ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆಗೆ ಸೇರಲು ಯುವಕರನ್ನು ಪ್ರೇರೇಪಿಸುತ್ತಿದ್ದಾರೆ ಎಂದು ಆರೋಪಿಸಿ ಬಂಧಿಸಲ್ಪಟ್ಟಿದ್ದ ಅರ್ಶಿ ಖುರೇಶಿ ಅವರನ್ನು ಬರೋಬ್ಬರಿ ಆರು ವರ್ಷಗಳ ಬಳಿಕ ನಿರಪರಾಧಿ ಎಂದು ಬಿಡುಗಡೆಗೊಳಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಹೊರಿಸಲಾಗಿದ್ದ ಆರ್ಷಿ ಖುರೇಶಿ ರನ್ನು ಮುಂಬೈನ ವಿಶೇಷ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
ವಿವಾದಾತ್ಮಕ ಭಾಷಣಗಾರ ಝಾಕಿರ್ ನಾಯಕ್ ರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (IRF) ನಲ್ಲಿ ಕೆಲಸ ಮಾಡುತ್ತಿದ್ದ ಖುರೇಶಿ ಅವರನ್ನು 2016 ರಲ್ಲಿ ಭಯೋತ್ಪಾದನೆಗೆ ಪ್ರಚೋದನೆ ಆರೋಪದಲ್ಲಿ ಜೈಲಿಗೆ ಹಾಕಲಾಗಿತ್ತು. ಮುಂಬೈನಿಂದ ನಾಪತ್ತೆಯಾಗಿದ್ದ ಅಶ್ಫಾಕ್ ಮಜೀದ್ ಹಾಗೂ ಕೇರಳದಿಂದ ನಾಪತ್ತೆಯಾದ ಯುವಕರನ್ನು ಭಯೋತ್ಪಾದಕ ಸಂಘಟನೆ ಸೇರಲು ಖುರೇಶಿ ಪ್ರೇರಣೆ ನೀಡಿದ್ದ ಎಂದು ಆರೋಪವನ್ನು ಖುರೇಶಿ ವಿರುದ್ಧ ಮಾಡಲಾಗಿತ್ತು.
ಇಸ್ಲಾಮಿಕ್ ಸ್ಟೇಟ್ (ಐಎಸ್) ಸೇರಲು ತನ್ನ ಮಗ ಅಶ್ಫಾಕ್ ಸೇರಿದಂತೆ ತನ್ನ ಪತ್ನಿ ಮತ್ತು ಮಗಳನ್ನು ಪ್ರೇರೇಪಿಸಿದ್ದರು ಎಂದು ಮುಂಬೈ ನಿವಾಸಿ ಅಬ್ದುಲ್ ಎಂಬವರು ಖುರೇಶಿ ಮತ್ತು ಇತರ ಇಬ್ಬರ ವಿರುದ್ಧ ಆಗಸ್ಟ್ 2016 ರಲ್ಲಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು.

ಶುಕ್ರವಾರ ತೀರ್ಪು ಪ್ರಕಟಿಸಿದ ವಿಶೇಷ ನ್ಯಾಯಾಧೀಶ ಎ.ಎಂ.ಪಾಟೀಲ್, ಖುರೇಶಿ ವಿರುದ್ಧದ ಎನ್‌ಐಎ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳು ಪತ್ತೆಯಾಗದ ಕಾರಣ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗುತ್ತಿದೆ ಎಂದು ಆದೇಶಿಸಿದ್ದಾರೆ.
“ಕಾಣೆಯಾದ ಯುವಕರು, ಅದರಲ್ಲೂ ವಿಶೇಷವಾಗಿ ಅಶ್ಫಾಕ್, ಇತರ ಸಾರ್ವಭೌಮ ದೇಶಗಳ ಗಡಿಯನ್ನು ದಾಟಿದ್ದಾರೆ ಎಂದು ತೋರಿಸಲು ಎನ್‌ಐಎ ದಾಖಲೆಯಲ್ಲಿ ಯಾವುದೇ ಪುರಾವೆಗಳಿಲ್ಲ. ಭಾರತೀಯ ಪ್ರಜೆಗಳ ಅಕ್ರಮ ತಂಗುವಿಕೆ ಮತ್ತು ಅವರ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಯಾವುದೇ ದೇಶದಿಂದ ಯಾವುದೇ ದೂರುಗಳು ಬಂದ ದಾಖಲೆಗಳಿಲ್ಲ” ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ, ಆರೋಪದ ಪ್ರಕಾರ, ಅಶ್ಫಾಕ್ ಐಸಿಸ್‌ಗೆ ಸೇರಿದ್ದರೆ, ಈ ಪ್ರಕರಣದಲ್ಲಿ ಅವರನ್ನು ಯಾಕೆ ಆರೋಪಿಯನ್ನಾಗಿ ಮಾಡಲಾಗಿಲ್ಲ ಎಂದು ವಿಶೇಷ ನ್ಯಾಯಾಧೀಶ ಎ ಎಂ ಪಾಟೀಲ್ ತಮ್ಮ ಆದೇಶದಲ್ಲಿ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನೀಡಿರುವ ಪ್ರಮುಖ ಸಾಕ್ಷಿಗಳಲ್ಲಿ ಅಶ್ಫಾಕ್ ಸಹೋದರನ ಸಾಕ್ಷಿ ಹೇಳಿಕೆಗಳೂ ಸೇರಿದೆ, ಅವರು ಟೆಲಿಗ್ರಾಮ್ ಮೂಲಕ ಅಶ್ಫಾಕ್ ನ ವಾಯ್ಸ್ ಮೆಸೇಜನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದ್ದರು.

ತಾನು ಐಎಸ್‌ಗೆ ಸೇರಿದ್ದೇನೆ ಮತ್ತು ಹಿಂತಿರುಗುವುದಿಲ್ಲ ಎಂದು ಅಶ್ಫಾಕ್ ತನ್ನ ಸಹೋದರನಿಗೆ ಧ್ವನಿ ಸಂದೇಶ ಕಳಿಸಿದ್ದ ಎಂದು ಎನ್‌ಐಎ ಹೇಳಿತ್ತು. ಆದರೆ, ಎನ್‌ಐಎ ಆ ಫೋನ್ ಅನ್ನು ವಶಪಡಿಸಿಕೊಂಡಿಲ್ಲ ಎಂದು ಅಶ್ಫಾಕ್ ಸಹೋದರ ನ್ಯಾಯಾಲಯಕ್ಕೆ ತಿಳಿಸಿದ್ದರು.
ಪ್ರಕರಣದ ಬಹುಮುಖ್ಯ ಸಾಕ್ಷಿ ಆಗಿರುವ ಫೋನ್ ಅನ್ನು ವಶಪಡಿಸದ ಎನ್‌ಐಎ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನ್ಯಾಯಾಲಯ, “ಹಾಗಾದರೆ, ವಾಯ್ಸ್ ಮೆಸೇಜ್ ಜೊತೆಗೆ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳುವ ಅಗತ್ಯವಿದೆ ಎಂದು ಎನ್ಐಎ ಏಕೆ ಭಾವಿಸಲಿಲ್ಲ ಎಂಬ ಸರಳ ಪ್ರಶ್ನೆ ಉದ್ಭವಿಸಿದೆ. ಎನ್‌ಐಎ ಏಕೆ ಉತ್ತಮ ಸಾಕ್ಷ್ಯವನ್ನು ವಶಕ್ಕೆ ತೆಗೆದುಕೊಂಡಿಲ್ಲ ”ಎಂದು ನ್ಯಾಯಾಲಯ ಕೇಳಿದೆ.
ಪ್ರಾಸಿಕ್ಯೂಷನ್ ವಾದವನ್ನು ಬೆಂಬಲಿಸದ ಅಶ್ಫಾಕ್ ಅವರ ಪೋಷಕರು ಮತ್ತು ಖುರೇಶಿ ಯ ಪಾತ್ರದ ಬಗ್ಗೆ ಏನನ್ನೂ ಹೇಳದ ಅಶ್ಫಾಕ್ ಸಹೋದರನ ಸಾಕ್ಷ್ಯ ಹೇಳಿಕೆಯು, ಎನ್ಐಎ ಪ್ರಕರಣದ ಬಗ್ಗೆ ಅನುಮಾನಗಳನ್ನು ಸೃಷ್ಟಿಸಿದೆ ಎಂದು ನ್ಯಾಯಾಲಯ ಹೇಳಿದೆ.
ವಿಚಾರಣೆ ವೇಳೆ ಖುರೇಶಿ ವಿರುದ್ಧ ಸಾಕ್ಷ್ಯ ನೀಡಿದ 57 ಸಾಕ್ಷಿದಾರರಲ್ಲಿ 8 ಮಂದಿ ಖುರೇಶಿ ವಿರುದ್ಧ ಹಗೆತನ ಹೊಂದಿದ್ದರು ಎಂದು ಖುರೇಶಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಖುರೇಶಿ ಯುವಕರ ಮೇಲೆ ಪ್ರಭಾವ ಬೀರಿದ್ದಾರೆ, ಮತ್ತು ಅವರು ಐಎಸ್‌ಗೆ ಸೇರಿದ್ದಾರೆ ಎಂಬುದನ್ನು ತೋರಿಸಲು ಪ್ರಾಸಿಕ್ಯೂಷನ್ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ವಕೀಲರು ವಾದ ಮಂಡಿಸಿದ್ದರು.