ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರ ಮೊಮ್ಮಗಳು ಅನನ್ಯ ಪ್ರಸಾದ್ ಮಹತ್ವದ ಸಾಧನೆ ಮಾಡಿದ್ದಾರೆ. 52 ದಿನ 5 ಗಂಟೆ 44 ನಿಮಿಷದಲ್ಲಿ ಅಂಟ್ಲಾಂಟಿಕ ಸಾಗರ ದಾಟಿದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 3 ಸಾವಿರ ಮೈಲಿ ದೂರ ಅಂದ್ರೆ ಸುಮಾರು 4300 ಕಿಲೋ ಮೀಟರ್ ದೂರ ಅಟ್ಲಾಂಟಿಕ್ ಸಾಗರದಲ್ಲಿ ಪ್ರಯಾಣ ಮಾಡುವ ಮೂಲಕ ಏಕಾಂಗಿಯಾಗಿ ಸಮುದ್ರಯಾನ ಮಾಡಿದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಶ್ವದ ಅತ್ಯಂತ ಕಠಿಣ ಯಾನ ಎನಿಸಿಕೊಂಡಿರುವ ಅಟ್ಲಾಂಟಿಕ್ ಸಾಗರದಲ್ಲಿ ಯಶಸ್ವಿಯಾಗಿ ರೋಯಿಂಗ್ ಪೂರ್ಣ ಮಾಡಿದ್ದಾರೆ. ಡಿಸೆಂಬರ್ 11ರಂದು ಕ್ಯಾನರಿ ದ್ವೀಪಗಳಲ್ಲಿ ಒಂದಾದ ಲಾ ಗೊಮೆರಾ ದ್ವೀಪದಿಂದ ಶುರುವಾದ ಏಕಾಂಗಿ ಸಾಗರಯಾನ, ಫೆಬ್ರವರಿ 1ರಂದು ಅಂತ್ಯವಾಗಿದೆ. ಬರೋಬ್ಬರಿ 52 ದಿನಗಳ ಕಾಲ ಚಳಿ, ಗಾಳಿ, ಬಿಸಿಲು ಯಾವುದನ್ನೂ ಲೆಕ್ಕಿಸದೆ ಯಶಸ್ವಿಯಾಗಿ ಯಾನ ಪೂರೈಸಿದ್ದಾರೆ.
ಅಟ್ಲಾಂಟಿಕ್ ಸಾಗರದಲ್ಲಿ ಏಕಾಂಗಿ ಯಾನ ಮಾಡಲು ನಿರ್ಧಾರ ಮಾಡಿದ ಅನನ್ಯಾ ಪ್ರಸಾದ್, ಈ ಯಾನಕ್ಕೂ ಮೊದಲು ಕಠಿಣ ಪರಿಶ್ರಮ ಹಾಕಿದ್ದರು. ದೇಹವನ್ನು ದಂಡಿಸಿ ಸಜ್ಜಾದ ಅನನ್ಯ, 25 ಅಡಿ ಅಳತೆಯ ಬೋಟ್ ತಯಾರಿಸಿದ್ದರು. ಬೋಟ್‌ನ ಪ್ರತಿಯೊಂದು ವಿಭಾಗದ ಬಗ್ಗೆಯೂ ಚೆನ್ನಾಗಿ ತಿಳಿದುಕೊಂಡಿದ್ದರು. ಯಾವುದೇ ತಂತ್ರಜ್ಞರ ಸಹಾಯವಿಲ್ಲದೆ ಬೋಟ್ ರಿಪೇರಿ ಮಾಡುವುದನ್ನು ಕಲಿತುಕೊಂಡಿದ್ದರು ಎನ್ನುವುದನ್ನು ಬಹಿರಂಗ ಮಾಡಿದ್ದಾರೆ.
ಅನನ್ಯ ಪ್ರಸಾದ್ ಬೆಂಗಳೂರಿನಲ್ಲಿ ಜನಿಸಿದ್ದು, ತನ್ನ 5ನೇ ವರ್ಷದಲ್ಲಿ ಇಂಗ್ಲೆಂಡ್‌ಗೆ ಪೋಷಕರ ಜೊತೆಗೆ ಹೋಗಿದ್ದರು. ಇದೀಗ 34 ವರ್ಷದ ಅನನ್ಯ ಈ ಅಟ್ಲಾಂಟಿಕ್ ಸಾಗರ ಯಾನದ ಹಿಂದೆ ಕರ್ನಾಟಕದ ಮೇಲಿನ ಪ್ರೀತಿಯಿದೆ. ಮೆಂಟಲ್ ಹೆಲ್ತ್ ಫೌಂಡೇಷನ್ ಹಾಗು ಕರ್ನಾಟಕದ ದೀನಬಂಧು ಟ್ರಸ್ಟ್ ಮೂಲಕ ನಡೆಸುತ್ತಿರುವ ಅನಾಥಾಶ್ರಮ ಹಾಗು ಶಾಲೆಗೆ ನೆರವು ನೀಡಲಿ ಈ ಕೆಲಸ ಮಾಡಿದ್ದಾರೆ. ಜಿ.ಎಸ್ ಶಿವರುದ್ರಪ್ಪ ಅವರ ಸಹೋದರ ಜಿ.ಎಸ್ ಜಯದೇವ ಈ ಟ್ರಸ್ಟ್ ನಡೆಸುತ್ತಿದ್ದಾರೆ. ಕನ್ನಡತಿಯ ಹೆಮ್ಮೆಯ ಸಾಧನೆ ಇದಾಗಿದೆ.