• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಜನಾಂದೋಲನಕ್ಕೆ ಮಂಡಿಯೂರಿದ ಸರ್ಕಾರ – ಇದು ಅಂತ್ಯವಲ್ಲ ಆರಂಭ

ನಾ ದಿವಾಕರ by ನಾ ದಿವಾಕರ
November 22, 2021
in ಅಭಿಮತ, ಕರ್ನಾಟಕ, ದೇಶ
0
ಜನಾಂದೋಲನಕ್ಕೆ ಮಂಡಿಯೂರಿದ ಸರ್ಕಾರ – ಇದು ಅಂತ್ಯವಲ್ಲ ಆರಂಭ
Share on WhatsAppShare on FacebookShare on Telegram

ಸ್ವತಂತ್ರ ಭಾರತದ ಅತಿ ದೀರ್ಘ ಕಾಲದ ಜನಾಂದೋಲನಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. 1970ರ ದಶಕದ ರೈಲ್ವೆ ಮುಷ್ಕರ ಮತ್ತು ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕ ಮುಷ್ಕರದ ನಂತರ ದೇಶ ಕಂಡ ಅತ್ಯಂತ ನಿಷ್ಠುರ-ನೇರ ಮುಷ್ಕರ ದೆಹಲಿಯ ಗಡಿಗಳಲ್ಲಿ ಇತಿಹಾಸ ನಿರ್ಮಿಸಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಳುವ ವರ್ಗಗಳು  ತಮ್ಮ ಅಧಿಕಾರವನ್ನು ಎಷ್ಟೇ ದುರುಪಯೋಗಪಡಿಸಿಕೊಂಡರೂ, ಅಂತಿಮವಾಗಿ ಜನಾಭಿಪ್ರಾಯಕ್ಕೆ ಮಣಿಯಲೇಬೇಕು. ಇದು 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲೇ ಸಾಬೀತಾಗಿದೆ. ಈಗ ಮತ್ತೊಮ್ಮೆ. ಆದರೆ ತಮ್ಮ ಉದ್ದೇಶಿತ ಗುರಿ ಸಾಧನೆಗಾಗಿ ಪ್ರಭುತ್ವ ಮತ್ತು ಪ್ರಭುತ್ವದ ಮೇಲೆ ಪಾರಮ್ಯ ಸಾಧಿಸುವ ಅಧಿಕಾರ ರಾಜಕಾರಣದ ರಾಜಕೀಯ ಪಕ್ಷಗಳು ಹಿಂಬಾಗಿಲಿನಿಂದಲೂ ಪ್ರವೇಶಿಸುತ್ತವೆ ಎನ್ನುವ ಸತ್ಯವನ್ನೂ ಸ್ವತಂತ್ರ ಭಾರತ ಕಂಡಿದೆ. ತುರ್ತುಪರಿಸ್ಥಿತಿ ಹಿಂಪಡೆದು 44 ವರ್ಷದ ನಂತರ ದೇಶದ ಪರಿಸ್ಥಿತಿಯನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.

ADVERTISEMENT

ಏನೇ ಆಗಲಿ, ದೇಶದ ಸಮಸ್ತ ರೈತ ಸಮುದಾಯದ ಹಕ್ಕೊತ್ತಾಯಗಳನ್ನು ಪ್ರತಿನಿಧಿಸಿದ ಒಂದು ಬೃಹತ್ ಚಳುವಳಿಯನ್ನು ಹೀಗಳೆಯುತ್ತಲೇ ಒಂದು ವರ್ಷ ಕಳೆದ ಕೇಂದ್ರ ನರೇಂದ್ರ ಮೋದಿ ಸರ್ಕಾರ ಕೊನೆಗೂ ಮಂಡಿಯೂರಿ ಕ್ಷಮೆ ಕೋರಬೇಕಾಗಿ ಬಂದಿರುವುದು ಜನಾಭಿಪ್ರಾಯದ ವಿಜಯ ಎಂದೇ ಹೇಳಬೇಕು. ತಾವು ಕೈಗೊಂಡ ನಿರ್ಧಾರ ತಪ್ಪು ಎಂದು ಮನಗಂಡು, ಕ್ಷಮೆ ಕೋರಿ, ಹಿಂದಕ್ಕೆ ಸರಿದ ಸರ್ಕಾರದ ನಿಲುವನ್ನು “ ಜನಸ್ಪಂದನೆ ” ಎಂದು ಬಣ್ಣಿಸುವ ಭಂಡ ರಾಜಕಾರಣದ ನಡುವೆಯೇ ನಾವು ಈ ನಿರ್ಧಾರ ಮತ್ತು ಕರಾಳ ಕೃಷಿ ಕಾಯ್ದೆಗಳ ಪೂರ್ವಾಪರಗಳನ್ನು ವಿಶ್ಲೇಷಿಸಬೇಕಿದೆ. ವೈಫಲ್ಯವನ್ನೂ ಯಶಸ್ಸು ಎಂದು ಪರಿವರ್ತಿಸುವ ಚಾಕಚಕ್ಯತೆಯನ್ನು ಬಿಜೆಪಿ-ಮೋದಿ ಸರ್ಕಾರ ರೂಢಿಸಿಕೊಂಡಿರುವುದನ್ನು ನೋಟು ರದ್ದತಿಯ ಸಂದರ್ಭದಲ್ಲಿ ಕಂಡಿದ್ದೇವೆ. ಈಗಲೂ ಇದು ಸಾಧ್ಯವಾಗಬಹುದು. ಆದರೆ ಇದು ದೇಶದ ಶೇ 60ರಷ್ಟು ಕೃಷಿ ಆಧಾರಿತ ಜನತೆಯ ಬದುಕಿನ ಪ್ರಶ್ನೆಯಾಗಿರುವುದರಿಂದ ಇಲ್ಲಿ ಪ್ರಜೆಗಳ ದನಿಗೆ ಮನ್ನಣೆ ನೀಡಲೇಬೇಕಾಗುತ್ತದೆ. ಇದು ನಮ್ಮ ಸಂವಿಧಾನದ ಶಕ್ತಿ.

ಕರಾಳ ಕೃಷಿ ಮಸೂದೆಗಳೂ-ವಾಮ ಮಾರ್ಗಗಳೂ

ಒಂದು ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ದೇಶದ ಶೇ 60ರಷ್ಟು ಜನತೆಯ ಬದುಕನ್ನು ಪ್ರಭಾವಿಸುವ ಯಾವುದೇ ಕಾಯ್ದೆಯನ್ನು ಜಾರಿಗೊಳಿಸಬೇಕಾದರೆ ಸಾಂವಿಧಾನಿಕ ಮಾರ್ಗಗಳನ್ನೇ ಅನುಸರಿಸುವುದು ನೈತಿಕತೆ. ಆದರೆ ನವ ಉದಾರವಾದ ಮತ್ತು ಕೋಮುವಾದಿ ಫ್ಯಾಸಿಸ್ಟ್ ಆಡಳಿತ ವ್ಯವಸ್ಥೆಯಲ್ಲಿ ರಾಜಕೀಯ ನೈತಿಕತೆ ಇಲ್ಲವಾಗಿರುವುದರಿಂದ ಕಾಯ್ದೆ ಕಾನೂನುಗಳನ್ನು ಜನರ ಮೇಲೆ ಹೇರಲಾಗುತ್ತಿದೆ. ಕಳೆದ ಏಳು ವರ್ಷಗಳಲ್ಲಿ ನವ ಉದಾರವಾದಿ ಆರ್ಥಿಕ ನೀತಿಗಳನ್ನು, ಮಾರುಕಟ್ಟೆ-ಕಾರ್ಪೋರೇಟ್ ಬಂಡವಾಳ ಸ್ನೇಹಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೋರಿಸಿರುವ ಅವಸರ, ಆಳುವ ವರ್ಗಗಳ ಅಂತಿಮ ಗುರಿಯನ್ನು ಸ್ಪಷ್ಟಪಡಿಸುತ್ತದೆ. ಸದನದಲ್ಲಿ ಚರ್ಚೆಗೂ ಅವಕಾಶವೀಯದೆ, ಸುಗ್ರೀವಾಜ್ಞೆಗಳ ಮೂಲಕ ಕಾಯ್ದೆಗಳನ್ನು ಜಾರಿಗೊಳಿಸುವುದು ಪ್ರಜಾತಂತ್ರ ವಿರೋಧಿಯಷ್ಟೇ ಅಲ್ಲ, ಸಂವಿಧಾನ ವಿರೋಧಿಯೂ ಆಗುತ್ತದೆ.

ಈಗ ಕೇಂದ್ರ ಸರ್ಕಾರ ವಾಪಸ್ ಪಡೆಯುತ್ತಿರುವ ಮೂರು ಕರಾಳ ಕೃಷಿ ಕಾಯ್ದೆಗಳೂ ಹೀಗೆಯೇ ಅಸಾಂವಿಧಾನಿಕವಾಗಿ 2020ರಲ್ಲಿ ಜಾರಿಯಾಗಿದ್ದವು. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ( ಉತ್ತೇಜನ ಮತ್ತು ಸೌಲಭ್ಯ) ಮಸೂದೆ 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಮತ್ತು ಕೃಷಿ ಸೇವೆಗಳ ಒಪ್ಪಂದ 2020, ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆ 2020, ಈ ಮೂರೂ ಕಾಯ್ದೆಗಳು ಸಂಸತ್ತಿನಲ್ಲಿ ಚರ್ಚೆಗೊಳಗಾಗದೆ, ಧ್ವನಿ ಮತದ ಮೂಲಕ ಜಾರಿಯಾಗಿದ್ದವು. ದೇಶ ಕೋವಿದ್ ಸಂಕಷ್ಟದ ನಡುವೆ ಸಿಲುಕಿದ್ದ ಸಂದರ್ಭದಲ್ಲೇ ಈ ಕರಾಳ ಶಾಸನಗಳನ್ನೂ ಜಾರಿಗೊಳಿಸಿದ್ದು, ಕೇಂದ್ರ ಸರ್ಕಾರದ ಅಸೂಕ್ಷ್ಮತೆ ಮತ್ತು ಪ್ರಜಾತಂತ್ರ ವಿರೋದಿ-ಜನವಿರೋಧಿü ಧೋರಣೆಯ ಸಂಕೇತವಾಗಿತ್ತು. ಈ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ರೈತರ ಆದಾಯವನ್ನು ದುಪ್ಪಟ್ಟು ಮಾಡಲಾಗುತ್ತದೆ ಎಂಬ ಮೋದಿ ಸರ್ಕಾರದ ಭರವಸೆಗೆ ಯಾವುದೇ ವೈಜ್ಞಾನಿಕ ತಳಹದಿಯೂ ಇರಲಿಲ್ಲ.

ತಮ್ಮ ಕೃಷಿ ಭೂಮಿಯ ಮೇಲೆ, ವ್ಯವಸಾಯದ ಮೇಲೆ, ತಾವು ಉತ್ಪಾದಿಸುವ ಆಹಾರ ಪದಾರ್ಥಗಳ ಮೇಲೆ ತಮ್ಮ ಮೂಲಭೂತ ಹಕ್ಕುಗಳನ್ನೇ ಕಳೆದುಕೊಳ್ಳುವ ರೈತರು ತಮ್ಮ ಆದಾಯ ದುಪ್ಪಟ್ಟಾಗುತ್ತದೆ ಎಂಬ ಭರವಸೆಯನ್ನು ನಂಬುವುದಾದರೂ ಹೇಗೆ ? ಈ ಕುರಿತು ಒಂದು ಸ್ಪಷ್ಟ ನೀಲನಕ್ಷೆಯನ್ನು ಜನತೆಯ ಮುಂದಿಡುವಲ್ಲೂ ಮೋದಿ ಸರ್ಕಾರ ವಿಫಲವಾಗಿತ್ತು. ಭಾರತದ ಕೃಷಿ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿ, ಸಣ್ಣ ಮತ್ತು ಅತಿಸಣ್ಣ ರೈತರ, ಭೂ ಹಿಡುವಳಿದಾರರ ಉನ್ನತಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಶಿಫಾರಸು ಮಾಡಿದ್ದ ಸ್ವಾಮಿನಾಥನ್ ಆಯೋಗದ ವರದಿಯನ್ನು ಮೂಲೆಗುಂಪು ಮಾಡಿದ್ದ ಕೇಂದ್ರ ಸರ್ಕಾರ, ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳಿಗೆ ಅನುಕೂಲಕರವಾಗುವಂತಹ ಬಂಡವಾಳ ಸ್ನೇಹಿ ಕೃಷಿ ನೀತಿಯನ್ನು ಜಾರಿಗೊಳಿಸಲು ಮುಂದಾಗಿದ್ದರಿಂದಲೇ, ದೇಶದ ದೊಡ್ಡ ರೈತರೂ ಸಹ ದಂಗೆಯೇಳುವಂತಾಗಿತ್ತು.

ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ( ಉತ್ತೇಜನ ಮತ್ತು ಸೌಲಭ್ಯ) ಮಸೂದೆ 2020 ಮೆಲ್ನೋಟಕ್ಕೆ ರೈತ ಸ್ನೇಹಿಯಾಗಿಯೇ ಕಾಣುವಂತಹುದು. ರೈತನಿಗೆ ತನ್ನ ಫಸಲನ್ನು ಮಾರಾಟ ಮಾಡಲು ಎಪಿಎಂಸಿ/ಮಂಡಿಗಳಿಂದಾಚೆಗೂ ಮುಕ್ತ ಅವಕಾಶ ದೊರೆಯುತ್ತದೆ, ಇದು ರೈತನಿಗೆ ಉತ್ತಮ ಬೆಲೆ ಪಡೆಯಲು ನೆರವಾಗುತ್ತದೆ ಮತ್ತು ತನ್ನ ಬೆಳೆಯನ್ನು ಬೇಕಾದಂತೆ ಮಾರಾಟ ಮಾಡುವ ಮುಕ್ತ ಸ್ವಾತಂತ್ರ್ಯ ದೊರೆಯುತ್ತದೆ ಎನ್ನುವುದು ಸರ್ಕಾರದ ವಾದವಾಗಿತ್ತು . ಮೇಲ್ನೋಟಕ್ಕೆ ಇದು ರೈತ ಸ್ನೇಹಿಯಾಗಿ ಕಾಣುವುದು ಸಹಜ. ಶ್ರಮವಹಿಸಿ ತಾನು ಬೆಳೆದ ಫಸಲನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ನಿಗದಿತ ಬೆಲೆಗೆ ಮಾರಾಟ ಮಾಡುವುದರ ಬದಲು, ಇನ್ನೂ ಹೆಚ್ಚಿನ ಬೆಲೆ ನೀಡುವ ವ್ಯಾಪಾರಿಗಳಿಗೆ ಮಾರಾಟ ಮಾಡಬಹುದು ಎಂಬ ಆಶಾಭಾವನೆಯನ್ನು ಈ ಕಾಯ್ದೆ ಮೂಡಿಸುತ್ತದೆ. ಆದರೆ ವಾಸ್ತವ ಹಾಗಾಗುವುದಿಲ್ಲ. ಕನಿಷ್ಠ ಬೆಂಬಲ ಬೆಲೆ ಇಲ್ಲದೆ, ಮಾರುಕಟ್ಟೆಯಲ್ಲಿ ಬಿಕರಿಯಾಗುವ ಸರಕುಗಳ ಮೇಲೆ ಕಾರ್ಪೋರೇಟ್ ನಿಯಂತ್ರಿತ ಔದ್ಯಮಿಕ ಒಕ್ಕೂಟ ತನ್ನ ಹಿಡಿತ ಸಾಧಿಸಿರುತ್ತದೆ. ಕಾರ್ಪೋರೇಟ್ ಮಾರುಕಟ್ಟೆಯ ಅಗತ್ಯತೆಗಳಿಗೆ ಅನುಸಾರವಾಗಿ ಬೆಲೆಯೂ ನಿರ್ಧಾರವಾಗುತ್ತದೆ. ಇದರಿಂದ ರೈತ ತನ್ನ ಬೆಳೆಯ ಮೇಲಿನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ಎರಡನ್ನೂ ಕಳೆದುಕೊಂಡು, ಮಾರುಕಟ್ಟೆ ಶಕ್ತಿಗಳ ಕೈಗೊಂಬೆಯಾಗುತ್ತಾನೆ.

ಎಪಿಎಂಸಿ ಮಾದರಿಯಲ್ಲಿ ಹಲವಾರು ಲೋಪಗಳಿವೆ. ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ರೈತರು ಶೋಷಣೆಗೊಳಗಾಗುತ್ತಿದ್ದಾರೆ. ಹಲವಾರು ಸಂದರ್ಭಗಳಲ್ಲಿ ರೈತರಿಗೆ ದಕ್ಕಬೇಕಾದ ಬೆಲೆ ದಕ್ಕುವುದಿಲ್ಲ. ಇವೆಲ್ಲವೂ ವ್ಯವಸ್ಥೆಯ ಲೋಪಗಳು, ರಾಜಕೀಯ ಭ್ರಷ್ಟಾಚಾರದ ಪರಿಣಾಮ. ಇದನ್ನು ಸರಿಪಡಿಸುವ ಮಾರ್ಗಗಳನ್ನೂ ಸ್ವಾಮಿನಾಥನ್ ಆಯೋಗ ಸೂಚಿಸಿದೆ. ಕನಿಷ್ಠ ಬೆಂಬಲ ಬೆಲೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಪರಿಷ್ಕರಣೆಯಾಗುತ್ತಿದ್ದರೆ ಎಪಿಎಂಸಿಗಳಲ್ಲಿ ಸಮಸ್ಯೆಯೇ ಉದ್ಭವಿಸುದಿಲ್ಲ. ಉತ್ತರ ಭಾರತದಲ್ಲಿ ಪ್ರಚಲಿತವಾಗಿರುವ ಮಂಡಿ ಪದ್ಧತಿಯು ಎಪಿಎಂಸಿಯ ನಿಯಮಗಳಿಗೆ ಒಳಪಡದಿದ್ದರೂ, ಈ ಮಂಡಿಗಳಲ್ಲಿ ರೈತರಿಗೆ ಚೌಕಾಸಿ ಮಾಡುವ ಆಯ್ಕೆ ಇರುತ್ತದೆ. ಹಲವಾರು ಸಂದರ್ಭಗಳಲ್ಲಿ ಮಂಡಿ ವರ್ತಕರು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಹಣಕಾಸು ನೆರವನ್ನೂ ನೀಡುವುದುಂಟು. ಇದು ಪಾರಂಪರಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅನೂಚಾನವಾಗಿ ಅನುಸರಿಸಿಕೊಂಡು ಬಂದಿರುವ ಒಂದು ಪದ್ಧತಿ. ಈ ಪದ್ಧತಿಯೊಳಗಿನ ನ್ಯೂನತೆಗಳನ್ನು, ಲೋಪಗಳನ್ನು ಸರಿಪಡಿಸಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡಲ್ಲಿ ರೈತರ ಲಾಭಾಂಶ ಮತ್ತು ಆದಾಯ ತಂತಾನೇ ಹೆಚ್ಚಾಗುತ್ತದೆ. ಆದರೆ ಹೊಸ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ “ ಸ್ನಾನದ ನೀರಿನೊಟ್ಟಿಗೆ ಮಗುವನ್ನೂ ಎತ್ತಿ ಬಿಸಾಡುವ ” ನೀತಿಯನ್ನು ಅನುಸರಿಸಲು ಮುಂದಾಗಿದೆ.

ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಮತ್ತು ಕೃಷಿ ಸೇವೆಗಳ ಒಪ್ಪಂದ 2020, ಇದು ಮೊದಲನೆಯ ಕಾಯ್ದೆಯ ಒಂದು ಕೊಂಡಿಯಾಗಿ, ಆ ಕಾಯ್ದೆಯ ನಿಯಮಗಳಿಗೆ ಪೂರಕವಾಗಿ ಜಾರಿಯಾಗುವಂತಹ ಒಂದು ಶಾಸನ. ರೈತರ ಸಬಲೀಕರಣ ಮತ್ತು ಸಂರಕ್ಷಣೆಯ ವ್ಯಾಖ್ಯಾನವೇ ಇಲ್ಲಿ ದೋಷಪೂರಿತವಾಗಿರುವುದನ್ನು ಗಮನಿಸಬೇಕಿದೆ. ರೈತರಿಗೆ ಬೆಲೆ ಖಾತರಿಯಾಗಬೇಕಿರುವುದು ಸರ್ಕಾರದಿಂದಲೇ ಹೊರತು ಮಾರುಕಟ್ಟೆ ಶಕ್ತಿಗಳಿಂದಲ್ಲ. ಈ ಕಾಯ್ದೆಯ ಅನುಸಾರ ರೈತರು ತಾವು ಮಾರಾಟ ಮಾಡುವ ತಮ್ಮ ವ್ಯವಸಾಯೋತ್ಪನ್ನಗಳಿಗೆ ನಿಗದಿತ ದರದೊಂದಿಗೆ ಖರೀದಿದಾರರೊಡನೆ ಪೂರ್ವ ನಿರ್ಧಾರಿತ ಒಪ್ಪಂದಕ್ಕೆ ಕಡ್ಡಾಯ ಮಾಡಬೇಕಾಗುತ್ತದೆ. ಈಗಿರುವ ಮಂಡಿ ಅಥವಾ ಎಪಿಎಂಸಿ ಪದ್ಧತಿಯಿಂದಾಚೆಗೆ ಮುಕ್ತಮಾರುಕಟ್ಟೆಯಲ್ಲಿ ಆಹಾರೋತ್ಪನ್ನಗಳನ್ನು, ವ್ಯವಸಾಯೋತ್ಪನ್ನಗಳನ್ನು ಖರೀದಿಸುವ ವ್ಯಾಪಾರಿಗಳು ನಿಗದಿಪಡಿಸುವ ದರಕ್ಕೆ ರೈತರು ಮುಂಚೆಯೇ ಕರಾರು ಒಪ್ಪಂದಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಮಾನ್ಯತೆ ಇಲ್ಲದಿರುವುದರಿಂದ ಖರೀದಿದಾರ ಉದ್ಯಮಿಗಳು, ಅಂದರೆ ಮೂಲತಃ ಕಾರ್ಪೋರೇಟ್ ವ್ಯಾಪಾರಿ ಉದ್ಯಮಿಗಳು ನಿಗದಿಪಡಿಸುವ ಬೆಲೆಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಒತ್ತಡಕ್ಕೆ ರೈತರು ಒಳಗಾಗುತ್ತಾರೆ.

ಇಲ್ಲಿ ರೈತರಿಗೆ ಫಸಲು ಮಾರಾಟ ಮಾಡುವ ಮುಕ್ತ ಅವಕಾಶ ದೊರೆಯುತ್ತದೆಯಾದರೂ, ಅವರು ಮಾರುಕಟ್ಟೆಯ ಬಂಧಿಯಾಗಿರುತ್ತಾರೆ. ವ್ಯವಸಾಯೋತ್ಪನ್ನಗಳ ಬೆಲೆಯನ್ನು ಜಾಗತಿಕ ಮಾರುಕಟ್ಟೆ ನಿರ್ಧರಿಸುತ್ತದೆ. ಪೂರ್ವನಿರ್ಧಾರಿತ ದರದಲ್ಲಿ ಮಾರುವಾಗ ರೈತರು ತಮ್ಮ ಲಾಭಾಂಶವನ್ನು ಲೆಕ್ಕಿಸದೆ, ಕೈಸುಟ್ಟುಕೊಳ್ಳಬೇಕಾಗುತ್ತದೆ. ಸಹಜವಾಗಿಯೇ ಸರ್ಕಾರ ಅನುಸರಿಸುತ್ತಿರುವ ಮಾರುಕಟ್ಟೆ ಆರ್ಥಿಕ ನೀತಿಗಳ ವಾತಾವರಣದಲ್ಲಿ ರಿಲೈಯನ್ಸ್, ವಾಲ್ಮಾರ್ಟ್, ಅಂಬಾನಿ, ಅದಾನಿಯಂತಹ ಕಾರ್ಪೋರೇಟ್ ಕುಳಗಳು ಕೃಷಿಮಾರುಕಟ್ಟೆಗೆ ದಾಂಗುಡಿಯಿಡುತ್ತಾರೆ. ಈ ಜಾಗತಿಕ ಮಾರುಕಟ್ಟೆಯ ಪ್ರತಿನಿಧಿಗಳು ಭಾರತದ ಬಡ ರೈತನ ಮೇಲೆ ನೇರವಾದ ಹಿಡಿತ ಸಾಧಿಸುತ್ತಾರೆ. ಶೇ 85ರಷ್ಟು ಸಣ್ಣ ರೈತರನ್ನೇ ಹೊಂದಿರುವ ಭಾರತದಲ್ಲಿ ಇದು ರೈತ ಸಮುದಾಯದ ವಿನಾಶಕ್ಕೆ ಎಡೆಮಾಡಿಕೊಡುತ್ತದೆ. ಕೆಲವೇ ದೊಡ್ಡ ರೈತರಿಗೆ ಇದು ನೆರವಾಗಬಹುದಾದರೂ, ಸಣ್ಣ ಹಿಡುವಳಿದಾರರು, ತಮ್ಮ ಕುಟುಂಬ ನಿರ್ವಹಣೆಗಾಗಿ ವ್ಯವಸಾಯ ಮಾಡುವ ರೈತಾಪಿ ಕುಟುಂಬಗಳು ಬೀದಿ ಪಾಲಾಗುತ್ತವೆ.

ಇದು ಒಂದು ರೀತಿಯಲ್ಲಿ ಗುತ್ತಿಗೆ ಕೃಷಿ ಆಗಿದ್ದು, ಗುತ್ತಿಗೆಯ ಕರಾರಿನಂತೆ ರೈತರು ಪೂರೈಕೆ ಮಾಡಬೇಕಾಗುತ್ತದೆ. ಈ ವಹಿವಾಟುಗಳಲ್ಲಿನ ಯಾವುದೇ ಕುಂದುಕೊರತೆಗಳನ್ನು ಸರ್ಕಾರವೇ ನೇಮಿಸುವ ಒಂದು ಸಮಿತಿ ಅಥವಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮಟ್ಟದಲ್ಲಿ ನಿವಾರಿಸಬಹುದೇ ಹೊರತು, ರೈತನಿಗೆ ಅನ್ಯ ಮಾರ್ಗಗಳಿರುವುದಿಲ್ಲ. ರೈತರಿಗೆ ನ್ಯಾಯಾಂಗದ ಮೊರೆ ಹೋಗುವ ಅವಕಾಶವನ್ನೂ ನೀಡಲಾಗುವುದಿಲ್ಲ. ಸಹಜವಾಗಿಯೇ ಬಂಡವಾಳಶಾಹಿಗಳ ಹಿಡಿತಕ್ಕೆ ಇಡೀ ಕೃಷಿ ಮಾರುಕಟ್ಟೆಯನ್ನು ಒಪ್ಪಿಸಿದಂತಾಗುತ್ತದೆ. ತಾನು ಬೆಳೆದ ಬೆಳೆಯನ್ನು ರೈತನು ಗುತ್ತಿಗೆದಾರರನಿಗೆ ನಿಗದಿತ ದರದಲ್ಲಿ, ನಿಗದಿತ ಗುಣಮಟ್ಟದಲ್ಲಿ ಮಾರಾಟ ಮಾಡಬೇಕಾಗುತ್ತದೆ. ಸರಕನ್ನು ತಿರಸ್ಕರಿಸುವ ಹಕ್ಕು ಗುತ್ತಿಗೆದಾರರಿಗೆ ಸಹಜವಾಗಿಯೇ ಇರುತ್ತದೆ. ಗುಣಮಟ್ಟದ ಕಾರಣಗಳಿಂದಾಗಿ ತಿರಸ್ಕøತವಾಗುವ ವ್ಯವಸಾಯೋತ್ಪನ್ನಗಳು ಸಹಜವಾಗಿಯೇ ಮಾರುಕಟ್ಟೆಯಲ್ಲಿ ಮೌಲ್ಯ ಕಳೆದುಕೊಳ್ಳುತ್ತವೆ. ಈ ಕಾಯ್ದೆ ಮೂಲತಃ ರೈತಾಪಿಯನ್ನು ಗುಲಾಮಗಿರಿಗೆ ತಳ್ಳುವ ಒಂದು ಪ್ರಯತ್ನವೇ ಆಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆ 2020, ಇದು ರೈತರಿಗಷ್ಟೇ ಅಲ್ಲದೆ ಇಡೀ ಜನತೆಯ ಬದುಕಿಗೆ ಸವಾಲಾಗುವಂತಹ ಒಂದು ಕಾಯ್ದೆಯಾಗಿದೆ. ಈ ಮುನ್ನ ಅಗತ್ಯ ಸರಕುಗಳ ಕಾಯ್ದೆಯಡಿ ಕೆಲವು ನಿತ್ಯ ಬಳಕೆಯ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡುವುದಕ್ಕೆ ನಿಬಂಧನೆಗಳಿದ್ದವು. ಸರ್ಕಾರದ ಗೋದಾಮುಗಳಲ್ಲಿ ಅಥವಾ ಸರ್ಕಾರದಿಂದ ಪರವಾನಗಿ ಪಡೆದಿರುವ ಗೋದಾಮುಗಳಲ್ಲಿ ಮಾತ್ರವೇ ಈ ಪದಾರ್ಥಗಳನ್ನು ದಾಸ್ತಾನು ಮಾಡಲು ಅವಕಾಶವಿತ್ತು. ಹಾಗೂ ದಾಸ್ತಾನು ಮಾಡುವ ಸರಕುಗಳ ಪ್ರಮಾಣದ ಮೇಲೂ ನಿರ್ಬಂಧಗಳಿತ್ತು. ನಿಗದಿತ ಪ್ರಮಾಣವನ್ನು ಮೀರಿ ದಾಸ್ತಾನು ಮಾಡುವುದು ಕಾನೂನುಬಾಹಿರವಾಗಿತ್ತು. ಖಾದ್ಯತೈಲ, ಈರುಳ್ಳಿ, ಆಲೂಗಡ್ಡೆ ಮುಂತಾದ ನಿತ್ಯ ಬಳಕೆಯ ವಸ್ತುಗಳು ಈ ಕಾಯ್ದೆಯ ವ್ಯಾಪ್ತಿಗೊಳಪಡುತ್ತವೆ. ಆಲೂಗಡ್ಡೆ ಮಾರುಕಟ್ಟೆಯನ್ನು ಚಿಪ್ಸ್ ತಯಾರಿಕೆಯ ಉದ್ಯಮಗಳ ಒತ್ತಡಕ್ಕೆ ಮಣಿದು ಮುಕ್ತ ಗೊಳಿಸಿದ್ದರಿಂದ ಉಂಟಾದ ವ್ಯತಿರಿಕ್ತ ಪರಿಣಾಮವನ್ನು ಈಗಾಗಲೇ ರೈತರು ಅನುಭವಿಸಿದ್ದಾರೆ. ಈ ಕಾಯ್ದೆಯನ್ನು ಜಾರಿಗೊಳಿಸಿದರೆ, ಯಾವ ಪದಾರ್ಥವೂ ಸಹ ನಿರ್ಬಂಧಕ್ಕೊಳಗಾಗುವುದಿಲ್ಲ. ದಾಸ್ತಾನು ಪ್ರಮಾಣದ ಮೇಲೂ ನಿರ್ಬಂಧ ಇರುವುದಿಲ್ಲ. ಈರುಳ್ಳಿ ಮತ್ತು ಖಾದ್ಯ ತೈಲಗಳು ಖಾಸಗಿ, ಕಾರ್ಪೋರೇಟ್ ಮಾರುಕಟ್ಟೆ ಶಕ್ತಿಗಳ ವಶಕ್ಕೊಳಪಟ್ಟು,  ಖಾಸಗಿ ವಲಯದ ಗೋದಾಮುಗಳಲ್ಲಿ ಅನಿಯಂತ್ರಿತವಾಗಿ ಸಂಗ್ರಹವಾಗುತ್ತವೆ.

ಈ ಕಾಯ್ದೆಯನ್ನು ಜಾರಿಗೊಳಿಸುವ ಮುನ್ನವೇ ಅಂಬಾನಿ ಮೊದಲಾದ ಕಾರ್ಪೋರೇಟ್ ಉದ್ಯಮಿಗಳು ಶೀತಲಾಗಾರಗಳನ್ನು, ಬೃಹತ್ ಪ್ರಮಾಣದ ದಾಸ್ತಾನು  ಗೋದಾಮುಗಳನ್ನು ನಿರ್ಮಿಸಿರುವುದು ವರದಿಯಾಗಿದೆ. ಮಾರುಕಟ್ಟೆಯ ಬೆಲೆಗಳಿಗೆ ಅನುಗುಣವಾಗಿ ಆಹಾರ ಪದಾರ್ಥಗಳು ಬಿಡುಗಡೆಯಾಗುತ್ತವೆ. ವ್ಯವಸಾಯೋತ್ಪನ್ನಗಳ ಮತ್ತು ಆಹಾರ ಪದಾರ್ಥಗಳನ್ನು ತಮ್ಮಿಚ್ಚೆಯಂತೆ ದಾಸ್ತಾನು ಮಾಡಿ, ತಮ್ಮ ಲಾಭಕ್ಕೆ ತಕ್ಕಂತಹ ಬೆಲೆಗಳಿಗೆ ಮಾರುಕಟ್ಟೆಯಲ್ಲಿ ಪೂರೈಸಲು ಕಾರ್ಪೋರೇಟ್ ಉದ್ಯಮಿಗಳಿಗೆ ಮುಕ್ತ ಅವಕಾಶ ದೊರೆಯುತ್ತದೆ. ಇದರಿಂದ ಮಾರುಕಟ್ಟೆ ಶಕ್ತಿಗಳು ಕೃತಕ ಅಭಾವ ಸೃಷ್ಟಿಸಿ, ಬೆಲೆಗಳನ್ನು ಬೇಕಾಬಿಟ್ಟಿ ಏರಿಸುವ ಅವಕಾಶವೂ ಉದ್ಯಮಿಗಳಿಗೆ ಲಭ್ಯವಾಗುತ್ತದೆ. ಅತಿ ಕಡಿಮೆ ಬೆಲೆಗೆ ಗುತ್ತಿಗೆ ಕೃಷಿಯ ಆಧಾರದಲ್ಲಿ ಆಹಾರೋತ್ಪನ್ನಗಳನ್ನು ಖರೀದಿಸುವ ಉದ್ಯಮಿಗಳು, ಮಾರುಕಟ್ಟೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದೇ ಅಲ್ಲದೆ, ಪದಾರ್ಥಗಳನ್ನು ತಮ್ಮ ಗೋದಾಮುಗಳಲ್ಲಿ ಶೇಖರಿಸಿ, ಲಾಭದಾಯಕ ಬೆಲೆಗೆ ಮಾರಾಟ ಮಾಡುವ ಒಂದು ಲೂಟಿಕೋರ ಪದ್ಧತಿಗೆ ಈ ಕಾಯ್ದೆ ನೆರವಾಗುತ್ತದೆ.

ಬೀಜ ಬಿತ್ತನೆಯಿಂದ ಹಿಡಿದು ತನ್ನ ಉತ್ಪನ್ನಗಳು ಗ್ರಾಹಕರಿಗೆ ತಲುಪುವವರೆಗೂ ತನ್ನ ಸಂಪರ್ಕ ಮತ್ತು ಸಂಬಂಧವನ್ನು ಉಳಿಸಿಕೊಳ್ಳುತ್ತಿದ್ದ ರೈತ ಈಗ ತನ್ನ ಹೊಲ ಗದ್ದೆಗಳಲ್ಲೇ ಎಲ್ಲ ಅವಕಾಶಗಳನ್ನೂ ಕಳೆದುಕೊಳ್ಳುತ್ತಾನೆ. ಈ ಮೊದಲೂ ಮಧ್ಯವರ್ತಿಗಳ ಉಪಟಳದಿಂದ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದುದು ವಾಸ್ತವವೇ ಆದರೂ, ಈ ಹೊಸ ಕಾಯ್ದೆಗಳಿಂದ ಸ್ಥಳೀಯ ಮಧ್ಯವರ್ತಿಗಳ ಸ್ಥಾನವನ್ನು ಕಾರ್ಪೋರೇಟ್ ಉದ್ಯಮಿಗಳು ಆಕ್ರಮಿಸಿಕೊಳ್ಳುತ್ತಾರೆ. ಹೆಚ್ಚಿನ ಬಂಡವಾಳ ಮತ್ತು ಅತ್ಯುತ್ತಮ ಮೂಲ ಸೌಕರ್ಯಗಳನ್ನು ಹೊಂದಿರುವ ಬೃಹತ್ ಬಂಡವಾಳದ ಕಾರ್ಪೋರೇಟ್ ಉದ್ದಿಮೆಗಳು ನೆಲದಿಂದ ಮಾರುಕಟ್ಟೆಯವರೆಗೆ ತಮ್ಮ ಹಿಡಿತ ಸಾಧಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ರೈತ ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡು, ಮಾರುಕಟ್ಟೆಯ ಗುಲಾಮಗಿರಿಗೆ ಒಳಗಾಗುತ್ತಾನೆ.

ಇದನ್ನು ಹೊರತುಪಡಿಸಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿದ್ಯುಚ್ಚಕ್ತಿ (ತಿದ್ದುಪಡಿ) ಮಸೂದೆ 2020 ಸಹ ರೈತ ವಿರೋಧಿಯಾಗಿದೆ. ಈ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಈ ವರ್ಷದ ಬಜೆಟ್‍ನಲ್ಲಿ ಘೋಷಿಸಲಾಗಿದ್ದು, ಈಗಾಗಲೇ ಹೊಸ ನಿಯಮಗಳನ್ನು ಜಾರಿಗೊಳಿಸುವ ಸಿದ್ಧತೆಗಳು ನಡೆದಿವೆ. ಈ ಕಾಯ್ದೆಯನ್ವಯ ವಿದ್ಯುತ್ ಪ್ರಸರಣವನ್ನು ಮುಕ್ತಗೊಳಿಸಿ ಖಾಸಗಿ ಉದ್ದಿಮೆಗಳಿಗೂ ವಿದ್ಯುತ್ ಉತ್ಪಾದನೆ, ವಿತರಣೆ ಮತ್ತು ಪ್ರಸರಣದ ಹಕ್ಕುಗಳನ್ನು ನೀಡಲಾಗುತ್ತದೆ. ಈಗಿರುವ ರಾಜ್ಯಾವಾರು ವಿದ್ಯುತ್ ನಿಗಮಗಳಿಗೆ ಹೊಸ ಕಾರ್ಪೋರೇಟ್ ಉದ್ಯಮಿಗಳು ಪ್ರಬಲ ಪ್ರತಿಸ್ಪರ್ಧಿಗಳಾಗುತ್ತಾರೆ. ಗ್ರಾಹಕರಿಗೆ ವಿದ್ಯುತ್ ಸರಬರಾಜುದಾರರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನೂ ನೀಡಲಾಗುತ್ತದೆ. ಇದು ವಿದ್ಯುಚ್ಚಕ್ತಿ ಕ್ಷೇತ್ರವನ್ನು ಹಂತಹಂತವಾಗಿ ಖಾಸಗೀಕರಣಗೊಳಿಸುವ ಪ್ರಥಮ ಹೆಜ್ಜೆಯಾಗಿದೆ ಎಂದು ಹೇಳಬೇಕಿಲ್ಲ. ಈ ಕಾಯ್ದೆ ಜಾರಿಯಾದರೆ ಕ್ರಮೇಣ ಖಾಸಗಿ ವಿದ್ಯುತ್ ಉದ್ದಿಮೆಗಳು ಮಾರುಕಟ್ಟೆಗೆ ಪೂರಕವಾದಂತಹ ನೀತಿಗಳನ್ನು ಅನುಸರಿಸುತ್ತವೆ. ವಾಣಿಜ್ಯೋದ್ಯಮಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಗೃಹ ಬಳಕೆಯ ವಿದ್ಯುತ್ ದರಗಳು ಗಗನಕ್ಕೇರುತ್ತವೆ. ವಿದ್ಯುತ್ ಶುಲ್ಕದ ಮೇಲೆ ಯಾವುದೇ ನಿಯಂತ್ರಣವಿಲ್ಲದೆ ಮಾರುಕಟ್ಟೆಯ ವ್ಯಾಪ್ತಿಗೊಳಪಡುತ್ತದೆ. ಕ್ರಮೇಣವಾಗಿ ರೈತರಿಗೆ ನೀರಾವರಿ ಪಂಪ್‍ಸೆಟ್‍ಗಳಿಗಾಗಿ ಈಗ ನೀಡಲಾಗುತ್ತಿರುವ ಉಚಿತ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುತ್ತದೆ. ಪಂಪ್‍ಸೆಟ್ ನೀರಾವರಿಯನ್ನೇ ಅವಲಂಬಿಸಿದ ರೈತರು ಮತ್ತೊಮ್ಮೆ ಕಾರ್ಪೋರೇಟ್ ಗುಲಾಮಗಿರಿಗೆ ಒಳಗಾಗುವಂತಾಗುತ್ತದೆ.

ಕೃಷಿ ವಲಯವನ್ನು ಖಾಸಗೀಕರಣಗೊಳಿಸುವ ಮತ್ತು ಕಾರ್ಪೋರೇಟ್ ಬಂಡವಾಳಕ್ಕೆ ಕೃಷಿಯಲ್ಲಿ ಮುಕ್ತವಾಗಿ ಪ್ರವೇಶಿಸಲು ಅವಕಾಶ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಕರ್ನಾಟಕವನ್ನೂ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಭೂ ಸುಧಾರಣಾ (ತಿದ್ದುಪಡಿ) ಮಸೂದೆಗಳನ್ನು ಜಾರಿಗೊಳಿಸಿವೆ. ಕರ್ನಾಟಕದಲ್ಲಿ ಜಾರಿಗೊಳಿಸಲಾಗಿರುವ ನೂತನ ಭೂ ಸುಧಾರಣಾ ಕಾಯ್ದೆಯಲ್ಲಿ ಹಲವು ಮಾರಕ ತಿದ್ದುಪಡಿಗಳನ್ನು ಮಾಡಲಾಗಿದೆ. ಹಳೆಯ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79ಎ ಅನ್ವಯ ಕೃಷಿ ಭೂಮಿಯನ್ನು ಖರೀದಿಸುವವರ ವಾರ್ಷಿಕ ಆದಾಯ 25 ಲಕ್ಷ ರೂಗಳಿಗೂ ಕಡಿಮೆ ಇರಬೇಕಿತ್ತು. ಮತ್ತು ಸೆಕ್ಷನ್ 79ಬಿ ಅನ್ವಯ ಕೃಷಿಯನ್ನೇ ಅವಲಂಬಿಸಿರುವವರು ಮಾತ್ರವೇ ಕೃಷಿ ಭೂಮಿಯನ್ನು ಖರೀದಿಸಬಹುದಿತ್ತು. ಈ ಎರಡೂ ನಿಯಮಗಳನ್ನು ಈಗ ಅಸಿಂಧುಗೊಳಿಸಲಾಗಿದ್ದು, ಯಾವುದೇ ಕಾರ್ಪೋರೇಟ್ ಉದ್ಯಮಿಯೂ ಸಹ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಖರೀದಿಸಬಹುದಾದ ಕೃಷಿಭೂಮಿಯ ಪ್ರಮಾಣವನ್ನೂ ತಿದ್ದುಪಡಿ ಮಾಡಲಾಗಿದ್ದು ನೂತನ ಕಾಯ್ದೆಯನ್ವಯ ಕುಟುಂಬದ ಒಬ್ಬ ವ್ಯಕ್ತಿ 216 ಎಕರೆ ಕೃಷಿ ಭೂಮಿಯನ್ನು ಹೊಂದಿರಬಹುದಾಗಿದೆ. ಇದು ದೊಡ್ಡ ಭೂಮಾಲೀಕರಿಗೆ ನೆರವಾಗುವುದೇ ಅಲ್ಲದೆ ಕಾರ್ಪೋರೇಟ್ ಉದ್ಯಮಿಗಳು ನೂತನ ಭೂಮಾಲೀಕ ವರ್ಗಗಳಾಗಿ ರೂಪುಗೊಳ್ಳಲು ನೆರವಾಗುತ್ತದೆ.

ಮೂರು ಕರಾಳ ಕೃಷಿ ಮಸೂದೆಗಳಿಗೆ ಪೂರಕವಾಗಿ ವಿದ್ಯುತ್ ಪ್ರಸರಣ ಮತ್ತು ಭೂ ಸುಧಾರಣಾ ಮಸೂದೆಗಳನ್ನೂ ಜಾರಿಗೊಳಿಸಲಾಗುತ್ತಿದ್ದು ಈ ಎಲ್ಲ ಕಾಯ್ದೆಗಳು ಪರಸ್ಪರ ಕೊಂಡಿಯಂತೆ ದೇಶದ ರೈತರನ್ನು ಗುಲಾಮಗಿರಿಗೆ ತಳ್ಳುತ್ತವೆ. ಈ ಕಾರಣಗಳಿಗಾಗಿಯೇ ರೈತ ಸಂಘಟನೆಗಳು ಈ ಕಾಯ್ದೆಗಳನ್ನು ವಿರೋಧಿಸಿ ಹೋರಾಡುತ್ತಿವೆ.

ರೈತ ಮುಷ್ಕರಕ್ಕೆ ಕಾರಣವಾದ ಆಡಳಿತನೀತಿಗಳು

ನರೇಂದ್ರ ಮೋದಿ ಸರ್ಕಾರ ಕೋವಿದ್ ಸಂಕಷ್ಟದ ನಡುವೆಯೇ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವುದಕ್ಕೆ ಪೂರ್ವಭಾವಿಯಾಗಿ ನೆರವಾದದ್ದು 2004ರಿಂದಲೂ ಸರ್ಕಾರಗಳು ಅನುಸರಿಸಿಕೊಂಡು ಬಂದ ಕೃಷಿ ನೀತಿ. 1995ರಿಂದ ಈವರೆಗೆ ಮೂರೂವರೆ ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಕೇವಲ ಸಾಲದ ಹೊರೆಯಿಂದಲ್ಲ ಅಥವಾ ಜೀವನದ ಮೇಲಿನ ಜಿಗುಪ್ಸೆಯಿಂದಲ್ಲ. ಕೃಷಿ ವಲಯದಲ್ಲಿ ಸರ್ಕಾರದ ಬಂಡವಾಳ ಹೂಡಿಕೆ ಕುಸಿಯುತ್ತಿರುವಂತೆಯೇ, ರಸಗೊಬ್ಬರ, ಬೀಜ ಮತ್ತು ಇತರ ಕೃಷಿ ಉಪಕರಣಗಳ ಉತ್ಪಾದನೆ, ವಿತರಣೆ ಮತ್ತು ಮಾರಾಟವನ್ನು ಖಾಸಗೀ ಕಾರ್ಪೋರೇಟ್ ಉದ್ಯಮಿಗಳಿಗೆ ವಹಿಸಿದ್ದೂ ಸಹ ರೈತರ ಸಂಕಷ್ಟಗಳಿಗೆ ಕಾರಣವಾಗಿತ್ತು. ಆಂಧ್ರದಲ್ಲಿ ಹತ್ತಿ ಬೆಳೆಗಾರರು, ಮಹಾರಾಷ್ಟ್ರದಲ್ಲಿ ಕಬ್ಬು ಬೆಳೆಗಾರರು, ವಿಶೇಷವಾಗಿ ವಿದರ್ಭ ಪ್ರಾಂತ್ಯದ ಬೆಳೆಗಾರರು ತಮ್ಮ ಉತ್ಪಾದನೆಯ ವೆಚ್ಚವನ್ನೂ ಭರಿಸಲಾರದೆ, ಬ್ಯಾಂಕುಗಳಿಂದ, ಲೇವಾದೇವಿಗಾರರಿಂದ ಪಡೆದ ಸಾಲಗಳನ್ನು ಮರುಪಾವತಿ ಮಾಡಲಾಗದೆ ಆತ್ಮಹತ್ಯೆಯ ಹಾದಿ ಹಿಡಿದಿದ್ದರು.

ಕೃಷಿ ವಲಯಕ್ಕೆ ಬ್ಯಾಂಕಿಂಗ್ ಕ್ಷೇತ್ರದ ಮೂಲಕ ಒದಗಿಸಲಾದ ಸಾಂಸ್ಥಿಕ ಸಾಲಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಣ್ಣ, ಅತಿಸಣ್ಣ ರೈತರು ಖಾಸಗಿ ಲೇವಾದೇವಿಗಾರರಿಂದ ಸಾಲ ಪಡೆಯುತ್ತಿರುವುದು ಇಂದಿಗೂ ವಾಸ್ತವ. ಏಕೆಂದರೆ ಬ್ಯಾಂಕ್ ಸಾಲಗಳು ಒಂದು ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾಗಿಲ್ಲ. ಆರ್‍ಬಿಐ ನೀಡುವ ಕೃಷಿ ಸಾಲ ವಿತರಣೆಯ ಟಾರ್ಗೆಟ್ ತಲುಪುವುದರಲ್ಲಿ ಉತ್ಸುಕರಾಗಿದ್ದ ಬ್ಯಾಂಕುಗಳು ರೈತರಿಗೆ ಅಗತ್ಯವಾದ ಚಟುವಟಿಕೆಗಳಿಗೆ, ಅವಶ್ಯವಾದಷ್ಟು ಹಣಕಾಸು ಪೂರೈಸುವುದರಲ್ಲಿ ಸಂಪೂರ್ಣ ವಿಫಲವಾಗಿರುವುದರಿಂದಲೇ ರೈತರು ಖಾಸಗಿ ಲೇವಾದೇವಿಗಾರ ಮೊರೆ ಹೋಗಬೇಕಾಯಿತು. ಸಾಂಸ್ಥಿಕ ಸಾಲಗಳ ಮರುಪಾವತಿ ಮಾಡಲು ರೈತರಿಗೆ ತಾವು ಬೆಳೆದ ಫಸಲಿಗೆ ಸೂಕ್ತ , ಲಾಭದಾಯಕ ಮಾರುಕಟ್ಟೆ ಬೆಲೆ ದೊರೆಯುವುದೂ ಅವಶ್ಯ. ಆದರೆ ರೈತರ ಬೆಳೆಗೆ ಸಮರ್ಪಕವಾದ ಬೆಲೆ ದೊರೆಯದೆ, ಹಣಕಾಸು ಹೊರೆ ತಾಳಲಾರದೆ ರೈತರು ಆತ್ಮಹತ್ಯೆಗೆ ಶರಣಾಗಬೇಕಾಯಿತು.

ದುರಂತ ಎಂದರೆ ಯಾವುದೇ ಸರ್ಕಾರಗಳೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅಥವಾ ಈ ದಾರುಣ ಆತ್ಮಹತ್ಯೆಗಳ ಮೂಲ ಕಾರಣಗಳನ್ನು ಶೋಧಿಸಲೂ ಮುಂದಾಗಲಿಲ್ಲ. ಕೃಷಿ ತಜ್ಞರು, ಕೆಲವು ಸಂಶೋಧಕರು ನೀಡಿದ ಅಮೂಲ್ಯ ಸಲಹೆಗಳನ್ನೂ ತಿರಸ್ಕರಿಸಿದ ಆಳುವ ವರ್ಗಗಳು, ರೈತರ ಸಂಕಷ್ಟಗಳಿಗೆ, ಕೃಷಿ ಬಿಕ್ಕಟ್ಟಿಗೆ ಕಾರಣವಾಗಿರಬಹುದಾದ ಅಂಶಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅಧ್ಯಯನ ಮಾಡುವ ಪ್ರಯತ್ನಗಳನ್ನೂ ಮಾಡದಿರುವುದು, ಭಾರತದ ಆಡಳಿತ ವ್ಯವಸ್ಥೆಯ ಅಸೂಕ್ಷ್ಮತೆಯನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲೇ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ನೇಮಿಸಿ ಸ್ವಾಮಿನಾಥನ್ ಆಯೋಗ ನೀಡಿದ್ದ ಶಿಫಾರಸುಗಳು ಅಮೂಲ್ಯವಾಗಿದ್ದವು. ಭಾರತದ ಕೃಷಿ ಬಿಕ್ಕಟ್ಟಿಗೆ ಹಲವು ಪರಿಹಾರ ಮಾರ್ಗಗಳನ್ನು ಸ್ವಾಮಿನಾಥನ್ ಆಯೋಗ ಸೂಚಿಸಿತ್ತು. ಈ ಶಿಫಾರಸುಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದ್ದಲ್ಲಿ, ಕೃಷಿ ಬಿಕ್ಕಟ್ಟು ನಿವಾರಿಸುವ ಹಾದಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಬಹುದಿತ್ತು.

ಆದರೆ 2014ರಲ್ಲಿ ಕಾರ್ಪೋರೇಟ್ ಕೃಪಾಕಟಾಕ್ಷದಿಂದಲೇ, ನವ ಉದಾರವಾದಿ ಆರ್ಥಿಕ ನೀತಿಗಳನ್ನು ಮತ್ತಷ್ಟು ಬಲಪಡಿಸುವ ಸಲುವಾಗಿಯೇ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಆಯ್ಕೆ ಮಾಡಿಕೊಂಡಿದ್ದು ರೈತ ವಿರೋಧಿ ಮಾರ್ಗಗಳನ್ನು. ಮೂರು ಕರಾಳ ಕೃಷಿ ಕಾಯ್ದೆಗಳ ಮಾದರಿಯನ್ನು  2017ರಲ್ಲೇ ಹಲವು ರಾಜ್ಯಗಳಲ್ಲಿ ಜಾರಿಗೊಳಿಸಲಾಗಿತ್ತು. ಈ ನೀತಿಗಳ ವಿರುದ್ಧ ಆಗಸ್ಟ್ 2020ರಲ್ಲೇ ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ರೈತರ ಪ್ರತಿಭಟನೆ ಆರಂಭವಾಗಿತ್ತು. ಸೆಪ್ಟಂಬರ್ 25ರಂದು ಭಾರತ್ ಬಂದ್ ಆಚರಿಸಲಾಯಿತು. ಜುಲೈ 2020ರಲ್ಲಿ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ರೈತರು ಬೃಹತ್ ಮುಷ್ಕರ ಹೂಡಿದ್ದರು. 2017ರಲ್ಲೇ ತಮಿಳುನಾಡಿನ ರೈತರು ಸಾಲದ ಹೊರೆ ಮತ್ತು ಬರಗಾಲದ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ದೆಹಲಿಯಲ್ಲಿ 107 ದಿನಗಳ ಮುಷ್ಕರವನ್ನು ಹೂಡಿದ್ದರು. ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ತಮಿಳುನಾಡು ರೈತರು ಬೆತ್ತಲೆ ಮೆರವಣಿಗೆಯನ್ನೂ ಮಾಡಿದ್ದರು.

ರೈತರ ಈ ಸಣ್ಣ ಮಟ್ಟದ ಹಲವು ಪ್ರತಿಭಟನೆಗಳನ್ನೂ ಲೆಕ್ಕಿಸದೆ ನರೇಂದ್ರ ಮೋದಿ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆಯ ಮೂಲಕ  ಜಾರಿಗೊಳಿಸಿದ್ದು ಇಡೀ ರೈತ ಸಮುದಾಯವನ್ನು ಬಡಿದೆಬ್ಬಿಸಿತ್ತು. ಸರ್ಕಾರದ ಆಡಳಿತ ನೀತಿಗಳು ತಮ್ಮ ಮೂಲ ವೃತ್ತಿಗೇ ಸಂಚಕಾರ ತರುವುದನ್ನು ಅರಿತ ರೈತರಿಗೆ ಈ ಸಂದರ್ಭದಲ್ಲಿ ಮುಂದಾಳತ್ವ ನೀಡಿದ್ದು ಪಂಜಾಬಿನ ರೈತರು. ಪಂಜಾಬ್ ಎಂದ ಕೂಡಲೇ ಶ್ರೀಮಂತ ರೈತರ ರಾಜ್ಯ ಎಂಬ ಹುಸಿ ನಂಬಿಕೆಯಲ್ಲಿ ಇಡೀ ದೇಶವೇ ಇದ್ದ ಸಂದರ್ಭದಲ್ಲಿ, ಅಲ್ಲಿನ ಸಣ್ಣ, ಮಧ್ಯಮ ಮತ್ತು ಅತಿಸಣ್ಣ ರೈತರೂ ಸಾಲದ ಸುಳಿಯಲ್ಲಿ ಸಿಲುಕಿರುವುದನ್ನು ಎತ್ತಿ ತೋರಿಸಿದ್ದು ನವಂಬರ್ 26ರಂದು ಆರಂಭವಾದ ರೈತ ಮುಷ್ಕರ. ಸೆಪ್ಟಂಬರ್ 2020ರಲ್ಲಿ ಕೇಂದ್ರ ಸರ್ಕಾರದ ಮೂರು ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ಮತ್ತು ರಾಷ್ಟ್ರಪತಿಗಳ ಅಂಕಿತ ದೊರೆತಿದ್ದು, ಕೃಷಿ ವಲಯದಲ್ಲಿ ಕಾರ್ಪೋರೇಟ್ ಪ್ರವೇಶಕ್ಕೆ ಬಾಗಿಲು ತೆರೆದಂತಾಗಿತ್ತು.  ನೂತನ ಕೃಷಿ ಕಾಯ್ದೆಗಳಲ್ಲಿ ಕನಿಷ್ಠ ಬೆಂಬಲ ಬೆಲೆಯ ಪ್ರಸ್ತಾಪವೇ ಇಲ್ಲದಿದ್ದುದೂ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕೇಂದ್ರ ಕೃಷಿ ಸಚಿವರಿಂದ ಸಮಾಧಾನಕರ ಉತ್ತರ ಬರದೆ ಇರುವ ಕಾರಣ ರೈತರ ಪ್ರತಿಭಟನೆ ಮತ್ತಷ್ಟು ತೀವ್ರತೆ ಪಡೆದುಕೊಂಡಿತ್ತು.

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ಗೆಲುವು ನಮ್ಮದೇನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಮೈಮರೆಯುವಂತಿಲ್ಲಸಿದ್ದರಾಮಯ್ಯ
Previous Post

ನವೆಂಬರ್ 26ರಿಂದ ಏರ್ಟೆಲ್ ಮೊಬೈಲ್ ಕರೆ, ಡೇಟಾ ದರ ಶೇ.25ರಷ್ಟು ಏರಿಕೆ

Next Post

ಮೈಸೂರು : ಸಿದ್ದರಾಮಯ್ಯ ಚಾಮುಂಡೇಶ್ರಿವರಿ ಕಾಂಗ್ರೆಸ್ ಕಾರ್ಯಕರ್ತರಿಗೆ ರೇಗುತ್ತಾರೆ : ಎಚ್‌.ಡಿ. ಕುಮಾರ್‌ ಸ್ವಾಮಿ

Related Posts

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 
Top Story

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

by Chetan
July 11, 2025
0

ರಾಜ್ಯದಲ್ಲಿ ಸಿಎಂ ಪವರ್ ಶೇರಿಂಗ್ (Cm power sharing) ಹಗ್ಗ ಜಗ್ಗಾಟ ಜೋರಾಗಿದ್ದು, ಕಾಂಗ್ರೆಸ್ (Congress) ಪಾಳಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ಗರಿಗೆದರಿವೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ...

Read moreDetails
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

July 10, 2025

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

July 10, 2025
Next Post
ಮೈಸೂರು : ಸಿದ್ದರಾಮಯ್ಯ ಚಾಮುಂಡೇಶ್ರಿವರಿ ಕಾಂಗ್ರೆಸ್ ಕಾರ್ಯಕರ್ತರಿಗೆ ರೇಗುತ್ತಾರೆ : ಎಚ್‌.ಡಿ. ಕುಮಾರ್‌ ಸ್ವಾಮಿ

ಮೈಸೂರು : ಸಿದ್ದರಾಮಯ್ಯ ಚಾಮುಂಡೇಶ್ರಿವರಿ ಕಾಂಗ್ರೆಸ್ ಕಾರ್ಯಕರ್ತರಿಗೆ ರೇಗುತ್ತಾರೆ : ಎಚ್‌.ಡಿ. ಕುಮಾರ್‌ ಸ್ವಾಮಿ

Please login to join discussion

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 
Top Story

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

by Chetan
July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

July 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada