• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ನೋಟಿಗೊಂದು ವೋಟು-ವೋಟಿಗೊಂದು ನೋಟ

ನಾ ದಿವಾಕರ by ನಾ ದಿವಾಕರ
May 7, 2023
in ಅಂಕಣ
0
ನೋಟಿಗೊಂದು ವೋಟು-ವೋಟಿಗೊಂದು ನೋಟ
Share on WhatsAppShare on FacebookShare on Telegram

ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಮೌಲ್ಯೀಕರಣಕ್ಕೊಳಗಾಗುತ್ತವೆ-ವೋಟು ಸಹ

ADVERTISEMENT

ನಾ ದಿವಾಕರ

ಇನ್ನು ಮೂರು ವಾರಗಳಲ್ಲಿ ಕರ್ನಾಟಕದ ರಾಜಕಾರಣ ಹೊಸದಿಕ್ಕಿನತ್ತ ಹೊರಳಿರುತ್ತದೆ. ಅಧಿಕಾರ ಹಸ್ತಾಂತರವಾಗುವುದೋ ಯಥಾಸ್ಥಿತಿಯಲ್ಲಿ ಮುಂದುವರೆಯುವುದೋ ಎನ್ನುವುದು ಮತದಾರ ಪ್ರಭುಗಳ ಅಂತಿಮ ತೀರ್ಮಾನವನ್ನು ಅವಲಂಬಿಸಿರುತ್ತದೆ. ವಯಸ್ಕ ಮತದಾನ ಪದ್ಧತಿ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ನಿರ್ಣಾಯಕವಾಗುತ್ತಾರೆ. ಸರ್ಕಾರಗಳನ್ನು ಪಲ್ಲಟಗೊಳಿಸುವ, ಪದಚ್ಯುತಗೊಳಿಸುವ ಸಾಂವಿಧಾನಿಕ ಹಕ್ಕು ಮತ್ತು ಅಧಿಕಾರವನ್ನು ಮತದಾರರು ಪಡೆದಿದ್ದಾರೆ. ಒಂದು ಮತಕ್ಕೆ ಒಂದೇ ಮೌಲ್ಯ ಎಂಬ ಉದಾತ್ತ ನೀತಿಯ ಅನುಸಾರ ಭಾರತದ ಸಂವಿಧಾನ ಮತದಾನ ವ್ಯವಸ್ಥೆಗೆ ಒಂದು ಉನ್ನತ ಸ್ಥಾನವನ್ನು ನೀಡಿದೆ. ತಮ್ಮ ಪಕ್ಷಕ್ಕೆ ವೋಟುಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು ಮಾಡುವ ಕಸರತ್ತುಗಳು, ನೀಡುವ ಭರವಸೆಗಳು, ಸೃಷ್ಟಿಸುವ ಭ್ರಮಾಲೋಕಗಳು ಮತ್ತು ಒಡ್ಡುವ ಆಮಿಷದ ಸರಕುಗಳು ಮತದಾರನ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸುವುದೂ ವಾಸ್ತವ. ಪ್ರಜಾಪ್ರಭುತ್ವದ ಮೂಲ ಬೇರುಗಳು ಇನ್ನೂ ಸಡಿಲವಾಗಿಯೇ ಇರುವ ಭಾರತೀಯ ಸಮಾಜದಲ್ಲಿ ಬಹುಸಂಖ್ಯೆಯ ಜನತೆಗೆ ಸಂವಿಧಾನ-ಮತದಾನ ಮತ್ತು ತತ್ಸಂಬಂಧಿ ಪ್ರಜಾಸತ್ತಾತ್ಮಕ ಮೌಲ್ಯಗಳ ಪರಿಚಯ ಇನ್ನೂ ಆಗಿಲ್ಲ ಎಂಬ ವಾಸ್ತವಿಕ ಜಾಗ್ರತೆಯೊಂದಿಗೇ ನಾವು ಮತದಾನ ವ್ಯವಸ್ಥೆಯನ್ನೂ ಪರಾಮರ್ಶಿಸಬೇಕಾಗುತ್ತದೆ.

ಈ ಬೌದ್ಧಿಕ ಚಿಂತನ ಮಂಥನಗಳ ನಡುವೆ, ವಾಸ್ತವ ಸನ್ನಿವೇಶಗಳಲ್ಲಿ ನಾವು ಕಾಣುತ್ತಿರುವ ದೃಶ್ಯ ನಿಜಕ್ಕೂ ಯಾವುದೇ ಪ್ರಜಾತಂತ್ರ ಪ್ರೇಮಿಯ ಮನಸ್ಸನ್ನು ಪ್ರಕ್ಷುಬ್ಧಗೊಳಿಸುವುದು ಸಹಜ. ಏಕೆಂದರೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ನಿರ್ಣಾಯಕ ಹಕ್ಕು ಹೊಂದಿರುವ ಪ್ರಜೆಗಳು ತಮ್ಮ ಆದ್ಯತೆ ಮತ್ತು ಆಯ್ಕೆಯ ಹಕ್ಕನ್ನು ಚಲಾಯಿಸುವಾಗ, ಬಹಳ ಸುಲಭವಾಗಿ ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ಅಥವಾ ಸುಳ್ಳು ಆಶ್ವಾಸನೆಗಳಿಗೆ, ಪೊಳ್ಳು ಭರವಸೆಗಳಿಗೆ ಬಲಿಯಾಗುತ್ತಿದ್ದಾರೆ. ಈ ಸುಳ್ಳು-ಪೊಳ್ಳುಗಳನ್ನು ನಂಬಿಸಲು ರಾಜಕೀಯ ಪಕ್ಷಗಳು ಹೆಚ್ಚಿನ ಶ್ರಮ ವಹಿಸುತ್ತಿಲ್ಲ. ಅವರ ಭಂಡಾರದಲ್ಲಿರುವ ಅಪಾರ ಸಂಪತ್ತು ನಗದು ರೂಪದಲ್ಲಿ ಮತದಾರನ ಜೇಬಿಗೆ ರವಾನಿಸುವ ಒಂದು ಅಪ್ರಜಾಸತ್ತಾತ್ಮಕ ತಂತ್ರವನ್ನು ಮುಖ್ಯವಾಹಿನಿಯ ಎಲ್ಲ ರಾಜಕೀಯ ಪಕ್ಷಗಳೂ ( ಎಡಪಕ್ಷಗಳನ್ನು ಹೊರತುಪಡಿಸಿ) ರೂಢಿಸಿಕೊಂಡುಬಂದಿದ್ದು, ಸರ್ವಮಾನ್ಯವಾಗಿ ಮಾಡಿಬಿಟ್ಟಿವೆ. ಈ ಹಿನ್ನೆಲೆಯಲ್ಲೇ ವರ್ತಮಾನದ ಸಂದರ್ಭದಲ್ಲಿ ವೋಟು ಮತ್ತು ಚಿಲ್ಲರೆ ನೋಟು (Vote and Currency Note) ನಡುವಿನ ಸೂಕ್ಷ್ಮ ಅಂತರ್‌ ಸಂಬಂಧಗಳ ಸುತ್ತ ಚರ್ಚಿಸಬೇಕಾಗಿ ಬಂದಿದೆ.

ವೋಟಿಗಾಗಿ ನೋಟು ಜಿಜ್ಞಾಸೆಗಳ ನಡುವೆ

ಮೊದಲನೆಯದಾಗಿ ನೋಟಿಗಾಗಿ ವೋಟು ಮಾರುವುದು ಪ್ರಜಾಪ್ರಭುತ್ವದ ಅವನತಿಯ ಒಂದು ರೋಗ ಲಕ್ಷಣ. ಮತದಾರರು ಭ್ರಷ್ಟರಾದರೆ ಸಹಜವಾಗಿಯೇ ಅವರಿಂದಲೇ ಚುನಾಯಿತರಾಗುವ ʼ ಜನಪ್ರತಿನಿಧಿಗಳು ʼ ಭ್ರಷ್ಟಾಚಾರದ ಹಂದರವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗುತ್ತಾರೆ. ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಒಂದು ಪರಂಪರೆಯನ್ನು ಏಳು ದಶಕಗಳಿಂದಲೂ ರೂಢಿಸಿಕೊಂಡು ಬಂದಿರುವ ಭಾರತದ ನಾಗರಿಕರಿಗೆ ಬಹುಶಃ ಇದೇನೂ ಅತಿಶಯ ಎನಿಸಲಿಕ್ಕಿಲ್ಲ. ಏಕೆಂದರೆ ಸದಾ ಕಾಲವೂ ತಮ್ಮ ಕೆಲಸ ಸಾಧಿಸಲು ಹಣ ನೀಡುತ್ತಲೇ ಬಂದಿರುವ ಯಾವುದೇ ವ್ಯಕ್ತಿಗೆ ತನ್ನಿಂದಾಗುವ ಕೆಲಸಕ್ಕೆ ಹಣ ಲಭಿಸುತ್ತದೆ ಎಂದಾಗ ಅವನು/ಳು ಹರ್ಷಚಿತ್ತರಾಗುವುದು ಸಹಜ. ಮತದಾನ ತನ್ನ ಹಕ್ಕು, ತನ್ನಿಚ್ಚೆಯಂತೆ ಬಳಸಬಹುದಾದ ಒಂದು ಸಾಂವಿಧಾನಿಕ ಸಾಧನ, ಆಳುವ ವರ್ಗಗಳನ್ನು ಸದಾ ಎಚ್ಚರದಲ್ಲಿರಿಸುವ ಒಂದು ಅಸ್ತ್ರ, ಹಿರಿಯ ತಲೆಮಾರಿನ ಸಾವಿರಾರು ಹಿರಿಯ ಜೀವಗಳ ತ್ಯಾಗ ಬಲಿದಾನಗಳ ಫಲ ಎಂಬ ಉದಾತ್ತ ಚಿಂತನೆ ಸಾಮಾನ್ಯ ಮತದಾರನಲ್ಲಿ ಇರಲು ಸಾಧ್ಯವೇ ? ಈ ಪ್ರಶ್ನೆಯನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ಕನ್ನಡಿಯ ಮುಂದೆ ನಿಂತು ಕೇಳಿಕೊಳ್ಳಬೇಕಿದೆ.

ರಾಜಕಾರಣದಲ್ಲಿ ನೈತಿಕತೆ ಪಾತಾಳಕ್ಕೆ ಕುಸಿದಿರುವುದಕ್ಕೆ ಮತದಾರನ ಈ ಭ್ರಷ್ಟತೆ ಕಾರಣವೇ ? ಇದು ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬ ವಿತಂಡವಾದದ ಪ್ರಶ್ನೆ. ವೋಟು ಹಾಕಲಿಕ್ಕೆ ಯಾಕ್ರೀ ಹಣ ತೊಗೋತೀರೀ ಎಂದು ಯಾರನ್ನಾದರೂ ಕೇಳಿದರೆ ಥಟ್ಟನೆ ಬರುವ ಉತ್ತರ (ಅವರು ಅನಕ್ಷರಸ್ಥ ಹಳ್ಳಿಗಾಡಿನ ಜನರಾದರೂ ಸೈ) “ ಅವರು ಕೋಟಿಗಟ್ಟಲೆ ತಿನ್ನೋದಿಲ್ವಾ ಕೊಡಲಿ ಬಿಡಿ ಸರ್‌,,,,,!!!”. ಈ ಉತ್ತರಕ್ಕೆ ಪ್ರತ್ಯುತ್ತರ ನೀಡುವ ನೈತಿಕತೆ ಈ ಸಮಾಜಕ್ಕೆ ಇದೆಯೇ ? ಕೋಟಿಗಟ್ಟಲೆ ತಿನ್ನುತ್ತಾರೆ ಎನ್ನುವುದಕ್ಕೆ ಚುನಾವಣಾ ಅಖಾಡಾದಲ್ಲಿರುವ ಅಭ್ಯರ್ಥಿಗಳ ಸ್ಥಿರಾಸ್ತಿಯ ಮೌಲ್ಯವೇ ಕನ್ನಡಿ ಹಿಡಿದಂತಿದೆ ಅಲ್ಲವೇ ? ನೈತಿಕತೆ, ಪ್ರಾಮಾಣಿಕತೆ, ಶಿಸ್ತು, ದಕ್ಷತೆ, ಕ್ಷಮತೆ ಮತ್ತು ಜನನಿಷ್ಠೆ (ಸಂವಿಧಾನ ನಿಷ್ಠೆ ಬದಿಗಿಡೋಣ) ಇವೆಲ್ಲಕ್ಕೂ ಮೂಲ ಚಿಲುಮೆಯಾಗಬೇಕಾದ ಶಿಕ್ಷಣ ವ್ಯವಸ್ಥೆಯಲ್ಲೇ ಉನ್ನತ ಹುದ್ದೆಗಳು ಕೋಟ್ಯಂತರ ರೂಗಳಿಗೆ ಮಾರಾಟವಾಗುತ್ತಿರುವ ಸಂದರ್ಭದಲ್ಲಿ, ರಾಜಕಾರಣದ ನೈತಿಕ ಅಧಃಪತನದ ಮೂಲವನ್ನು ಮತದಾರರ ನಡುವೆ ಏಕೆ ಶೋಧಿಸಬೇಕು. ಯಥಾ ರಾಜ ತಥಾ ಪ್ರಜಾ ಪಾರಂಪರಿಕ ಗಾದೆಯೇ ಹೊರತು, ಯಥಾ ಪ್ರಜಾ ತಥಾ ರಾಜ ಯಾವ ಕಾಲಘಟ್ಟದಲ್ಲೂ ಕಾಣಲಾಗದ ಭ್ರಮೆ

ಎರಡನೆಯದಾಗಿ ಈ ವೋಟಿಗಾಗಿ ನೋಟು ಪದ್ಧತಿಯ ಉಗಮದ ಪ್ರಶ್ನೆ. ಇದಕ್ಕೆ ಕಾರಣರಾರು ಎನ್ನುವ ಪ್ರಶ್ನೆ ಮತ್ತೊಮ್ಮೆ ಮೊದಲನೆಯ ಪ್ರಶ್ನೆಗೇ ಕರೆದೊಯ್ಯುತ್ತದೆ. ಹಾಗಾಗಿ ಉಗಮದತ್ತ ಗಮನಹರಿಸೋಣ. ಬಹುಶಃ ಮತದಾರರಿಗೆ ಹಣ ಹಂಚುವ ಮೂಲಕ ಮತ ಖರೀದಿಸುವ ಪ್ರಕ್ರಿಯೆಗೆ ವ್ಯವಸ್ಥಿತವಾದ ಚಾಲನೆ ದೊರೆತಿದ್ದು 1970-80ರ ದಶಕದ ನಂತರದಲ್ಲೇ ಎಂದು ಹೇಳಬಹುದು. ತೀವ್ರ ಹೆಚ್ಚಾಗಿರುವುದು 2000ದ ನಂತರ. ಅಧಿಕಾರ ರಾಜಕಾರಣದ ವ್ಯಾಪ್ತಿ ಮತ್ತು ಹರವು ಹೆಚ್ಚು ಗಾಢವಾದಂತೆಲ್ಲಾ ರಾಜಕೀಯ ಪಕ್ಷಗಳ ಆದ್ಯತೆಗಳೂ ಬದಲಾಗುತ್ತಾ ಬಂದಿರುವುದನ್ನು ಕಳೆದ ನಾಲ್ಕು ದಶಕಗಳ ರಾಜಕಾರಣದಲ್ಲಿ ಗುರುತಿಸಬಹುದು. ಜನಸೇವೆಗಾಗಿಯೇ ಬದುಕು ಮುಡಿಪಾಗಿಡಲು ನಿರ್ಧರಿಸಿ, ಗ್ರಾಮಪಂಚಾಯತ್‌ ಮಟ್ಟದಿಂದ ಒಂದೊಂದೇ ಮೆಟ್ಟಿಲೇರುತ್ತಾ, ಜನಾನುರಾಗಿ ನಾಯಕರನ್ನೇ ಅನುಸರಿಸಿ-ಅನುಕರಿಸಿ ರಾಜಕೀಯ ವಲಯದಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಾ, ಜನತೆ ಅವಶ್ಯವಾದ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ದುಡಿಯುತ್ತಾ, ನಿರ್ದಿಷ್ಟ ತತ್ವ ಸಿದ್ಧಾಂತಗಳಿಗನುಗುಣವಾಗಿ ನಾಯಕರಾಗುವ ಒಂದು ಪರಂಪರೆ ನಮ್ಮಲ್ಲಿತ್ತು ಎಂದು ಯಾರಿಗಾದರೂ ಹೇಳಿದರೆ “ ನಾವೇನು ಕಿವಿಯಲ್ಲಿ ಹೂವಿಟ್ಟುಕೊಂಡಿದ್ದೀವಾ ” ಎನ್ನುತ್ತಾರೆ !!!!

ಅಂದರೆ ಭಾರತದ ರಾಜಕಾರಣ ಆ ಔನ್ನತ್ಯವನ್ನು ಕಳೆದುಕೊಂಡಿದೆ. ಜನಪರ ರಾಜಕಾರಣ ಈಗ ಇಲ್ಲವಾಗಿದ್ದು ಅಧಿಕಾರ ರಾಜಕಾರಣವೇ ಪ್ರಧಾನವಾಗಿದೆ. ಹಾಗಾಗಿ ಅಧಿಕಾರ ಕೇಂದ್ರಗಳಿಗೆ ನಿಕಟವಾಗಿರುವುದು, ಆಡಳಿತ ವ್ಯವಸ್ಥೆಗೆ ಸಮೀಪದಲ್ಲಿರುವುದು ಪ್ರತಿಯೊಬ್ಬ ಮಹತ್ವಾಕಾಂಕ್ಷಿ ರಾಜಕಾರಣಿಯ ಕನಸಾಗಿರುತ್ತದೆ. ರಾಜಕೀಯ ಅಧಿಕಾರ ಎನ್ನುವುದು ಜನಸೇವೆಯ ಚೌಕಟ್ಟುಗಳನ್ನು ದಾಟಿ ಸ್ವಹಿತಾಸಕ್ತಿಯನ್ನು ಗಟ್ಟಿಗೊಳಿಸುವ ಮತ್ತು ತಮ್ಮ ಔದ್ಯಮಿಕ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವ ಸಾಂವಿಧಾನಿಕ ಅವಕಾಶವಾಗಿ ಪರಿಣಮಿಸಿದೆ. ಹಾಗಾಗಿಯೇ ಉದ್ಯಮಿಗಳಲ್ಲದ ಅಥವಾ ಔದ್ಯಮಿಕ ಜಗತ್ತಿನ ಬೆಂಬಲ ಇಲ್ಲದ ಯಾವುದೇ ಒಬ್ಬ ಅಭ್ಯರ್ಥಿಯೂ ಸಹ ಇಂದು ಚುನಾವಣೆಯಲ್ಲಿ ಸ್ಪರ್ಧಿಸಲೂ ಆಗುವುದಿಲ್ಲ. ಈ ವ್ಯವಸ್ಥೆಯ ಉಗಮವಾದದ್ದು ನವ ಉದಾರವಾದ-ಮಾರುಕಟ್ಟೆ ಆರ್ಥಿಕತೆ ಮತ್ತು ಆಪ್ತ ಬಂಡವಾಳಶಾಹಿಯ ಪ್ರಗತಿಯ ಹಂತದಲ್ಲಿ, ಅಂದರೆ 1991-2010ರ ಅವಧಿಯಲ್ಲಿ. ವೋಟಿಗಾಗಿ ನೋಟು ಸಾರ್ವಜನಿಕರ ನಡುವೆಯೂ ಅಧಿಕೃತ ಮಾನ್ಯತೆ ಪಡೆದದ್ದು ಇದೇ ಅವಧಿಯಲ್ಲಿ. ಇಂದು ನಾವು ನೋಡುತ್ತಿರುವುದು ಇದರ ಉನ್ನತ ಹಂತವನ್ನು.

ಸಾಮಾನ್ಯವಾಗಿ ಕಾಡುವ ಮೂರನೆಯ ಪ್ರಶ್ನೆ ಮತದಾರರಲ್ಲಿನ ಭ್ರಷ್ಟಾಚಾರಕ್ಕೆ, ಈ ದುರವಸ್ಥೆಗೆ ರಾಜಕಾರಣಿಗಳನ್ನು ದೂಷಿಸುವುದು ಸರಿಯೇ ? ಇನ್ನಾರನ್ನು ದೂರಬೇಕು ? ಕಳೆದ ಎರಡು ದಶಕಗಳಲ್ಲಿ ನಡೆದ ನೂರಾರು ಚುನಾವಣೆಗಳ ಸಂದರ್ಭವನ್ನು ಗಮನಿಸಿದರೂ ಅರಿವಾಗುವ ವಾಸ್ತವ ಎಂದರೆ, ಯಾವುದೇ ಸ್ತರದ ಮತದಾರರು, ಕೊಳೆಗೇರಿ ವಾಸಿಗಳಿರಲಿ ಅಥವಾ ಮಧ್ಯಮ ವರ್ಗಗಳೇ ಇರಲಿ, ರಾಜಕಾರಣಿಗಳ ಬಳಿ ಹೋಗಿ “ ನೀವು ದುಡ್ಡುಕೊಟ್ಟರೆ ಮಾತ್ರ ಮತ ಹಾಕುತ್ತೇವೆ ” ಎಂದು ಹೇಳಿಲ್ಲ ಅಲ್ಲವೇ ? ಮನೆಮನೆಗೆ ಹಣ ಹಂಚುವ ಮೂಲಕ, ಕುಟುಂಬದಲ್ಲಿನ ಸದಸ್ಯರನ್ನು ಲೆಕ್ಕ ಹಾಕಿ, ಮತದಾನದ ಅರ್ಹತೆ ಇಲ್ಲದವರನ್ನೂ ಸೇರಿಸಿ, ಒಟ್ಟು ಹಣವನ್ನು ಮನೆಯ ಕಿಟಕಿಗಳ ಮೂಲಕ ಹಾಕಿರುವ ಪ್ರಸಂಗಗಳೂ ನಮ್ಮ ನಡುವೆ ನಡೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಣ ಹಂಚುವುದಕ್ಕೆಂದೇ ಕಾರ್ಯಕರ್ತರನ್ನು ನೇಮಿಸುವ ಒಂದು ವ್ಯವಸ್ಥಿತ ಜಾಲವೂ ಸಹ ಸದಾ ಜಾರಿಯಲ್ಲಿರುತ್ತದೆ. ಬ್ಯಾಂಕುಗಳಲ್ಲಿ ಚುನಾವಣೆಗಳು ಬಂತೆಂದರೆ ಉದ್ಯಮಿಗಳು ನಗದು ಪಡೆಯುವಾಗ ಐನೂರರ ನೋಟಿಗೆ ಹೆಚ್ಚಿನ ಬೇಡಿಕೆ ಇರುವುದು ನನ್ನ ಸ್ವಾನುಭವ. ಮತದಾನದ ಮೌಲ್ಯ ಅಥವಾ ತಮ್ಮ ಸಾಂವಿಧಾನಿಕ ಕರ್ತವ್ಯದ ಪ್ರಜ್ಞೆಯೇ ಇಲ್ಲದ ಸಾಮಾನ್ಯ ಜನರಲ್ಲಿ ಈ ಭ್ರಷ್ಟ ಪರಂಪರೆಯನ್ನು ಪೋಷಿಸುವಲ್ಲಿ ರಾಜಕೀಯ ನಾಯಕರು ನಿಷ್ಣಾತರಾಗಿದ್ದಾರೆ. ಪ್ರಮುಖ ಆರೋಪಿಗಳೂ ಅವರೇ ಆಗಲು ಸಾಧ್ಯ.

ಇನ್ನು ನಾಲ್ಕನೆಯ ಪ್ರಶ್ನೆ ಮತದಾನ-ಭ್ರಷ್ಟಾಚಾರದ ದೀರ್ಘಕಾಲಿಕ ಪರಿಣಾಮಗಳು. ಉತ್ತರ ಮತ್ತಷ್ಟು ಸುಲಭ. ಪ್ರಜಾಪ್ರಭುತ್ವದ ತಳಪಾಯ ಶಿಥಿಲವಾಗುತ್ತಿವೆ. ಇದು ಹೀಗೆಯೇ ಮುಂದುವರೆದರೆ ಪ್ರಜಾಪ್ರಭುತ್ವ ಬೇರುಗಳೂ ಸಡಿಲವಾಗತೊಡಗುತ್ತವೆ. ಮತದಾರರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ಈಗ ಬಾಹ್ಯ ಸಮಾಜದ ಕೆಲವು ಸಂಘಟನೆಗಳಿಂದ ಎನ್‌ಜಿಒಗಳಿಂದ ನಡೆಯುತ್ತಿದೆ. ಪ್ರಜಾಪ್ರಭುತ್ವದ ಮೂಲ ಬೇರುಗಳು ಇರುವುದೇ ನೈತಿಕತೆ, ಪ್ರಾಮಾಣಿಕತೆ ಮತ್ತು ಸಂವಿಧಾನ ನಿಷ್ಠೆಯನ್ನು ಅವಲಂಬಿಸಿ ಎನ್ನುವ ವಾಸ್ತವವನ್ನು ಜನಸಾಮಾನ್ಯರಿಗೆ ಅರ್ಥಮಾಡಿಸದೆ ಹೋದರೆ, ಬಹುಶಃ ಭಾರತದ ಚುನಾವಣಾ ರಾಜಕಾರಣ ಮೀನಿನ ಮಾರುಕಟ್ಟೆಯಂತಾಗುವುದು ನಿಶ್ಚಿತ. ಇತರ ದೇಶಗಳಲ್ಲಿ ಈ ಅನಿಷ್ಟ ಪದ್ಧತಿ ಇಲ್ಲವೇ ಎಂದರೆ, ಹೌದು ಇದೆ. 2010-12ರ ಕೆಲವು ಸಮೀಕ್ಷೆಗಳ ಅನುಸಾರ ಅಮೆರಿಕದಲ್ಲೂ ಸಹ ಶೇ 15ರಷ್ಟು ಮತದಾರರು ಆಮಿಷಕ್ಕೆ ಬಲಿಯಾಗಿದ್ದಾರೆ. ಅರ್ಜೆಂಟೈನಾ, ವೆನೆಜುವೆಲಾ, ಆಫ್ರಿಕಾ, ನೈಜೀರಿಯಾ, ಕೆನ್ಯಾ, ಫಿಲಿಪೈನ್ಸ್‌ ಮತ್ತು ಏಷ್ಯಾದ ದೇಶಗಳಲ್ಲಿ ಇದು ವ್ಯಾಪಕವಾಗಿ ಬೇರೂರಿದೆ. ಈ ಎಲ್ಲ ದೇಶಗಳನ್ನೂ ಬಂಡವಾಳಶಾಹಿ ಆರ್ಥಿಕತೆ ಆಕ್ರಮಿಸಿಕೊಂಡಿರುವುದರಿಂದ, ಮತಗಳ ಮೌಲ್ಯೀಕರಣವೂ ಸಹ ಮಾರುಕಟ್ಟೆ ನಿಯಮದಂತೆಯೇ ಸಾಗುವುದು ಸಹಜವಲ್ಲವೇ ?

ಕೊನೆಯ ಪ್ರಶ್ನೆ ಇದು ಹೀಗೆಯೇ ಮುಂದುವರೆದರೆ ? ಇದಕ್ಕೆ ಅಂತ್ಯ ಇದೆಯೇ ? ಮುಂದುವರೆದರೆ ಏನಾಗುತ್ತದೆ ಎನ್ನುವುದಕ್ಕೆ ಮೇಲೆ ಉತ್ತರ ಹೇಳಲಾಗಿದೆ. ಅಂತ್ಯವಿದೆಯೇ ಎಂದರೆ ಖಂಡಿತವಾಗಿಯೂ ಇದೆ. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಈ ಎರಡೂ ಉದಾತ್ತ ಸಾಂಸ್ಥಿಕ ನೆಲೆಗಳ ವಾಸ್ತವಿಕ ಮೌಲ್ಯವನ್ನು ಜನಸಾಮಾನ್ಯರಿಗೆ ಅರ್ಥಮಾಡಿಸುವುದಾದರೂ ಹೇಗೆ ? ಪ್ರಾಥಮಿಕ ತರಗತಿಯಿಂದಲೇ ಈ ಎರಡೂ ಅಂಶಗಳನ್ನು ಪಠ್ಯಕ್ರಮವಾಗಿ ಅಳವಡಿಸಿ, ಎಳೆಯ ಮಕ್ಕಳಿಂದಲೇ ಸಂವಿಧಾನ ಪ್ರಜ್ಞೆಯನ್ನು ಬೆಳೆಸುವ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬಹುದು. ಇಂದಿನ ಯುವ ಪೀಳಿಗೆ, ಯಾವುದೇ ಸಿದ್ಧಾಂತ-ತತ್ವ-ಪಕ್ಷಗಳಲ್ಲಿರಲಿ, ಮತದಾರರಿಗೆ ಹಣ ಹಂಚುವ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಕಾಲಾಳುಗಳಂತೆ ದುಡಿಯುತ್ತಿರುವುದನ್ನು ಗಮನಿಸಿದರೆ, ನಮ್ಮ ಸಮಾಜ ಮತ್ತು ಆಡಳಿತ ವ್ಯವಸ್ಥೆ ವರ್ತಮಾನದ ತಲೆಮಾರಿನಲ್ಲಿ ಸಂವಿಧಾನ ಪ್ರಜ್ಞೆ ಮೂಡಿಸುವುದರಲ್ಲಿ ವಿಫಲವಾಗಿದೆ ಎಂದೇ ಅರ್ಥ ಅಲ್ಲವೇ ?

ಇದಕ್ಕೆ ಅಂತ್ಯ ಹಾಡಬೇಕೆಂದರೆ ಮತದಾನದ ಮೌಲ್ಯದ ಅರಿವು ಮೂಡಬೇಕು. ಪ್ರಜ್ಞಾವಂತ-ಸುಶಿಕ್ಷಿತ ನಾಗರಿಕ ಸಮಾಜ ಕಾರ್ಯೋನ್ಮುಖವಾಗಬೇಕು. ಬಂಡವಾಳಶಾಹಿ ಅರ್ಥವ್ಯವಸ್ಥೆಯು ಪೂರೈಕೆ ಆರ್ಥಿಕತೆಯನ್ನು (Supply side economics) ಪೋಷಿಸುವ ಮೂಲಕ ಬೇಡಿಕೆ ಆರ್ಥಿಕತೆಯನ್ನು (Demand side Economics) ನಿರ್ಲಕ್ಷಿಸುತ್ತಿದೆ. ಶ್ರೀಸಾಮಾನ್ಯನ ಬಳಿ ನಗದು ಓಡಾಡುತ್ತಿಲ್ಲ. ವೋಟಿಗಾಗಿ ನೀಡುವ ನೋಟು ಸುಲಭವಾಗಿ ಒದಗುವ ಹಣ. ಬಾಹ್ಯ ಸಮಾಜದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ, ಅಧಿಕಾರ ಕೇಂದ್ರಗಳಲ್ಲಿ, ರಾಜಕೀಯ ವಲಯದಲ್ಲಿ ಭ್ರಷ್ಟಾಚಾರ ಅಂತ್ಯವಾಗದ ಹೊರತು ಇದೂ ಅಂತ್ಯವಾಗುವುದಿಲ್ಲ. ಹಾಗಾದರೆ ಏನು ಮಾಡುವುದು ? ಒಂದು ಮನ್ವಂತರಕ್ಕಾಗಿ ಆಶಿಸಬೇಕು. ಹೊಸ ಯುಗಕ್ಕಾಗಿ ಶ್ರಮಿಸಬೇಕು. ಬಂಡವಾಳಶಾಹಿ ನವಉದಾರವಾದದಿಂದ ಸಮಾಜವಾದದತ್ತ ಸಾಗಬೇಕು. ಇದೊಂದೇ ದಾರಿ.

ಕೃಪೆ : ಸಮಾಜಮುಖಿ ಮಾಸಪತ್ರಿಕೆ ಮೇ 2023

Tags: ConstitutionDemocracyElectionna divakaranotePolitical PartiesVotevoting
Previous Post

ರಾಜಕೀಯದಿಂದ ದೂರ ಉಳಿದಿದ್ದೇಕೆ ನಟಿ ರಮ್ಯಾ..? : ಮೌನ ಮುರಿದ ನಟಿ

Next Post

ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಜಾಹೀರಾತು: ಡಿಕೆ ಶಿವಕುಮಾರ್​ಗೆ ನೋಟಿಸ್‌ ಜಾರಿ..!

Related Posts

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!
Top Story

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

by ಪ್ರತಿಧ್ವನಿ
March 4, 2026
0

ಜಿ.ಬಿ. ಪಾಟೀಲ್‌ : ಬರಹಗಾರರು.. ಮಧ್ಯಪ್ರಾಚ್ಯದಲ್ಲಿ ಯುದ್ಧದ ತೀವ್ರತೆ ದಿನಕಳೆಂದತೆ ಹೆಚ್ಚಾಗುತ್ತಿದೆ. ಈಗಾಗಲೇ ಅಂದುಕೊಂಡಂತೆ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯನ್ನು ಅಮೆರಿಕ ಹಾಗೂ ಇಸ್ರೇಲ್‌...

Read moreDetails
ಭಾರತ-ಇರಾನ್ ಯುಕೋ ಬ್ಯಾಂಕ್ : ರೂಪಾಯಿ ಪಾವತಿ ವ್ಯವಸ್ಥೆ ಹಿಂದಿನ ರೂವಾರಿ ಮನಮೋಹನ್ ಸಿಂಗ್..!

ಭಾರತ-ಇರಾನ್ ಯುಕೋ ಬ್ಯಾಂಕ್ : ರೂಪಾಯಿ ಪಾವತಿ ವ್ಯವಸ್ಥೆ ಹಿಂದಿನ ರೂವಾರಿ ಮನಮೋಹನ್ ಸಿಂಗ್..!

March 2, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
ಅಭಿವೃದ್ಧಿ ಮಾದರಿಯೂ ಪರಿಸರ ವಿನಾಶವೂ

ಅಭಿವೃದ್ಧಿ ಮಾದರಿಯೂ ಪರಿಸರ ವಿನಾಶವೂ

February 20, 2026
KJ George: ಕೆ.ಜಿ.ಹಳ್ಳಿ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಕೆ.ಜೆ.ಜಾರ್ಜ್ ಸೂಚನೆ

KJ George: ಕೆ.ಜಿ.ಹಳ್ಳಿ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಕೆ.ಜೆ.ಜಾರ್ಜ್ ಸೂಚನೆ

February 19, 2026
Next Post
ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಜಾಹೀರಾತು: ಡಿಕೆ ಶಿವಕುಮಾರ್​ಗೆ ನೋಟಿಸ್‌ ಜಾರಿ..!

ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಜಾಹೀರಾತು: ಡಿಕೆ ಶಿವಕುಮಾರ್​ಗೆ ನೋಟಿಸ್‌ ಜಾರಿ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada