಾಮಿ ಅವರಂತಹ ಹಿರಿಯ ಸಚಿವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿಯನ್ನು ನೀಡದೆ ಶಾಕ್ ನೀಡಲಾಗಿದೆ. ಅದರಲ್ಲೂ ಕೆಲವು ಸಚಿವರಿಗೆ ಎರಡೆರಡು ಜಿಲ್ಲೆಯ ಉಸ್ತುವಾರಿ ನೀಡಿದ್ದರೂ, ಪಕ್ಷದ ಹಿರಿಯ ನಾಯಕರೂ, ಸಂಪುಟದ ಹಿರಿಯ ಸಹೋದ್ಯೋಗಿಗಳೂ ಆದ ಅಶೋಕ್ ಮತ್ತು ಜೆ.ಸಿ ಮಾಧುಸ್ವಾಮಿ ಅವರಿಗೆ ಯಾವುದೇ ಜಿಲ್ಲೆಯನ್ನೂ ನೀಡದೇ ಇರುವುದು ಸಿಎಂ ಬೊಮ್ಮಾಯಿ ಅವರ ಲೆಕ್ಕಾಚಾರಗಳ ಬಗ್ಗೆ ಭಾರೀ ಚರ್ಚೆಗೆ ಇಂಬು ನೀಡಿದೆ.

ಈ ಹಿಂದೆ ಬಿಜೆಪಿ ಸರ್ಕಾರಗಳಲ್ಲಿ ಸಾಮಾನ್ಯವಾಗಿ ಜಿಲ್ಲಾ ಉಸ್ತುವಾರಿಯನ್ನು ಆಯಾ ಜಿಲ್ಲೆಯಿಂದ ಆಯ್ಕೆಯಾಗಿರುವ ಸಚಿವರಿಗೇ ನೀಡುವುದು, ಆ ಜಿಲ್ಲೆಯಿಂದ ಯಾರೂ ಸಚಿವರಿಲ್ಲದೇ ಇದ್ದಲ್ಲಿ ನೆರೆಹೊರೆಯ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ವಹಿಸುವುದು ವಾಡಿಕೆಯಾಗಿತ್ತು. ಆದರೆ, ಸಿ ಎಂ ಬೊಮ್ಮಾಯಿ ಅವರು ಆ ಸಂಪ್ರದಾಯವನ್ನು ಸಂಪೂರ್ಣ ಬದಲಾಯಿಸಿ, ಬಹುತೇಕ ಹಿರಿಯ ಸಚಿವರೂ ಸೇರಿದಂತೆ ತವರು ಜಿಲ್ಲೆ ಹೊರತುಪಡಿಸಿ ಬೇರೆಬೇರೆ ಜಿಲ್ಲೆಯ ಉಸ್ತುವಾರಿಗಳನ್ನಾಗಿ ನೇಮಕ ಮಾಡಿದ್ದಾರೆ. ಎಸ್ ಅಂಗಾರ ಮತ್ತು ವಿ ಸುನೀಲ್ ಕುಮಾರ್ ಅವರನ್ನು ಹೊರತುಪಡಿಸಿ ಉಳಿದ ಯಾರಿಗೂ ತವರು ಜಿಲ್ಲೆಯ ಉಸ್ತುವಾರಿ ಸಿಕ್ಕಿಲ್ಲ!
ಉಸ್ತುವಾರಿ ಸಚಿವರ ಬದಲಾವಣೆಯ ಈ ನಿರ್ಧಾರದಲ್ಲಿ ಬೊಮ್ಮಾಯಿ ಅವರಿಗಿಂತಲೂ ಸಂಘದ ತೀರ್ಮಾನವೇ ಹೆಚ್ಚು ಕೆಲಸ ಮಾಡಿದೆ ಎಂಬುದಕ್ಕೆ ಸಂಘದ ನಿಷ್ಠರಾದ ಅಂಗಾರ ಮತ್ತು ವಿ ಸುನೀಲ್ ಕುಮಾರ್ ಅವರಿಗೆ ಮಾತ್ರ ತವರು ಜಿಲ್ಲೆಯ ಉಸ್ತುವಾರಿ ಸಿಕ್ಕಿರುವುದೇ ನಿದರ್ಶನ. ಉಳಿದಂತೆ ಇತರೆ ಸಚಿವರಿಗೆ ಬೇರೆ ಬೇರೆ ಜಿಲ್ಲೆಯ ಉಸ್ತುವಾರಿ ವಹಿಸುವ ಮೂಲಕ ಆಯಾ ಸಚಿವರ ತವರು ಕ್ಷೇತ್ರಗಳಲ್ಲಿ ನಡೆಯುತ್ತಿದ್ದ ಪಕ್ಷಪಾತಿ ಧೋರಣೆ ಮತ್ತು ಗುಂಪುಗಾರಿಕೆ ಕಡಿವಾಣ ಹಾಕುವುದು ಸಂಘದ ಯೋಜನೆ. ಆ ಹಿನ್ನೆಲೆಯಲ್ಲಿಯೇ ಉಸ್ತುವಾರಿ ಬದಲಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಈ ನಡುವೆ ಉಸ್ತುವಾರಿ ಸಚಿವರ ನೇಮಕದ ನಡುವೆಯೇ ಖಾಲಿ ಇರುವ ನಾಲ್ಕು ಸಚಿವ ಸ್ಥಾನಗಳನ್ನು ತುಂಬುವ ಕುರಿತು ಬಿಜೆಪಿಯ ವಲಯದಲ್ಲಿ ಬಹಿರಂಗ ಚರ್ಚೆ ಆರಂಭವಾಗಿದೆ. ಮುಖ್ಯವಾಗಿ ಸಚಿವ ಸ್ಥಾನ ವಂಚಿತ ಹಿರಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಎಂ ಪಿ ರೇಣುಕಾಚಾರ್ಯ ತಮ್ಮ ಬಹಿರಂಗ ಹೇಳಿಕೆಗಳನ್ನು ಮುಂದುವರಿಸಿದ್ದಾರೆ. ಬಿಜೆಪಿಯ ಸಚಿವರೂ ಸೇರಿದಂತೆ ಹಲವರು ಈಗಾಗಲೇ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ. ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೊಂದಿಗೆ ಕೆಲವರು ಈಗಾಗಲೇ ಟಿಕೆಟ್ ಮಾತುಕತೆ ನಡೆಸಿದ್ದಾರೆ ಎನ್ನುವ ಮೂಲಕ ಪಕ್ಷನಿಷ್ಠರಲ್ಲದ, ಅಧಿಕಾರದ ಆಸೆಗಾಗಿ ಪಕ್ಷಕ್ಕೆ ಬಂದಿರುವ ಅವಕಾಶವಾದಿಗಳನ್ನು ಸಂಪುಟದಿಂದ ಕೈಬಿಟ್ಟು ಪಕ್ಷ ಸಂಘಟನೆಯ ದೃಷ್ಟಿಯಿಂದ ಪಕ್ಷನಿಷ್ಠರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದ್ದಾರೆ. ಮತ್ತೊಂದು ಕಡೆ, ರೇಣುಕಾಚಾರ್ಯ ಅವರು, ಪ್ರತಿ ಬಾರಿಯೂ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಅಧಿಕಾರ ಅನುಭವಿಸಿರುವ ಹಿರಿಯರನ್ನು ಕೈಬಿಟ್ಟು ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಪುನರುಚ್ಛರಿಸಿದ್ದಾರೆ.

ಹೀಗೆ ಈ ಇಬ್ಬರು ರೆಬೆಲ್ ಶಾಸಕರು ತಮ್ಮ ಬಂಡಾಯದ ದನಿಯನ್ನು ಗಟ್ಟಿಗಳಿಸುತ್ತಿರುವ ಹೊತ್ತಿಗೇ ಪ್ರತಿ ಬಾರಿ ಬಿಜೆಪಿ ಸರ್ಕಾರದಲ್ಲೂ ಆಯಕಟ್ಟಿನ ಸಚಿವ ಸ್ಥಾನ ಅನುಭವಿಸಿರುವ ಹಿರಿಯ ಸಚಿವ ಕೆ ಎಸ್ ಈಶ್ವರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪಕ್ಷದ ವರಿಷ್ಠರು ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸಂಘಟನೆಗೆ ಸಿದ್ಧ ಎಂದು ಹೇಳಿದ್ದಾರೆ.
ಈ ನಡುವೆ ಖಾಲಿ ಇರುವ ನಾಲ್ಕು ಸಚಿವ ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಅವಕಾಶ ನೀಡಬೇಕು. ಆ ಮೂಲಕ ಪಕ್ಷವನ್ನು ಕಟ್ಟಿಬೆಳೆಸಿದ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಚರ್ಚೆಗಳಿಗೆ ಇತಿಶ್ರೀ ಹಾಡಬೇಕು ಎಂಬ ದನಿಯೂ ಯಡಿಯೂರಪ್ಪ ಬೆಂಬಲಿಗರಿಂದ ಕೇಳಲಾರಂಭಿಸಿದೆ. ವಾಸ್ತವವಾಗಿ ರೇಣುಕಾಚಾರ್ಯ ಅವರು ಕಳೆದ ಒಂದು ತಿಂಗಳಿನಿಂದ ಪದೇಪದೆ ಹೊಸಬರಿಗೆ ಅವಕಾಶ ನೀಡಬೇಕು. ಪಕ್ಷ ಸಂಘಟನೆಗೆ ಕೆಲಸ ಮಾಡುವ ಯುವ ನಾಯಕರಿಗೆ ಅವಕಾಶ ನೀಡಬೇಕು ಎನ್ನುತ್ತಿರುವುದು ಪರೋಕ್ಷವಾಗಿ ವಿಜಯೇಂದ್ರ ಅವರಿಗೆ ಅವಕಾಶ ನೀಡಬೇಕು ಎಂಬುದೇ ಆಗಿದೆ.
ಅದರಲ್ಲೂ ಮೇಕೆದಾಟು ಪಾದಯಾತ್ರೆಯಂತಹ ಕಾರ್ಯಕ್ರಮದ ಮೂಲಕ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಬಲವೃದ್ಧಿಸಿಕೊಳ್ಳತೊಡಗಿದೆ. ಡಿ ಕೆ ಶಿವಕುಮಾರ್ ಅವರು ಅತ್ಯಂತ ಚಾಣಾಕ್ಷತನದಿಂದ ಹಳೇಮೈಸೂರು ಭಾಗದಲ್ಲಿ ಪಕ್ಷ ನೆಲೆ ಭದ್ರಪಡಿಸುವಲ್ಲಿ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಅವರ ವೇಗಕ್ಕೆ ತಕ್ಕಂತೆ ಬಿಜೆಪಿಯನ್ನು ಮುಂದಿನ ಚುನಾವಣೆಗೆ ಸಜ್ಜುಗೊಳಿಸಲು ಪಕ್ಷದಲ್ಲಿ ರಾಜ್ಯವನ್ನು ಸುತ್ತಿ ಸಂಘಟನೆಯ ಕೆಲಸ ಮಾಡುವ ಯುವ ನಾಯಕರಿಗೆ ಅಧಿಕಾರ ಮತ್ತು ಅವಕಾಶ ನೀಡಬೇಕಿದೆ. ಆದರೆ, ಬಿಜೆಪಿ ವರಿಷ್ಠರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಯಡಿಯೂರಪ್ಪ ಅವರನ್ನು ಬದಿಗೆ ಸರಿಸಿದ ಬಳಿಕ ಅವರ ಮಗನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ರಾಜ್ಯದ ಪ್ರಭಾವಿ ಲಿಂಗಾಯತ ಸಮುದಾಯದ ಬಿಜೆಪಿಯೊಂದಿಗಿನ ನಂಟು ಸಡಿಲಗೊಳ್ಳದಂತೆ ನೋಡಿಕೊಳ್ಳಬೇಕಿತ್ತು. ಆದರೆ, ವರಿಷ್ಠರು ಮತ್ತು ಸಿಎಂ ಬೊಮ್ಮಾಯಿ ಬಿಎಸ್ ವೈ ಬಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ. ಒಂದು ಕಡೆ ಒಕ್ಕಲಿಗ ವಲಯದಲ್ಲಿ ಪಕ್ಷ ಬಲಹೀನವಾಗುತ್ತಿದೆ. ಮತ್ತೊಂದು ಕಡೆ ಲಿಂಗಾಯತ ವಲಯದಲ್ಲೂ ಪಕ್ಷ ದುರ್ಬಲವಾಗುತ್ತಿದೆ. ಇದು ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಪೆಟ್ಟು ಕೊಡಲಿದೆ ಎಂಬ ವಾದವನ್ನು ಬಿಎಸ್ ವೈ ಬಣ ಮಂಡಿಸುತ್ತಿದೆ.

ಆ ಮೂಲಕ ಕನಿಷ್ಟ ಲಿಂಗಾಯತ ಸಮುದಾಯದಲ್ಲಾದರೂ ಪಕ್ಷದ ಬಲ ಕುಂದದಂತೆ ಕಾದುಕೊಳ್ಳಲು ವಿಜಯೇಂದ್ರ ಅವರಿಗೆ ಸರ್ಕಾರ ಮತ್ತು ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡುವುದು ಮತ್ತು ಆ ಮೂಲಕ ಬಿ ಎಸ್ ವೈ ಬಣವನ್ನು ವಿಶ್ವಾಸಕ್ಕೆ ಪಡೆಯುವುದು ಮುಖ್ಯ ಎಂಬ ಅಭಿಪ್ರಾಯ ರೂಪಿಸುವ ಮೂಲಕ ವಿಜಯೇಂದ್ರ ಸಚಿವಗಿರಿಗೆ ಹಾದಿ ಸುಗಮಗೊಳಿಸುವುದು ಅವರ ಉದ್ದೇಶ. ಶಾಸಕ ರೇಣುಕಾಚಾರ್ಯ ಮಾಡುತ್ತಿರುವುದೂ ಇದನ್ನೇ ಎಂಬುದು ಬಿಜೆಪಿಯ ಆಂತರಿಕ ವಲಯದ ವಿಶ್ಲೇಷಣೆ.
ಆದರೆ, ಬಿಎಸ್ ವೈ ಬಣವನ್ನು ಸಂಪೂರ್ಣವಾಗಿ ಬದಿಗೆ ಸರಿಸಿಯೇ ಹೊಸ ಬಿಜೆಪಿ ಕಟ್ಟುವ ಪಣ ತೊಟ್ಟಿರುವ ಸಂಘಪರಿವಾರ ಮತ್ತು ಅದರ ಆಣತಿಯ ಮೇಲೆ ಹೆಜ್ಜೆ ಹಾಕುವ ಬಿಜೆಪಿಯ ವರಿಷ್ಠರು ಬಿ ಎಸ್ ವೈ ಅವರ ಇಂತಹ ತಂತ್ರಗಾರಿಕೆಗೆ ಸೊಪ್ಪು ಹಾಕುವರೆ? ಅಥವಾ ಬಿ ಎಸ್ ವೈಗೆ ಪರ್ಯಾಯವಾಗಿ ಹೊಸ ಲಿಂಗಾಯತ ನಾಯಕತ್ವ ರೂಪಿಸುವ ತಮ್ಮ ಯತ್ನಗಳನ್ನು ಮುಂದುವರಿಸುವರೇ ಎಂಬುದಕ್ಕೆ ಸಂಪುಟ ವಿಸ್ತರಣೆ ಉತ್ತರ ನೀಡಲಿದೆ.