ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಎಷ್ಟು ಹೆಚ್ಚಿಸಬೇಕು ಎಂದು ತೀರ್ಮಾನ ಮಾಡಿ ಬಜೆಟ್’ನಲ್ಲೇ ಘೋಷಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬೆಂಗಳೂರಿನ ಶಿಕ್ಷಕರ ಸದನದಲ್ಲಿ, ಆಶಾ ಕಾರ್ಯಕರ್ತೆಯರ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡ ಸಚಿವ ಡಾ.ಕೆ.ಸುಧಾಕರ್, ಸಂಘದ ಮನವಿ ಸ್ವೀಕರಿಸಿ ಮಾತನಾಡಿದರು.
ನಾನು ಆರೋಗ್ಯ ಸಚಿವನಾದ ಬಳಿಕ ಪ್ರತಿ ವರ್ಷದಂತೆ ಎರಡು ಬಾರಿ ಆಶಾ ಕಾರ್ಯಕರ್ತೆಯರ ಗೌರವಧನವನ್ನು 1,000 ರೂ. ಹೆಚ್ಚಿಸಲು ಪಾತ್ರ ವಹಿಸಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ತಮ್ಮ ಮೊದಲ ಬಜೆಟ್’ನಲ್ಲಿ ಗೌರವಧನವನ್ನು 1,000 ರೂ. ಹೆಚ್ಚಿಸಿದ್ದಾರೆ. ಈ ಸಲ ಕೂಡ ಆಶಾ ಕಾರ್ಯಕರ್ತೆಯರ ಕೆಲ ಮನವಿಗಳನ್ನು ನೀಡಿದ್ದು, ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಲಾಗುವುದು ಎಂದರು.
ಆಶಾ ಕಾರ್ಯಕರ್ತೆಯರ ಪ್ರತಿನಿಧಿಯಾಗಿ ನಾನು ಕೆಲಸ ಮಾಡುತ್ತೇನೆ. ಇತ್ತೀಚೆಗೆ ಬಜೆಟ್ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವಧನವನ್ನು 2,000 ರೂ. ಹೆಚ್ಚಿಸಲು ಮನವಿ ಮಾಡಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಲಾಗುವುದು ಎಂದರು.
ಆಶಾ ಕಾರ್ಯಕರ್ತೆಯರಿಗೆ 5 ಕೋಟಿ ರೂ. ಮೊತ್ತದ ಕ್ಷೇಮಾಭಿವೃದ್ಧಿ ನಿಧಿ ಇರಿಸಿ, ಕಾರ್ಯಕರ್ತೆಯರ ಆರೋಗ್ಯ ರಕ್ಷಣೆಗೆ ನೀಡಬೇಕು ಎಂಬ ಬೇಡಿಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾಂತ್ರಿಕ ನ್ಯೂನತೆ ನಿವಾರಿಸಿ, ಸರಿಯಾದ ಸಮಯಕ್ಕೆ ಗೌರವಧನ ನೀಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ಕೋವಿಡ್ ಸಮಯದಲ್ಲಿ ಅನೇಕರು ವರ್ಕ್ ಫ್ರಂ ಹೋಮ್ ಮಾಡಿದ್ದಾರೆ. ಆದರೆ ಆಶಾ ಕಾರ್ಯಕರ್ತೆಯರು ವರ್ಕ್ ಫ್ರಂ ಸ್ಟ್ರೀಟ್ ಮಾಡಿದ್ದರು. 10 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಅಥವಾ 60 ವಯಸ್ಸಿನ ಬಳಿಕ ನಿವೃತ್ತರಾಗಲು ಬಯಸಿದರೆ, ಅವರಿಗೆ ಇಡಿಗಂಟು ನೀಡಲು ಕ್ರಮ ವಹಿಸಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಚರ್ಚಿಸಲಾಗುವುದು. ಕೇವಲ ಮಾತಿನಲ್ಲಲ್ಲ, ಕೃತಿಯ ಮೂಲಕ ಕೊಡುಗೆ ನೀಡಲಾಗುವುದು ಎಂದರು.
ಆಶಾ ಕಾರ್ಯಕರ್ತೆಯರ ಸೇವೆಯನ್ನು ಮೆಚ್ಚಿ ವಿಶ್ವ ಆರೋಗ್ಯ ಸಂಸ್ಥೆಯು ʼಜಾಗತಿಕ ನಾಯಕರುʼ ಎಂದು ಕರೆದಿದೆ. ಆಶಾ ಎಂದರೆ ಭರವಸೆ ಎಂದರ್ಥ. ಇಡೀ ವಿಶ್ವವೇ ನಂಬಿಕೆ, ಭರವಸೆಯ ಮೇಲೆ ನಿಂತಿದೆ. ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಮೇಲೆ ಸಂಪೂರ್ಣ ಭರವಸೆ ಇದ್ದು, ಯಾವುದೇ ಆಶಾ ಕಾರ್ಯಕರ್ತೆಯರು ಅದನ್ನು ಹುಸಿ ಮಾಡಲಿಲ್ಲ ಎಂದರು.