• Home
  • About Us
  • ಕರ್ನಾಟಕ
Thursday, November 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಚಾರಿತ್ರಿಕ ರೈತ ಮುಷ್ಕರದ ಒಂದು ವರ್ಷ

ನಾ ದಿವಾಕರ by ನಾ ದಿವಾಕರ
November 23, 2021
in ಅಭಿಮತ
0
ಚಾರಿತ್ರಿಕ ರೈತ ಮುಷ್ಕರದ ಒಂದು ವರ್ಷ
Share on WhatsAppShare on FacebookShare on Telegram

ಮುಂದುವರೆದ ಭಾಗ –

ADVERTISEMENT

ಕಳೆದ ವರ್ಷ ನವಂಬರ್ 25ರಂದು ಪಂಜಾಬ್ನ 450ಕ್ಕೂ ಹೆಚ್ಚು ರೈತ ಸಂಘಟನೆಗಳು ಒಟ್ಟಾಗಿ ದೆಹಲಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡವು. ಈ ಸಂದರ್ಭದಲ್ಲೇ ಸಂಯುಕ್ತ ಕಿಸಾನ್ ಮೋರ್ಚಾ ಸ್ಥಾಪಿಸಲಾಯಿತು. ದೆಹಲಿಯ ರಾಮಲೀಲಾ ಮೈದಾನದಲ್ಲಿ ನವಂಬರ್ 27ರಂದು ಹರತಾಳ ಆಚರಿಸುವ ಮೂಲಕ ಕೃಷಿ ಕಾಯ್ದೆಗಳನ್ನು ಪ್ರತಿಭಟಿಸುವ ರೈತಾಪಿಯ ಹಕ್ಕೊತ್ತಾಯಗಳಿಗೆ ನರೇಂದ್ರ ಮೋದಿ ಸರ್ಕಾರ ಕೂಡಲೇ ಸ್ಪಂದಿಸಿ, ಕೃಷಿ ಕಾಯ್ದೆಗಳನ್ನು ಪರಿಷ್ಕರಿಸುವುದಾಗಿ ಭರವಸೆ ನೀಡಿದ್ದರೂ ಈ ಚಾರಿತ್ರಿಕ ಮುಷ್ಕರ ಸಂಭವಿಸುತ್ತಿರಲಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ನೋವುಗಳನ್ನು, ಸಮಸ್ಯೆಗಳನ್ನು ಆಲಿಸುವುದು ಆಳುವವರ ಪ್ರಥಮ ಆದ್ಯತೆಯಾಗಬೇಕು. ಆದರೆ ನರೇಂದ್ರ ಮೋದಿ ಸರ್ಕಾರ ದೇಶದ ಲಕ್ಷಾಂತರ ರೈತರನ್ನು ಪ್ರತಿನಿಧಿಸುವಂತಹ ಒಂದು ಬೃಹತ್ ಸಂಘಟನೆಗೆ ಮಾನ್ಯತೆಯನ್ನೇ ನೀಡಲಿಲ್ಲ. ಈ ನಿರಂಕುಶ ಧೋರಣೆಯೇ ರೈತ ಮುಷ್ಕರ ದೇಶವ್ಯಾಪಿಯಾಗಿ ಹರಡುವುದಕ್ಕೆ ಕಾರಣವೂ ಆಗಿತ್ತು. ದೆಹಲಿಗೆ ಪಾದಯಾತ್ರೆಯ ಮೂಲಕ, ತಮ್ಮ ಟ್ರಾಕ್ಟರ್‍ಗಳಲ್ಲಿ ಹೊರಟಿದ್ದ ಲಕ್ಷಾಂತರ ರೈತರಿಗೆ ನೇರವಾಗಿ ಮುಖಾಮುಖಿಯಾಗಿ, ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಬದಲು, ನರೇಂದ್ರ ಮೋದಿ ಸರ್ಕಾರ ರೈತ ಮುಷ್ಕರದ ಅಂಗಳವನ್ನು ಪ್ರತಿಷ್ಠೆಯ ಕಣವನ್ನಾಗಿ ಮಾರ್ಪಡಿಸಿತ್ತು.

ನವಂಬರ್ 25 2020ರಂದು ಹರಿಯಾಣದ ಗಡಿ ಪ್ರದೇಶಿಸಿದ ರೈತರನ್ನು ಅಲ್ಲಿನ ಬಿಜೆಪಿ ಸರ್ಕಾರ ತಡೆಹಿಡಿದಿತ್ತು. ಎಲ್ಲ ಪ್ರವೇಶ ದ್ವಾರಗಳನ್ನೂ, ಸೇತುವೆಗಳನ್ನೂ ಬಂದ್ ಮಾಡಲಾಯಿತು. ಇದನ್ನು ಲೆಕ್ಕಿಸದೆ ಮುಂದುವರೆದ ರೈತರ ಮೇಲೆ ಲಾಠಿ ಪ್ರಹಾರ ನಡೆಸಲಾಯಿತು. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಮುನ್ನಡೆಯುತ್ತಿದ್ದ ರೈತರ ಮೇಲೆ ಜನಫೀರಂಗಿಯನ್ನು ಪ್ರಯೋಗಿಸಲಾಯಿತು. ಈ ದಮನಕಾರಿ ಕ್ರಮವನ್ನು ಲೆಕ್ಕಿಸದ ರೈತರು ಬ್ಯಾರಿಕೇಡ್‍ಗಳನ್ನು ಕಿತ್ತು ನದಿಗೆ ಎಸೆದು ತಮ್ಮ ಯಾತ್ರೆಯನ್ನು ಮುಂದುವರೆಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಮತ್ತು ಹರಿಯಾಣ ಸರ್ಕಾರದ ಅಮಾನುಷತೆ ಪರಾಕಾಷ್ಠೆ ಮುಟ್ಟಿತ್ತು. ಆಡಳಿತ ವ್ಯವಸ್ಥೆಯ ಕ್ರೌರ್ಯಕ್ಕೆ ರೈತರು ಮುಖಾಮುಖಿಯಾಗಬೇಕಾಯಿತು. ಹರಿಯಾಣ ದೆಹಲಿ ನಡುವೆ ಹೆದ್ದಾರಿಗಳನ್ನು ಬಂದ್ ಮಾಡಲಾಯಿತು. ರಸ್ತೆಯುದ್ದಕ್ಕೂ ತಡೆಗೋಡೆಗಳನ್ನು ನಿರ್ಮಿಸಲಾಯಿತು. ರೈತರು ರಸ್ತೆ ದಾಟದಂತೆ ಮಾಡಲು ಕಂದಕಗಳನ್ನು ತೋಡಲಾಯಿತು. ದೊಡ್ಡ ಟಿಪ್ಪರ್‍ಗಳನ್ನು ಅಡ್ಡ ನಿಲ್ಲಿಸಲಾಯಿತು. ಆದರೆ ರೈತರು ತಮ್ಮ ಟ್ರಾಕ್ಟರ್ ಮತ್ತು ಜೆಸಿಬಿಗಳನ್ನು ಬಳಸಿ ಈ ಅಡೆತಡೆಗಳನ್ನು ದಾಟಿ ದೆಹಲಿ ಗಡಿಗೆ ತಲುಪಿದ್ದರು.

Also Read – ಭಾಗ ಒಂದು – ಜನಾಂದೋಲನಕ್ಕೆ ಮಂಡಿಯೂರಿದ ಸರ್ಕಾರ – ಇದು ಅಂತ್ಯವಲ್ಲ ಆರಂಭ

ತಮ್ಮ ಹಕ್ಕೊತ್ತಾಯಗಳಿಗಾಗಿ ಒಂದು ಶಾಂತಿಯುತ ಹೋರಾಟವನ್ನು ನಡೆಸಲು ಮುಂದಾಗಿದ್ದ ರೈತಾಪಿಯನ್ನು ಕಾನೂನು ಭಂಜಕರಂತೆ, ಅಪರಾಧಿಗಳಂತೆ, ಸಮಾಜಘಾತುಕ ಶಕ್ತಿಗಳಂತೆ ನೋಡುವ ಕೇಂದ್ರ ಸರ್ಕಾರದ ವಿಕೃತ ಧೋರಣೆ ಅನಾವರಣಗೊಂಡಿದ್ದು ದೆಹಲಿಯ ಗಡಿಗಳಲ್ಲಿ. ಕೃಷಿ ಕಾಯ್ದೆಗಳು ರದ್ದಾಗುವವರೆಗೂ ದೆಹಲಿಯ ರಾಮಲೀಲಾ ಮೈದಾನದಲ್ಲಿ ಧರಣಿ ಹೂಡಲು ಸಿದ್ಧವಾಗಿದ್ದ ರೈತ ಸಂಘಟನೆಗಳು ಆಡಳಿತ ವ್ಯವಸ್ಥೆಯ ಕ್ರೌರ್ಯವನ್ನು ಎದುರಿಸಬೇಕಾಯಿತು. ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ದೆಹಲಿ ಪೊಲೀಸರು ಹೆದ್ದಾರಿಗೆ ಅಡ್ಡಲಾಗಿ ಟ್ರಪ್, ಟಿಪ್ಪರ್‍ಗಳನ್ನು ನಿಲ್ಲಿಸಿದರು. ಖಾಲಿ ಕಂಡೇನರ್‍ಗಳನ್ನು ರಸ್ತೆಗಡ್ಡಲಾಗಿ ಇರಿಸಲಾಯಿತು. ಸಿದ್ಧಪಡಿಸಾಗಿದ್ದ ಪ್ರೀಕಾಸ್ಟ್ ಸಿಮೆಂಟ್ ಗೋಡೆಗಳನ್ನು ಇರಿಸಲಾಯಿತು. ಎರಡೂ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳನ್ನು ನಿಯೋಜಿಸಿತು. ಅರೆಸೇನಾ ಪಡೆಗಳು ರೈತರ ವಿರುದ್ಧ ಅಸ್ತ್ರ ಹಿಡಿದು ನಿಂತವು. ಕಬ್ಬಿಣದ ಮುಳ್ಳು ಬೇಲಿಗಳನ್ನು ರಸ್ತೆಗಡ್ಡಲಾಗಿ ಇರಿಸಲಾಯಿತು. ರಸ್ತೆಗಳಲ್ಲಿ ಕಬ್ಬಿಣದ ಮೊಳೆಗಳನ್ನು ಹೂಳಲಾಯಿತು.

ಬಹುಶಃ ಸ್ವಾತಂತ್ರ್ಯ ಪೂರ್ವದ ಚಂಪಾರಣ್ ಸತ್ಯಾಗ್ರಹ, ದಂಡಿ ಮಾರ್ಚ್ ಸಂದರ್ಭದಲ್ಲಿ ಬ್ರಿಟೀಷ್ ಸರ್ಕಾರವೂ ಇಷ್ಟು ಕ್ರೂರ ವಿಧಾನಗಳನ್ನು ಅನುಸರಿಸಿರಲಿಲ್ಲ ಎನಿಸುತ್ತದೆ. ಪೊಲೀಸರ ಕ್ರೂರ ದಬ್ಬಾಳಿಕೆಯನ್ನು ಲೆಕ್ಕಿಸದೆ ಮುಷ್ಕರಕ್ಕೆ ಕುಳಿತ ರೈತರನ್ನು ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ತಡೆದರೂ ಅಲ್ಲಿಂದ ಖಾಲಿ ಮಾಡಲಾಗಲಿಲ್ಲ. ಪಂಜಾಬ್, ಹರಿಯಾಣ, ಉತ್ತರಪ್ರದೇಶದಿಂದ ರೈತರು ತಮ್ಮ ಟ್ರಾಕ್ಟರುಗಳನ್ನೇ ಶಿಬಿರಗಳನ್ನಾಗಿ ಮಾರ್ಪಡಿಸಿದರು. ಲಕ್ಷಾಂತರ ರೈತರಿಗೆ ಊಟ, ತಿಂಡಿ ಇತರ ಸೌಲಭ್ಯಗಳನ್ನು ಕಲ್ಪಿಸಲಾಯಿತು. ವೈದ್ಯಕೀಯ ಸೇವೆ ಸಲ್ಲಿಸಲು ಹಲವು ಸಂಘಟನೆಗಳು ಮುಂದಾದವು. ವೈದ್ಯರು ಉಚಿತ ಸೇವೆಗಾಗಿ ದೆಹಲಿ ಗಡಿ ತಲುಪಿದರು. ಮೂರೂ ಗ್ರಾಮಗಳಿಂದ ರೈತ ಕುಟುಂಬಗಳು ಪಾಳಿಯ ಮೇಲೆ ಈ ಹೋರಾಟದಲ್ಲಿ ಪಾಲ್ಗೊಳ್ಳಲಾರಂಭಿಸಿದರು. ಈ ಬೆಳವಣಿಗೆಗಳ ನಡುವೆಯೇ ದೇಶಾದ್ಯಂತ ರೈತ ಸಂಘಟನೆಗಳು ತಮ್ಮ ಪ್ರತಿನಿಧಿಗಳನ್ನು ದೆಹಲಿಗೆ ಕಳುಹಿಸಲಾರಂಭಿಸಿದವು. ಹಲವು ರಾಜ್ಯಗಳಲ್ಲಿ ರೈತ ಸಂಘಟನೆಗಳು ತಮ್ಮದೇ ಆದ ರೀತಿಯಲ್ಲಿ ಹೋರಾಟನಿರತರಾದವು.

ಬಹುಶಃ ಕೇಂದ್ರದಲ್ಲಿ ಪ್ರಜಾಸತ್ತೆಯಲ್ಲಿ ನಂಬಿಕೆ ಇರುವ ಒಂದು ಸರ್ಕಾರ ಇದ್ದಿದ್ದರೆ ಈ ವೇಳೆಗೆ ದೇಶದ ಪ್ರಧಾನಮಂತ್ರಿ ಮತ್ತು ಗೃಹಮಂತ್ರಿ ಗಡಿಯಲ್ಲಿ ನೆರೆದಿದ್ದ ಲಕ್ಷಾಂತರ ರೈತರ ಮುಂದೆ ಕೈಕಟ್ಟಿ ನಿಂತು ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಇದು ಪ್ರಜಾತಂತ್ರದ ಮೂಲ ಲಕ್ಷಣ. ತಮ್ಮನ್ನು ಆಯ್ಕೆ ಮಾಡಿದ ಪ್ರಜೆಗಳು ನ್ಯಾಯ ಕೋರುತ್ತಾ ಬಾಗಿಲಿಗೆ ಬಂದಿರುವಾಗ, ಅವರನ್ನು ನಿರ್ಲಕ್ಷಿಸುವುದೇ ಅಲ್ಲದೆ ತುಚ್ಚವಾಗಿ ಕಾಣುವುದು ನಿರಂಕುಶತ್ವದ ಧೋರಣೆಯಷ್ಟೇ ಅಲ್ಲ ಅಮಾನುಷತೆಯೂ ಹೌದು. ಕಾಯ್ದೆಗಳಲ್ಲಿ ಆ ಕ್ಷಣದಲ್ಲೇ ಹಿಂಪಡೆಯದಿದ್ದರೂ, ರೈತರಲ್ಲಿ ಭರವಸೆ ಮೂಡಿಸುವಂತಹ ಮಾತುಗಳನ್ನಾಡಿದ್ದರೂ ರೈತ ಮುಷ್ಕರ ಒಂದು ವರ್ಷ ನಡೆಯುತ್ತಿರಲಿಲ್ಲವೇನೋ. ಆದರೆ ಕೇಂದ್ರ ಸರ್ಕಾರದ ದೃಷ್ಟಿಯಲ್ಲಿ ಅಲ್ಲಿ ನೆರೆದಿದ್ದ ಲಕ್ಷಾಂತರ ರೈತರು ಭಯೋತ್ಪಾಕರಾಗಿ ಕಂಡರು. ದೇಶದ ವಿವಿಧ ಭಾಗಗಳಿಂದ ತಂಡೋಪತಂಡವಾಗಿ ಬಂದು ಸೇರುತ್ತಿದ್ದ ರೈತರ ನಡುವೆ ಒಂದು ಬೃಹತ್ತಾದ ಕೃಷಿ ಸಮಸ್ಯೆ ಇದೆ ಎಂಬುದನ್ನು ಮನಗಾಣಲು ಮೋದಿ ಸರ್ಕಾರ ವಿಫಲವಾಗಿತ್ತು.

ಬದಲಾಗಿ, ಶಾಂತಿಯುತ ಹೋರಾಟಗಾರರ ನಡುವೆ ಕೇಂದ್ರ ಸರ್ಕಾರಕ್ಕೆ, ಬಿಜೆಪಿ ಮತ್ತು ಸಂಘಪರಿವಾರದ ನಾಯಕರಿಗೆ ಮತ್ತು ವಂದಿಮಾಗಧ ಮಾಧ್ಯಮಗಳಿಗೂ ಕಂಡಿದ್ದು ಭಯೋತ್ಪಾದಕರು, ಉಗ್ರಗಾಮಿಗಳು, ಸಶಸ್ತ್ರ ಹೋರಾಟಗಾರರು, ನಕ್ಸಲೀಯರು, ಮಾವೋವಾದಿಗಳು, ಖಲಿಸ್ತಾನಿಗಳು, ಪಾಕಿಸ್ತಾನಿ ಏಜೆಂಟರು, ದೇಶದ್ರೋಹಿಗಳು, ವಿದೇಶಿ ಏಜೆಂಟರು, ನಕಲಿ ಹೋರಾಟಗಾರರು, ಅರ್ಬನ್ ನಕ್ಸಲರು ಇತ್ಯಾದಿ ಇತ್ಯಾದಿ. 200 ವರ್ಷಗಳ ಬ್ರಿಟೀಷ್ ಆಡಳಿತದಲ್ಲೂ ಸಹ ಹೋರಾಟಗಾರರನ್ನು ಈ ಸಮಗ್ರ ವಕ್ರದೃಷ್ಟಿಯಿಂದ ಎಂದಿಗೂ ನೋಡಲಾಗಿರಲಿಲ್ಲ. ಆದರೆ ಕೇಂದ್ರ ಸರ್ಕಾರಕ್ಕೆ ಈ ಹೋರಾಟ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದರಿಂದ, ಎಲ್ಲ ಪ್ರತಿರೋಧದ ದನಿಗಳೂ ದೇಶದ್ರೋಹದ ದನಿಗಳಾಗಿ ಮಾರ್ಪಟ್ಟವು. ಬಹುಮುಖ್ಯವಾಗಿ ಎಲ್ಲ ಬಿಜೆಪಿ ನಾಯಕರೂ, ಬಾಲಂಗೋಚಿ ಮಾಧ್ಯಮಗಳೂ ಮತ್ತು ಬಿಜೆಪಿ-ಆರೆಸ್ಸೆಸ್ ಬೆಂಬಲಿಗರಿಗೂ ರೈತ ಮುಷ್ಕರ ದಲ್ಲಾಳಿಗಳ ಮುಷ್ಕರವಾಗಿಯೇ ಕಂಡಿತ್ತು.

ಜನವರಿ 26ರಂದು ಗಣರಾಜ್ಯೋತ್ಸವದ ದಿನ ರೈತರು ದೆಹಲಿಯಲ್ಲಿ ಟ್ರಾಕ್ಟರ್ ಪೆರೇಡ್ ನಡೆಸಲು ಸಜ್ಜಾದವು. ಎಲ್ಲ ದಿಕ್ಕುಗಳಿಂದಲೂ ಸಾವಿರಾರು ಟ್ರಾಕ್ಟರುಗಳು ಲಕ್ಷಾಂತರ ರೈತರನ್ನು ಹೊತ್ತು ದೆಹಲಿಗೆ ಬರಲಾರಂಭಿಸಿದವು. ಶಾಂತಿಯುತವಾಗಿಯೇ ನಡೆಯುತ್ತಿದ್ದ ಈ ಪೆರೇಡ್ ನಡುವೆ ರೈತ ಮುಷ್ಕರದ ಭಾಗಿಯಾಗಿದ್ದ ಒಂದು ಗುಂಪು ಕೆಂಪುಕೋಟೆಯ ಮೇಲಿನ ರಾಷ್ಟ್ರಧ್ವಜವನ್ನು ಕೆಳಗಿಳಿಸಿ, ಖಲಿಸ್ತಾನ್ ಧ್ವಜವನ್ನು ಹಾರಿಸಿದ ವಿವಾದ ಸೃಷ್ಟಿಸಲಾಯಿತು. ಸಿಖ್ ಪಂಥಗಳಲ್ಲೇ ಒಂದಾದ ನಿಶಾನ್ ಸಾಹಿಬ್ ಪಂಥಕ್ಕೆ ಸೇರಿದವರ ಈ ಕೃತ್ಯ, ಇಡೀ ರೈತ ಮುಷ್ಕರಕ್ಕೇ ಕಪ್ಪು ಮಸಿ ಬಳಿಯಲು ಸಾಧನವಾಯಿತು. ಕೆಂಪುಕೋಟೆ ಬಳಿ ನಡೆದ ಗಲಭೆಯಲ್ಲಿ 300ಕ್ಕೂ ಹೆಚ್ಚು ಪೊಲೀಸರು, ಸಾವಿರಾರು ರೈತರು ಗಾಯಗೊಂಡರು. ಈ ಸಂದರ್ಭದಲ್ಲಿ ದೆಹಲಿ ಗಡಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಟ್ರಾಕ್ಟರುಗಳು ನೆರೆದಿದ್ದವು. ದೆಹಲಿಯಲ್ಲೇ ಏಳು ಸಾವಿರ ಟ್ರಾಕ್ಟರ್ಗಳು ಪ್ರವೇಶಿಸಿದ್ದವು. ಆದರೆ ಈ ಗಲಭೆಗಳಿಂದ ರೈತ ಮುಷ್ಕರವನ್ನು ಹತ್ತಿಕ್ಕುವ ಆಳುವ ವರ್ಗಗಳ ಪ್ರಯತ್ನ ಫಲಿಸದ ಕಾರಣ, ರೈತ ಮುಷ್ಕರ ನಂತರವೂ ಮುಂದುವರೆಯಲು ಸಾಧ್ಯವಾಯಿತು. ನೂರಾರು ರೈತ ನಾಯಕರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಹೂಡಲಾಗಿದೆ.

ಈ ವೇಳೆಗಾಗಲೇ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ರೈತ ಮುಷ್ಕರ ಪ್ರಮುಖ ಸುದ್ದಿಯಾಗಲಾರಂಭಿಸಿತ್ತು. ಕೆನಡಾದಲ್ಲಿದ್ದ ಖಲಿಸ್ತಾನಿ ಸಂಘಟನೆಗಳು ತಮ್ಮ ಕಾಯ್ದೆಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿದ್ದೇ ಅಲ್ಲದೆ, ರೈತ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದವು. ವಿದೇಶಗಳಲ್ಲಿ ನೆಲೆಸಿದ್ದ ಸಿಖ್ ಬಾಂಧವರು ಮುಷ್ಕರಕ್ಕೆ ನೇರವಾಗಿಯೇ ಬೆಂಬಲ ಸೂಚಿಸಲಾರಂಭಿಸಿದ್ದರು. ಇದೇ ವೇಳೆಗೆ ರೈತ ಮುಷ್ಕರವನ್ನು ಭಂಗಗೊಳಿಸಲು ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಾಲ ಸಂಪರ್ಕವನ್ನು ಸ್ಥಗಿತಗೊಳಿಸಿದ್ದ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ದೇಶಾದ್ಯಂತ ಪ್ರತಿರೋಧ ವ್ಯಕ್ತವಾಗಿತ್ತು. ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಪರಿಸರವಾದಿಗಳು, ಮಾನವ ಹಕ್ಕು ಹೋರಾಟಗಾರರು ಭಾರತ ಸರ್ಕಾರದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಲಾರಂಭಿಸಿದರು. ರೈತರ ಈ ಹೋರಾಟ ಜಾಗತಿಕ ಆಯಾಮವನ್ನು ಪಡೆದುಕೊಳ್ಳಲಿಲ್ಲವಾದರೂ, ಕೇಂದ್ರ ಸರ್ಕಾರ ತನ್ನದೇ ಕಾರಣಗಳಿಗಾಗಿ ರೈತ ಮುಷ್ಕರವನ್ನು ಅಂತಾರಾಷ್ಟ್ರೀಯ ಸಂಘಟನೆಗಳು ಪ್ರಚೋದಿಸುತ್ತಿವೆ ಎಂಬ ಹುಯಿಲೆಬ್ಬಿಸಿತು. ಇದಕ್ಕೆ ಕಾರಣವಾಗಿದ್ದು ಖ್ಯಾತ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‍ಬರ್ಗ್ ಸಿದ್ಧಪಡಿಸಿದ್ದ ಒಂದು ಟೂಲ್‍ಕಿಟ್.

ಭಾರತದಲ್ಲಿ ನಡೆಯುತ್ತಿರುವ ರೈತ ಮುಷ್ಕರಕ್ಕೆ ಬೆಂಬಲ ಸೂಚಿಸಲು ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‍ಬರ್ಗ್ ಸಿದ್ಧಪಡಿಸಿದ್ದ ಟೂಲ್‍ಕಿಟ್‍ನಲ್ಲಿ ಭಾರತ ಸರ್ಕಾರದ ಹೊಸ ಕೃಷಿ ಮಸೂದೆಗಳನ್ನು ರೈತ ವಿರೋಧಿ ಎಂದು ಗುರುತಿಸಲಾಗಿತ್ತು. ಈ ಕಾಯ್ದೆಗಳು ನವ ಉದಾರವಾದಿ ಆರ್ಥಿಕ ನೀತಿಗಳ ಪರಿಣಾಮವಾಗಿ ಮೂಡಿಬಂದಿರುವುನ್ನೂ, ರೈತರೊಡನೆ ಮಾತುಕತೆ ನಡೆಸದೆ, ಸಂಸತ್ತಿನಲ್ಲಿ ಚರ್ಚೆ ನಡೆಸದೆ ಈ ಕಾಯ್ದೆಗಳನ್ನು ಜಾರಿಗೊಳಿಸಿರುವುದನ್ನೂ ಟೂಲ್‍ಕಿಟ್‍ನಲ್ಲಿ ಉಲ್ಲೇಖಿಸಲಾಗಿತ್ತು. ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ವಹಿಸುವುದರಿಂದ ಪರಿಸರ ವಿನಾಶಕ್ಕೂ ದಾರಿಮಾಡಿಕೊಟ್ಟಂತಾಗುತ್ತದೆ ಎನ್ನುವ ಅಂಶವನ್ನೂ ಉಲ್ಲೇಖಿಸಲಾಗಿತ್ತು. ಈ ನಿಟ್ಟಿನಲ್ಲಿ ರೈತ ಮುಷ್ಕರಕ್ಕೆ ಭಾರತದ ಜನತೆ ಮತ್ತು ವಿಶ್ವದ ಇತರ ರಾಷ್ಟ್ರಗಳ ಜನತೆ ಹೇಗೆ ಪ್ರತಿಕ್ರಯಿಸಬೇಕು ಎನ್ನುವುದನ್ನು ಟೂಲ್‍ಕಿಟ್‍ನಲ್ಲಿ ವಿವರಿಸಲಾಗಿತ್ತು. ಈ ಟೂಲ್ ಕಿಟ್ ಸಂಬಂಧಿಸಿದಂತೆಯೇ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಎಂಬ ಯುವತಿಯನ್ನು ಎನ್ಐಎ ಪೊಲೀಸರು ರಾತ್ರೋರಾತ್ರಿ ಬಂಧಿಸಿ ದೆಹಲಿಗೆ ಕರೆದೊಯ್ದಿದ್ದರು. ಆದರೆ ನಂತರದ ವಿಚಾರಣೆಯಲ್ಲಿ ದಿಶಾರವಿಯ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲದೆ ಬಿಡುಗಡೆಯಾಗಿದ್ದರು.

ಆಳುವವರಿಂದಾದ ಅಪಮಾನ ಮತ್ತು ಚಿತ್ರಹಿಂಸೆ

ದೆಹಲಿಯ ಸಿಂಘು ಮತ್ತು ಸಿಕ್ರಿ ಗಡಿಗಳಲ್ಲಿ ಚಳಿ, ಮಳೆಯನ್ನೂ ಲೆಕ್ಕಿಸದೆ ಮುಷ್ಕರನಿರತರಾಗಿದ್ದ ರೈತರ ವಿರುದ್ಧ ಅಪಪ್ರಚಾರ ಮಾಡಲು ಕೇಂದ್ರ ಸರ್ಕಾರ, ಬಿಜೆಪಿ ಪಕ್ಷದ ನಾಯಕತ್ವ ಮತ್ತು ಸಂಘಪರಿವಾರದ ಕಾರ್ಯಕರ್ತರು ಒಂದು ವ್ಯವಸ್ಥಿತ ಜಾಲವನ್ನೇ ಸೃಷ್ಟಿಸಿದ್ದರು. ವಾಟ್ಸಾಪ್ ವಿಶ್ವವಿದ್ಯಾಲಯಗಳ ಪಂಡಿತರು, ವಿದ್ವಾಂಸರು, ಈ ಹೋರಾಟಗಾರರಲ್ಲಿ ಭಾರತವನ್ನು ಮತ್ತೊಮ್ಮೆ ವಿಭಜನೆಯತ್ತ ಕೊಂಡೊಯ್ಯುವ ದೇಶದ್ರೋಹಿಗಳನ್ನೂ ಗುರುತಿಸಿದ್ದರು. ಸಿಂಘು ಮತ್ತು ಸಿಕ್ರಿ ಗಡಿಗಳಲ್ಲಿ ನಿಯೋಜಿಸಲಾಗಿದ್ದ ಪೊಲೀಸರ ಲಾಟಿ ಏಟಿಗೆ ನೂರಾರು ರೈತರು ಗಾಯಗೊಂಡಿದ್ದರು. ಕಳೆದ ಒಂದು ವರ್ಷದಲ್ಲಿ ವಿವಿಧ ಕಾರಣಗಳಿಗಾಗಿ 680 ಮುಷ್ಕರ ನಿರತ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಸಿನಿಮಾ ನಟರಿಗೆ ಶ್ರದ್ಧಾಂಜಲಿ ಅರ್ಪಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ಇತರ ಕೇಂದ್ರ ಸಚಿವರು, ಈ ಮಡಿದ ರೈತ ಬಂಧುಗಳ ಬಗ್ಗೆ ತುಟಿಬಿಚ್ಚದಿರುವುದು ಅಚ್ಚರಿ ಮೂಡಿಸುವ ವಿಚಾರ. ಅಂದರೆ ಸರ್ಕಾರದ ದೃಷ್ಟಿಯಲ್ಲಿ ಮುಷ್ಕರ ನಡೆಸುತ್ತಿದ್ದ ದಲ್ಲಾಳಿಗಳ ಸಾವು ಅನುಕಂಪ, ಸಂತಾಪಗಳಿಗೆ ಅರ್ಹವಾಗಿರಲಿಲ್ಲ.

ಈ ಎಲ್ಲ ಚಿತ್ರಹಿಂಸೆ, ಅಪಮಾನ ಮತ್ತು ಆಳುವ ವರ್ಗಗಳ ನಿರ್ದಯಿ ಕ್ರಮಗಳನ್ನು ಸಹಿಸಿಕೊಂಡೇ ರೈತ ಮುಷ್ಕರ ಬಹುತೇಕ ಒಂದು ವರ್ಷ ಪೂರೈಸಲಿತ್ತು. ರೈತ ಮುಷ್ಕರದ ಬಗ್ಗೆ ಮತ್ತು ರೈತರ ಆತ್ಮಹತ್ಯೆಯ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗಳು ಕೇವಲ ನಾಲಿಗೆಯ ಮೇಲಾಡಿದ ಮಾತುಗಳಲ್ಲ. ಅದು ಸಂಘಪರಿವಾರ ಮತ್ತು ಬಿಜೆಪಿಯ ತಾತ್ವಿಕ, ಸೈದ್ಧಾಂತಿಕ ನಿಲುವುಗಳ ದ್ಯೋತಕವಾಗಿಯೇ ಕಾಣುತ್ತದೆ. ಮಹಾರಾಷ್ಟ್ರದ ಅಂಕೋಲ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಧೋತ್ರೆ “ ರೈತರು ತಮ್ಮ ಪಾಡು ತಾವು ನೋಡಿಕೊಳ್ಳಲಿ ಕೃಷಿ ಮಾಡಲು ಸಾಮಥ್ರ್ಯವಿದ್ದವರು ಮಾಡುತ್ತಾರೆ ಇಲ್ಲದವರು ಸಾಯುತ್ತಾರೆ” ಎಂದು ಹೇಳಿದ್ದರು (1-12-2014). ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ “ ಮಧ್ಯಪ್ರದೇಶದಲ್ಲಿ ರೈತರು ತಮ್ಮ ವೈಯಕ್ತಿಕ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ” ಎಂದು ಹೇಳಿದ್ದರು (8-4-2015). ಹರಿಯಾಣದ ಕೃಷಿ ಸಚಿವ ಓಮ್ ಪ್ರಕಾಶ್ ಧನಕರ್ “ ಭಾರತದ ಕಾನೂನಿನಲ್ಲಿ ಆತ್ಮಹತ್ಯೆ ಅಪರಾಧವಾಗಿರುತ್ತದೆ, ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು, ಕ್ರಿಮಿನಲ್‍ಗಳು ” ಎಂದು ಹೇಳಿದ್ದರು 05-05-2015. (ಕರ್ನಾಟಕದ ಸಚಿವ ಬಿ ಸಿ ಪಾಟಿಲ್ ಇದನ್ನೇ ಪುನರುಚ್ಚರಿಸಿದ್ದಾರೆ). ಮೋದಿ ಸರ್ಕಾರದಲ್ಲಿ ಕೇಂದ್ರ ಕೃಷಿ ಸಚಿವೆಯಾಗಿದ್ದ ರಾಧಾಮೋಹನ್ ಸಿಂಗ್ “ ರೈತರು ಕೌಟುಂಬಿಕ ಸಮಸ್ಯೆಗಳಿಂದ, ಅನಾರೋಗ್ಯ, ಮಾದಕ ವಸ್ತು ಸೇವನೆ, ನಿರುದ್ಯೋಗ, ಆಸ್ತಿ ವಿವಾದ, ಪ್ರೇಮ ಪ್ರಸಂಗ, ನಪುಂಸಕತ್ವ, ವಿವಾಹ ರದ್ದತಿ, , ವರದಕ್ಷಿಣೆ ಇವೇ ಮುಂತಾದ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಕೇವಲ ಕೃಷಿ ಸಮಸ್ಯೆಯಿಂದಲ್ಲ ” ಎಂದು ಹೇಳಿದ್ದರು.

ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದರೂ, ಈ ಕಾಯ್ದೆಯ ಹಿನ್ನೆಲೆಯಲ್ಲಿ ಬಿಜೆಪಿ-ಸಂಘಪರಿವಾರದ ನಾಯಕರು ನೀಡಿದ ಹೇಳಿಕೆಗಳು, ಪ್ರಜಾತಂತ್ರ ವ್ಯವಸ್ಥೆಗೇ ಸಂಚಕಾರ ತರುವಂತಿದ್ದವು. ಕೆಲವು ಹೇಳಿಕೆಗಳ ಝಲಕ್ ಇಲ್ಲಿದೆ.
“ ಇವರನ್ನು ಸರಿ ಮಾಡಲು ನನಗೆ ಎರಡು ನಿಮಿಷ ಸಾಕು ಲಖೀಂಪುರದಿಂದ ಹೊರಗೆ ಓಡಿಸಬಲ್ಲೆ” ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರ. ಈ ಹೇಳಿಕೆಯ ಕೆಲ ದಿನಗಳ ನಂತರವೇ ಲಖೀಂಪುರ ಹತ್ಯೆಯೂ ನಡೆದಿತ್ತು.
“ ಈ ಪ್ರತಿಭಟನಾಕಾರರು ಭಯೋತ್ಪಾದಕರು. ಅವರಿಗೆ ಖಾಲಿಸ್ತಾನಿಗಳ ಬೆಂಬಲ ಇದೆ ಅವರ ಬಳಿ ಎಕೆ 47 ಸಹ ಇದೆ ” ಬಿಜೆಪಿ ಸಂಸದೆ ಜಸ್ಕೌರ್ ಮೀನಾ.
“ ಇವರಿಗೆ ಖಾಲಿಸ್ತಾನಿಗಳ ಮತ್ತು ಮಾವೋವಾದಿಗಳ ಬೆಂಬಲ ಇದೆ. ಇವರನ್ನು ಬಳಸಿಕೊಂಡೇ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ದೆಹಲಿಗೆ ಬೆಂಕಿ ಇಡಲು ಬಯಸುತ್ತಾರೆ ” ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವೀಯ.
“ ಇವರು ರೈತರೇ ಅಲ್ಲ, ರೈತ ವೇಷದಲ್ಲಿ ಬಂದಿರುವ ಗೂಂಡಾಗಳು, ಖಾಲಿಸ್ತಾನಿಗಳು, ಜಿಹಾದಿಗಳು ” ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವೈ ಸತ್ಯಕುಮಾರ್
“ ಇವರು ಖಾಲಿಸ್ತಾನಿಗಳು, ಉಗ್ರಗಾಮಿಗಳು. ಇವರಿಗೆ ಪಾಕಿಸ್ತಾನದ ಬೆಂಬಲ ಇದೆ ” ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ದುಷ್ಯಂತ ಕುಮಾರ್ ಗೌತಮ್
“ ಇವರು ಅನಪೇಕ್ಷಿತ ವಸ್ತುಗಳು ಇವರನ್ನು ಮಟ್ಟ ಹಾಕಲು ನಾವೇ ಲಾಠಿ ಎತ್ತಿಕೊಳ್ಳಬೇಕು ” ಹರಿಯಾಣ ಮುಖ್ಯಮಂತ್ರಿ ಬಿಜೆಪಿಯ ಮನೋಹರ್ ಲಾಲ್ ಖಟ್ಟರ್.
“ತುಕಡೇ ತುಕಡೇ ಗ್ಯಾಂಗ್ ಈ ಪ್ರತಿಭಟನೆಯನ್ನು ಅಪಹರಿಸಿದೆ ಇವರೆಲ್ಲಾ ತುಕಡೇ ತುಕಡೇ ಗ್ಯಾಂಗ್ನವರು ” ಬಿಹಾರದ ಮಾಜಿ ಉಪಮುಖ್ಯಮಂತ್ರಿ ಬಿಜೆಪಿಯ ಸುಶೀಲ್ ಮೋದಿ.
“ ಇವರು ರೈತರೇ ಅಲ್ಲ. ಒಳನುಸುಳಿರುವ ಎಡಪಂಥೀಯರು ಮತ್ತು ಮಾವೋವಾದಿಗಳು ” ಕೇಂದ್ರ ಸಚಿವ ಪಿಯೂಷ್ ಗೋಯಲ್
“ ದೇಶಕ್ಕೆ ಏನೋ ಕೆಡಕು ಉಂಟುಮಾಡಲು ತುಕಡೇ ತುಕಡೇ ಗ್ಯಾಂಗ್ ಮಾಡುತ್ತಿರುವ ಕೆಲಸ ಈ ಮುಷ್ಕರ ” ಮಾಜಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್.
“ ರೈತರ ಈ ಹೋರಾಟಕ್ಕೆ ಚೀನಾ ಮತ್ತು ಪಾಕಿಸ್ತಾನ ಬೆಂಬಲಿಸುತ್ತಿದೆ ” ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ.
ಇದೇ ಹೇಳಿಕೆಗಳನ್ನೇ ಕರ್ನಾಟಕದ ಸಿ ಟಿ ರವಿ, ಶೋಭಾ ಕರಂದ್ಲಾಜೆ ಪುನರುಚ್ಚರಿಸಿದ್ದಾರೆ.
ಈಗ ಪ್ರಧಾನಿ ಮೋದಿ ಈ ಮೇಲಿನ ಎಲ್ಲ ಆರೋಪಗಳನ್ನೂ ಸುಳ್ಳು ಎಂದು ಸ್ವತಃ ಸಾಬೀತುಪಡಿಸಿ, ಕಾಯ್ದೆಯನ್ನು ಜಾರಿಗೊಳಿಸಿದ್ದಕ್ಕಾಗಿ ಕ್ಷಮೆ ಕೋರಿ, ಮೂರೂ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಘೋಷಿಸಿದ್ದಾರೆ. ರಾಜಕಾರಣದಲ್ಲಿ ಬೌದ್ಧಿಕ ದಾರಿದ್ರ್ಯ ಹೆಚ್ಚಾದರೆ ಹೀಗೆಲ್ಲಾ ಆಗುವುದುಂಟು !!!!

ಇತ್ತೀಚೆಗೆ ನಡೆದ ಲಖೀಂಪುರ ಘಟನೆ ಈ ಆಡಳಿತ ವ್ಯವಸ್ಥೆಯ ಕ್ರೂರ ಮುಖವನ್ನು ಪರಿಚಯಿಸಿತ್ತು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರ ಅವರ ಸ್ವಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಮುಷ್ಕರ ನಿರತ ರೈತರು ಕಪ್ಪುಬಾವುಟ ಪ್ರದರ್ಶನದ ಮೂಲಕ ತಮ್ಮ ಪ್ರತಿರೋಧ ವ್ಯಕ್ತಪಡಿಸಲು ಸಜ್ಜಾಗಿದ್ದರ. ಈ ಸಭೆಯಲ್ಲಿ ಸಚಿವರು “ ನಮಗೆ ಅಡ್ಡಪಡಿಸಿದರೆ ತಕ್ಕ ಶಾಸ್ತಿ ಮಾಡುತ್ತೇವೆ ” ಎಂದು ಬಹಿರಂಗವಾಗಿಯೇ ಘೋಷಿಸಿದ್ದೂ ಹೌದು. ಇದಕ್ಕೂ ಮುನ್ನ ಹರಿಯಾಣ ಮುಖ್ಯಮಂತ್ರಿ ಖಟ್ಟರ್ ಕಾರ್ಯಕರ್ತರ ಸಭೆಯೊಂದರಲ್ಲಿ “ ಪ್ರತಿಭಟನಾಕಾರರನ್ನು ಎದುರಿಸಲು ಸ್ವಸಹಾಯಕ ಗುಂಪುಗಳನ್ನು ರಚಿಸಿ, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಿ. ನೀವು ಜೈಲಿಗೆ ಹೋದರೂ ಆರುತಿಂಗಳೊಳಗಾಗಿ ಹೀರೋಗಳಂತೆ ಹೊರಬರುತ್ತೀರಿ ” ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಲಖೀಂಪುರ ಖೇರಿಯಲ್ಲಿ ಸಚಿವ ಅಜಯ್ ಮಿಶ್ರ ಅವರ ಪುತ್ರ ಆಶಿಶ್ ಮಿಶ್ರಾ ಅವರ ಕಾರು ರೈತರ ಮೇಲೆ ಹರಿದು ನಾಲ್ವರು ಮೃತಪಟ್ಟಿದ್ದರು. ಕೇಂಧ್ರ ಸಚಿವರು ಇಂದಿಗೂ ರಾಜೀನಾಮೆ ನೀಡದಿರುವುದು ಅಚ್ಚರಿಯ ಸಂಗತಿ.

“ ದೇಶದ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗೆ ಅಡ್ಡಿಮಾಡುವ ದೇಶದ್ರೋಹಿಗಳು ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ, ಈ ದೇಶದ್ರೋಹಿಗಳಿಗೆ ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಪಕ್ಷ ಮತ್ತು ಕೆಲವು ದಲ್ಲಾಳಿಗಳು ಪ್ರಚೋದನೆ ನೀಡುತ್ತಿದ್ದಾರೆ ” ಇದು ಕಳೆದ ಒಂದು ವರ್ಷದಿಂದಲೂ ನಿರಂತರವಾಗಿ ಬಿಜೆಪಿ ಮತ್ತು ಬೆಂಬಲಿಗರಿಂದ ಕೇಳಿಬರುತ್ತಿದ್ದ ಅಪಸ್ವರ. ಆದರೆ ಇಂದು ಅದೇ ದಲ್ಲಾಳಿಗಳ, ದೇಶದ್ರೋಹಿಗಳ ಆಗ್ರಹಕ್ಕೆ ಕೇಂದ್ರ ಸರ್ಕಾರ ಮಣಿದಿದೆ.

ಮೋದಿ ಸರ್ಕಾರದ ಉದ್ದೇಶಗಳು ಅಸ್ಪಷ್ಟ

ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಗುವುದಿಲ್ಲ, ಇದು ದೇಶದ ಹಿತಾಸಕ್ತಿಯ ಪ್ರಶ್ನೆ ಎಂದು ಹೇಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಹಠಾತ್ತನೆ, ಸಂಪುಟದ ಅನುಮೋದನೆಯೂ ಇಲ್ಲದೆ, ಏಕಾಏಕಿಯಾಗಿ ಮೂರೂ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಹೇಳಿರುವುದು ರಾಜಕೀಯ ವಲಯಗಳಲ್ಲಿ ಅಚ್ಚರಿ ಮೂಡಿಸಿದೆ. ಈ ನಿರ್ಧಾರಕ್ಕೆ ಹಲವು ಕಾರಣಗಳನ್ನೂ ನೀಡಲಾಗುತ್ತಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಮತ್ತು ಲೋಕಸಭೆಯ ಉಪಚುನಾವಣೆಗಳಲ್ಲಿ ಬಿಜೆಪಿಯ ಹಿನ್ನಡೆಯೂ ಈ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ನವಂಬರ್ 3ರಂದು ಪ್ರಕಟವಾದ 29 ವಿಧಾನಸಭಾ ಮತ್ತು 3 ಲೋಕಸಭಾ ಚುನಾವಣಾ ಫಲಿತಾಂಶಗಳಲ್ಲಿ ಬಿಜೆಪಿಯ ಸಾಧನೆ ಗಣನೀಯವಾಗಿ ಇಳಿಕೆಯಾಗಿತ್ತು. ತನ್ನ ಭದ್ರಕೋಟೆ ಹಿಮಾಚಲ ಪ್ರದೇಶದಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲನುಭವಿಸಿತ್ತು. ಕೆಲವು ಸಮೀಕ್ಷೆಗಳ ಪ್ರಕಾರ ಮುಂಬರುವ ಉತ್ತರಪ್ರದೇಶ, ಪಂಜಾಬ್ ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗುವುದಾಗಿ ಹೇಳಲಾಗಿತ್ತು. ರೈತ ಮುಷ್ಕರದಲ್ಲಿ ಬಹುಸಂಖ್ಯೆಯಲ್ಲಿರುವ ಜಾಟ್ ಸಮುದಾಯವೇ ಪ್ರಧಾನವಾಗಿರುವ ಪಶ್ಚಿಮ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಗಳು ನಿಚ್ಚಳವಾಗಿದ್ದವು.ಈ ರಾಜಕೀಯ ಕಾರಣಗಳಿಂದ ಹೊರತಾಗಿ, ಪಂಜಾಬ್ನ ಸಿಖ್ ಸಮುದಾಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಹೆಚ್ಚಾಗುತ್ತಿದ್ದುದೂ ಈ ನಿರ್ಧಾರಕ್ಕೆ ಕಾರಣವಾದಂತಿದೆ. ಈ ರಾಜಕೀಯ ಕಾರಣಗಳ ಹೊರತಾಗಿಯೂ ಮೋದಿ ಸರ್ಕಾರಕ್ಕೆ ಲಖೀಂಪುರ ಖೇರಿ ಹತ್ಯಾಕಾಂಡ ಮತ್ತು ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ಕೆಲವು ತೀರ್ಪುಗಳೂ ಸಹ ಜಾಗ್ರತೆ ಮೂಡಿಸಿದಂತೆ ತೋರುತ್ತದೆ.

ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಹೇಳಿದ್ದರೂ, ಇದೇ ಕಾಯ್ದೆಗಳನ್ನು ಕೊಂಚ ತಿದ್ದುಪಡಿಗಳೊಂದಿಗೆ ಮತ್ತೊಂದು ರೂಪದಲ್ಲಿ ಜಾರಿಮಾಡುವ ಸಂಭವವನ್ನು ಅಲ್ಲಗಳೆಯಲಾಗುವುದಿಲ್ಲ. ಚುನಾವಣೆಗಳ ನಂತರದಲ್ಲಿ ಈ ಕ್ರಮಕ್ಕೆ ಮುಂದಾಗಬಹುದು. ಏಕೆಂದರೆ ಬಿಜೆಪಿಯಲ್ಲಿ ಈಗಾಗಲೇ ಅಪಸ್ವರಗಳು ಕೇಳಿಬರುತ್ತಿದ್ದು, ಬಲಪಂಥೀಯ ಆರ್ಥಿಕ ನೀತಿಯನ್ನು ಪ್ರತಿಪಾದಿಸುವ ಒಂದು ಬಣ ಕೃಷಿ ಕಾಯ್ದೆಗಳ ರದ್ದತಿಯನ್ನು ಸಮರ್ಥಿಸುತ್ತಿಲ್ಲ. ಮೇಲಾಗಿ ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ರದ್ದುಪಡಿಸಿದೆಯೇ ಹೊರತು, ತನ್ನ ಕೃಷಿ ನೀತಿಯಲ್ಲಿ ಬದಲಾವಣೆ ಮಾಡುವ ಯಾವುದೇ ಇಂಗಿತವನ್ನು ತೋರಿಲ್ಲ. ಈ ಕಾಯ್ದೆ ಜಾರಿಯಾಗುತ್ತಿರುವ ವೇಳೆಯಲ್ಲೇ ಹೊಸ ಕೃಷಿ ವ್ಯವಸ್ಥೆಯ ಲಾಭ ಪಡೆಯಲು ಕಾರ್ಪೋರೇಟ್ ಉದ್ದಿಮೆಗಳು ಎಲ್ಲ ರೀತಿಯ ತಯಾರಿಯನ್ನೂ ನಡೆಸಿವೆ. ದೇಶಾದ್ಯಂತ ಅಂಬಾನಿಯ ರಿಲೈಯನ್ಸ್ ಅತ್ಯಾಧುನಿಕ ಗೋದಾಮುಗಳನ್ನು ನಿರ್ಮಿಸಿಸಿ, ಆಹಾರ ಉತ್ಪಾದನೆ ಮತ್ತು ಸಂಸ್ಕರಣ ಘಟಕಗಳನ್ನೂ ಸ್ಥಾಪಿಸಿದೆ. ಮಾರುಕಟ್ಟೆ ಆರ್ಥಿಕತೆಗೆ ಪೂರಕವಾದ ವಾತಾವರಣವನ್ನು ಈಗಾಗಲೇ ನಿರ್ಮಿಸಲಾಗಿದೆ.

ದೇಶದ ಶೇ 65ರಷ್ಟು ಜನರ ಬದುಕಿಗೆ ನಿರ್ಣಾಯಕವಾಗುವ ಕೃಷಿ ನೀತಿಗಳಲ್ಲಿ ಮಾರ್ಪಾಡು ಮಾಡಬೇಕೆಂದಿದ್ದರೆ ಸಂಸದೀಯ ವ್ಯವಸ್ಥೆ ತನ್ನದೇ ಆದ ಕಾರ್ಯವಿಧಾನಗಳನ್ನು ಒಳಗೊಂಡಿವೆ. ಈ ಕಾಯ್ದೆಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸುವ ಪ್ರಮಾದಕ್ಕೆ ಮುಂದಾಗುವ ಬದಲು , ಮೋದಿ ಸರ್ಕಾರ ಒಂದು ವಿಸ್ತøತ ತಜ್ಞರ ಸಮಿತಿಯನ್ನು ರಚಿಸಿ, ಸಾಧಕ ಬಾಧಕಗಳನ್ನು ಪರಾಮರ್ಶಿಸಿ, ಕೃಷಿ ತಜ್ಞರು ಮತ್ತು ಅರ್ಥಶಾಸ್ತ್ರಜ್ಞರ ಅಭಿಪ್ರಾಯವನ್ನು ಪಡೆದು ಹೊಸ ನೀತಿಗಳನ್ನು ಜಾರಿಗೊಳಿಸಬಹುದಿತ್ತು. ಸ್ವಾಮಿನಾಥನ್ ಆಯೋಗದ ವರದಿಯನ್ನೇ ಆಧಾರವಾಗಿಟ್ಟುಕೊಂಡು ಕೆಲವು ತಿದ್ದುಪಡಿಗಳನ್ನು ಮಾಡಬಹುದಿತ್ತು. ಸುಗ್ರೀವಾಜ್ಞೆಯ ನಂತರವೂ ಸಂಸತ್ತಿನಲ್ಲಿ ಅನುಮೋದನೆ ಪಡೆಯುವ ಮುನ್ನ ಸ್ಥಾಯಿ ಸಮಿತಿಯೊಂದನ್ನು ರಚಿಸಿ ನೂತನ ಕಾಯ್ದೆಗಳನ್ನು ಪರಾಮರ್ಶೆ ಮಾಡಬಹುದಿತ್ತು. ಇನ್ನು ಮುಂದೆಯೂ ಈ ಎಲ್ಲ ಮಾರ್ಗಗಳೂ ಸರ್ಕಾರಕ್ಕೆ ಲಭ್ಯವಿದೆ.

ಆದರೆ ತನ್ನ ಏಕಪಕ್ಷೀಯ ನಿರ್ಧಾರಗಳಿಗೆ ಮತ್ತು ನಿರಂಕುಶತ್ವಕ್ಕೆ ಹೆಸರಾದ ಕೇಂದ್ರ ಸರ್ಕಾರ ಈ ಪ್ರಜಾತಾಂತ್ರಿಕ ಮಾರ್ಗಗಳನ್ನು ಅನುಸರಿಸುತ್ತದೆಯೇ ಎಂಬ ಅನುಮಾನವೂ ಕಾಡುತ್ತದೆ. ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಗಳಲ್ಲಿ ಬಿಜೆಪಿಯ ಸಾಧನೆ ಉತ್ತಮವಾಗಿದ್ದರೆ ಇದೇ ಕಾಯ್ದೆಗಳನ್ನು ಮತ್ತೊಮ್ಮೆ ಜಾರಿಗೊಳಿಸಬಹುದು. ದೇಶದ ಭದ್ರತೆಯ ನೆಪ ಹೂಡಿ, ದೆಹಲಿಯ ಸುತ್ತಮುತ್ತ ಎಲ್ಲ ರೀತಿಯ ಪ್ರತಿಭಟನೆಗಳನ್ನು ನಿಷೇಧಿಸಬಹುದು. ಜನಾಂದೋಲನಗಳನ್ನು ಹತ್ತಿಕ್ಕುವ ನೂತನ ಕಾನೂನುಗಳನ್ನು ರೂಪಿಸಬಹುದು. ಈ ಸಾಧ್ಯತೆಗಳ ನಡುವೆಯೇ ಕೇಂದ್ರ ಸರ್ಕಾರ ರೈತ ಸಂಘಟನೆಗಳಲ್ಲಿ ಒಡಕುಂಟುಮಾಡುವ ಪ್ರಯತ್ನಗಳನ್ನೂ ಮಾಡಬಹುದು. ಭಾರತದ ರಾಜಕಾರಣದಲ್ಲಿ ಇವೆಲ್ಲವೂ ಸಾಧ್ಯ ಎನ್ನುವುದನ್ನು ಹೇಳಬೇಕಿಲ್ಲ.

ಹಾಲಿ ಕಾಯ್ದೆಗಳನ್ನು ಖಂಡತುಂಡವಾಗಿ ವಿರೋಧಿಸುತ್ತಿರುವ ವಿರೋಧ ಪಕ್ಷಗಳ ನಡೆಯೂ ಇಲ್ಲಿ ನಿರ್ಣಾಯಕವಾಗುತ್ತದೆ. ಈ ಮೂರು ಕೃಷಿ ಕಾಯ್ದೆಗಳಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಇತರ ರೈತ ವಿರೋಧಿ ಮಸೂದೆಗಳನ್ನೂ ರದ್ದುಪಡಿಸಲು ಜನಾಗ್ರಹ ಹೆಚ್ಚಾಗಲಿದೆ. ಈ ನೂತನ ಆರ್ಥಿಕ ನೀತಿಗಳಿಗೆ ಅಡಿಪಾಯ ಹಾಕಿದ ಕಾಂಗ್ರೆಸ್ ತನ್ನ ರಾಜಕೀಯ ಅನುಕೂಲಕ್ಕಾಗಿ ಹೊಸ ಕಾಯ್ದೆಗಳನ್ನು ವಿರೋಧಿಸದೆ, ದೇಶದ ರೈತರ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಒಂದು ಪ್ರಬುದ್ಧ ನಿರ್ಧಾರವನ್ನು ಕೈಗೊಳ್ಳಲು ಯತ್ನಿಸಬೇಕಾಗುತ್ತದೆ. ಈ ಕಾಯ್ದೆಗಳ ರದ್ದತಿಯಿಂದ ರೈತರು ಅಪಾಯದಿಂದ ಪಾರಾಗಿರುವುದು ನಿಜ, ಆದರೆ ದೇಶ ಕಳೆದ ಮೂರು ದಶಕಗಳಿಂದ ಎದುರಿಸುತ್ತಿರುವ ಕೃಷಿ ವಲಯದ ಬಿಕ್ಕಟ್ಟು ಇದರಿಂದ ಶಮವನಾಗುವುದಿಲ್ಲ. ರೈತರ ಆತ್ಮಹತ್ಯೆಗಳು ನಿಲ್ಲುವುದಿಲ್ಲ. ಭೂಮಿಯನ್ನು ಕಳೆದುಕೊಳ್ಳುತ್ತಿರುವ ರೈತರ ಆತಂಕಗಳು ಕೊನೆಯಾಗುವುದಿಲ್ಲ.

ಜಾಗತೀಕರಣದ ನಂತರ, 1991 ರಿಂದ 2004ರ ಅವಧಿಯಲ್ಲಿ ದೇಶದಲ್ಲಿ ಭೂ ಹೀನ ಕುಟುಂಬಗಳ ಸಂಖ್ಯೆ ಶೇ 12ರಷ್ಟು ಹೆಚ್ಚಾಗಿರುವುದನ್ನು ಗಮನಿಸಿದರೆ, ನವ ಉದಾರವಾದಿ ಯುಗದಲ್ಲಿ ನಗರೀಕರಣ, ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಗ್ರಾಮೀಣ ವಲಸೆಯ ಪ್ರಕ್ರಿಯೆಗಳು ಹೇಗೆ ಕೃಷಿ ಸಮುದಾಯವನ್ನು ಅಂಚಿಗೆ ತಳ್ಳುವುದಕ್ಕೆ ಕಾರಣವಾಗಿದೆ ಎನ್ನುವುದನ್ನು ಗ್ರಹಿಸಬಹುದು. ಭಾರತದಲ್ಲಿ ಒಟ್ಟು ಶೇ 38ರಷ್ಟು ಕೃಷಿ ಕುಟುಂಬಗಳು ಭೂಹೀನರಾಗಿವೆ. ದೊಡ್ಡ ಹಿಡುವಳಿದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪಂಜಾಬ್ ನಲ್ಲಿ ಶೇ 45ರಷ್ಟು ಭೂಹೀನ ಕುಟುಂಬಗಳಿವೆ. ದಕ್ಷಿಣದ ರಾಜ್ಯಗಳಲ್ಲಿ ಇದರ ಪ್ರಮಾಣ ಶೇ 50ಕ್ಕಿಂತಲೂ ಹೆಚ್ಚಾಗಿದೆ. ಈ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಉನ್ನತ ಮಟ್ಟದ ತಜ್ಞ ಸಮಿತಿಯೊಂದನ್ನು ರಚಿಸುವುದು ಸರ್ಕಾರದ ಮುಂದಿರಬಹುದಾದ ಆಯ್ಕೆ. ಬಹುಸಂಖ್ಯಾತ ಜನರ ಬದುಕಿನ ಪ್ರಶ್ನೆಯನ್ನು ತಮ್ಮ ಹಮ್ಮುಬಿಮ್ಮುಗಳಿಂದ ಪ್ರತಿಷ್ಠೆಯ ವಿಷಯವಾಗಿ ಭಾವಿಸುವುದು ಪ್ರಜಾತಂತ್ರದ ಲಕ್ಷಣವಲ್ಲ ಎನ್ನುವುದನ್ನು ಮೋದಿ ಸರ್ಕಾರ ಗ್ರಹಿಸಬೇಕಿದೆ. ಸ್ವಾಮಿನಾಥನ್ ಆಯೋಗದ ವರದಿಯನ್ನೇ ಆಧರಿಸಿ ಒಂದು ಹೊಸ ನೀತಿಯನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕಿದೆ.

ರೈತ ಮುಷ್ಕರ ಕಲಿಸಿದ ಪಾಠಗಳು

ಸ್ವತಂತ್ರ ಭಾರತ ಇತಿಹಾಸದಲ್ಲಿ ಕಂಡ ಅಭೂತಪೂರ್ವ ಜನಾಂದೋಲನವಾಗಿ ರೈತ ಮುಷ್ಕರ ಯಶಸ್ಸು ಸಾಧಿಸಿಎ. ಈ ಯಶಸ್ಸು ತಾತ್ಕಾಲಿಕವೇ ಹೊರತು ಅಂತಿಮವಲ್ಲ. ಏಕೆಂದರೆ ರೈತ ಮುಷ್ಕರದೊಂದಿಗೆ ಕೈಜೋಡಿಸಿದ ದೇಶದ ಅಸಂಖ್ಯಾತ ಕಾರ್ಮಿಕರು, ಗ್ರಾಮೀಣ ಬಡಜನತೆ ಮತ್ತು ನಿರುದ್ಯೋಗಿ ಯುವಕರು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕಾರ್ಮಿಕ ಸಂಹಿತೆಗಳು ಮತ್ತು ಇತರ ಜನವಿರೋಧಿ ಕಾಯ್ದೆಗಳಿಂದ ತತ್ತರಿಸುತ್ತಿದ್ದಾರೆ. ತಮ್ಮ ಪ್ರತಿರೋಧದ ಹಕ್ಕುಗಳನ್ನೂ ಸರ್ಕಾರ ಯುಎಪಿಎ, ದೇಶದ್ರೋಹದ ಕಾಯ್ದೆಗಳಂತಹ ಕರಾಳ ಶಾಸನಗಳ ಮೂಲಕ ಹತ್ತಿಕ್ಕುತ್ತಿರುವುದನ್ನು ನೋಡುತ್ತಿದ್ದಾರೆ. ರೈತ ಮುಷ್ಕರದಲ್ಲಿ ಪಾಲ್ಗೊಂಡಿದ್ದವರ ವಿರುದ್ಧವೂ ಯುಎಪಿಎ ಕಾಯ್ದೆಯಡಿ ನೂರಾರು ಮೊಕದ್ದಮೆಗಳು ದಾಖಲಾಗಿವೆ. ಇಷ್ಟಾದರೂ ಒಂದು ಜನಾಂದೋಲನಕ್ಕೆ ಅತ್ಯಗತ್ಯವಾದ ದೃಢ ನಿಶ್ಚಯ, ಉದ್ದೇಶಿತ ಗುರಿ ಮತ್ತು ಗುರಿಸಾಧನೆಯ ಛಲ ಇವೆಲ್ಲವೂ ಇದ್ದರೆ ಯಶಸ್ಸು ಸಾಧ್ಯ ಎನ್ನುವುದನ್ನು ಒಂದು ವರ್ಷದ ರೈತ ಮುಷ್ಕರ ಸ್ಪಷ್ಟವಾಗಿ ನಿರೂಪಿಸಿದೆ.

ರೈತ ಮುಷ್ಕರದಲ್ಲಿ ಗಮನಿಸಬೇಕಾದ ಒಂದು ಸಂಗತಿ ಎಂದರೆ ಈ ಪ್ರತಿರೋಧದ ಮುಂಚೂಣಿಯಲ್ಲಿದ್ದುದು ಪಂಜಾಬ್ನ ಶ್ರೀಮಂತ ರೈತರು. ಅವರಲ್ಲಿ ಭೂಮಾಲೀಕರೂ ಇದ್ದರು. ಲೇವಾದೇವಿಗಾರರೂ ಇದ್ದರು. ಸಣ್ಣ ರೈತರಿಗೆ ಹಣಕಾಸು, ಕೃಷಿ ಮತ್ತು ಕೃಷಿಯೇತರ ನೆರವು ನೀಡುವ ಮಂಡಿ ವರ್ತಕರ ಹಿತಾಸಕ್ತಿಯೂ ಈ ಮುಷ್ಕರಕ್ಕೆ ಕಾರಣವಾಗಿದೆ ಎನ್ನುವುದೂ ಅಲ್ಲಗಳೆಯಲಾಗದ ವಿಚಾರ. ಆದರೆ ಮೂರು ಕೃಷಿ ಕಾಯ್ದೆಗಳು ದೇಶದ ಸಮಸ್ತ ರೈತ ಸಮುದಾಯಕ್ಕೆ ಮಾರಕವಾಗುತ್ತಿತ್ತು. ಕೃಷಿ ಕಾರ್ಮಿಕರನ್ನೂ ಒಳಗೊಂಡಂತೆ ಸಣ್ಣ ಮತ್ತು ಅತಿಸಣ್ಣ ರೈತರಿಗೂ ಈ ಕಾಯ್ದೆಗಳು ಮಾರಕವಾಗಿತ್ತು. ಈ ಸಮಸ್ತ ರೈತ ಸಮುದಾಯದ ಹಿತಾಸಕ್ತಿಗಾಗಿ ಒಂದು ವರ್ಷದ ಕಾಲ ಮುಷ್ಕರ ಹೂಡಿದ ಪಂಜಾಬ್ ರೈತರ ಪ್ರತಿರೋಧ ಒಂದು ಮಾದರಿಯಾಗಿ ರೂಪುಗೊಂಡಿದೆ. ಮುಂಬರುವ ದಿನಗಳಲ್ಲಿ ಕಾರ್ಮಿಕರ ಮುಷ್ಕರಗಳಿಗೂ ಇದು ಒಂದು ಸ್ಪಷ್ಟ ಬುನಾದಿಯನ್ನು ನಿರ್ಮಿಸಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಘೋಷವಾಕ್ಯವನ್ನು ಈ ಮುಷ್ಕರ ಸಾಕಾರಗೊಳಿಸಿದೆ. ಕಾರ್ಮಿಕ ವಲಯದಲ್ಲೂ, ಹಿತವಲಯದಲ್ಲಿರುವ ಸಂಘಟಿತ ಕಾರ್ಮಿಕರು, ದೇಶದ ಸಮಸ್ತ ಕಾರ್ಮಿಕರಿಗೆ ಮುಂಚೂಣಿ ನಾಯಕತ್ವ ನೀಡಬೇಕು ಎನ್ನುವ ಸಂದೇಶವನ್ನು ಈ ರೈತ ಮುಷ್ಕರ ನೀಡಿದೆ.

ಈ ಕಾಯ್ದೆಗಳ ರದ್ದತಿಯೊಂದಿಗೆ ಮೋದಿ ಸರ್ಕಾರದ ಕರಾಳ ಕಾನೂನುಗಳು, ಕಠಿಣ ನಿಯಮಗಳು ಮತ್ತು ದಮನಕಾರಿ ನೀತಿಗಳು ಅಂತ್ಯವಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಪ್ರಭುತ್ವ ಇನ್ನೂ ಹೆಚ್ಚು ಕಠೋರವಾಗಲೂಬಹುದು. ಏಕೆಂದರೆ ಮಾರುಕಟ್ಟೆ ಆರ್ಥಿಕತೆಗೆ, ನವ ಉದಾರವಾದಿ ಆರ್ಥಿಕ ನೀತಿಗೆ ಇದು ಅನಿವಾರ್ಯ. ಈ ಸಂಭಾವ್ಯ ಅಪಾಯಗಳನ್ನು ಮನಗಾಣುತ್ತಲೇ, ರೈತ ಮುಷ್ಕರದ ಯಶಸ್ಸನ್ನು ಸಂಭ್ರಮಿಸಬೇಕಿದೆ. ಈ ಸಂಭ್ರಮದೊಂದಿಗೇ ಭವಿಷ್ಯದ ಹೆಜ್ಜೆಗಳನ್ನು ಪ್ರಾಮಾಣಿಕವಾಗಿ ಗುರುತಿಸಿ ಮುನ್ನಡೆಯುವುದು ಈ ದೇಶದ ದುಡಿಯುವ ವರ್ಗಗಳ ಆದ್ಯತೆಯಾಗಬೇಕಿದೆ. ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಮತ್ತು ಶೋಷಿತ ಸಮುದಾಯಗಳ ಅಸಂಖ್ಯಾತ ಸಂಘಟನೆಗಳು ಈ ನಿಟ್ಟಿನಲ್ಲಿ ತಮ್ಮ ಕಾರ್ಯಸೂಚಿಗಳನ್ನು ಪರಿಷ್ಕರಿಸಿ ಮುನ್ನಡೆಯಬೇಕಾದ ಅನಿವಾರ್ಯತೆಯೂ ಎದುರಾಗಿದೆ.

ಐತಿಹಾಸಿಕ ರೈತ ಮುಷ್ಕರದ ಯಶಸ್ಸನ್ನು ಸಂಭ್ರಮಿಸೋಣ ಆದರೆ ಮೈಮರೆಯದಿರೋಣ.

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ಹಾನಗಲ್ ಬೈ ಎಲೆಕ್ಷನ್ ಸೋಲಿನ ಪಾಠ: ಹಾವೇರಿ ಜಿಲ್ಲೆಯಲ್ಲಿ ಆ್ಯಕ್ಟೀವ್ ಆದ ಎಲ್ಲಾ ಪಕ್ಷಗಳ ಶಾಸಕರು

Next Post

ರೋಶನಿ ಬೇಗಂ: ಟಿಪ್ಪುವಿನ ಮರಣಾನಂತರವೂ ಬ್ರಿಟಿಷರನ್ನು ಕಾಡಿದ ಧೀರ ಮಹಿಳೆ

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ರೋಶನಿ ಬೇಗಂ: ಟಿಪ್ಪುವಿನ ಮರಣಾನಂತರವೂ ಬ್ರಿಟಿಷರನ್ನು ಕಾಡಿದ ಧೀರ ಮಹಿಳೆ

ರೋಶನಿ ಬೇಗಂ: ಟಿಪ್ಪುವಿನ ಮರಣಾನಂತರವೂ ಬ್ರಿಟಿಷರನ್ನು ಕಾಡಿದ ಧೀರ ಮಹಿಳೆ

Please login to join discussion

Recent News

Top Story

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

by ಪ್ರತಿಧ್ವನಿ
November 19, 2025
Top Story

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

by ಪ್ರತಿಧ್ವನಿ
November 19, 2025
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ
Top Story

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

by ಪ್ರತಿಧ್ವನಿ
November 19, 2025
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR
Top Story

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR

by ಪ್ರತಿಧ್ವನಿ
November 19, 2025
ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ
Top Story

ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

November 19, 2025

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

November 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada