ಕನ್ನಡ ಚಿತ್ರರಂಗದಲ್ಲಿ ತಣ್ಣಗಾಗಿದ್ದ ಫ್ಯಾನ್ಸ್ ವಾರ್(Fans War) ಇದೀಗ ತಾರಕಕ್ಕೇರಿದೆ. ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಸಿನಿಮಾ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ನಟ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಫ್ಯಾನ್ಸ್ ವಾರ್ ಕಿಚ್ಚು ಹೆಚ್ಚಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಹಾಗೂ ಸುದೀಪ್ ಆಪ್ತರು ಸೇರಿದಂತೆ ಅನೇಕರು ಈ ಫ್ಯಾನ್ಸ್ ವಾರ್ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ನಟಿ ರಕ್ಷಿತಾ ತಮ್ಮ ಹೇಳಿಕೆ ಮೂಲಕ ಫ್ಯಾನ್ಸ್ ವಾರ್‌ಗೆ ತಣ್ಣೀರು ಹಾಕುವ ಪ್ರಯತ್ನ ಮಾಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದರ್ಶನ್ ಮೈಕ್ ಹಿಡಿದುಕೊಂಡು ಕಿತ್ತಾಡಿದ್ದೇವಾ ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದಾಗಲೇ ಈ ಫ್ಯಾನ್ಸ್ ವಾರ್ ಎನ್ನುವುದಕ್ಕೆ ಅಂತ್ಯ ಸಿಕ್ಕಿದೆ. ಆ ರೀತಿ ಏನು ಇಲ್ಲ. ನಾವೆಲ್ಲರೂ ಪೈರಸಿ ವಿರುದ್ಧ ಹೋರಾಡುತ್ತಿದ್ದೇವೆ ಅಷ್ಟೇ. ಪೈರಸಿ ನಮ್ಮ ಮುಂದಿರುವ ದೊಡ್ಡ ಶತ್ರು. ಅದಂತೂ ಖಂಡಿತ ಹೌದು. ದರ್ಶನ್ – ಸುದೀಪ್ ನಡುವೆ ವೈರತ್ವ ಇಲ್ಲ ಅವರಿಬ್ಬರು ಸ್ನೇಹಿತರು. ಆ ರೀತಿ ಅಸಮಾಧಾನ ಅವರಿಬ್ಬರ ಮಧ್ಯೆ ಏನೂ ಇಲ್ಲ ಅಂತಾ ಸುದೀಪ್ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಮ್ಮದೇನಿದೆ..? ಎಂದಿದ್ದಾರೆ.

ಫ್ಯಾನ್ಸ್ ವಾರ್‌ಗೆ ತುಪ್ಪ ಸುರಿದ್ರಾ ಧನ್ವೀರ್-ವಿನಯ್ ಗೌಡ..?
ಇತ್ತ ಮಾರ್ಕ್ ಸಿನಿಮಾ ಪ್ರಚಾರದ ವೇಳೆ ಫ್ಯಾನ್ಸ್ ವಾರ್ ಜೋರಾಗುತ್ತಿದ್ದರೆ, ಅತ್ತ ನಟರ ಆಪ್ತರು ಕೂಡ ಈ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ ಎನ್ನುವ ಅಭಿಪ್ರಾಯ ಮೂಡಿದೆ. ದರ್ಶನ್ ಆಪ್ತ ಧನ್ವೀರ್ ಗೌಡ, ‘ಕಾಡಿನಲ್ಲಿ ಸಾಕಷ್ಟು ಪ್ರಾಣಿಗಳಿರುತ್ತವೆ, ಆದರೆ ಸಿಂಹ ಮಾತ್ರವೇ ಕಾಡಿನ ರಾಜ’ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಇದಕ್ಕೆ ತಿರುಗೇಟು ಎನ್ನುವಂತೆ ಸುದೀಪ್ ಆಪ್ತ ವಿನಯ್ ಗೌಡ. ಕಾಡಿನ ರಾಜ ಸಿಂಹ ಎಂಬುದು ಗೊತ್ತು, ಆದರೆ ಆ ಸಿಂಹ ಸುದೀಪ್ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಟಾಂಗ್ ಕೊಟ್ಟುಕೊಳ್ಳುವ ಮೂಲಕ ಫ್ಯಾನ್ಸ್ ವಾರ್ ಕಾವು ಹೆಚ್ಚಿಸಿದ್ದಾರೆ ಎನ್ನುವ ಮಾತು ಜೋರಾಗಿಯೇ ಕೇಳಿ ಬರುತ್ತಿದೆ.












