ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪೇನ್ ಮತ್ತು ದುಬೈಗೆ 11 ದಿನಗಳ ಪ್ರವಾಸ ಕೈಗೊಳ್ಳಲಿದ್ದು, ರಾಜ್ಯದಲ್ಲಿ ಬಂಡಾವಾಳ ಹೂಡಿಕೆಗೆ ಉತ್ತೇಜನ ನೀಡುವ ಸಲುವಾಗಿ ಅಲ್ಲಿನ ವ್ಯಾಪಾರ ಸಮ್ಮೇಳಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮಂಗಳವಾರ (ಸೆಪ್ಟೆಂಬರ್ 11) ವರದಿಯಾಗಿದೆ.
ಬ್ಯಾನರ್ಜಿ ಅವರು ಮಂಗಳವಾರ ದುಬೈಗೆ ತೆರಳಲಿದ್ದು, ರಾತ್ರಿ ಅಲ್ಲಿಯೇ ತಂಗಿ ಮರುದಿನ ಸ್ಪೇನ್ ರಾಜಧಾನಿ ಮ್ಯಾಡ್ರಿಡ್ಗೆ ತಲುಪಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
“ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮಮತಾ ಬ್ಯಾನರ್ಜಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಮೂರು ದಿನಗಳ ಕಾಲ ಮ್ಯಾಡ್ರಿಡ್ನಲ್ಲಿ ತಂಗಲಿದ್ದು, ಈ ವೇಳೆ ವ್ಯಾಪಾರ ಸಮ್ಮೇಳದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಸ್ಪೇನ್ನಲ್ಲಿರುವ ಬಂಗಾಳಿ ಸಮುದಾಯವನ್ನು ಭೇಟಿ ಮಾಡಿ ಸಂವಾದ ನಡೆಸಲಿದ್ದಾರೆ. ನಂತರ ಬಾರ್ಸಿಲೋನಾದಲ್ಲಿ ನಡೆಯುವ ಎರಡು ದಿನಗಳ ‘ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಸಮ್ಮಿಟ್’ನಲ್ಲಿ ಭಾಗವಹಿಸಲಿದ್ದಾರೆ” ಎಂದು ರಾಜ್ಯ ಕಾರ್ಯದರ್ಶಿ ನಾಬಣ್ಣ ತಿಳಿಸಿದ್ದಾರೆ.
“ಮಮತಾ ಬ್ಯಾನರ್ಜಿ ಅವರ ಜೊತೆಗೆ ಮುಖ್ಯ ಕಾರ್ಯದರ್ಶಿ ಎಚ್. ಕೆ. ದ್ವಿವೇದಿ ಸೇರಿದಂತೆ ಕೋಲ್ಕತ್ತದ ಫುಟ್ಬಾಲ್ ಕ್ಲಬ್ಗಳಾದ ಮೋಹನ್ ಬಗಾನ್, ಈಸ್ಟ್ ಬೆಂಗಾಲ್, ಮೊಹಮ್ಮದನ್ ಸ್ಪೋರ್ಟಿಂಗ್ನ ಹಿರಿಯ ಪದಾಧಿಕಾರಿಗಳು ಪ್ರವಾಸದಲ್ಲಿ ಜೊತೆಗೂಡಲಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮ್ಯಾಡ್ರಿಡ್ನಲ್ಲಿ ಮಮತಾ ಅವರ ತಂಡವನ್ನು ಸೇರಲಿದ್ದಾರೆ” ಎಂದು ತಿಳಿಸಿದ್ದಾರೆ.
“ಕೋಲ್ಕತ್ತದಲ್ಲಿ ನಡೆದ ಚಲನಚಿತ್ರೋತ್ಸವಗಳಲ್ಲಿ ಸ್ಪೇನ್ ಸಕ್ರಿಯವಾಗಿ ಭಾಗವಹಿಸಿತ್ತು. ಸ್ಪೇನ್ ಉಡುಪು ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಈ ವರ್ಷದ ‘ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಸಮ್ಮಿಟ್’ನಲ್ಲಿ ಸ್ಪೇನ್ ಭಾಗಿಯಾಗಬಹುದು ಎಂಬ ನಿರೀಕ್ಷೆಯಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೋಲ್ಕತ್ತಕ್ಕೆ ಹಿಂದಿರುಗುವ ಮೊದಲು (ಸೆ.23) ಒಂದೂವರೆ ದಿನಗಳ ಕಾಲ ದುಬೈ ಪ್ರವಾಸ ಕೈಗೊಳ್ಳಲಿದ್ದೇವೆ ಎಂದರು.
ಬಾರ್ಸಿಲೋನಾದಲ್ಲಿ ‘ಲಾ ಲಿಗಾ ಅಧ್ಯಕ್ಷ ಜೇವಿಯ ಟೆಬಾಸ್ ಅವರನ್ನು ಮಮತಾ ಭೇಟಿಯಾಗಬಹುದು ಎಂದು ಮೂಲಗಳು ತಿಳಿಸಿವೆ.