ನಟ ಅಭಿಷೇಕ್ ಅಂಬರೀಷ್ (Abhishek Ambareesh) ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಬಹುಕಾಲದ ಗೆಳತಿ ಅವಿವಾ ಬಿಡಪ (Aviva Bidapa) ಜೊತೆ ಅವರು ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಬಹಳ ಅದ್ದೂರಿಯಾಗಿ ಸಂಗೀತ್ ಕಾರ್ಯಕ್ರಮ ಕೂಡ ನಡೆಯಲಿದೆ.


ರಾಜಧಾನಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯುವ ಸಂಗೀತ್ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಾಗು ನಿರೀಕ್ಷೆ ಇದೆ. ‘ರೆಬೆಲ್ ಸ್ಟಾರ್’ ಅಂಬರೀಷ್ ಹಾಗೂ ಸಂಸದೆ ಸುಮಲತಾ (Sumalatha Ambareesh) ಕುಟುಂಬಕ್ಕೆ ಇರುವ ಸ್ನೇಹಿತರ ಬಳಗ ದೊಡ್ಡದು. ರಾಜಕೀಯ ಮತ್ತು ಸಿನಿಮಾ ಎರಡೂ ಕ್ಷೇತ್ರದಲ್ಲಿ ಈ ಕುಟುಂಬದವರು ಸಕ್ರಿಯರಾಗಿರುವುದರಿಂದ ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಹಾಗಾಗಿ ಹಲವಾರು ಸೆಲೆಬ್ರಿಟಿಗಳು ಅಭಿಷೇಕ್ ಅಂಬರೀಶ್ ಅವಿವಾ ಬಿಡಪ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರೆಬಲ್ ಸ್ಟಾರ್ ಅಂಬರೀಷ್ ಅವರ ಕನಸಿನಂತೆ, ‘ಜೂನಿಯರ್ ರೆಬೆಲ್ ಸ್ಟಾರ್’ ಮದುವೆಗೆ ಸಕಲ ತಯಾರಿ ಆಗಿದೆ. ಸಂಗೀತ್ ಕಾರ್ಯಕ್ರಮಕ್ಕಾಗಿ ಅಂಬಿ ಮನೆಯಲ್ಲಿ ಇಂದು ರಿಹರ್ಸಲ್ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ. ಈಗಾಗಲೇ ಹಳದಿ ಶಾಸ್ತ್ರ, ವರಪೂಜೆ, ಮೆಹಂದಿ ಶಾಸ್ತ್ರದ ಕಾರ್ಯಕ್ರಮಗಳನ್ನು ಅಂಬಿ ಮನೆಯಲ್ಲೇ ನೆರವೇರಿಸಲಾಗಿದೆ.


ಜೂನ್ 5ರ ಬೆಳಗ್ಗೆ ಮದುವೆ ಮುಹೂರ್ತ
ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು ೧.೫ ಲಕ್ಷ ಜನರು ಇದರಲ್ಲಿ ಭಾಗಿ ಆಗುವ ಸಾಧ್ಯತೆ ಇದೆ.
