ಹಿಂದುಳಿದ ಜಿಲ್ಲೆಯೊಂದರ ಪುಟ್ಟ ತಾಲೂಕಿನ 58 ಗ್ರಾಮಗಳ ಜನತೆ ನೀರಾವರಿ ಕಾಲುವೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ನವೆಂಬರ್ 20ರಂದು ಒಂದು ವರ್ಷ ತುಂಬಲಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ 58 ಗ್ರಾಮಗಳು ಸತತ ಒಂದು ವರ್ಷದಿಂದ ನೀರಾವರಿ ನಾಲೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಯೋಜನೆ ಅನುಷ್ಠಾನವಾದರೆ 107 ಗ್ರಾಮಗಳ 1 ಲಕ್ಷ 20 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ,
ರಾಜಕೀಯ ನಾಯಕರು ಮತ್ತು ಅಧಿಕಾರಿಗಳ ಭರವಸೆಗಳಲ್ಲಿ ಇವರಿಗೆ ನಂಬಿಕೆ ಇಲ್ಲ. ಯೋಜನೆ ಅನುಷ್ಠಾನ ಆರಂಭವಾದ ನಂತರವಷ್ಟೇ ಹೋರಾಟ ಅಂತ್ಯ ಮಾಡಲಿದ್ದಾರೆ. ಸದ್ಯ ಕೃಷಿ ಕಾರ್ಯಗಳನ್ನು ಮಾಡುತ್ತಲೇ ಹಳ್ಳಿ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುತ್ತಿದ್ದಾರೆ.
ಅದರಂತೆ ದೆಹಲಿಯಲ್ಲಿ ನಡೆದಿರುವ ರೈತ ಮಾದರಿ ಹೋರಾಟಕ್ಕೂ ಒಂದು ವಾರ ಮುಂಚೆ ಮಸ್ಕಿ ಹೋರಾಟ ಶುರುವಾಗಿತ್ತು.
ಐದು ತಿಂಗಳ ಹಿಂದೆ ನಡೆದ ಮಸ್ಕಿ ಉಪ ಚುನಾವಣೆಯ ಫಲತಾಂಶದ ಮೇಲೆ ಈ ಹೋರಾಟ ಪ್ರಭಾವ ಬೀರಿತು. ʼಬಿಜೆಪಿಯನ್ನು ಸೋಲಿಸಿʼ ಎಂದು ಪ್ರತಿಭಟನಾಕಾರರು ಜನರಲ್ಲಿ ಮನವಿ ಮಾಡಿದರು. ಬಿಜೆಪಿಯ ಪ್ರತಾಪಗೌಡ ಪಾಟೀಲರು ನೀರಾವರಿ ನಾಲೆ ಸ್ಥಾಪಿಸಲು ಅಡ್ಡಿಯಾಗಿದ್ದನ್ನು ಜನರಿಗೆ ಮನವರಿಕೆ ಮಾಡಲಾಗಿತು. ಇದರ ಪರಿಣಾಮ ಕ್ಷೇತ್ರದ ಎಲ್ಲ ಕಡೆಯೂ ಸಂಚಲನ ಮೂಡಿದ್ದರಿಂದ, ಸಾಕಷ್ಟು ಹಣ-ಹೆಂಡ ಹರಿಸಿಯೂ,,ಸಚಿವರ ದಂಡೇ ನೆರೆದಿದ್ದರೂ ಬಿಜೆಪಿಗೆ ಸೋಲಾಗಿತು.
ಏನಿದು ಹೋರಾಟ?
ಕೃಷ್ಣಾ ಬಲದಂಡೆ ಯೋಜನೆಯಲ್ಲಿ (ಯುಕೆಪಿ) ಆಲಮಟ್ಟಿಯಲ್ಲಿ ಬೃಹತ್ ಡ್ಯಾಮ್ ನಿರ್ಮಿಸಲಾಗಿದೆ. ಕಲಬುರ್ಗಿ-ವಿಜಯಪುರದ ಗಡಿಗಳ ಸಮೀಪ ನಾರಾಯಣಪುರ ಎಂಬಲ್ಲಿ ಬಸವ ಜಲಾಶಯ ನಿರ್ಮಿಸಲಾಗಿದೆ. ನಾರಾಯಣಪುರ ಬಲದಂಡೆ ಕಾಲುವೆ ಯೋಜನೆಯಡಿ ಹಲವು ಕಾಲುವೆಗಳನ್ನು ನಿರ್ಮಿಸಿ, ನೂರಾರು ಹಳ್ಳಿಗಳ ಭೂಮಿಗೆ ಕಾಲುವೆ ಮೂಲಕ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.
ಈಗ ಮಸ್ಕಿ ಹೋರಾಟಗಾರರು ಎನ್‌ಆರ್‌ಬಿಸಿ-5A ನಾಲೆ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದಾರೆ. ಈ ಬೇಡಿಕೆ 12 ವರ್ಷಗಳಿಂದ ಇದ್ದರೂ ಯಾವ ಸರ್ಕಾರವೂ ಯೋಜನೆಯ ಸಾಕಾರಕ್ಕೆ ಶ್ರಮಿಸಲೇ ಇಲ್ಲ. ಕಳೆದ ವರ್ಷ ನವೆಂಬರ್ 20ರಿಂದ ಎನ್‌ಆರ್‌ಬಿಸಿ-5A ಪಾಮನಕಲ್ಲೂರು ಕಾಲುವೆ ಹೋರಾಟ ಸಮಿತಿ ಕರ್ನಾಟಕ ನೀರಾವರಿ ಸಂಘಗಳ ಆಶ್ರಯದಲ್ಲಿ ರೈತರು ಹೋರಾಟ ಆರಂಭಿಸಿದರು.
2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ಯೋಜನೆ ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದ್ದ ಯಡಿಯೂರಪ್ಪ ಬಿಜೆಪಿ ಪ್ರಣಾಳಿಕೆಯಲ್ಲೂ ಇದನ್ನು ಸೇರಿಸಿದ್ದರು. ಮುಂದೆ ಸಮ್ಮಿಶ್ರ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರ್ಕಾರ ಈ ಯೋಜನೆಗೆ ಗಮನ ನೀಡಲೇ ಇಲ್ಲ. ಹೋರಾಟ ಸಮಿತಿಯವರು ಸುಮಾರು 12-13 ಸಲ ನಿಯೋಗ ಒಯ್ದು ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಬೊಮ್ಮಾಯಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಇಲ್ಲಿ ಕಾಂಗ್ರೆಸ್‌ನಿಂದ ಎಂಎಲ್‌ಎ ಆಗಿ ಆಪರೇಷನ್ ಕಮಲದಲ್ಲಿ ಬಿಜೆಪಿ ಪಾಲಾಗಿ ಶಾಸಕತ್ವ ಕಳೆದುಕೊಂಡಿದ್ದ ಪ್ರತಾಪಗೌಡ ಪಾಟೀಲರು ಎಂದೂ ಈ ಹೋರಾಟದ ಪರ ಪ್ರಾಮಾಣಿಕವಾಗಿ ನಿಲ್ಲಲಿಲ್ಲ. ಅವರಿಗೆ ಈ ನಾಲಾ ಯೋಜನೆಗಿಂತ ಸಾವಿರಾರು ಕೋಟಿ ರೂ. ವೆಚ್ಚದ ವಟಕಲ್ ಬಸವಣ್ಣ ಏತ ನೀರಾವರಿ ಬಗ್ಗೆ ಆಸಕ್ತಿಯಿತ್ತು.
ಉಪಚುನಾವಣೆಯಲ್ಲಿ ಬಿಜೆಪಿಗೆ ಪಾಠ
ಪ್ರಚಾರದ ವೇಳೆ ಹೋರಾಟದ ಸ್ಥಳಕ್ಕೆ ಬಂದ ಸಚಿವ ಶ್ರೀರಾಮುಲು ಅವರನ್ನು ಜನರು ತರಾಟೆಗೆ ತೆಗೆದುಕೊಂಡರು. ಪ್ರತಾಪಗೌಡ ಪರವಾಗಿ ಶ್ರೀರಾಮುಲು ಕ್ಷಮೆ ಕೇಳಿದರ ಜನರು ಅವರಿಗೆ ಸ್ಪಂದಿಸದೇ ವಾಪಾಸ್ ಕಳಿಸಿದರು.
ಹೋರಾಟಗಾರರನ್ನು ಭೇಟಿಯಾದ ಸಿದ್ದರಾಮಯ್ಯ ಮಾತ್ತು ಡಿ.ಕೆ. ಶಿವಕುಮಾರ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, 3 ಸಾವಿರ ಕೋಟಿ ರೂ.ವೆಚ್ಚದಲ್ಲಿ ಯೋಜನೆ ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದರು. ಅಂತಿಮದಲ್ಲಿ ಬಿಜೆಪಿ 14 ಸಾವಿರ ಮತಗಳಿಂದ ಸೋತಿತು.
ಈಗಲೂ ಹೋರಾಟ ನಿಂತಿಲ್ಲ. ದೆಹಲಿ ಹೋರಾಟದ ಮಾದರಿಯಲ್ಲೇ ಇಲ್ಲೂ ಯೋಜನೆ ಅನುಷ್ಠಾನ ಆಗುವವರೆಗೂ ಹೋರಾಟ ಮುಂದುವರೆಸಲು ನಿರ್ಧರಿಸಲಾಗಿದೆ.
ಸದ್ಯ ತಿಮ್ಮನಗೌಡ ಚಿಲಕರಾಗಿ, ನಾಗರಡ್ಡೆಪ್ಪ ತಿಮ್ಮರೆಡ್ಡಿ, ಬಸವರಾಜಪ್ಪಗೌಡ ಹರಾಪೂರ, ನಾಗರಡೆಪ್ಪ ದೇವರೂರು, ಶಿವನಗೌಡ ವಟಗಲ್ ಹೋರಾಟದ ನಾಯಕತ್ವ ವಹಿಸಿದ್ದಾರೆ.
ಪಾಮನಕಲ್ಲೂರು, ವಟಗಲ್, ಅಮಿನಗಡ, ಚಿಲಕರಾಗಿ, ಅಂಕುಶದೊಡ್ಡಿ ಮುಂತಾದ 58 ಗ್ರಾಮಗಳ ಜನತೆ ಪಾಳಿ ರೂಪದಲ್ಲಿ ಭಾಗಿಯಾಗುತ್ತಿದ್ದಾರೆ.
ಒಂದು ವರ್ಷ ಮುಗಿಯುವ ಸಂದರ್ಭದಲ್ಲಿ ದೆಹಲಿ ರೈತ ನಾಯಕರು ಇಲ್ಲಿಗೆ ಭೇಟಿ ನೀಡಲಿದ್ದಾರೆ.