ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್ ಸಾಕ್ಷ್ಯ ನಾಶಕ್ಕೂ ಹಣ ಸಂಗ್ರಹಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹಾಗೂ ಆರೋಪಿಗಳಾದ ಪ್ರದೋಷ್, ನಿಖಿಲ್, ಕೇಶವ್ ಮನೆಗಳಲ್ಲಿ 82 ಲಕ್ಷ ರೂ. ಹಣ ಸಿಕ್ಕಿತು. ಇಷ್ಟೊಂದು ಪ್ರಮಾಣದಲ್ಲಿ ನಗದು ಸಿಕ್ಕ ಹಿನ್ನೆಲೆ ಐಟಿ ಇಲಾಖೆ ತನಿಖೆಗೆ ಇಳಿದಿತ್ತು. ಸದ್ಯ ಹಣದ ಬಗ್ಗೆ ಐಟಿ ಇಲಾಖೆ ಅಧಿಕಾರಿಗಳು ದರ್ಶನ್ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ.

ಮೊದಲನೆಯದಾಗಿ ದರ್ಶನ್ ಯಾರ ಬಳಿಯಾದ್ರೂ ಸಾಲ ತೆಗೆದುಕೊಂಡಿದ್ದಾರಾ ಎಂದು ಐಟಿ ಇಲಾಖೆ ಪ್ರಶ್ನೆ ಮಾಡಿದೆ. ಈ ಪ್ರಶ್ನೆಗೆ ಉತ್ತರಿಸಿರೋ ದರ್ಶನ್ , ಮೋಹನ್ ರಾಜ್ ಎಂಬುವರಿಗೆ 2024ರ ಫೆಬ್ರವರಿಯಲ್ಲಿ 40 ಲಕ್ಷ ರೂ. ಹಣ ಸಾಲವಾಗಿ ನೀಡಿದ್ದೆ. ಬಳಿಕ ಮೇನಲ್ಲಿ ವಾಪಸ್ ಪಡೆದಿದ್ದೆ. ಅಲ್ಲದೆ ಕಳೆದ 6 ವರ್ಷದಿಂದ ಯಾವುದೇ ಸಾಲ ಪಡೆದಿಲ್ಲ ಹಾಗೂ ಮೋಹನ್ ರಾಜ್ ಹೊರತಾಗಿ ಇನ್ಯಾರಿಗೂ ಸಾಲ ನೀಡಿಲ್ಲ ಎಂದು ಹೇಳಿದ್ದಾರೆ.

ಹಾಗೆ ಮೋಹನ್ ರಾಜ್ ಗೆ ಸಾಲ ನೀಡಿದ್ ಹಣದಲ್ಲಿ 25 ಲಕ್ಷ ರೂ. 3 ವರ್ಷದಿಂದ ಕೃಷಿ ಮತ್ತು 15 ಲಕ್ಷ ರೂ. ಹುಟ್ಟುಹಬ್ಬಕ್ಕೆ ಗಿಫ್ಟ್ ರೂಪದಲ್ಲಿ ಬಂದಿದ್ದ ಹಣ ಎಂದಿದ್ದಾರೆ.
ಇನ್ನು ಪೊಲೀಸರ ತನಿಖೆ ವೇಳೆ ದರ್ಶನ್ ಮನೆ ಮತ್ತು ಪತ್ನಿ ವಿಜಯಲಕ್ಷ್ಮಿ ಅಪಾರ್ಟ್‌ಮೆಂಟ್ ನಲ್ಲಿ ಒಟ್ಟು 40.40 ಲಕ್ಷ ರೂ. ಹಣ ಸಿಕ್ಕಿತ್ತು. ಈ ಬಗ್ಗೆ ಉತ್ತರ ನೀಡಿರೋ ದರ್ಶನ್, ಇದೆಲ್ಲ ಕೃಷಿ ಮತ್ತು ಪಶು ಸಂಗೋಪನೆಯಿಂದ ಬಂದಿದ್ದಾಗಿ ಹೇಳಿಕೆ ದಾಖಲಿಸಿದ್ದಾರೆ. ಆದರೆ ಐಟಿ ಅಧಿಕಾರಿಗಳು ಈ ಹಣಕ್ಕೆಲ್ಲ ದಾಖಲೆ ಕೇಳಿದಾಗ, ಈ ಹಣಕ್ಕೆ ಯಾವುದೇ ದಾಖಲೆಗಳಿಲ್ಲ, ಐಟಿ ರಿಟರ್ನ್ಸ್ ವೇಳೆ ಹಣದ ಬಗ್ಗೆ ಮಾಹಿತಿ ನೀಡುತ್ತೇನೆಂದು ಹೇಳಿಕೆ ನೀಡಿದ್ದಾರೆ.

ಉಳಿದಂತೆ ಪ್ರದೋಷ್, ನಿಖಿಲ್, ಕೇಶವ್ ಮನೆಯಲ್ಲಿ ಸಿಕ್ಕ ಹಣದ ಬಗ್ಗೆ ತನಗೆ ಮಾಹಿತಿ ಗೊತ್ತಿಲ್ಲ ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ಬಂಧನವಾದ ಬಳಿಕ ದರ್ಶನ್, ವಿಜಯಲಕ್ಷ್ಮೀ, ಪ್ರದೋಶ್, ನಿಖಿಲ್, ಕೇಶವಮೂರ್ತಿ ಮನೆಗಳಲ್ಲಿ 82 ಲಕ್ಷ ಹಣ ಸಿಕ್ಕಿತ್ತು. ಈ ಹಣವನ್ನು ರೇಣುಕಾ ಸ್ವಾಮಿ ಕೊಲೆ ಮುಚ್ಚಿ ಹಾಕಲು ದರ್ಶನ್ ಬಳಸಿದ್ದರು ಎನ್ನಲಾಗಿತ್ತು.













