ಬೆಂಗಳೂರು :ಏ.14: ಬಿಜೆಪಿ ಪಕ್ಷದಲ್ಲಿ ವೀರಶೈವ ಲಿಂಗಾಯಿತ ನಾಯಕತ್ವಕ್ಕಾಗಿ ಆಂತರಿಕವಾಗಿ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಸ್ಪೋಟಗೊಂಡಿದೆ. ದಶಕಗಳ ಕಾಲ ತನ್ನ ನಾಯಕತ್ವದಲ್ಲಿಯೇ ಪಕ್ಷವನ್ನು ತಳ ಹಂತದಿಂದ ಸಂಟಿಸಿ, ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತರಲು ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಬಳಿಕ ನಾಯಕತ್ವದ ಪ್ರಶ್ನೆ ಸಹಜವಾಗಿಯೇ ಎದ್ದಿದೆ.

ಯಡಿಯೂರಪ್ಪ ಉತ್ತರಾಧಿಕಾರಿಯಾಗಿ ಸಮಾಜದಲ್ಲಿ ವಿಜಯೇಂದ್ರ ಅವರನ್ನು ಬೆಳೆಸುವ ಪ್ರಯತ್ನ ನಡೆಯಿತು ಆದರೆ ವಯಸ್ಸು ಹಾಗು ಇನ್ನಿತರ ಕಾರಣಗಳಿಂದ ಇನ್ನಹ ಕೆಲಕಾಲ ಪಕ್ಷ ಸಂಘಟನೆ ಮಾಡಲಿತದನಂತರ ನಾಯಕತ್ವ ಕೋಡೊಣ ಎನ್ನುವ ಮಾತುಕತೆ ನಡೆದಿದೆ ಆ ಕಾರಣಕ್ಕಾಗಿಯೇ ಚುನಾವಣಾ ರಾಜಕಾರಣ ಮೂಲಕ ಸಚಿವ ವಿ.ಸೋಮಣ್ಣ ಅವರನ್ನು ಸಮುದಾಯದ ನಾಯಕರನ್ನಾಗಿ ರೂಪಿಸುವ ಕೆಲಸವನ್ನು ತೆರೆ ಮರೆಯಲ್ಲಿ ಒಂದು ತಂಡ ವ್ಯವಸ್ಥಿತವಾಗಿಯೇ ಮಾಡುತ್ತಿದೆ ಎನ್ನುವುದು ಯಡಿಯೂರಪ್ಪ ಬಣದಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಗುರುತಿಸಿಕೊಳ್ಳಲು ಸಮುದಾಯದ ಕೆಲ ನಾಯಕರುಗಳ ನಡುವೆ ಆಂತರಿಕ ಸಂಘರ್ಷ ನಡೆಯುತ್ತಿದ್ದದ್ದು ಸುಳ್ಳೇನು ಅಲ್ಲ. ವೀರಶೈವ ಲಿಂಗಾಯಿತ ಸಮುದಾಯದ ಮೇಲೆ ತಮ್ಮದೇ ಆದ ಬಿಗಿ ಹಿಡಿತ ಹೊಂದಿರುವ ಯಡಿಯೂರಪ್ಪ ಅವರನ್ನು ಪ್ರತಿ ಚುನಾವಣೆಯಲ್ಲಿ ಈ ಸಮುದಾಯ ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿಕೊಂಡು ಬಂದ ಕಾರಣದಿಂದ ರಾಜ್ಯದಲ್ಲಿ ಬಿಜೆಪಿ ಭದ್ರವಾಗಿ ತಳವೂರಲು ಮತ್ತು ತನ್ನ ನೆಲೆ ವಿಸ್ತರಿಸಿಕೊಳ್ಳಲು ಸಾಧ್ಯವಾಗಿದೆ ಎನ್ನುವ ಮಾತನ್ನ ಯಾರೂ ತಳ್ಳಿ ಹಾಕುವುದಿಲ್ಲ.
ಬಿಜೆಪಿ ಪಕ್ಷಕ್ಕೆ ಸಂಘಟನಾ ಚತುರ ವಿ.ಸೋಮಣ್ಣ ಅವರನ್ನು ಕರೆದುಕೊಂಡು ಬಂದಿದ್ದು ಯಡಿಯೂರಪ್ಪ. ಸೋಮಣ್ಣ ಮತ್ತು ಬಿಎಸ್ವೈ ನಡುವೆ ವಿಷ ಬೀಜ ಬಿತ್ತಿ ಅವರ ಬಾಂಧವ್ಯ ದೂರವಾಗುವಂತೆ ಮಾಡುವಲ್ಲಿ ಹಲವು ಕಾಣದ ಕೈಗಳ ಪಾತ್ರವಿದೆ. ಇದೇ ಸಂದರ್ಭವನ್ನು ಬಳಸಿಕೊಂಡ ಹೈಕಮಾಂಡ್ ಪ್ರಮುಖರೊಬ್ಬರು, ಸೋಮಣ್ಣ ಅವರಿಗೆ ಹೊಸ ಟಾಸ್ಕ್ ನೀಡುವ ಮೂಲಕ ಭವಿಷ್ಯದಲ್ಲಿ ವೀರಶೈವ ಲಿಂಗಾಯಿತ ನಾಯಕನಾಗಿ ರೂಪಿಸುವ ಯೋಜನೆ ಹಾಕಿಕೊಂಡಿದೆ. ಯಡಿಯೂರಪ್ಪ ನಂತರದ ಉತ್ತರಾಧಿಕಾರಿ ಸ್ಥಾನ ತುಂಬುವ ಪ್ರಯತ್ನ ನಡೆಯುತ್ತಿದೆ

ನೀವು ಕೇವಲ ಗೋವಿಂದರಾಜ ನಗರದಲ್ಲಿ ಸೀಮಿತವಾದರೆ ಲಿಂಗಾಯತ ನಾಯಕನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೆಂಗಳೂರು ಹೊರತಾದ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಗೆಲ್ಲಬೇಕು. ಹುಲಿಯನ್ನು ಹೊಡೆದು ನಾಯಕನಾಗಬೇಕು ಎನ್ನುವ ಬಿಜೆಪಿ ನಾಯಕರ ಭರವಸೆಯ ಮಾತುಗಳಿಗೆ ಮಣೆ ಹಾಕಿರುವ ವಿ.ಸೋಮಣ್ಣ ಅದರ ಭಾಗವಾಗಿ ಚಾಮರಾಜನಗರ ಮತ್ತು ವರುಣದಲ್ಲಿ ಸ್ಪರ್ಧೆ ಮಾಡುವ ಮೂಲಕ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ದ ಸ್ಪರ್ಧೆಗೆ ಮುಂದಾಗಿದ್ದ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಿಸಿದ್ದ ಬಿಜೆಪಿ ಈಗ ಅಲ್ಲಿ ಸೋಮಣ್ಣ ಅವರನ್ನು ಕಣಕ್ಕಿಳಿಸುವ ಮೂಲಕ ಆ ಭಾಗದಲ್ಲಿ ಬಂಪರ್ ಬೆಳೆಯುವ ಲೆಕ್ಕಾಚಾರದಲ್ಲಿದೆ.

ಚಾಮರಾಜನಗರ ಮತ್ತು ವರುಣದಲ್ಲಿ ಎರಡೂ ಕ್ಷೇತ್ರದಲ್ಲಿ ಗೆದ್ದರೆ ಆ ಮೂಲಕ ಸೋಮಣ್ಣ ಲಿಂಗಾಯಿತ ಸಮುದಾಯದ ವರ್ಚಸ್ಸು ಹೊಂದಿದ ನಾಯಕರಾಗಿ ಹೊರಹೊಮ್ಮುತ್ತಾರೆ. ಒಂದು ವೇಳೆ ಒಂದು ಕ್ಷೇತ್ರ ಸೋತು ಮತ್ತೊಂದರಲ್ಲಿ ಗೆದ್ದರೂ ಅವರ ನಾಯಕತ್ವದ ಕಳೆಗೆ ಮುಸುಕಾಗುವುದಿಲ್ಲ. ಒಂದು ಕಡೆ ಕೈ ಕೊಟ್ಟರೂ ಮತ್ತೊಂದು ಕಡೆಯಲ್ಲಿ ಅವರ ನಾಯಕತ್ವವನ್ನು ಉಳಿಸಿಕೊಳ್ಳುವ ಸೇಫ್ ಗೇಮ್ ಪ್ಲಾನ್ ರೂಪಿಸಲಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಹಲವು ಲಿಂಗಾಯಿತ ನಾಯಕರನ್ನು ಬದಿಗೆ ಸರಿಸಲಾಗಿದೆ. ಈಗ ಉಳಿದಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತ್ರ. ಮುಂದೆ ಅವರನ್ನು ಹೇಗೋ ಸಂಬಾಳಿಸಿಕೊಂಡು, ಸೋಮಣ್ಣ ಅವರನ್ನು ಸಮುದಾಯದ ನಾಯಕನಾಗಿ ರೂಪಿಸಿದರೆ, ಯಡಿಯೂರಪ್ಪ ಬಣ ಮೇಲುಗೈ ಆಗದಂತೆ ಸದಾ ಸವಾರಿ ಮಾಡಬಹುದು ಎನ್ನುವ ಲೆಕ್ಕಾಚಾರ ಪಕ್ಕಾ ಆಗದೆ.