Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕಾಲನ ಕರೆಗೆ ಆಲದ ಮರವೇ ಗುರಿಯಾಗಬೇಕಿತ್ತೇ? ಸಮಾಜದ ಒಡಲಾಳದಿಂದ ಸೃಷ್ಟಿಯಾದ ವ್ಯಕ್ತಿತ್ವವೊಂದು ಹಠಾತ್ತನೆ ಕಣ್ಮರೆಯಾದಾಗ !!!

ನಾ ದಿವಾಕರ

ನಾ ದಿವಾಕರ

January 23, 2023
Share on FacebookShare on Twitter

ಸಾವು ನಿಶ್ಚಿತ ಎನ್ನುವುದು ಮನುಜ ಸಮಾಜ ಅನಿವಾರ್ಯವಾಗಿ ಒಪ್ಪಿಕೊಂಡೇ ಬಂದಿರುವಂತಹ ಒಂದು ಪ್ರಕೃತಿ ನಿಯಮ. ಜನಿಸಿ ಬಂದವರೆಲ್ಲ ಅಳಿಯಲೇ ಬೇಕು, ಜನಿಸಿದ ಜೀವಗಳೆಲ್ಲವು ನಿಶ್ಶೇಷವಾಗಲೇಬೇಕು. ಆಧ್ಯಾತ್ಮಿಕ ನೆಲೆಯಲ್ಲಿ ಸಾವನ್ನು ವಿವಿಧ ಸಮಾಜಗಳು ತಮ್ಮದೇ ಆದ ರೀತಿಯಲ್ಲಿ ಪರಿಭಾವಿಸಿಕೊಳ್ಳುತ್ತಾ, ಲೌಕಿಕ ಪ್ರಪಂಚದಿಂದ ನಿರ್ಗಮಿಸಿದವರನ್ನು ವಿಭಿನ್ನ ರೀತಿಯಲ್ಲಿ ಗೌರವಿಸುತ್ತಾ ಬಂದಿವೆ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮತ್ತೊಬ್ಬ ವ್ಯಕ್ತಿಯ ಸಾವನ್ನು ಸಂಭ್ರಮಿಸುವಂತಹ ಕ್ರೂರ ಚಾರಿತ್ರಿಕ, ಪೌರಾಣಿಕ ಪ್ರಸಂಗಗಳನ್ನು ಸಹ ಇದೇ ಆಧ್ಯಾತ್ಮ ಅಥವಾ ಮತಧರ್ಮಗಳ ನೆಲೆಯಲ್ಲಿ ಗುರುತಿಸುತ್ತಾ ಬಂದಿದ್ದೇವೆ. ಹಾಗೆಯೇ ಮಾನವ ಅಭ್ಯುದಯದ ಇತಿಹಾಸದಲ್ಲಿ ತಮ್ಮ ಆಧಿಪತ್ಯ/ಪಾರಮ್ಯವನ್ನು ವಿಸ್ತರಿಸುವ/ರಕ್ಷಿಸುವ ಸಲುವಾಗಿ ಸಾಮ್ರಾಜ್ಯಗಳು, ಪಾಳಯಗಳು, ಸಂಸ್ಥಾನಗಳು ಮತ್ತೊಂದು ಭೂ ಪ್ರದೇಶವನ್ನು ಅತಿಕ್ರಮಿಸಿ ಸಾವಿರಾರು ಜೀವಗಳ ಹತ್ಯೆಯನ್ನು ಸಂಭ್ರಮಿಸಿದ ಇತಿಹಾಸಕ್ಕೂ ಮನುಕುಲ ಸಾಕ್ಷಿಯಾಗಿದೆ. 21ನೆಯ ಶತಮಾನವೂ ಮಾನವನ ಈ ಕ್ರೌರ್ಯದಿಂದ ಹೊರತಾಗಿಲ್ಲ. ಸಾವನ್ನು ಸಂಭ್ರಮಿಸುವ ವಿಕೃತ ಪ್ರಜ್ಞೆಯನ್ನು ಮನುಕುಲ ಇಂದಿಗೂ ಜೀವಂತವಾಗಿರಿಸಿಕೊಂಡಿದೆ ಎನ್ನುವುದಕ್ಕೆ ವರ್ತಮಾನದ ಬೆಳವಣಿಗೆಗಳೂ ಸಾಕ್ಷಿಯಾಗಿವೆ.

ಹೆಚ್ಚು ಓದಿದ ಸ್ಟೋರಿಗಳು

ಟಾಂಗ್ ಗೆ ವ್ಯಂಗ್ಯವಾಗಿ ಟಾಂಗ್ ಕೊಟ್ಟ ಗುಡುಗಿದ ಮೋದಿ..!

ಬ್ರಾಹ್ಮಣ ಸ್ವಾಮೀಜಿಗೆ ಪ್ರಾಣ ಬೆದರಿಕೆ ಹಾಕಿದ್ಯಾರು..!? ಕೇಂದ್ರ ಮಾಡಿದ್ದೇನು..?

ಅದಾನಿ ಸಾಮ್ರಾಜ್ಯದ ಬಿಕ್ಕಟ್ಟುಗಳೂ ಬಂಡವಾಳದ ಚಂಚಲತೆಯೂ | ಭಾಗ – 2

ಇದರ ನಡುವೆಯೂ ಸಾವು ಮನುಷ್ಯನನ್ನು ಕಾಡದೆ ಬಿಡುವುದಿಲ್ಲ. ನಮ್ಮ ನಡುವಿನ ಒಬ್ಬ ವ್ಯಕ್ತಿ ಕ್ಷಣಮಾತ್ರದಲ್ಲಿ ಇಲ್ಲವಾಗಿರುವ ಸುದ್ದಿ ಎರಗಿಬಂದಾಗ, ಬರಸಿಡಿಲು ಬಡಿದಂತಾಗುತ್ತದೆ. ಸುದ್ದಿ ಖಚಿತವೆಂದು ತಿಳಿದರೂ ʼ ನಂಬಲಾಗುತ್ತಿಲ್ಲ ʼ ಎಂದು ಉದ್ಗರಿಸುತ್ತೇವೆ. ಲೌಕಿಕ ಪ್ರಪಂಚವನ್ನು ತೊರೆದ ವ್ಯಕ್ತಿ ಹಿಂದಿರುಗಲಾರ ಎಂದು ತಿಳಿದಿದ್ದರೂ ʼ ಮತ್ತೆ ಹುಟ್ಟಿ ಬರಲಿ ʼ ಎಂದು ಅಪೇಕ್ಷಿಸುತ್ತೇವೆ. ವಯೋ ಸಹಜ ಎನ್ನಬಹುದಾದ ವೃದ್ಧಾಪ್ಯದ ಸಾವು ಸಂಭವಿಸಿದಾಗಲೂ, ವ್ಯಕ್ತಿಯ ಆಪ್ತತೆ ನಮ್ಮೊಳಗೆ, ʼ ಇನ್ನೂ ಬದುಕಿರಬೇಕಿತ್ತು ʼ ಎಂಬ ಅಭೀಪ್ಸೆಯನ್ನು ಉಕ್ಕಿಸುತ್ತದೆ. ಪಂಚಭೂತಗಳಲ್ಲಿ ಲೀನವಾದ ವ್ಯಕ್ತಿ ಮತ್ತಾವುದೇ ರೀತಿಯಲ್ಲಿ ಎಲ್ಲಿಯೂ ಇರಲಾಗುವುದಿಲ್ಲ ಎಂಬ ಪರಿವೆ ಇದ್ದರೂ, ಶ್ರಾದ್ಧ ಕರ್ಮಗಳ ಮೂಲಕ, ವಿಧಿವಿಧಾನಗಳ ಮೂಲಕ ಅವರನ್ನು ನೆನಪಿಸಿಕೊಂಡು ʼ ಆತ್ಮಕ್ಕೆ ಶಾಂತಿ ʼ ಕೋರುತ್ತೇವೆ. ಚಿರಶಾಂತಿಗೆ ಜಾರಿದ ಒಂದು ಜೀವದ ಆತ್ಮಶಾಂತಿಯನ್ನು ಕೋರುವುದು ಮನುಜಸೂಕ್ಷ್ಮ ಪ್ರಜ್ಞೆಗೆ ಅಪಚಾರವೇನೂ ಆಗಲಾರದು.

ಇಂತಹುದೇ ಜಿಜ್ಞಾಸೆಗಳಿಗೆ ಮನಸ್ಸು ಈಡಾದದ್ದು 19ನೆಯ ಜನವರಿ 2023ರಂದು ಮಧ್ಯಾಹ್ನ ಮೂರೂವರೆ ಗಂಟೆಯ ವೇಳೆ. ಮೈಸೂರಿನ ಜನಪರ ಹೋರಾಟಗಳ ಗಟ್ಟಿ ಧ್ವನಿ ಪ ಮಲ್ಲೇಶ್‌ ಇನ್ನಿಲ್ಲವಾಗಿದ್ದಾರೆ ಎಂಬ ಸುದ್ದಿ ಅನಿರೀಕ್ಷಿತವಷ್ಟೇ ಅಲ್ಲ, ಸದಾ ಕಾಲಕ್ಕೂ ಅನಪೇಕ್ಷಿತವಾಗಿಯೇ ಇರುವಂತಹುದು. ಆದರೆ ಈ ಸುದ್ದಿ ಖಚಿತ ಎಂದು ಅವರ ಆಪ್ತರಲ್ಲೊಬ್ಬರಾದ ಸ. ರಾ. ಸುದರ್ಶನ್‌ ಹೇಳಿದಾಗ, ಮನದಾಳದಲ್ಲಿ ಮತ್ತದೇ ಜಿಜ್ಞಾಸಾಪೂರ್ವಕ ಪ್ರಶ್ನೆ  ʼ ಇದು ನಿಜವೇ ? ʼ. ಗುರುವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಎಂದಿನಂತೆ ಮಾತನಾಡಿಸಿದ್ದ ವ್ಯಕ್ತಿ, ಶುಕ್ರವಾರ ಮಧ್ಯಾಹ್ನ 1.30ರಲ್ಲಿ ಕೆಲವು ಗೆಳೆಯರೊಡನೆ ಚರವಾಣಿಯ ಮೂಲಕ, ಖುದ್ದಾಗಿ ಮಾತನಾಡಿದ್ದ ವ್ಯಕ್ತಿ, 2.30ರವರೆಗೆ  ತಮ್ಮ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ಆಪ್ತರೊಡನೆ ಸಮಾಲೋಚನೆ ನಡೆಸಿದ್ದ ವ್ಯಕ್ತಿ, 3.00 ಗಂಟೆಗೆ ಇಲ್ಲವಾಗುವುದೆಂದರೆ ಅದನ್ನು ಹೇಗೆ ಬಣ್ಣಿಸಲು ಸಾಧ್ಯ ? ಕಾಲದ ಕರೆ ಎನ್ನುವುದೇ , ನಾನು ನಂಬದ ಜವರಾಯನ ಕರೆ ಎನ್ನುವುದೇ ಅಥವಾ ಎಂದಿಗೂ ಸಮ್ಮತಿಸಿದ ʼ ವಿಧಿ ʼಯ ಕೈವಾಡ ಎಂದು ಭಾವಿಸುವುದೇ ? ಈ ಜಿಜ್ಞಾಸೆಗಳೊಂದಿಗೇ ಅವರ ಮನೆ ತಲುಪಿದಾಗ, ಪಿತೃ ಸಮಾನರೆಂದೇ ನನ್ನ ಮನದಲ್ಲಿ ನೆಲೆಸಿದ್ದ ಪ. ಮಲ್ಲೇಶ್‌ ಚಿರಶಾಂತಿಗೆ ಜಾರಿ, ಗಾಜಿನ ಗೂಡಿನಲ್ಲಿ ಬಂದಿಯಾಗಿದ್ದರು. ಕಂಬನಿಗೆ ಹೊರಸೂಸಲು ಅನುಮತಿ ಬೇಕಿರಲಿಲ್ಲ. ಮನದಾಳದ ದುಃಖ ಮತ್ತು ನೋವು ಬಹಳಕಾಲ ಕಾಡುವುದಾದರೂ, ಜನಪರ ಹೋರಾಟದ ಹಿರಿಯ ಚೇತನದ ಮುಂದೆ ಒಂದೆರಡು ಹನಿಗಳು ತಾನೇ ತಾನಾಗಿ ಕೆಳಗಿಳಿದಿದ್ದವು.

ಎರಡು ದಶಕಗಳ ಒಡನಾಟ ಎನ್ನಬಹುದಾದರೂ, ಕಳೆದ ನಾಲ್ಕೈದು ವರ್ಷಗಳ ನಿಕಟ ಒಡನಾಟದಲ್ಲಿ ಪ. ಮಲ್ಲೇಶ್‌ ನನಗೆ ಕಂಡದ್ದು ಹಲವು ಬಗೆಗಳಲ್ಲಿ, ಹಲವು ಆಯಾಮಗಳಲ್ಲಿ, ʼ ಹಲವು ನೆಲೆಗಳಲ್ಲಿ. ಹೋರಾಟಗಾರರಾಗಿ, ಚಿಂತಕರಾಗಿ, ಅಧಿಕಾರ ರಾಜಕಾರಣದಲ್ಲಿ ಇಲ್ಲದಿದ್ದರೂ ಸಕ್ರಿಯ ಮತ್ತು ಕ್ರಿಯಾಶೀಲ ರಾಜಕೀಯ ಪ್ರಜ್ಞೆಯುಳ್ಳವರಾಗಿ, ಸಮಾಜ ಸುಧಾರಣೆಯ ಕಾರ್ಯಕರ್ತರಾಗಿ, ಗಾಂಧಿ ಮತ್ತು ಲೋಹಿಯಾವಾದವನ್ನು ಉಸಿರಾಡಿದ ಸಮಾಜವಾದಿಯಾಗಿ ಮತ್ತು ಎಲ್ಲಕ್ಕಿಂತಲೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ, ಸಮಸ್ಯೆಗೂ ಥಟ್ಟನೆ ಸ್ಪಂದಿಸುವ ಓರ್ವ ಹೋರಾಟಗಾರರಾಗಿ. ʼ ಕನ್ನಡ ಭಾಷೆಗಾಗಿ ಹೋರಾಡುವವರು ಹೇರಳವಾಗಿದ್ದರೂ ಕನ್ನಡವನ್ನೇ ಉಸಿರಾಡುವ ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಮೂಲಕ, ಮೊದಲನೆ ತರಗತಿಯಿಂದ ಪದವಿಪೂರ್ವದವರೆಗೆ ಕನ್ನಡ ಮಾಧ್ಯಮದ ಶಾಲೆಯೊಂದನ್ನು, ಉಚಿತವಾಗಿ ಬಡಮಕ್ಕಳಿಗಾಗಿಯೇ ನಡೆಸಿರುವ ವ್ಯಕ್ತಿಗಳು ವಿರಳ. ಅಂತಹ ವ್ಯಕ್ತಿಗಳಲ್ಲಿ ಪ. ಮಲ್ಲೇಶ್‌ ನಮ್ಮ ಕಾಲಘಟ್ಟದ ಪ್ರಮುಖರಾಗಿ ಕಾಣುತ್ತಾರೆ. ಅವರಿಗೆ ʼ ಕನ್ನಡ ಭಾಷೆ ʼ ಒಂದು ಹೋರಾಟದ ಆಕರ ಮಾತ್ರ ಆಗಿರಲಿಲ್ಲ. ಅಥವಾ  ನಾಲ್ಕು ದಶಕಗಳಿಂದ ಅವರೇ ಕಟ್ಟಿ ನಡೆಸುತ್ತಿದ್ದ ಕನ್ನಡ ಕ್ರಿಯಾ ಸಮಿತಿ ಕೇವಲ ಪ್ರತಿರೋಧಗಳ ನೆಲೆಯಾಗಿಯೂ ಇರಲಿಲ್ಲ. ಅದು ಕನ್ನಡ ಭಾಷೆ ಮತ್ತು ಕನ್ನಡಿಗರ ಜೀವನೋಪಾಯದ ಮಾರ್ಗಗಳನ್ನು ಸಮೀಕರಿಸುತ್ತಾ, ಭಾಷಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಸಂಘಟನೆಯಾಗಿತ್ತು.

ಮಾತೃಭಾಷೆಯ ಶಿಕ್ಷಣದ ಪ್ರಬಲ ಪ್ರತಿಪಾದಕರಾಗಿ ಗೋಕಾಕ್‌ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಪ. ಮಲ್ಲೇಶ್‌ ಅವರ ದೃಷ್ಟಿಯಲ್ಲಿ ಕನ್ನಡ ಎನ್ನುವುದು ಕೇವಲ ಭಾಷೆ ಆಗಿರಲಿಲ್ಲ. ಕನ್ನಡ ನಾಡಿನ,  ವೈಯುಕ್ತಿಕವಾಗಿ ಅವರ ಬದುಕಿನ ಜೀವನಾಡಿಯೂ ಆಗಿತ್ತು. ಪ. ಮಲ್ಲೇಶ್‌ ಅವರನ್ನು ಕನ್ನಡ ಪರ ಹೋರಾಟಗಾರರು ಎಂದು ಬಿಂಬಿಸುವುದು ಬಹುಶಃ ಅರ್ಧಸತ್ಯ ನುಡಿದಂತಾಗುತ್ತದೆ. ಏಕೆಂದರೆ ಅವರು ಮೂಲತಃ ಜೀವಪರರಾಗಿದ್ದರು. ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಅಧ್ಯಾಪಕರು, ಅತಿಥಿ ಉಪನ್ಯಾಸಕರು, ಕಾರ್ಖಾನೆಗಳ ಕಾರ್ಮಿಕರು, ರೈತರು, ಕೃಷಿ ಕಾರ್ಮಿಕರು, ನಗರೀಕರಣದಿಂದ ಕೈಗಾರಿಕೀಕರಣದಿಂದ ಭೂಮಿ ಕಳೆದುಕೊಂಡವರು, ಸೂರಿಗಾಗಿ ಹೋರಾಡುವ ಅಲೆಮಾರಿಗಳು, ಅರಣ್ಯಗಳಿಂದ ಒಕ್ಕಲೆಬ್ಬಿಸಲ್ಪಡುವ ಆದಿವಾಸಿಗಳು, ಅತ್ಯಾಚಾರ-ದೌರ್ಜನ್ಯ ಮತ್ತು ತಾರತಮ್ಯಗಳಿಗೆ ಈಡಾಗುತ್ತಲೇ ಇರುವ ಮಹಿಳಾ ಸಮೂಹ, ಶಿಕ್ಷಣ ವಂಚಿತ ಮಕ್ಕಳು, ಶೈಕ್ಷಣಿಕ ವಲಯದಲ್ಲಿ ಸೌಲಭ್ಯವಂಚಿತ ವಿದ್ಯಾರ್ಥಿ ಸಮುದಾಯ, ಅಲ್ಪಸಂಖ್ಯಾತರು, ಅಸ್ಪೃಶ್ಯತೆಯೇ ಮುಂತಾದ ದೌರ್ಜನ್ಯಗಳನ್ನು ಇಂದಿಗೂ ಎದುರಿಸುತ್ತಿರುವ ದಲಿತ ಸಮುದಾಯ ಹೀಗೆ ಸಮಾಜದ ಎಲ್ಲ ಸ್ತರಗಳ, ಎಲ್ಲ ನೆಲೆಗಳ ಮತ್ತು ಎಲ್ಲ ಆಯಾಮಗಳ ಜನಸಮುದಾಯಗಳು ದಿನನಿತ್ಯ ಎದುರಿಸುವ/ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಮತ್ತು ಅನ್ಯಾಯಗಳ ವಿರುದ್ಧ ಧ್ವನಿಎತ್ತಲು ಸದಾ ಸನ್ನದ್ಧರಾಗಿರುತ್ತಿದ್ದ ಜೀವಪರ ಚಿಂತಕರಾಗಿ ಪ. ಮಲ್ಲೇಶ್‌ ಕಾಣುತ್ತಾರೆ.

ಮೈಸೂರಿನ ಜನಪರ ಹೋರಾಟಗಳು ಯಾವುದೇ ಸ್ವರೂಪದ್ದಾಗಿದ್ದರೂ, ಯಾವುದೇ ಸೈದ್ಧಾಂತಿಕ ನೆಲೆಯನ್ನು ಹೊಂದಿದ್ದರೂ, ಪ. ಮಲ್ಲೇಶ್‌ ಅಂತಹ ಹೋರಾಟಗಳ ಮುಂಚೂಣಿ ಧ್ವನಿಯಾಗಿ ಕಾಣುತ್ತಿದ್ದರು. ವೈಯುಕ್ತಿಕವಾಗಿ ಅವರೊಡನೆ ನನ್ನ ಆಪ್ತ ಸಂಬಂಧ ಬೆಳೆದಿದ್ದೂ ಈ ಹೋರಾಟಗಳ ನೆಲೆಯಲ್ಲೇ. ತುರ್ತುಪರಿಸ್ಥಿತಿಯಿಂದ ಹಿಡಿದು ಇತ್ತೀಚಿನ ಪಠ್ಯಕ್ರಮ ಪರಿಷ್ಕರಣೆ, ಹಲಾಲ್-ಜಟ್ಕಾ-ಹಿಜಾಬ್‌ ವಿವಾದದವರೆಗೂ, ಗೋಕಾಕ್‌ ಚಳುವಳಿಯಿಂದ ಶಾಸ್ತ್ರೀಯ ಕನ್ನಡ-ಎನ್‌ಟಿಎಂಎಸ್‌ ಶಾಲೆಯ ಹೋರಾಟದವರೆಗೂ  ಮಲ್ಲೇಶ್‌ ಅವರ ಪಯಣವನ್ನು ಗಮನಿಸಿದಾಗ, ಸೈದ್ಧಾಂತಿಕವಾಗಿ ಗಾಂಧಿವಾದ ಮತ್ತು ಲೋಹಿಯಾ ಸಮಾಜವಾದಕ್ಕೆ ಬದ್ಧರಾಗಿದ್ದರೂ, ಎಡಪಂಥೀಯ, ದಲಿತ, ಮಹಿಳಾ ಸಂವೇದನೆಯ ಎಲ್ಲ ತಾತ್ವಿಕ ಹೋರಾಟಗಳಲ್ಲೂ ಮುಕ್ತ ಮನಸ್ಸಿನಿಂದ ಪಾಲ್ಗೊಂಡು ಮುಂಚೂಣಿಯಲ್ಲಿ ನಿಲ್ಲುತ್ತಿದ್ದುದು ಅವರ ಹಿರಿಮೆ. ಕೋಮುವಾದ, ಮತಾಂಧತೆ ಮತ್ತು ಭಾರತದ ಬಹುತ್ವ ಸಂಸ್ಕೃತಿಗೆ ವ್ಯತಿರಿಕ್ತವಾದ ಎಲ್ಲವನ್ನೂ ನಿಷ್ಠುರವಾಗಿ ನಿರಾಕರಿಸಿ ವಿರೋಧಿಸುತ್ತಿದ್ದ, ಮಲ್ಲೇಶ್‌ ಅವರಲ್ಲಿ ದ್ವೇಷ ಭಾವನೆ ಕಿಂಚಿತ್ತೂ ಇರಲಿಲ್ಲ. ಮಾನವತೆಯನ್ನು ಪ್ರೀತಿಸುವ ಎಲ್ಲರನ್ನೂ ಪ್ರೀತಿಸುತ್ತಿದ್ದ ಮಲ್ಲೇಶ್‌ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿನ ನಮನ ಸಲ್ಲಿಸಲೂ ಇಚ್ಚಿಸದ ಅಸೂಕ್ಷ್ಮ ಸಾಂಸ್ಕೃತಿಕ ಮನಸುಗಳು ನಮ್ಮ ನಡುವೆ ಇರುವುದನ್ನು ಕಂಡಾಗ, ಮಲ್ಲೇಶ್‌ ಅವರ ಮೇರು ವ್ಯಕ್ತಿತ್ವದ ಹಿರಿಮೆ ನಮಗೆ ಮನದಟ್ಟಾಗುತ್ತದೆ.

ವ್ಯಕ್ತಿಗತವಾಗಿ ಮಲ್ಲೇಶ್‌ ಅವರಲ್ಲಿ ಮನುಜ ಸಹಜ ಗುಣಗಳಾದ ಸಿಟ್ಟು, ಸೆಡವು, ಆಕ್ರೋಶ, ಹತಾಶೆ ಮತ್ತು ಭಾವನಾತ್ಮಕತೆ ಎಲ್ಲವನ್ನೂ ಕಾಣಬಹುದಿತ್ತು. ತಾನು ಮುಂಗೋಪಿ ಎನ್ನುವುದನ್ನು ಸ್ವತಃ ಒಪ್ಪಿಕೊಳ್ಳುತ್ತಿದ್ದ ಮಲ್ಲೇಶ್‌ ಅವರು ಅನೇಕ ಸಂದರ್ಭಗಳಲ್ಲಿ ತಮ್ಮದೇ ಆದ ಅಭಿವ್ಯಕ್ತಿಗೆ ಪಟ್ಟುಬಿಡದೆ ಅಂಟಿಕೊಂಡರೂ, ತಮ್ಮ ಹಿರಿತನವನ್ನು ಅಭಿಪ್ರಾಯ ಹೇರಿಕೆಯ ಅಸ್ತ್ರವಾಗಿ ಬಳಸುತ್ತಿರಲಿಲ್ಲ. ಐದು ದಶಕಗಳಿಗೂ ಹೆಚ್ಚು ಕಾಲ ಸಮಾಜದ ಎಲ್ಲ ಆಯಾಮಗಳ ಜನಪರ ಹೋರಾಟಗಳನ್ನು ಕಂಡಿದ್ದ ಪ. ಮಲ್ಲೇಶ್‌ ಅವರಿಗೆ ಬಹುತೇಕ ಎಲ್ಲ ಪ್ರಗತಿಪರ ಹೋರಾಟಗಳ ಬಗ್ಗೆಯೂ ಅಸಮಾಧಾನ ಇತ್ತು. ಹೋರಾಟಗಳ ವೈಫಲ್ಯ ಮತ್ತು ಸಂಘಟನೆಗಳಲ್ಲಿನ ದೌರ್ಬಲ್ಯಗಳು ಅವರಲ್ಲಿ ಹತಾಶ ಮನಸ್ಥಿತಿಯನ್ನೂ ಮೂಡಿಸಿತ್ತು. ಯಾವುದೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದಿದ್ದರೆ, ಅದು ವ್ಯರ್ಥವಾದಂತೆ ಎಂದೇ ಭಾವಿಸುತ್ತಿದ್ದ ಕಾರಣ  ಹೋರಾಟದ ವೈಫಲ್ಯಗಳು ಮತ್ತು ಸಂಘಟನೆಗಳ ದ್ವಂದ್ವ ನೀತಿಗಳು ಮಲ್ಲೇಶ್‌ ಅವರಲ್ಲಿ ಆಕ್ರೋಶ ಉಂಟುಮಾಡುತ್ತಿತ್ತು. ಸತ್ಯಸಂಧತೆ, ತತ್ವನಿಷ್ಠೆ, ಪ್ರಾಮಾಣಿಕತೆ ಮತ್ತು ಸಮಾಜಮುಖಿ ಧೋರಣೆ ಈ ನಾಲ್ಕು ಮೂಲ ಮಂತ್ರಗಳನ್ನೇ ಉಸಿರಾಡುತ್ತಿದ್ದ ಮಲ್ಲೇಶ್‌ ಅವರಿಗೆ ಈ ಲಕ್ಷಣಗಳಿಂದ ವಿಮುಖವಾದ ಯಾವುದೇ ವ್ಯಕ್ತಿ/ಸಂಘಟನೆಯ ಬಗ್ಗೆ ಅಸಮಾಧನ ತುಸು ಹೆಚ್ಚಾಗಿಯೇ ಇತ್ತು.

ಮೈಸೂರಿನಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವ ಘನತೆಗಾಗಿ ಹೋರಾಡುವ ಎಲ್ಲ ಸೈದ್ಧಾಂತಿಕ ಹೋರಾಟಗಳೊಡನೆ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದ ಪ. ಮಲ್ಲೇಶ್‌ ಬಹುತೇಕ ಎಲ್ಲ ಸಂಘಟನೆಗಳಿಗೂ ಮಾರ್ಗದರ್ಶಕರಾಗಿ, ಸಲಹೆಗಾರರಾಗಿ ಮತ್ತು ಬೀದಿ ಹೋರಾಟಗಳಲ್ಲಿ ಮುಂಚೂಣಿ ನಾಯಕರಾಗಿ ಕಾಣುತ್ತಿದ್ದರು. ಹೀಗೆ ಸಿದ್ಧಾಂತದ ಗೋಡೆಗಳನ್ನು ದಾಟಿ ಸಾಮಾನ್ಯ ಜನತೆಯ ನೋವಿಗೆ ಮಿಡಿಯುವ ಅಂತಃಕರಣ ಅವರಲ್ಲಿದ್ದುದು ಮತ್ತು ಪ್ರತಿರೋಧದ ಸುಪ್ತ ಧ್ವನಿ ಇದ್ದುದು ಅವರಲ್ಲಿ ಆಳವಾಗಿ ಬೇರೂರಿದ್ದ ಗಾಂಧಿವಾದದ ಪ್ರೇರಣೆಯಿಂದಲೇ ಎನ್ನಬಹುದು. ಆರು ದಶಕಗಳ ತಮ್ಮ ಹೋರಾಟದ ಬದುಕಿನಲ್ಲಿ, ಜನಪರ ಆಂದೋಲನಗಳ ಎಲ್ಲ ಮಜಲುಗಳನ್ನೂ ಸ್ವತಃ ಪಾಲ್ಗೊಳ್ಳುವಿಕೆಯ ಮೂಲಕ ಕಂಡಿದ್ದ ಪ. ಮಲ್ಲೇಶ್‌ ಸಹಜವಾಗಿಯೇ ಇತ್ತೀಚಿನ ದಿನಗಳಲ್ಲಿ ಹತಾಶತೆಯನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಈ ಹತಾಶೆ ಅವರಲ್ಲಿನ ಹೋರಾಟದ ಕಿಚ್ಚು ಮತ್ತು ಆತ್ಮಸ್ಥೈರ್ಯವನ್ನು ಕುಂದಿಸಿರಲಿಲ್ಲ. ಹಾಗಾಗಿಯೇ ಮೈಸೂರಿನ ಜನಪರ ಹೋರಾಟಗಳಿಗೆ, ಸಂಘಟನೆಗಳಿಗೆ ಮತ್ತು ಯುವ ಸಮೂಹಕ್ಕೆ ಪ. ಮಲ್ಲೇಶ್‌ ಒಂದು ಆಲದ ಮರದಂತೆ ಆಶ್ರಯ ನೀಡಲು ಸಾಧ್ಯವಾಗಿತ್ತು.

ಈ ಆಲದ ಮರ ಇಂದು ಕುಸಿದಿದೆ. ಅದರ ನೆರಳಲ್ಲಿ ತಮ್ಮೆಲ್ಲಾ ತುಡಿತಗಳನ್ನು ಅಭಿವ್ಯಕ್ತಿಸುತ್ತಿದ್ದ ಹೋರಾಟಗಾರರಿಗೆ, ಯುವಪೀಳೀಗೆಗೆ ಮತ್ತು ಜನಪರ ಸಂಘಟನೆಗಳಿಗೆ ಒಂದು ಬೌದ್ಧಿಕ ಆಶ್ರಯ ತಾಣ ಇಲ್ಲವಾಗಿದೆ. ಬಹಳ ವರ್ಷಗಳಿಂದ ಶ್ರಮವಹಿಸಿ “ ಬುದ್ಧ ನಾಗಾರ್ಜುನರಲ್ಲಿ ಶೂನ್ಯ ” ಎಂಬ ಕೃತಿಯನ್ನು ರಚಿಸಿದ್ದ ಪ. ಮಲ್ಲೇಶ್‌ ಕೃತಿಯ ಬಿಡುಗಡೆಯನ್ನು ಕಾಣದೆ ಹೋದುದು ದುರಾದೃಷ್ಟವೇ ಸರಿ. ಅವರ ನಿರ್ಗಮನವು ಸಮಾನತೆ ಮತ್ತು ಮಾನವತೆಯನ್ನು ಬಯಸುವ ಒಂದು ಸಮಾಜದಲ್ಲೂ ಶೂನ್ಯವನ್ನು ಸೃಷ್ಟಿಸಿದೆ. ಒಂದು ನಿರ್ವಾತವನ್ನು ಸೃಷ್ಟಿಸಿದೆ. ಬಹುಶಃ ಈ ನಿರ್ವಾತವು ಮಲ್ಲೇಶ್‌ ಅವರು ಎರಡು ಪೀಳಿಗೆಯಲ್ಲಿ ತುಂಬಿದ ಆತ್ಮವಿಶ್ವಾಸದಂತೆಯೇ ಶಾಶ್ವತವಾಗಲಿದೆ. ಅವರ ಹೋರಾಟದ ಸ್ಫೂರ್ತಿ ಮತ್ತು ಜನಪರ ನಿಲುವು, ಸಮಾನತೆಯ ಆಶಯ, ತಾತ್ವಿಕ ಬದ್ಧತೆ ಹಾಗೂ ಬಹುತ್ವದ ಕನಸುಗಳನ್ನು ಸಾಕಾರಗೊಳಿಸುವ ಮೂಲಕ ಆ ನಿರ್ವಾತವನ್ನು ತುಂಬಿಸಬಹುದೇ ಹೊರತು, ಮೈಸೂರಿನ ಜನತೆ ಮತ್ತೊಬ್ಬ ಪ ಮಲ್ಲೇಶ್‌ ಅವರನ್ನು ಸೃಷ್ಟಿಸಲು ಸಾಧ್ಯವಿಲ್ಲ.

ಚಿರನಿದ್ರೆಗೆ ಜಾರಿರುವ ಶ್ರೀಯುತ ಪ. ಮಲ್ಲೇಶ್‌ ಅವರ ನಿರ್ಗಮನವನ್ನು ಮೈಸೂರಿನ ಮಟ್ಟಿಗೆ ಯುಗಾಂತ್ಯವೆಂದೇ ಬಣ್ಣಿಸಬಹುದು. ಆದರೆ ಅವರು ಬಿಟ್ಟುಹೋದ ಹಾದಿ ಮತ್ತು ಜೀವನಾದರ್ಶಗಳು ಸಮಾನತೆ ಮತ್ತು ಮಾನವತೆಯನ್ನು ಬಯಸುವ ಎಲ್ಲ ಮನಸ್ಸುಗಳಿಗೂ ಶತಮಾನಗಳ ಕಾಲ ಮಾರ್ಗದರ್ಶಕವಾಗಿ ಉಳಿಯುತ್ತವೆ. ಪ. ಮಲ್ಲೇಶ್‌ ನಮ್ಮೊಡನೆ ಇಲ್ಲವಾದರೂ, ಒಂದು ಜೀವಂತ ಶಕ್ತಿಯಾಗಿ ಜನಮಾನಸದ ನಡುವೆ ಉಳಿಯಲಿದ್ದಾರೆ. ಹೋರಾಟದ ಹಾದಿಯಲ್ಲಿ ಪ್ರತಿಹೆಜ್ಜೆಯಲ್ಲೂ ಅವರ ಸಮಾನತೆಯ ಕೂಗು ಧ್ವನಿಸುತ್ತಲೇ ಇರುತ್ತದೆ. ಹಾಗೆ ಧ್ವನಿಸುವುದನ್ನು ಅನುಸರಿಸುವುದರ ಮೂಲಕ ವರ್ತಮಾನದ, ಭವಿಷ್ಯದ ಪೀಳಿಗೆ ಈ ಚೈತನ್ಯಪೂರ್ಣ ಹೋರಾಟಗಾರರಿಗೆ ಶ್ರದ್ಧಾಂಜಲಿ ಅರ್ಪಿಸಬೇಕಿದೆ.

ಕಂಬನಿಗಳು ಬತ್ತಿವೆ ಮಲ್ಲೇಶ್‌ ಸರ್.‌ ಹೋಗಿಬನ್ನಿ ಎನ್ನಲಾರೆ, ನಮ್ಮ ನಡುವೆ ಶಾಶ್ವತವಾಗಿ ಇರಿ ಎಂದು ಹೇಳಲಿಚ್ಚಿಸುತ್ತೇನೆ. ಇರುತ್ತೀರಿ ಎಂಬ ಆತ್ಮವಿಶ್ವಾಸದೊಡನೆ ಈ ಅಶ್ರುತರ್ಪಣದೊಂದಿಗೆ.

RS 500
RS 1500

SCAN HERE

Pratidhvani Youtube

«
Prev
1
/
3856
Next
»
loading
play
ಅಪ್ಪು ನೆನಪಿನಲ್ಲಿ ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಆಯೋಜಿಸಿದ ಕ್ರೀಡೆ | Appu |
play
Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ #pratidhvanidigital #cockroach
«
Prev
1
/
3856
Next
»
loading

don't miss it !

ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಅಸಮಾಧಾನ, ಪರಮೇಶ್ವರ್​ ಪ್ರಣಾಳಿಕ ಸಮಿತಿಗೆ ರಾಜೀನಾಮೆ..!!
ಕರ್ನಾಟಕ

ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಅಸಮಾಧಾನ, ಪರಮೇಶ್ವರ್​ ಪ್ರಣಾಳಿಕ ಸಮಿತಿಗೆ ರಾಜೀನಾಮೆ..!!

by ಕೃಷ್ಣ ಮಣಿ
February 3, 2023
ಜನ ಬಿಜೆಪಿಯವರನ್ನು ಗಂಟೂಮೂಟೆ ಕಟ್ಟಿ ಮನೆಗೆ ಕಳಿಸುತ್ತಾರೆ: ಡಿ.ಕೆ.ಶಿವಕುಮಾರ್
ಕರ್ನಾಟಕ

ಜನ ಬಿಜೆಪಿಯವರನ್ನು ಗಂಟೂಮೂಟೆ ಕಟ್ಟಿ ಮನೆಗೆ ಕಳಿಸುತ್ತಾರೆ: ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
February 9, 2023
ಹುಲಗೂರಿನಲ್ಲಿ ಮಿನಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ ಕ್ರಮ :ಸಿಎಂ
ಕರ್ನಾಟಕ

ಮೈಸೂರಿಗೆ ಬಜೆಟ್ ನಿರೀಕ್ಷೆಗಳೇನು …?

by ಪ್ರತಿಧ್ವನಿ
February 7, 2023
ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರೆ, 21 ಪ್ರಶ್ನೆಗಳ ಮೂಲಕ ನಿಮಗೆ ಸ್ವಾಗತ
ರಾಜಕೀಯ

ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರೆ, 21 ಪ್ರಶ್ನೆಗಳ ಮೂಲಕ ನಿಮಗೆ ಸ್ವಾಗತ

by ಪ್ರತಿಧ್ವನಿ
February 6, 2023
ಹಾಸನದಲ್ಲಿ ಕುಮಾರಸ್ವಾಮಿ ಮಾತಿಗೆ ಸಿಗ್ತಿಲ್ಲ ಕಿಂಚಿತ್ತು ಮರ್ಯಾದೆ..!!
ರಾಜಕೀಯ

ಹಾಸನದಲ್ಲಿ ಕುಮಾರಸ್ವಾಮಿ ಮಾತಿಗೆ ಸಿಗ್ತಿಲ್ಲ ಕಿಂಚಿತ್ತು ಮರ್ಯಾದೆ..!!

by ಕೃಷ್ಣ ಮಣಿ
February 6, 2023
Next Post
ರಂಗಭೂಮಿಯ ಚಿಕಿತ್ಸಕ ಗುಣ ಮತ್ತು ಸಾಮಾಜಿಕ ಜವಾಬ್ದಾರಿ

ರಂಗಭೂಮಿಯ ಚಿಕಿತ್ಸಕ ಗುಣ ಮತ್ತು ಸಾಮಾಜಿಕ ಜವಾಬ್ದಾರಿ

| KHENDADA SERAGU |ಮಹಿಳೆಗೆ ಪ್ರಮುಖ್ಯತೆ ಇರುವ ಸಿನಿಮಾ ಆಗಿರುವುದರಿಂದ ಈ ಪಾತ್ರ ಒಪ್ಪಿಕೊಂಡೆ | BHOOMI SHETTY

| KHENDADA SERAGU |ಮಹಿಳೆಗೆ ಪ್ರಮುಖ್ಯತೆ ಇರುವ ಸಿನಿಮಾ ಆಗಿರುವುದರಿಂದ ಈ ಪಾತ್ರ ಒಪ್ಪಿಕೊಂಡೆ | BHOOMI SHETTY

KHENDADA SERAGU | ಹೀರೋ ಆಗಬೇಕು ಅಂತಾನೆ ಬಂದು PRO ಆದೆ..ಆದರೆ ಈಗ..? | Harish Arasu PRO | Actor

KHENDADA SERAGU | ಹೀರೋ ಆಗಬೇಕು ಅಂತಾನೆ ಬಂದು PRO ಆದೆ..ಆದರೆ ಈಗ..? | Harish Arasu PRO | Actor

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist